
ಲಕ್ನೋ, ಜೂನ್ 26: ಅಯೋಧ್ಯೆಯ ರಾಮ ಮಂದಿರದ (Ram Mandir) ದೇಣಿಗೆ ನಿಧಿಯ ದುರುಪಯೋಗ ಮತ್ತು ಕಳ್ಳತನದ ಆರೋಪದ ಮೇಲೆ ಕೆಲವರನ್ನು ಬಂಧಿಸಿದ ಬೆನ್ನಲ್ಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. “ಕೋಟಿಗಟ್ಟಲೆ ಭಕ್ತರ ಧಾರ್ಮಿಕ ನಂಬಿಕೆ ಮತ್ತು ಶ್ರದ್ಧೆಯೊಂದಿಗೆ ಆಟವಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ” ಎಂದು ಅವರು ಎಚ್ಚರಿಸಿದ್ದಾರೆ. ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಸಾರ್ವಜನಿಕರು ನೀಡಿದ ಕಾಣಿಕೆಯಲ್ಲಿ ಅವ್ಯವಹಾರ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಯೋಗಿ ಸ್ಪಷ್ಟಪಡಿಸಿದ್ದಾರೆ.
ನಂಬಿಕೆಗೆ ದ್ರೋಹ ಬಗೆದರೆ ಕಠಿಣ ಶಿಕ್ಷೆ:
ಈ ಪ್ರಕರಣದ ಕುರಿತು ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, “ರಾಮ ಮಂದಿರವು ಕೇವಲ ಒಂದು ಧಾರ್ಮಿಕ ರಚನೆಯಲ್ಲ, ಅದು ವಿಶ್ವದಾದ್ಯಂತ ಇರುವ ಸನಾತನ ಧರ್ಮೀಯರ ಆಳವಾದ ನಂಬಿಕೆಯ ಸಂಕೇತವಾಗಿದೆ. ಭಕ್ತರು ತಮ್ಮ ಕಷ್ಟದ ಗಳಿಕೆಯನ್ನು ಮಂದಿರದ ನಿಧಿಗೆ ಸಮರ್ಪಿಸುತ್ತಾರೆ. ಇಂತಹ ಪವಿತ್ರ ನಿಧಿಯ ಮೇಲೆ ಕಣ್ಣು ಹಾಕುವ ಅಥವಾ ಭಕ್ತರ ನಂಬಿಕೆಗೆ ದ್ರೋಹ ಬಗೆಯುವ ಯಾವುದೇ ಪ್ರಯತ್ನವನ್ನು ಸರ್ಕಾರವು ಸಹಿಸುವುದಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳ್ಳತನ: ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಆಪ್ತ ಸಹಾಯಕ ಸೇರಿ 8 ಮಂದಿ ಬಂಧನ
ತಪ್ಪಿತಸ್ಥರ ವಿರುದ್ಧ ಕಠಿಣ ಕಾಯ್ದೆಗಳಡಿ ಕ್ರಮ:
ಈ ಹಗರಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನೂ ಕಾನೂನಿನ ಮುಂದೆ ನಿಲ್ಲಿಸಲಾಗುವುದು. ಕಳ್ಳತನ ಹಾಗೂ ವಂಚನೆ ನಡೆಸಿರುವ ಆರೋಪಿಗಳ ವಿರುದ್ಧ ಕೇವಲ ಸಾಮಾನ್ಯ ಪ್ರಕರಣ ಮಾತ್ರವಲ್ಲದೆ, ಅಗತ್ಯ ಬಿದ್ದರೆ ಗ್ಯಾಂಗ್‌ಸ್ಟರ್ ಕಾಯ್ದೆ ಮತ್ತು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತಹ ಕಠಿಣ ಕ್ರಮಗಳನ್ನು ಜರುಗಿಸಲು ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದು ಅವರು ಸೂಚಿಸಿದ್ದಾರೆ.
#WATCH | Deoria, UP: CM Yogi Adityanath says, “I was on a visit to Ayodhya on June 19th. Even then, I had said that Ayodhya is a symbol of our unity, a symbol of the unity of India’s Sanatan Dharma. Do not cast aspersions on Ayodhya; learn to follow the dignity of lord Ram.… pic.twitter.com/MqUYowjpYv
— ANI UP/Uttarakhand (@ANINewsUP) June 26, 2026
ಪಾರದರ್ಶಕತೆಗೆ ಆದ್ಯತೆ:
ರಾಮ ಮಂದಿರದ ವ್ಯವಸ್ಥೆ ಹಾಗೂ ದೇಣಿಗೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸುರಕ್ಷಿತ ಮತ್ತು ಪಾರದರ್ಶಕವಾಗಿಡಲು ಸರ್ಕಾರ ಮತ್ತು ಟ್ರಸ್ಟ್ ಬದ್ಧವಾಗಿದೆ. ಭವಿಷ್ಯದಲ್ಲಿ ಇಂತಹ ಯಾವುದೇ ಲೋಪದೋಷಗಳು ಮರುಕಳಿಸದಂತೆ ತಾಂತ್ರಿಕ ಹಾಗೂ ಭದ್ರತಾ ಆಡಿಟ್‌ಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ.
ಇತ್ತೀಚೆಗೆ ರಾಮ ಮಂದಿರದ ದೇಣಿಗೆ ಪೆಟ್ಟಿಗೆಗಳು ಹಾಗೂ ಬ್ಯಾಂಕ್ ಖಾತೆಗಳ ನಿರ್ವಹಣೆಯಲ್ಲಿ ಕೆಲವು ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಬ್ಯಾಂಕ್ ನೌಕರರು ಅಥವಾ ಮಧ್ಯವರ್ತಿಗಳು ಸೇರಿದಂತೆ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಮುಖ್ಯಮಂತ್ರಿಯವರ ಈ ಹೇಳಿಕೆಯು ಕಾನೂನು ಸುವ್ಯವಸ್ಥೆಯ ಕಟ್ಟುನಿಟ್ಟಿನ ಸಂದೇಶವನ್ನು ರವಾನಿಸಿದೆ.
ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಹಗರಣಕ್ಕೆ ಭಾರಿ ತಿರುವು, ಎಸ್‌ಐಟಿಯಿಂದ 15 ಪುಟಗಳ ವರದಿ ಸಲ್ಲಿಕೆ, ಏನೇನಿದೆ?
“ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಯಾವಾಗಲೂ ವಿರೋಧಿಸುತ್ತಿದ್ದ ಮತ್ತು ಶ್ರೀರಾಮನ ಅಸ್ತಿತ್ವವನ್ನೇ ನಿರಾಕರಿಸಿದ್ದವರೇ ಈಗ ರಾಮ ಮಂದಿರದ ದೇಣಿಗೆಯ ವಿಷಯವನ್ನು ರಾಜಕೀಯಗೊಳಿಸುತ್ತಿದ್ದಾರೆ. ಅವರು ಶ್ರೀರಾಮನೇ ಇರಲಿಲ್ಲ ಎಂದು ವಾದಿಸಿದ್ದರು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಮಂದಿರದ ವಿರುದ್ಧ ನಿರಂತರವಾಗಿ ಹೋರಾಡಿದ್ದರು. ಅವರು ರಾಮಭಕ್ತರ ಮೇಲೆ ಗುಂಡು ಹಾರಿಸಿದ್ದರು ಮತ್ತು ರಾಮನವಮಿಯಂದು ನಡೆದ ದಲಭೆಗಳಿಗೂ ಅವರೇ ಕಾರಣವಾಗಿದ್ದರು. ಅವರ ಬಳಿ ಪುರಾವೆಗಳಿದ್ದರೆ, ಅದನ್ನು ಎಸ್‌ಐಟಿಗೆ ಹಸ್ತಾಂತರಿಸಲಿ. ಈ ವಿಷಯವನ್ನು ರಾಜಕೀಯಗೊಳಿಸುವುದರಿಂದ ಅವರು ದೂರವಿರಬೇಕು” ಎಂದು ಸಿಎಂ ಆಕ್ರೋಶ ಹೊರಹಾಕಿದ್ದಾರೆ.
ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಪ್ರಮುಖ ಸಹಾಯಕ ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಸೇರಿದಂತೆ 8 ಮಂದಿ ಆರೋಪಿಗಳನ್ನು ಎಸ್‌ಐಟಿ ವರದಿಯ ಆಧಾರದ ಮೇಲೆ ಬಂಧಿಸಿದ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ಈ ಹೇಳಿಕೆ ನೀಡಿದ್ದಾರೆ. ಶೀಘ್ರದಲ್ಲೇ ಮತ್ತಷ್ಟು ಬಂಧನಗಳಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ