ಮುಂದಿನ 5 ವರ್ಷದೊಳಗೆ ದೇಶದಲ್ಲಿ ರಸ್ತೆ ಅಪಘಾತ ಪ್ರಮಾಣ ಶೇ 50ರಷ್ಟು ತಗ್ಗಲಿದೆ: ನಿತಿನ್ ಗಡ್ಕರಿ
ಭಾರತದಲ್ಲಿ ಪ್ರತಿನಿತ್ಯ ಸುಮಾರು 415 ಜನ ರಸ್ತೆ ಅಪಘಾತಗಳಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟಬೇಕಾದ ಸವಾಲು ನಮ್ಮ ಮುಂದಿದ್ದು ಸರ್ಕಾರ ಇದಕ್ಕಾಗಿ ಶ್ರಮಿಸಲಿದೆ.
ದೆಹಲಿ: ದೇಶದಲ್ಲಿ 2025ರ ವೇಳೆಗೆ ರಸ್ತೆ ಅಪಘಾತ ಹಾಗೂ ಅಪಘಾತಗಳಿಂದ ಸಾವಿಗೀಡಾಗುವವರ ಪ್ರಮಾಣ ಶೇ 50ರಷ್ಟು ಕುಸಿಯಲಿದೆ ಎಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭರವಸೆ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಪ್ರತಿನಿತ್ಯ ಸುಮಾರು 415 ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟಬೇಕಾದ ಸವಾಲು ನಮ್ಮ ಮುಂದಿದ್ದು ಸರ್ಕಾರ ಇದಕ್ಕಾಗಿ ಶ್ರಮಿಸಲಿದೆ ಎಂದು ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ್ದಾರೆ.
ಕಳೆದ ಬಾರಿ ಸ್ವೀಡನ್ನಲ್ಲಿ ಆಯೋಜಿಸಲಾಗಿದ್ದ ಸಮ್ಮೇಳನದಲ್ಲಿ 2030ರ ವೇಳೆಗೆ ಭಾರತದಲ್ಲಿ ರಸ್ತೆ ಅಪಘಾತಗಳಿಂದ ಯಾರೊಬ್ಬರೂ ಸಾಯದಂತೆ ನೋಡಿಕೊಳ್ಳುವ ಉದ್ದೇಶ ವ್ಯಕ್ತಪಡಿಸಲಾಗಿದೆ. ಅದರಂತೆ ನಾವು 2025ರೊಳಗೆ ಶೇ.50ರಷ್ಟು ರಸ್ತೆ ಅಪಘಾತ ಮತ್ತು ಅದರಿಂದಾಗುವ ಸಾವುಗಳನ್ನು ತಡೆಗಟ್ಟುವ ಬಗ್ಗೆ ಯೋಜನೆ ರೂಪಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ತಮಿಳುನಾಡು ಈಗಾಗಲೇ ರಸ್ತೆ ಅಪಘಾತದ ಪ್ರಮಾಣವನ್ನು ಶೇ 53ರಷ್ಟು ತಗ್ಗಿಸಿದೆ. ಅದು ನಮಗೆ ಮಾದರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದೇಶಾದ್ಯಂತ ರಸ್ತೆಗಳಲ್ಲಿನ ಅತಿ ಹೆಚ್ಚು ಅಪಾಯಕಾರಿ ಸ್ಥಳಗಳನ್ನು ಪತ್ತೆಹಚ್ಚಿ ಅವುಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ₹ 14 ಸಾವಿರ ಕೋಟಿ ವ್ಯಯಿಸಲಿದೆ. ಇದಕ್ಕಾಗಿ ವಿಶ್ವ ಬ್ಯಾಂಕ್ ಮತ್ತು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) ತಲಾ ₹ 7 ಸಾವಿರ ಕೋಟಿ ವೆಚ್ಚದ ಎರಡು ಯೋಜನೆಗಳಿಗೆ ಒಪ್ಪಿಗೆ ಸೂಚಿಸಿವೆ. ಕೇಂದ್ರ ಹಣಕಾಸು ಸಚಿವಾಲಯದಿಂದಲೂ ಈ ಯೋಜನೆಗಳಿಗೆ ಶೀಘ್ರದಲ್ಲಿ ಅನುಮತಿ ಸಿಗುವ ನಿರೀಕ್ಷೆ ಇದೆ. ನಾವು ಈಗಾಗಲೇ ದಿನಕ್ಕೆ 30 ಕಿ.ಮೀ ರಸ್ತೆ ನಿರ್ಮಿಸುವ ಗುರಿ ತಲುಪಿದ್ದೇವೆ. ಮಾರ್ಚ್ ಅಂತ್ಯದ ಒಳಗೆ ದಿನಕ್ಕೆ 40 ಕಿ.ಮೀನಷ್ಟು ರಸ್ತೆ ನಿರ್ಮಿಸುವ ಧ್ಯೇಯ ಸಾಕಾರಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಸ್ತೆ ಅಪಘಾತಗಳಿಂದಾಗುವ ಸಾವು ಕೇವಲ ಜೀವಗಳನ್ನಷ್ಟೇ ಬಲಿಪಡೆಯುವುದಿಲ್ಲ. ಪ್ರಾಣದ ಜೊತೆಗೆ ದೇಶದ ಆರ್ಥಿಕತೆಯ ಕುಸಿತಕ್ಕೂ ಕಾರಣವಾಗುತ್ತಿದೆ. ರಾಷ್ಟ್ರೀಯ ರಸ್ತೆ ಸುರಕ್ಷತಾ ಕಾರ್ಯಕ್ರಮಗಳು ಜನರ ಆತ್ಮವಿಶ್ವಾಸ ವೃದ್ಧಿಸುವ ಜೊತೆಗೆ, ಜಾಗೃತಿ ಮೂಡಿಸುವಲ್ಲಿಯೂ ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.