ಪ್ರಧಾನಿ ಮೋದಿ ಭೇಟಿಗೂ ಮುನ್ನ ಜಮ್ಮುವಿನಲ್ಲಿ ಎನ್‌ಕೌಂಟರ್; ಇಬ್ಬರು ಉಗ್ರರ ಹತ್ಯೆ, ಓರ್ವ ಸೈನಿಕ ಸಾವು
ಪ್ರಧಾನಿ ನರೇಂದ್ರ ಮೋದಿ ಸಾಂಬಾ ಜಿಲ್ಲೆಗೆ ಭೇಟಿ ನೀಡಲಿರುವ ಎರಡು ದಿನಗಳ ಮೊದಲು ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಗಳ ನಡುವೆ ಸುಂಜ್ವಾನ್‌ನಲ್ಲಿ ಎನ್‌ಕೌಂಟರ್ ನಡೆದಿದೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಜಿಲ್ಲೆಯ ಜಲಾಲಾಬಾದ್ ಸುಂಜ್ವಾನ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ (Jammu Kashmir Encounter) ಒಬ್ಬರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಇಬ್ಬರು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಸಿಬ್ಬಂದಿ ಮತ್ತು ಇಬ್ಬರು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಜವಾನರು ಗಾಯಗೊಂಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಈ ಪ್ರದೇಶಕ್ಕೆ ಭೇಟಿ ನೀಡುವ ಎರಡು ದಿನಗಳ ಮುನ್ನ ಶುಕ್ರವಾರ ಮುಂಜಾನೆ ಜಮ್ಮುವಿನ ಸೇನಾ ನೆಲೆಯ ಬಳಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಭೀಕರ ಗುಂಡಿನ ಕಾಳಗ ನಡೆದಿದೆ. ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ ಮತ್ತು ಭದ್ರತಾ ಅಧಿಕಾರಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಾಂಬಾ ಜಿಲ್ಲೆಗೆ ಭೇಟಿ ನೀಡಲಿರುವ ಎರಡು ದಿನಗಳ ಮೊದಲು ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಗಳ ನಡುವೆ ಸುಂಜ್ವಾನ್‌ನಲ್ಲಿ ಎನ್‌ಕೌಂಟರ್ ನಡೆದಿದೆ. ಏಪ್ರಿಲ್ 24ರಂದು ಪ್ರಧಾನಿ ಮೋದಿ ಜಮ್ಮುವಿಗೆ ಭೇಟಿ ನೀಡಲಿದ್ದಾರೆ. ರಾಷ್ಟ್ರೀಯ ಪಂಚಾಯತ್ ರಾಜ್ ದಿನದಂದು (ಏಪ್ರಿಲ್ 24) ಸಭೆಯನ್ನು ಉದ್ದೇಶಿಸಿ ಮಾತನಾಡಲು ಪ್ರಧಾನಿ ಮೋದಿ ಅವರು ಜಮ್ಮುವಿನಿಂದ 17 ಕಿಮೀ ದೂರದಲ್ಲಿರುವ ಪಾಲಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿಯವರ ಭೇಟಿಗೂ ಮುನ್ನ ಜಮ್ಮು ಕಾಶ್ಮೀರದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಾದ್ಯಂತ ಭಯೋತ್ಪಾದಕರ ದಾಳಿಯನ್ನು ತಡೆಯಲು ಭದ್ರತಾ ಪಡೆಗಳು ಹಗಲಿರುಳು ಗಸ್ತು ನಡೆಸುತ್ತಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಎನ್‌ಕೌಂಟರ್ ಕಾರ್ಯಾಚರಣೆಯಲ್ಲಿ ಸಿಐಎಸ್‌ಎಫ್‌ನ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಎಸ್‌ಪಿ ಪಟೇಲ್ ಹತ್ಯೆಯಾಗಿದ್ದಾರೆ. ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಗುಂಡಿನ ಚಕಮಕಿಯಲ್ಲಿ ಕಥುವಾ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಬಲರಾಜ್ ಸಿಂಗ್, ಅಖ್ನೂರ್‌ನ ಎಸ್‌ಪಿಒ ಸಾಹಿಲ್ ಶರ್ಮಾ, ಒಡಿಶಾದ ಸಿಐಎಸ್‌ಎಫ್‌ನ ಪರ್ಮೋದ್ ಪತ್ರ ಮತ್ತು ಅಸ್ಸಾಂನ ಅಮೀರ್ ಸೊರಾನ್ ಗಾಯಗೊಂಡಿದ್ದಾರೆ.
ಜಮ್ಮು ಕಾಶ್ಮೀರದ ಎನ್‌ಕೌಂಟರ್‌ನಲ್ಲಿ ಒಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ. ಇನ್ನೋರ್ವ ಪರಾರಿಯಾಗಿದ್ದು, ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ. ಕೆಲವು ಭಯೋತ್ಪಾದಕರು ಇಲ್ಲಿ ಅಡಗಿದ್ದಾರೆ ಎಂಬ ಮಾಹಿತಿ ಬಂದ ನಂತರ ನಾವು ರಾತ್ರಿಯಲ್ಲಿ ಆ ಪ್ರದೇಶವನ್ನು ಸುತ್ತುವರೆದಿದ್ದೇವೆ. ಎನ್‌ಕೌಂಟರ್‌ನಲ್ಲಿ ಒಬ್ಬ ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಎನ್‌ಕೌಂಟರ್ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಮುಖೇಶ್ ಸಿಂಗ್ ಹೇಳಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಸುಂಜ್ವಾನ್ ಪ್ರದೇಶದಲ್ಲಿ ಇಬ್ಬರು ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕರು ಸಿಕ್ಕಿಬಿದ್ದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಮತ್ತು ಸಿಆರ್‌ಪಿಎಫ್ ಜಂಟಿ ಕಾರ್ಯಾಚರಣೆಯನ್ನು ಆರಂಭಿಸಿವೆ. ಸುಂಜ್ವಾನ್ ಪ್ರದೇಶದಲ್ಲಿ ಪಡೆಗಳ ಜಂಟಿ ತಂಡವು ನಿರ್ದಿಷ್ಟ ಮಾಹಿತಿ ಪಡೆದ ನಂತರ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಜಮ್ಮುವಿನ ಕೆಲವು ಭಾಗಗಳಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದೇ ವೇಳೆ ಉಗ್ರರ ಪತ್ತೆಗೆ ಡ್ರೋನ್‌ಗಳನ್ನು ನಿಯೋಜಿಸಲಾಗಿತ್ತು.
15 ಸಿಐಎಸ್‌ಎಫ್ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ದಾಳಿ ನಡೆದಿದೆ. ಜಮ್ಮುವಿನ ಚಡ್ಡಾ ಕ್ಯಾಂಪ್ ಬಳಿ ಇಂದು ಮುಂಜಾನೆ 4.25ರ ಸುಮಾರಿಗೆ 15 ಸಿಐಎಸ್ಎಫ್ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ ಎಂದು ಸಿಐಎಸ್ಎಫ್ ಮೂಲಗಳು ತಿಳಿಸಿವೆ. ಭಯೋತ್ಪಾದಕರು ಗುಂಡು ಹಾರಿಸಿದರು ಮತ್ತು ಗ್ರೆನೇಡ್‌ಗಳನ್ನು ಬಳಸಿ ದಾಳಿ ನಡೆಸಿದರು. ಸಿಐಎಸ್‌ಎಫ್ ಸಿಬ್ಬಂದಿ ಇದಕ್ಕೆ ಪ್ರತಿದಾಳಿ ನಡೆಸಿದರು. ಇದರಿಂದ ಉಗ್ರರು ಓಡಿಹೋದರು. ಇದರಿಂದ ದೊಡ್ಡ ನಷ್ಟ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.
ಹಿಂದಿನ ರಾಜ್ಯದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಮತ್ತು 2019ರ ಆಗಸ್ಟ್ ತಿಂಗಳಲ್ಲಿ ಜಮ್ಮು ಕಾಶ್ಮೀರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೊದಲ ಭೇಟಿಯಾಗಿದೆ. 2019ರ ಅಕ್ಟೋಬರ್ 27ರಂದು ರಾಜೌರಿಯಲ್ಲಿ ಮತ್ತು 2021ರ ನವೆಂಬರ್ 3ರಂದು ಜಮ್ಮು ವಿಭಾಗದ ನೌಶೇರಾ ಸೆಕ್ಟರ್‌ನಲ್ಲಿ ಸೇನಾ ಯೋಧರೊಂದಿಗೆ ದೀಪಾವಳಿಯನ್ನು ಆಚರಿಸಿದ್ದರು.
ಜಮ್ಮು ಕಾಶ್ಮೀರದ ಸುಂಜ್ವಾನ್ ಕಂಟೋನ್ಮೆಂಟ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮುಂಜಾನೆ ಕಾರ್ಯಾಚರಣೆಯನ್ನು ಆರಂಭಿಸಿದ ನಂತರ ಎನ್‌ಕೌಂಟರ್ ಪ್ರಾರಂಭವಾಯಿತು. ನಗರದಲ್ಲಿ ಭಯೋತ್ಪಾದಕರು ದಾಳಿ ನಡೆಸಲು ಮುಂದಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್), ಭಯೋತ್ಪಾದಕರು ತನ್ನ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ ಅನ್ನು ಗುರಿಯಾಗಿಸಿಕೊಂಡರು. ಇದರಿಂದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿ; ಇಬ್ಬರು ರೈಲ್ವೆ ಪೊಲೀಸ್ ಸಿಬ್ಬಂದಿ ಮರಣ, ಇನ್ನೊಬ್ಬರಿಗೆ ಗಾಯ
ಶೋಪಿಯಾನ್ನಲ್ಲಿ ಎನ್‌ಕೌಂಟರ್ ಕಾರ್ಯಾಚರಣೆಗೆ ತೆರಳುತ್ತಿದ್ದ ವಾಹನ ಪಲ್ಟಿ; ಇಬ್ಬರು ಯೋಧರು ಸಾವು, ಇಬ್ಬರಿಗೆ ಗಾಯ
Published On - 9:21 am, Fri, 22 April 22