ಲಸಿಕೆ ದಾಸ್ತಾನು ಮುಗಿದಿದೆ ಎಂದ ಮಹಾರಾಷ್ಟ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಆರೋಗ್ಯ ಸಚಿವ ಹರ್ಷ ವರ್ಧನ್
ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ ತೋಪೆ ಅವರು ಬುಧವಾರ ಬೆಳಗ್ಗೆ ಒಂದು ಹೇಳಿಕೆಯನ್ನು ನೀಡಿ ರಾಜ್ಯದಲ್ಲಿ ಕೊವಿಡ್ ಲಸಿಕೆಯ ದಾಸ್ತಾನು ಮೂರು ದಿಗಳಲ್ಲಿ ಮುಗಿದು ಹೋಗಲಿದೆ ಎಂದಿದ್ದರು ಮತ್ತು ಕೇಂದ್ರ ಸರ್ಕಾರವನ್ನು ಬೇಗ ದಾಸ್ತಾನು ರವಾನಿಸುವಂತೆ ಆಗ್ರಹ ಮಾಡಿದ್ದರು.

ನವಿ ಮುಂಬೈ, ಸತಾರಾ ಮತ್ತು ಪನ್ವೆಲ್ ಸೇರಿದಂತೆ ಮಹಾರಾಷ್ಟ್ರದ ಹಲವಾರು ಜಿಲ್ಲೆಗಳಲ್ಲಿ ಕೊವಿಡ್-19 ಲಸಿಕೆಯ ದಾಸ್ತಾನಿನ ಕೊರತೆ ಎದುರಾಗಿರುವುದರಿಂದ ಗುರುವಾರದಿಂದ ಲಸಿಕೆ ಹಾಕುವ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗುತ್ತಿದೆ. ಇದಕ್ಕೂ ಮುನ್ನ ಮಹಾರಾಷ್ಟ್ರ ಸರ್ಕಾರವು ಲಸಿಕೆ ದಾಸ್ತಾನು ಪ್ರಮುಖವಾಗಿ ನಗರಪ್ರದೇಶಗಳಲ್ಲಿ ಮುಗಿಯುತ್ತಾ ಬಂದಿದ್ದು ಕೂಡಲೇ ಹೆಚ್ಚಿನ ದಾಸ್ತಾನು ಕಳಿಸುವ ವ್ಯವಸ್ಥೆ ಮಾಡುವಂತೆ ಕೇಂದ್ರ ಸರ್ಕಾರನ್ನು ಆಗ್ರಹಿಸಿತ್ತು.
ಲಸಿಕೆಗಳ ದಾಸ್ತಾನಿಗೆ ಮಹಾರಾಷ್ಟ್ರ ಸರ್ಕಾರ ಮಾಡಿರುವ ಮನವಿಗೆ ಆಕ್ರೋಷ ವ್ಯಕ್ತಪಡಿಸಿರುವ ಕೇಂದ್ರ ಆರೋಗ್ಯ ಸಚಿವ ಡಾ ಹರ್ಷ ವರ್ಧನ್ ಅವರು, ‘ ಸೋಂಕಿನ ಪ್ರಮಾಣವನ್ನು ತಡೆಯಲು ವಿಫಲಲಾಗುತ್ತಿರುವ ಕೆಲ ರಾಜ್ಯ ಸರ್ಕಾರಗಳು ಗಮನ ಬೇರೆಡೆ ತಿರುಗಿಸಲು ಮತ್ತು ಬೇರೆಯವನ್ನು ದೂಷಿಸುವ ಭರದಲ್ಲಿ ಜನರಲ್ಲಿ ಆತಂಕವನ್ನು ಸೃಷ್ಟಿಸುತ್ತಿವೆ,’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ‘ಮಹಾರಾಷ್ಟ್ರ ಸರ್ಕಾರದ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ಧೋರಣೆ ಕೊರೊನಾ ವೈರಸ್ ವಿರುದ್ಧ ಇಡೀ ದೇಶ ನಡೆಸುತ್ತಿರುವ ಹೋರಾಟವನ್ನು ನಿಷ್ಫಲಗೊಳಿಸುತ್ತಿದೆ,’ ಎಂದು ಸಚಿವರು ಹೇಳಿದ್ದಾರೆ.
ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ ತೋಪೆ ಅವರು ಬುಧವಾರ ಬೆಳಗ್ಗೆ ಒಂದು ಹೇಳಿಕೆಯನ್ನು ನೀಡಿ ರಾಜ್ಯದಲ್ಲಿ ಕೊವಿಡ್ ಲಸಿಕೆಯ ದಾಸ್ತಾನು ಮೂರು ದಿಗಳಲ್ಲಿ ಮುಗಿದು ಹೋಗಲಿದೆ ಎಂದಿದ್ದರು ಮತ್ತು ಕೇಂದ್ರ ಸರ್ಕಾರವನ್ನು ಬೇಗ ದಾಸ್ತಾನು ರವಾನಿಸುವಂತೆ ಆಗ್ರಹ ಮಾಡಿದ್ದರು. ಮುಂಬೈಯಂಥ ನಗರ ಪ್ರದೇಶಗಳಲ್ಲಿ ಲಸಿಕಾ ಕೇಂದ್ರಗಳನ್ನು ಬಲವಂತದಿಂದ ಮುಚ್ಚಿಸಿ ಜನರನ್ನು ವಾಪಸ್ಸು ಕಳಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಟೋಪೆ ಹೇಳಿದ್ದರು.

ಡಾ. ಹರ್ಷ್ ವರ್ಧನ್
ಟೋಪೆ ಅವರ ಹೇಳಿಕೆಗಳನ್ನು ಹರ್ಷ ವರ್ಧನ್ ಅವರು ‘ಅತ್ಯಂತ ಬೇಜವಾಬ್ದಾರಿ’ ಅಂತ ಹೇಳಿದ್ದು, ಅವು ಜನರನ್ನು ತಪ್ಪು ದಾರಿಗೆ ಎಳೆದು ಅವರಲ್ಲಿ ಆತಂಕವನ್ನು ಸೃಷ್ಟಿಸಲು ಶಕ್ತವಾಗಿವೆ ಎಂದಿದ್ದಾರೆ.
‘ನಾನು ನೇರವಾಗಿ ಮತ್ತು ವಾಸ್ತವಿಕ ನೆಲೆಗಟ್ಟಿನಲ್ಲಿ ಮಾತಾಡಲು ಇಚ್ಛಿಸುತ್ತೇನೆ. ಇಲ್ಲದೆ ಹೋದರೆ, ನನ್ನ ಮೌನ ಕೇಂದ್ರ ಸರ್ಕಾರದ ದೌರ್ಬಲ್ಯ ಎಂದು ಜನ ತಿಳಿದುಕೊಳ್ಳುವ ಸಾಧ್ಯತೆಯಿದೆ, ರಾಜಕಾರಣ ಮಾಡುವುದು ಸುಲಭ, ಅದರೆ ಆಡಳಿತ ಮತ್ತು ಆರೋಗ್ಯ ಸೌಲಭ್ಯಗಳಲ್ಲಿ ಸುಧಾರಣೆ ತರುವುದು ನಿಜವಾದ ಪರೀಕ್ಷೆ,’ ಎಂದು ಹರ್ಷ ವರ್ಧನ್ ಹೇಳಿದ್ದಾರೆ.
ಜವಾಬ್ದಾರಿಯುತವಾಗಿ ಮತ್ತು ಹೊಣೆಗಾರಿಕೆಯಿಂದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಮಹಾರಾಷ್ಟ್ರ ಸರ್ಕಾರ ವಿಫಲವಾಗುತ್ತಿರುವುದು ನಮ್ಮ ಗ್ರಹಿಕೆಗೆ ನಿಲುಕದ ಸಂಗತಿಯಾಗಿದೆ. ಲಸಿಕೆ ಕೊರತೆ ಎಂದು ಸರ್ಕಾರ ಹೇಳುತ್ತಿರವುದು ‘ಆಧಾರರಹಿತ’, ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ಎಲ್ಲರಿಗೂ ಲಸಿಕೆ ಸಿಗುವಂತಾಗಬೇಕು ಮತ್ತು ಲಸಿಕಾ ಕೇಂದ್ರಗಳನ್ನು ಹೆಚ್ಚಿಸಬೇಕು ಎಂದು ರಾಜಕೀಯ ನಾಯಕರು ವಾದಿಸುತ್ತಿರುವುದನ್ನು ಖಂಡಿಸಿದ ಹರ್ಷ ವರ್ಧನ್ ಅವರು, ಲಸಿಕೆ ನೀಡುವ ಕಾರ್ಯಕ್ರಮ ಟಾರ್ಗೆಟ್ ತಲುಪಿಲ್ಲ ಎಂದು ಹೇಳಿದರು.
‘ಲಸಿಕೆಯನ್ನು ಆದ್ಯತೆ ಮೇಲೆ ನೀಡದೆ ಬೇರೆ ವಿಧಿಯಿಲ್ಲ, ಯಾಕೆಂದರೆ ಅವುಗಳ ಸರಬರಾಜು ಸೀಮಿತವಾಗಿದೆ,’ ಎಂದು ಅವರು ಹೇಳಿದರು.
‘ಸೋಂಕನ್ನು ನಿಯಂತ್ರಿಸಲು ಮಹಾರಾಷ್ಟ್ರ ಅರೆಮನಸ್ಸಿನ ಪ್ರಯತ್ನ ಮಾಡುತ್ತಿರುವುದು ಇಡೀ ದೇಶವನ್ನೇ ತೊಂದರೆಗೆ ಸಿಲುಕಿಸಿದೆ. ಸಾಮೂಹಿಕ ಕ್ವಾರಂಟೈನ್ ಜನ ತಪ್ಪಿಸಿಕೊಳ್ಳತ್ತಿರುವುದನ್ನು ನೋಡಿಯೂ ಯಾವುದೆ ಕ್ರಮ ತೆಗೆದಕೊಳ್ಳದ ಮಹಾರಾಷ್ಟ್ರಸರ್ಕಾರದ ಉದಾಸೀನತೆ ಆಘಾತ ಹುಟ್ಟಿಸುತ್ತದೆ,‘ ಎಂದು ಹರ್ಷ ವರ್ಧನ್ ಹೇಳಿದ್ದಾರೆ.
ಮಂಗಳವಾರದಂದು ಭಾರತದಲ್ಲಿ 1,15,736 ಪ್ರಕರಣಗಳು ಪತ್ತೆಯಾಗಿದ್ದು, 55,000 ಕ್ಕಿಂತ ಹೆಚ್ಚು ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿವೆ. ಛತ್ತೀಸ್ಗಢ್ನಲ್ಲಿ ಸುಮಾರು 10,000 ಹಾಗೂ ಕರ್ನಾಟಕ, ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ 5,000 ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.