ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಪ್ರಸ್ತಾವ ಇಲ್ಲ; ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಸ್ಪಷ್ಟನೆ
ಅಲಹಾಬಾದ್ ಮತ್ತು ಜೈಪುರದ ಹೈಕೋರ್ಟ್‌ಗಳು ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಕುರಿತು ಆದೇಶ ನೀಡಿ ಪ್ರತಿಕ್ರಿಯಿಸಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಂತಹ ವಿಷಯಗಳು ರಾಜ್ಯ ಶಾಸಕಾಂಗ ಅಧಿಕಾರಿಗಳ ಅಧಿಕಾರ ವ್ಯಾಪ್ತಿಗೆ ಬರುತ್ತವೆ ಎಂದು ಹೇಳಿದರು.
ನವದೆಹಲಿ, ಆಗಸ್ಟ್ 7: ಗೋವನ್ನು ಭಾರತದ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ (G Kishan Reddy) ಸೋಮವಾರ ಸಂಸತ್ತಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಭಾರತೀಯ ಜನತಾ ಪಕ್ಷದ (BJP) ಸಂಸದ ಭಗೀರಥ ಚೌಧರಿ ಅವರು ಕೇಳಿದ ಪ್ರಶ್ನೆಗಳ ಸರಣಿಗೆ ಪ್ರತಿಕ್ರಿಯೆಯಾಗಿ ಸಚಿವರು ಈ ಉತ್ತರ ನೀಡಿದ್ದಾರೆ. ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ ಆಗಿದೆ. ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವೆಂದು ಪರಿಗಣಿಸಲಾದ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವುದಕ್ಕಾಗಿ ಕಾನೂನನ್ನು ರೂಪಿಸಲು ಸರ್ಕಾರ ಉದ್ದೇಶಿಸಿಲ್ಲ ಎಂದು ಸಚಿವರು ಹೇಳಿದರು.
ಭಾರತ ಸರ್ಕಾರವು ಹುಲಿಯನ್ನು ‘ರಾಷ್ಟ್ರೀಯ ಪ್ರಾಣಿ’ ಮತ್ತು ನವಿಲನ್ನು ‘ರಾಷ್ಟ್ರೀಯ ಪಕ್ಷಿ’ ಎಂದು ಅಧಿಕೃತವಾಗಿ ಗುರುತಿಸಿದೆ. ಭಾರತದ ‘ವನ್ಯಜೀವಿ ಮತ್ತು ಜೀವವೈವಿಧ್ಯದ ರಕ್ಷಣೆ ಕಾಯ್ದೆ 1972’ ಶೆಡ್ಯೂಲ್ 1ರಲ್ಲಿ ಸೇರಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಸರ್ಕಾರವು ಆರಂಭದಲ್ಲಿ ಹುಲಿ ಮತ್ತು ನವಿಲನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಧಿಕೃತ ದಾಖಲೆಗಳಲ್ಲಿ ಸ್ವಲ್ಪ ಸಮಯದವರೆಗೆ ಸೇರಿಸಿರಲಿಲ್ಲ. ಆದಾಗ್ಯೂ, 2011 ರ ಮೇ 30 ರಂದು ಸಚಿವಾಲಯವು ಹುಲಿ ಮತ್ತು ನವಿಲು ಎರಡನ್ನೂ ಕ್ರಮವಾಗಿ ‘ರಾಷ್ಟ್ರೀಯ ಪ್ರಾಣಿ’ ಮತ್ತು ‘ರಾಷ್ಟ್ರೀಯ ಪಕ್ಷಿ’ ಎಂದು ಮರು ಅಧಿಸೂಚನೆ ಹೊರಡಿಸಿತ್ತು. ಭಾರತದ ಶ್ರೀಮಂತ ಜೀವವೈವಿಧ್ಯ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಅವುಗಳ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ಪುನರುಚ್ಚರಿಸಿತು ಎಂದು ಜಿ ಕಿಶನ್ ರೆಡ್ಡಿ ತಿಳಿಸಿದ್ದಾರೆ.
ಅಲಹಾಬಾದ್ ಮತ್ತು ಜೈಪುರದ ಹೈಕೋರ್ಟ್‌ಗಳು ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಕುರಿತು ಆದೇಶ ನೀಡಿ ಪ್ರತಿಕ್ರಿಯಿಸಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಂತಹ ವಿಷಯಗಳು ರಾಜ್ಯ ಶಾಸಕಾಂಗ ಅಧಿಕಾರಿಗಳ ಅಧಿಕಾರ ವ್ಯಾಪ್ತಿಗೆ ಬರುತ್ತವೆ ಎಂದು ಹೇಳಿದರು.
ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ರಾಷ್ಟ್ರೀಯ ಗೋಕುಲ್ ಮಿಷನ್ ಅನ್ನು ಸಕ್ರಿಯವಾಗಿ ಅನುಷ್ಠಾನಗೊಳಿಸುತ್ತಿದೆ. ಇದು ಸ್ಥಳೀಯ ತಳಿಯ ಜಾನುವಾರುಗಳನ್ನು ಒಳಗೊಂಡಂತೆ ಸ್ಥಳೀಯ ತಳಿಗಳನ್ನು ಅಭಿವೃದ್ಧಿಪಡಿಸುವ ಮತ್ತು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಜಿ ಕಿಶನ್ ರೆಡ್ಡಿ ಅವರು ತಿಳಿಸಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ