ಸಹೋದ್ಯೋಗಿಗೆ ಲೈಂಗಿಕ ಕಿರುಕುಳ, ಬ್ಲ್ಯಾಕ್‌ಮೇಲ್ ಆರೋಪ: ತರಬೇತಿ ನಿರತ ಐಪಿಎಸ್ ಅಧಿಕಾರಿ ಉದಯ್ ಕೃಷ್ಣಾ ರೆಡ್ಡಿ ಆತ್ಮಹತ್ಯೆಗೆ ಯತ್ನ

ಹೈದರಾಬಾದ್‌ನಲ್ಲಿ ತರಬೇತಿ ನಿರತ ಐಪಿಎಸ್ ಅಧಿಕಾರಿ ಉದಯ್ ಕೃಷ್ಣಾ ರೆಡ್ಡಿ ಲೈಂಗಿಕ ಕಿರುಕುಳ ಮತ್ತು ಬ್ಲ್ಯಾಕ್‌ಮೇಲ್ ಆರೋಪಗಳ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಹಿಳಾ ಐಪಿಎಸ್ ಅಧಿಕಾರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಅಮಾನತುಗೊಂಡಿದ್ದ ಉದಯ್‌ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದ್ದು, ಘಟನೆ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸಹೋದ್ಯೋಗಿಗೆ ಲೈಂಗಿಕ ಕಿರುಕುಳ, ಬ್ಲ್ಯಾಕ್‌ಮೇಲ್ ಆರೋಪ: ತರಬೇತಿ ನಿರತ ಐಪಿಎಸ್ ಅಧಿಕಾರಿ ಉದಯ್ ಕೃಷ್ಣಾ ರೆಡ್ಡಿ ಆತ್ಮಹತ್ಯೆಗೆ ಯತ್ನ
ಉದಯ್ ಕೃಷ್ಣ ರೆಡ್ಡಿ

Updated on: Jul 20, 2026 | 12:44 PM

ಹೈದರಾಬಾದ್, ಜುಲೈ 20: ಹೈದರಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ (NPA) ತರಬೇತಿ ಪಡೆಯುತ್ತಿದ್ದ ಐಪಿಎಸ್ (IPS) ಅಧಿಕಾರಿ ಉದಯ್ ಕೃಷ್ಣಾ ರೆಡ್ಡಿ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಕರ್ನಾಟಕ ಮೂಲದ ತರಬೇತಿ ನಿರತ ಮಹಿಳಾ ಐಪಿಎಸ್ ಅಧಿಕಾರಿಗೆ ಲೈಂಗಿಕ ಕಿರುಕುಳನೀಡಿದ್ದ ಆರೋಪ ಎದುರಿಸುತ್ತಿರುವ ಉದಯ್ ಇತ್ತೀಚೆಗೆ ಅಮಾನತುಗೊಂಡಿದ್ದರು. ಹೈದರಾಬಾದ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪ್ರಸ್ತುತ ಅವರನ್ನು ಎಸ್.ಆರ್. ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ.

ಕರ್ನಾಟಕದ ಮಹಿಳಾ ಐಪಿಎಸ್ ಅಧಿಕಾರಿಯಿಂದ ದೂರು
ಕರ್ನಾಟಕ ಮೂಲದ ವಿವಾಹಿತ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಉದಯ್ ಕೃಷ್ಣಾ ರೆಡ್ಡಿ ವಿರುದ್ಧ ದೂರು ನೀಡಿದ್ದರು. ಉದಯ್ ತನಗೆ ನಿರಂತರವಾಗಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ. ಕೋಣೆಯಲ್ಲಿ ಕೂಡಿಹಾಕಿ, ಕೂದಲು ಹಿಡಿದು ಕುತ್ತಿಗೆ ಹಿಸುಕಲು ಯತ್ನಿಸಿ ಚಾಕುವಿನಿಂದ ಬೆದರಿಕೆ ಹಾಕಿದ್ದ.

ಸಂತ್ರಸ್ತೆಯ ಖಾಸಗಿ ವೀಡಿಯೊವನ್ನು ರಹಸ್ಯವಾಗಿ ರೆಕಾರ್ಡ್ ಮಾಡಿ, ಅದನ್ನು ಆಕೆಯ ಪತಿಗೆ ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ದೂರಿನ ಮೇರೆಗೆ ಅತ್ತಾಪುರ ಪೊಲೀಸರು ‘ಭಾರತೀಯ ನ್ಯಾಯ ಸಂಹಿತಾ’ (BNS) ಮತ್ತು ಐಟಿ ಕಾಯ್ದೆಯಡಿ ಗಂಭೀರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮತ್ತಷ್ಟು ಓದಿ: ಐಎಎಸ್ ಅಧಿಕಾರಿಗೆ ಹೈಕೋರ್ಟ್ ಶಾಕ್; ಮಾನನಷ್ಟ ಪ್ರಕರಣದಲ್ಲಿ ರೋಹಿಣಿ ಸಿಂಧೂರಿಗೆ ಹಿನ್ನಡೆ

ಅಮಾನತು ಹಾಗೂ ಸಿಸಿಟಿವಿ ಸಾಕ್ಷ್ಯ
ಪ್ರಕರಣದ ತನಿಖೆ ನಡೆಸಿದ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ (NPA) ಆಂತರಿಕ ತನಿಖಾ ಸಮಿತಿಯು ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಸಾಕ್ಷ್ಯಗಳನ್ನು ಪರಿಶೀಲಿಸಿದೆ. ಆರೋಪಗಳಲ್ಲಿ ಸತ್ಯಾಂಶವಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅಕಾಡೆಮಿಯು ಉದಯ್ ಕೃಷ್ಣಾ ರೆಡ್ಡಿ ಅವರನ್ನು ತರಬೇತಿಯಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು . ಪೊಲೀಸರು ಇವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.

ಉದಯ್ ಕೃಷ್ಣಾ ರೆಡ್ಡಿ ಅವರ ಜೀವನ ಪ್ರಯಾಣ ಆಂಧ್ರಪ್ರದೇಶದ ಅನೇಕ ಯುವಕರಿಗೆ ಪ್ರೇರಣೆಯಾಗಿತ್ತು. ಅನಾಥರಾಗಿದ್ದ ಇವರನ್ನು ಅಜ್ಜಿ ಕೂಲಿ ಕೆಲಸ ಮಾಡಿ ಸಾಕಿ ಬೆಳೆಸಿದ್ದರು. 2013 ರಲ್ಲಿ ಕಾನ್‌ಸ್ಟೆಬಲ್ ಆಗಿ ಆಯ್ಕೆಯಾಗಿದ್ದ ಉದಯ್, ನಂತರ ಕೆಲಸಕ್ಕೆ ರಾಜೀನಾಮೆ ನೀಡಿ ಯುಪಿಎಸ್‌ಸಿ (UPSC) ಪರೀಕ್ಷೆಗೆ ಸಿದ್ಧರಾಗಿದ್ದರು.

4 ಬಾರಿ ವಿಫಲರಾದರೂ, 5ನೇ ಪ್ರಯತ್ನದಲ್ಲಿ ದೇಶಕ್ಕೆ 360 ನೇ ರ್ಯಾಂಕ್ ಗಳಿಸಿ ಐಪಿಎಸ್ ಅಧಿಕಾರಿಯಾಗಿದ್ದರು. ಆದರೆ, ಈ ಗಂಭೀರ ಆರೋಪಗಳ ತನಿಖಾ ವರದಿ ಹೊರಬಿದ್ದ ಬೆನ್ನಲ್ಲೇ, ಉದಯ್ ಕೃಷ್ಣಾ ರೆಡ್ಡಿ ಭಾನುವಾರ ತಮ್ಮ ವಾಟ್ಸಾಪ್ ಹಾಗೂ ಇನ್‌ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ “ನಾನು ಯಾವುದೇ ತಪ್ಪು ಮಾಡಿಲ್ಲ” ಎಂದು ಪೋಸ್ಟ್ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ಮುಂದಿನ ತನಿಖೆ ಮುಂದುವರೆಸಿದ್ದಾರೆ.

 

 

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us