ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿರುವ ಕಾಕ್ಪೋರಾ ರೈಲ್ವೆ ಸ್ಟೇಶನ್ ಬಳಿ ಉಗ್ರರು ದಾಳಿ ನಡೆಸಿದ ಪರಿಣಾಮ ಇಬ್ಬರು ರೈಲ್ವೆ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾರೆ. ಇನ್ನೊಬ್ಬರು ತೀವ್ರ ಗಾಯಗೊಂಡಿದ್ದಾರೆ. ಸದ್ಯ ಭದ್ರತಾ ಪಡೆಗಳು ಸುತ್ತಲಿನ ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರಿದಿವೆ. ರೈಲ್ವೆ ಸ್ಟೇಶನ್ ಸಮೀಪವೇ ಒಂದು ಟೀ ಅಂಗಡಿ ಇದ್ದು, ಅಲ್ಲಿಯೇ ಉಗ್ರರು ದಾಳಿ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಅಲ್ಲಿದ್ದ ರೈಲ್ವೆ ರಕ್ಷಣಾ ಪಡೆಯ ಅಧಿಕಾರಿಗಳು ಉಗ್ರರ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.
ಕಳೆದ ಮೂರು ವಾರಗಳಿಂದ ಉಗ್ರರು ಭದ್ರತಾ ಪಡೆಗಳ ಮೇಲೆ ಪದೇಪದೆ ದಾಳಿ ನಡೆಸುತ್ತಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ನಾಗರಿಕರನ್ನೂ ಹತ್ಯೆಗೈಯ್ಯುತ್ತಿದ್ದಾರೆ. ಈ ತಿಂಗಳಲ್ಲಿ ನಡೆದ 9ನೇ ದಾಳಿ ಇದು. ಏಪ್ರಿಲ್ 15ರಂದು ಬಾರಾಮುಲ್ಲಾ ಜಿಲ್ಲೆಯ ಹಳ್ಳಿಯೊಂದರ ಸರ್ಪಂಚ್ ಮಂಜೂರ್ ಅಹ್ಮದ್ನನ್ನು ಉಗ್ರರು ಕೊಂದು ಹಾಕಿದ್ದರು. ಅದಾದ ಮೇಲೆ ಬಾಂಗ್ರೂ ಎಂಬಾತನನ್ನು ಹತ್ಯೆಗೈಯಲಾಗಿತ್ತು. ಬುಧವಾರ ಕುಲಗಾಂ ಜಿಲ್ಲೆಯಲ್ಲಿ ಸತೀಶ್ ಸಿಂಗ್ ಎಂಬುವರನ್ನು ಉಗ್ರರು ಕೊಂದಿದ್ದರು.