ದೆಹಲಿ: ಉತ್ತರ ಪ್ರದೇಶದ (Uttar Pradesh) ಮಥುರಾದಲ್ಲಿ (Mathura) ಪೌರ ಕಾರ್ಮಿಕರೊಬ್ಬರು ಕಸದ ಗಾಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (Yogi Adityanath) ಅವರ ಫೋಟೊ ಇರಿಸಿ ಗಾಡಿ ತಳ್ಳಿಕೊಂಡು ಹೋಗುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಮುನ್ಸಿಪಲ್ ಕಾರ್ಪೊರೇಷನ್ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಕಸದ ಗಾಡಿಯಲ್ಲಿ ಮೋದಿ, ಯೋಗಿ ಫೋಟೊ ಇರಿಸಿದ್ದನ್ನು ಯುವಕರ ಗುಂಪೊಂದು ಪ್ರಶ್ನಿಸಿದಾಗ, ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಅದು ಕಸದ ಜತೆ ಬಿದ್ದಿತ್ತು. ಅದನ್ನು ಗಾಡಿಯಲ್ಲಿ ಎತ್ತಿಟ್ಟೆ ಎಂದು ಪೌರ ಕಾರ್ಮಿಕ ಹೇಳಿದ್ದಾರೆ. ರಾಜಸ್ಥಾನದ ಆಲ್ವಾರ್ನಿಂದ ಬಂದ ಭಕ್ತರ ಗುಂಪೊಂದು ಪೌರ ಕಾರ್ಮಿಕ ಗಾಡಿಯಲ್ಲಿ ಈ ರೀತಿ ಫೋಟೊ ಇರಿಸಿದ್ದರ ವಿಡಿಯೊ ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದಾರೆ. ಗಾಡಿಯಲ್ಲಿದ್ದ ಫೋಟೊಗಳನ್ನು ತೆಗೆದಿಡುವಾಗ ಎಪಿಜೆ ಅಬ್ದುಲ್ ಕಲಾಂ ಅವರ ಫೋಟೊ ಕೂಡಾ ಇದೆ ಎಂದು ಆ ವ್ಯಕ್ತಿ ಹೇಳಿದ್ದಾರೆ. ಯುವಕರ ಗುಂಪು ಆ ಫೋಟೊವನ್ನು ತೊಳೆಯುತ್ತಿರುವುದು ವಿಡಿಯೊದಲ್ಲಿದೆ. ನಾವು ಈ ಫೋಟೊವನ್ನು ಆಲ್ವಾರ್ಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಮೋದಿಜೀ ಮತ್ತು ಯೋಗೀಜಿ ಈ ದೇಶದ ಆತ್ಮಗಳು ಎಂದು ಅವರು ಹೇಳಿದ್ದಾರೆ.
ವೈರಲ್ ವಿಡಿಯೊ ಬಗ್ಗೆ ಹಲವಾರು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಇದು ತಪ್ಪು, ಮುಖ್ಯಮಂತ್ರಿ ಎಂಬುದು ಸಾಂವಿಧಾನಿಕ ಹುದ್ದೆ ನಾವು ಎಲ್ಲರನ್ನೂ ಗೌರವಿಸಲೇಬೇಕು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಫೋಟೊ ಯಾರದ್ದಾದರೇನೂ ಅದು ಹಳೆಯದ್ದಾಗುತ್ತದೆ, ಕೆಲವೊಮ್ಮೆ ಹಾಳಾಗುತ್ತದೆ. ಹೀಗಿರುವಾಗ ಇಂಥಾ ಫೋಟೊಗಳನ್ನು ಬಿಸಾಡುವುದಕ್ಕೆ ಏನಾದರೂ ಪ್ರಕ್ರಿಯೆ ಇದೆಯೇ ಎಂದು ಇನ್ನೊಬ್ಬ ಬಳಕೆದಾರರು ಕೇಳಿದ್ದಾರೆ.
ಆ ವ್ಯಕ್ತಿ ಫೋಟೊಗಳನ್ನು ಅರಿವಿಲ್ಲದೆಯೇ ಗಾಡಿಯಲ್ಲಿರಿಸಿದ್ದು. ಆತನ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ತಕ್ಷಣಕ್ಕೆ ಜಾರಿಗೆ ಬರುವಂತೆ ಆತನನ್ನು ಕೆಲಸದಿಂದ ವಜಾ ಮಾಡಲಾಗದೆ ಎಂದು ನಗರ್ ನಿಗಮ್ ಮಥುರಾ-ವೃಂದಾವನ್ ಹೆಚ್ಚುವರಿ ಮುನ್ಸಿಪಲ್ ಕಮಿಷನರ್ ಸತ್ಯೇಂದ್ರ ಕುಮಾರ್ ತಿವಾರಿ ಟ್ವೀಟ್ ಮಾಡಿದ್ದಾರೆ.