ಛತ್ತೀಸ್‌ಗಡ: ಮಾವೋವಾದಿಗಳ ದಾಳಿಯಲ್ಲಿ ಇಬ್ಬರು ಐಟಿಬಿಪಿ ಸಿಬ್ಬಂದಿ ಸಾವು
Chhattisgarh: ಹೊಂಚುದಾಳಿಯಲ್ಲಿ ಮಾವೋವಾದಿಗಳು ಒಂದು ಎಕೆ -47 ರೈಫಲ್, ಎರಡು ಬುಲೆಟ್ ಪ್ರೂಫ್ ಜಾಕೆಟ್‌ಗಳು ಮತ್ತು ಒಂದು ವೈರ್‌ಲೆಸ್ ಸೆಟ್ ಅನ್ನು ಲೂಟಿ ಮಾಡಿದ ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಬಸ್ತಾರ್ ಐಜಿ ಪಿ ಸುಂದರರಾಜ್ ಹೇಳಿದರು.
ನಾರಾಯಣ್ಪುರ್ : ಛತ್ತೀಸ್‌ಗಡದ ನಾರಾಯಣ್ಪುರ್ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಮಾವೋವಾದಿ ದಾಳಿಯಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೆಟ್ರೋಲ್ (ITBP) ಸಹಾಯಕ ಕಮಾಂಡೆಂಟ್ ಮತ್ತು ಅವರ ಸಹೋದ್ಯೋಗಿ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಐಟಿಬಿಪಿಯ 45 ನೇ ಬೆಟಾಲಿಯನ್ನ ಕಾಡೆಮೆಟಾ ಕ್ಯಾಂಪ್ ಬಳಿ ದಾಳಿ ನಡೆದಿದೆ. ಪ್ರಾಥಮಿಕ ವರದಿಗಳ ಪ್ರಕಾರ ಪ್ರದೇಶ ಪ್ರಾಬಲ್ಯದ ಕಾರ್ಯಾಚರಣೆಯಲ್ಲಿದ್ದ ಐಟಿಬಿಪಿ ಸ್ಕ್ವಾಡ್ ಅನ್ನು ಮಾವೋವಾದಿಗಳ ಒಂದು ಸಣ್ಣ ಕ್ರಿಯಾ ತಂಡವು ಶಿಬಿರದಿಂದ ಸುಮಾರು 600 ಮೀಟರ್ ದೂರದಲ್ಲಿರುವಾಗ ಗುಂಡು ಹಾರಿಸಿತು.
ಹೊಂಚುದಾಳಿಯಲ್ಲಿ ಮಾವೋವಾದಿಗಳು ಒಂದು ಎಕೆ -47 ರೈಫಲ್, ಎರಡು ಬುಲೆಟ್ ಪ್ರೂಫ್ ಜಾಕೆಟ್‌ಗಳು ಮತ್ತು ಒಂದು ವೈರ್‌ಲೆಸ್ ಸೆಟ್ ಅನ್ನು ಲೂಟಿ ಮಾಡಿದ ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಬಸ್ತಾರ್ ಐಜಿ ಪಿ ಸುಂದರರಾಜ್ ಹೇಳಿದರು. ಹೆಚ್ಚಿನ ತಂಡ ಸ್ಥಳಕ್ಕೆ ಧಾವಿಸಿದ್ದು ಮೃತ ಸಿಬ್ಬಂದಿಗಳ ದೇಹಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು.
ಛತ್ತೀಸ್ಗಡದಲ್ಲಿ ಈ ವರ್ಷ ಇಂತಹ ಹಲವಾರು ಮಾವೋವಾದಿ ದಾಳಿಗಳು ಭದ್ರತಾ ಸಿಬ್ಬಂದಿ ಮೇಲೆ ನಡೆದಿವೆ. ಕಳೆದ ತಿಂಗಳು, ನಾರಾಯಣ್ಪುರ್ದಲ್ಲಿ ಮಾವೋವಾದಿಗಳ ದಾಳಿಗೆ ಐಟಿಬಿಪಿ ಸಿಬ್ಬಂದಿ ಸಾವನ್ನಪ್ಪಿದ್ದರು ಮತ್ತು ಇನ್ನೊಬ್ಬರು ಗಾಯಗೊಂಡಿದ್ದರು. ಸ್ಥಳೀಯ ಕಾಂಗ್ರೆಸ್ ಶಾಸಕ ಚಂದನ್ ಕಶ್ಯಪ್ ಭೇಟಿಗಾಗಿ ಭದ್ರತಾ ಸಿಬ್ಬಂದಿ ಅಲ್ಲಿ ಕರ್ತವ್ಯ ನಿರತರಾಗಿದ್ದರು.
#श्रद्धांजलि DG ITBP & all ranks of the Force pay tribute to Sh Shinde Sudhakar, Assistant Commandant/GD & ASI/GD Gurumukh Singh of 45th Battalion ITBP who made the supreme sacrifice in a naxal attack near Kademeta, Narayanpur, Chhattisgarh on 20/8/2021.#भारत_के_वीर pic.twitter.com/y49QzYZAeV
— ITBP (@ITBP_official) August 20, 2021
ಅದೇ ತಿಂಗಳಲ್ಲಿ ಮಾವೋವಾದಿಗಳು ಅದೇ ಪ್ರದೇಶದಲ್ಲಿ ಕಬ್ಬಿಣದ ಅದಿರು ತೆಗೆಯುವ ಸ್ಥಳದ ಮೇಲೆ ದಾಳಿ ನಡೆಸಿ ಖಾಸಗಿ ಸಂಸ್ಥೆಯ ಮೇಲ್ವಿಚಾರಕರನ್ನು ಕೊಂದು, ಆರು ಭಾರೀ ವಾಹನಗಳನ್ನು ಸುಟ್ಟುಹಾಕಿದರು. ಅದೇ ವೇಳೆ 13 ಇತರ ಉದ್ಯೋಗಿಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು.
ಅತಿದೊಡ್ಡ ಮಾವೋವಾದಿಗಳ ದಾಳಿಯು ಏಪ್ರಿಲ್‌ನಲ್ಲಿ ಬಸ್ತಾರ್ ಪ್ರದೇಶದಲ್ಲಿ ನಡೆದಿದ್ದು ಒಟ್ಟು 22 ಭದ್ರತಾ ಸಿಬ್ಬಂದಿಗಳು ಈ ದಾಳಿಯಲ್ಲಿ ಹತ್ಯೆಗೀಡಾಗಿದ್ದರು. ಮಾರ್ಚ್ ತಿಂಗಳಲ್ಲಿ ನಾರಾಯಣ್ ಪುರದಲ್ಲಿ ನಡೆದ ಐಇಡಿ ಸ್ಫೋಟದಲ್ಲಿ ಜಿಲ್ಲಾ ರಿಸರ್ವ್ ಗಾರ್ಡ್ನ (ಡಿಆರ್ ಜಿ) ಐವರು ಸಿಬ್ಬಂದಿಗಳು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದರು. ಪೊಲೀಸರ ಪ್ರಕಾರ, ಮಾವೋವಾದಿಗಳು 20 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ಹೊತ್ತ ಬಸ್ ಅನ್ನು ಗುರಿಯಾಗಿಸಿ ಈ ದಾಳಿ ನಡೆಸಿದ್ದರು.
ಇದನ್ನೂ ಓದಿ: ZyCov-D Vaccine: ಭಾರತಕ್ಕೆ ಮತ್ತೊಂದು ಕೊವಿಡ್ ಲಸಿಕೆ ಲಭ್ಯ; ಝಿಕೊವ್-ಡಿ ತುರ್ತು ಬಳಕೆಗೆ ಅನುಮತಿ
(Two ITBP personnel killed in Maoist attack in Narayanpur district of Chhattisgarh)