ದೆಹಲಿ: ಒಮಿಕ್ರಾನ್ ರೂಪಾಂತರದ ಹರಡುವಿಕೆ ಭಾರತದಲ್ಲಿ ಸಮುದಾಯ ಪ್ರಸರಣದ (Omicron Community Transmission) ಹಂತ ತಲುಪಿದೆ. ಅದರಲ್ಲೂ ವಿವಿಧ ಮೆಟ್ರೋ ನಗರಗಳಲ್ಲಿಯೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದೆ. ಪ್ರತಿದಿನವೂ ಕೇಸ್ಗಳ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ ಎಂದು ಭಾರತೀಯ ಸಾರ್ಸ್-ಕೊವ್-1 ಜಿನೋಮಿಕ್ಸ್ ಕನ್ಸೋರ್ಟಿಯಂ (INSACOG) ತಿಳಿಸಿದೆ. ಒಮಿಕ್ರಾನ್ ರೂಪಾಂತರದ ಸಾಂಕ್ರಾಮಿಕ ಉಪ-ರೂಪಾಂತರ ಬಿಎ .2 ಎಂಬ ವಂಶಾವಳಿ ಭಾರತದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಹೀಗಾಗಿ ಎಸ್ ಜೀನ್ ಡ್ರಾಪ್ಔಟ್ ಆಧಾರಿತ ಸ್ಕ್ರೀನಿಂಗ್ ಗಳು ಹೆಚ್ಚಿನ ತಪ್ಪು ನೆಗೆಟಿವ್ ವರದಿ ಕೊಡುವ ಸಾಧ್ಯತೆಯಿದೆ ಎಂದು ಹೇಳಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಡಿಯಲ್ಲಿ ಬರುವ ಈ ಐಎನ್ಎಸ್ಎಸಿಒಜಿ ಇಂದು ಲಘುಪ್ರಕಟಣೆ ಬಿಡುಗಡೆ ಮಾಡಿದ್ದು, ಸದ್ಯ ಬಹುತೇಕ ಒಮಿಕ್ರಾನ್ ಸೋಂಕಿತರಿಗೆ ಯಾವುದೇ ಲಕ್ಷಣಗಳು ಇಲ್ಲ ಅಥವಾ ಸೌಮ್ಯವಾದ ಲಕ್ಷಣಗಳಿವೆ. ಆದರೆ ನಿರ್ಲಕ್ಷಿಸುವಂತಿಲ್ಲ. ಕೊವಿಡ್ 19 ಮೂರನೇ ಅಲೆಯಲ್ಲೂ ಕೂಡ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಮತ್ತು ಐಸಿಯು ಚಿಕಿತ್ಸೆ ಪಡೆಯುವವರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ. ಅಪಾಯದ ಪ್ರಮಾಣ ಹೆಚ್ಚಲಿದೆ ಎಂದು ಎಚ್ಚರಿಕೆ ನೀಡಿದೆ. ಇತ್ತೀಚೆಗೆ ಫ್ರಾನ್ಸ್ನಲ್ಲಿ ಪತ್ತೆಯಾಗಲಿದೆ ಎಂದು ಹೇಳಲಾದ B.1.640.2 ತಳಿ ಇದುವರೆಗೂ ಭಾರತದಲ್ಲಿ ಕಂಡುಬಂದಿಲ್ಲ. ಹಾಗಾಗಿ ಆತಂಕ ಪಡುವ ಅಗತ್ಯವೂ ಸದ್ಯಕ್ಕೆ ಇಲ್ಲ ಎಂದೂ ಈ ಐಎನ್ಎಸ್ಎಸಿಒಜಿ ತಿಳಿಸಿದೆ.
ಭಾರತದಲ್ಲಿ ಒಮಿಕ್ರಾನ್ ಸಮುದಾಯ ಪ್ರಸರಣ ಆಗುತ್ತಿದೆ ಎಂಬುದನ್ನು ಈಗಾಗಲೇ ಹಲವು ರಾಜ್ಯಗಳು ಹೇಳಿದ್ದವು. ವಿದೇಶಿ ಪ್ರವಾಸದ ಹಿನ್ನೆಲೆ ಇಲ್ಲದವರು, ವಿದೇಶಕ್ಕೆ ಹೋಗಿಬಂದವರ ಸಂಪರ್ಕಕ್ಕೆ ಹೋಗದೆ ಇರುವವರಿಗೂ ಒಮಿಕ್ರಾನ್ ತಗುಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದವು. ಒಮಿಕ್ರಾನ್ ವೈರಾಣು ಮೊದಲು ಪತ್ತೆಯಾಗಿದ್ದು ದಕ್ಷಿಣ ಆಫ್ರಿಕಾದಲ್ಲಿ. 2021ರ ನವೆಂಬರ್ 24ರಂದು ಆ ದೇಶದಲ್ಲಿ ಪತ್ತೆಯಾದ ಒಮಿಕ್ರಾನ್ ಇದೀಗ ಜಗತ್ತಿನ ಬಹುತೇಕ ದೇಶಗಳಲ್ಲಿ ಮತ್ತೊಮ್ಮೆ ಕೊರೊನಾ ಹೆಚ್ಚಲು ಕಾರಣವಾಗಿದೆ. ಅಷ್ಟೇ ಅಲ್ಲ, ಭಾರತದಲ್ಲಿಯೂ ಮೂರನೇ ಅಲೆ ಉಂಟಾಗಲು ಕಾರಣವಾಗಿದೆ. ದೇಶದಲ್ಲಿ ಮೊಟ್ಟಮೊದಲ ಒಮಿಕ್ರಾನ್ ಪ್ರಕರಣ ಡಿಸೆಂಬರ್ನಲ್ಲಿ ಕಾಣಿಸಿಕೊಂಡಿತ್ತು. ಎರಡನೇ ಅಲೆಗೆ ಕಾರಣವಾಗಿದ್ದ ಡೆಲ್ಟಾ ವೈರಾಣುಗಿಂತಲೂ ಅತ್ಯಂತ ವೇಗವಾಗಿ ಒಮಿಕ್ರಾನ್ ಹರಡುತ್ತಿದೆ. ಸದ್ಯ ದೇಶದಲ್ಲಿ 10,050 ಒಮಿಕ್ರಾನ್ ಸೋಂಕಿತರು ಇದ್ದಾರೆ.
ಇದನ್ನೂ ಓದಿ: ನಿಮ್ಮ ಫೋನನ್ನು ಬೇರೆಯವರಿಗೆ ಕೊಡುವಾಗ ಹೀಗೆ ಮಾಡಿ: ಅವರೇನು ಮಾಡಿದ್ರು ಎಲ್ಲ ತಿಳಿಯುತ್ತೆ
Published On - 2:46 pm, Sun, 23 January 22