ಅಮೆರಿಕ ಉಪಾಧ್ಯಕ್ಷ ಜೆ.ಡಿ. ವಾನ್ಸ್ ಹಾಗು ಕುಟುಂಬದಿಂದ 4 ದಿನ ಭಾರತ ಪ್ರವಾಸ; ಏನಿದೆ ಅವರ ಅಜೆಂಡಾ?
US vice president JD Vance's India visit 2025: ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ತಮ್ಮ ಪತ್ನಿ ಹಾಗು ಮಕ್ಕಳ ಜೊತೆ ಏಪ್ರಿಲ್ 21, ಸೋಮವಾರ ಭಾರತಕ್ಕೆ ಬರುತ್ತಿದ್ದಾರೆ. ಏಪ್ರಿಲ್ 24ಕ್ಕೆ ಅವರು ಅಮೆರಿಕಕ್ಕೆ ವಾಪಸ್ಸಾಗಲಿದ್ದಾರೆ. ಈ ಮೂರ್ನಾಲ್ಕು ದಿನ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜೆಡಿ ವ್ಯಾನ್ಸ್ ಮಾತುಕತೆಯೂ ಸೇರಿದೆ.

ನವದೆಹಲಿ, ಏಪ್ರಿಲ್ 20: ಟ್ಯಾರಿಫ್ ಬಿಸಿಯ ನಡುವೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವಾನ್ಸ್ (JD Vance) ಅವರು ತಮ್ಮ ಕುಟುಂಬ ಸಮೇತ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ನಾಳೆ ಸೋಮವಾರ ಭಾರತಕ್ಕೆ ಆಗಮಿಸಲಿದ್ದು, ಮೂರ್ನಾಲ್ಕು ದಿನ ಇರಲಿದ್ದು, ಏಪ್ರಿಲ್ 24ರಂದು ತವರಿಗೆ ಮರಳಲಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಭೆ ನಡೆಯುವುದೂ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅಗ್ರಾ, ಜೈಪುರ್ ಮುಂತಾದ ಕಡೆಯೂ ಅವರು ತೆರಳಲಿದ್ದಾರೆ. ಜೆ.ಡಿ. ವ್ಯಾನ್ಸ್ ಅವರ ಜೊತೆ ಪತ್ನಿ ಉಷಾ ಹಾಗೂ ಮೂವರು ಮಕ್ಕಳು ಇರಲಿದ್ದಾರೆ. ಜೊತೆಗೆ ಅಮೆರಿಕದ ಅಧಿಕಾರಿಗಳ ತಂಡವೂ ಇರಲಿದೆ.
ಜೆ.ಡಿ. ವ್ಯಾನ್ಸ್ ಹಾಗೂ ಕುಟುಂಬ ಸದಸ್ಯರು ಸೋಮವಾರ ಬೆಳಗ್ಗೆ 10 ಗಂಟೆಗೆ ದೆಹಲಿಯ ಪಲಂ ವಾಯುನೆಲೆಯಲ್ಲಿನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಂದು ರಾತ್ರಿ ಈ ದಂಪತಿಗೆ ಪ್ರಧಾನಿ ಮೋದಿ ಔತಣಕೂಟದಿಂದ ಸತ್ಕರಿಸಲಿದ್ದಾರೆ.
ಜೆಡಿ ವಾನ್ಸ್ ಭಾರತ ಭೇಟಿಯ ಅಜೆಂಡಾ ಏನು?
ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಶೀಘ್ರದಲ್ಲೇ ಅಂಕಿತ ಹಾಕುವ ಒಂದು ಮುಖ್ಯ ಅಜೆಂಡಾ ಈ ಭೇಟಿಯ ಹಿಂದಿದೆ. ಇದರ ಜೊತೆಗೆ, ಎರಡೂ ದೇಶಗಳ ನಡುವಿನ ಮೈತ್ರಿಯನ್ನು ಗಟ್ಟಿಗೊಳಿಸಲು ವಿಧಗಳನ್ನು ಅವಲೋಕಿಸುವ ಸಾಧ್ಯತೆ ಇದೆ. ವ್ಯಾಪಾರ, ರಕ್ಷಣೆ, ಸುಂಕ ಇತ್ಯಾದಿ ವಿವಿಧ ವಿಚಾರಗಳ ಬಗ್ಗೆ ಮಾತುಕತೆ ನಡೆಯುವ ನಿರೀಕ್ಷೆ ಇದೆ. ಏಪ್ರಿಲ್ 21, ಸೋಮವಾರ ಸಂಜೆ 6:30ಕ್ಕೆ ಮೋದಿ ಮತ್ತು ವ್ಯಾನ್ಸ್ ಭೇಟಿ ವೇಳೆ ಈ ವಿಚಾರಗಳ ಮಾತುಕತೆ ಆಗಬಹುದು. ಇದಾದ ಬಳಿಕ ಔತಣಕೂಟ ಇರುತ್ತದೆ.
ಇದನ್ನೂ ಓದಿ: ಏಪ್ರಿಲ್ 22ರಂದು ಸೌದಿ ಅರೇಬಿಯಾಕ್ಕೆ ಪ್ರಧಾನಿ ಮೋದಿ ಭೇಟಿ
ಜೈಪುರ, ಆಗ್ರಾಗೆ ಭೇಟಿ ಕೊಡಲಿರುವ ಅಮೆರಿಕ ಉಪಾಧ್ಯಕ್ಷರು…
ಸೋಮವಾರ ಪ್ರಧಾನಿಗಳೊಂದಿಗೆ ಔತಣಕೂಟ ಮುಗಿಸಿದ ಬಳಿಕ ಅದೇ ರಾತ್ರಿ ಜೆಡಿ ವ್ಯಾನ್ಸ್ ಹಾಗು ಕುಟುಂಬದವರು ಜೈಪುರಕ್ಕೆ ತೆರಳಲಿದ್ದಾರೆ. ಏಪ್ರಿಲ್ 22, ಮಂಗಳವಾರ ಜೈಪುರದಲ್ಲಿರುವ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವೆನಿಸಿದ ಆಮರ್ ಕೋಟೆಗೆ ಪ್ರವಾಸ ಹೋಗಲಿದ್ದಾರೆ. ಮಂಗಳವಾರ ಮಧ್ಯಾಹ್ನದಂದು ಜೈಪುರದಲ್ಲೇ ಇರುವ ರಾಜಸ್ಥಾನ್ ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ಸಮಾರಂಭವೊಂದನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ವ್ಯಾನ್ಸ್ ಕುಟುಂಬ ತಮ್ಮ ಭಾರತ ಭೇಟಿಯ ಮೂರನೇ ದಿನವಾದ ಬುಧವಾರದಂದು (ಏಪ್ರಿಲ್ 23) ದೆಹಲಿ ಬಳಿ ಇರುವ ಆಗ್ರಾಗೆ ಹೋಗಲಿದ್ದಾರೆ. ಇಲ್ಲಿ ತಾಜ್ ಮಹಲ್, ಶಿಲ್ಪಗ್ರಾಮ್ಗೆ ಭೇಟಿ ಕೊಡಬಹುದು.
ಬುಧವಾರ ಸಂಜೆಯ ನಂತರ ಇವರು ಮತ್ತೆ ಜೈಪುರಕ್ಕೆ ವಾಪಸ್ಸಾಗಿ ಅಲ್ಲಿ ರಾಮ್ಬಾಗ್ ಪ್ಯಾಲೇಸ್ನಲ್ಲಿ ಉಳಿದುಕೊಳ್ಳಬಹುದು. ರಾಮಬಾಗ್ ಪ್ಯಾಲೇಸ್ ಹಿಂದೆ ಅರಸರ ಅತಿಥಿಗೃಹವಾಗಿತ್ತು. ಈಗ ಅದನ್ನು ಔಷಾರಾಮಿ ಹೆರಿಟೇಜ್ ಹೋಟೆಲ್ ಆಗಿ ಮಾರ್ಪಡಿಸಲಾಗಿದೆ.
ಇದನ್ನೂ ಓದಿ: ಈ ವರ್ಷ ಭಾರತಕ್ಕೆ ಭೇಟಿ ನೀಡುತ್ತೇನೆ; ಮೋದಿ ಜೊತೆ ಮಾತುಕತೆ ಬಳಿಕ ಎಲಾನ್ ಮಸ್ಕ್ ಮಾಹಿತಿ
ಏಪ್ರಿಲ್ 24, ಗುರುವಾರದಂದು ಜೆ.ಡಿ. ವ್ಯಾನ್ಸ್ ಹಾಗೂ ಕುಟುಂಬ ಅಮೆರಿಕಕ್ಕೆ ವಾಪಸ್ಸಾಗಲಿದೆ. ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಅಮೆರಿಕದ ಅಧ್ಯಕ್ಷರಾದ ಬಳಿಕ ಜೆ.ಡಿ. ವ್ಯಾನ್ಸ್ ಭಾರತಕ್ಕೆ ಬರುತ್ತಿರುವುದು ಇದೇ ಮೊದಲು. ವಾನ್ಸ್ ಅವರು ಭಾರತ ಮೂಲದ ಉಷಾ ಎಂಬಾಕೆಯನ್ನು ಮದುವೆಯಾಗಿದ್ದಾರೆ. ಅವರಿಗೆ ಮೂವರು ಮಕ್ಕಳಿದ್ದು, ಒಬ್ಬ ಮಗನಿಗೆ ವಿವೇಕ್ ಎಂದು ಭಾರತೀಯ ಹೆಸರನ್ನಿಟ್ಟಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ