ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಬಗ್ಗೆ ನ್ಯಾಯಮೂರ್ತಿ ಸಂದೇಶ್ ವ್ಯಕ್ತಪಡಿಸಿದ್ದ ಅಭಿಪ್ರಾಯಕ್ಕೆ ಸುಪ್ರೀಂ ಕೋರ್ಟ್ ತಡೆ
ತಮ್ಮ ವಿರುದ್ಧ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಬಳಸಿದ್ದ ಕಟುವಾದ ಅಭಿಪ್ರಾಯವನ್ನು ಪ್ರಶ್ನಿಸಿ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಮತ್ತು ಬೆಂಗಳೂರು ಜಿಲ್ಲಾಧಿಕಾರಿಯಾಗಿದ್ದ ಜೆ. ಮಂಜುನಾಥ್ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಬೆಂಗಳೂರು: ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ (Seemanth Kumar Singh) ಮತ್ತು ಐಎಎಸ್ ಅಧಿಕಾರಿ ಜೆ. ಮಂಜುನಾಥ್ (J Manjunath) ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಅವರನ್ನು ‘ಕಳಂಕಿತ ಅಧಿಕಾರಿ’ ಮತ್ತು ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ‘ವಸೂಲಿ ಕೇಂದ್ರ’ ಎಂದು ಹೇಳಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಅಭಿಪ್ರಾಯಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ (NV Ramana) ಇಂದು ವಿಚಾರಣೆ ನಡೆಸಿದ್ದಾರೆ.
ತಮ್ಮ ವಿರುದ್ಧ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಬಳಸಿದ್ದ ಕಟುವಾದ ಅಭಿಪ್ರಾಯವನ್ನು ಪ್ರಶ್ನಿಸಿ ಭ್ರಷ್ಟಾಚಾರ ನಿಗ್ರಹ ದಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಜೆ. ಮಂಜುನಾಥ್ ಪ್ರತ್ಯೇಕವಾಗಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಶುಕ್ರವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇಂದಿಗೆ ವಿಚಾರಣೆಯನ್ನು ಮುಂದೂಡಿತ್ತು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ, ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಯ ನಡವಳಿಕೆಗೂ ವಿಚಾರಣೆಯಲ್ಲಿರುವ ಪ್ರಕರಣಕ್ಕೂ ಸಂಬಂಧವಿಲ್ಲ. ಜಾಮೀನು ಅರ್ಜಿಯನ್ನು ಪರಿಗಣಿಸುವ ಬದಲು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಸಂಬಂಧವಿಲ್ಲದ ಮತ್ತು ವ್ಯಾಪ್ತಿಯ ಹೊರಗಿನ ಇತರ ವಿಷಯಗಳ ಬಗ್ಗೆ ಗಮನಹರಿಸಿದ್ದಾರೆ ಎಂದು ಹೇಳಿದ್ದಾರೆ.
ಕರ್ನಾಟಕ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ ಮತ್ತು ಭಾರತೀಯ ಆಡಳಿತ ಸೇವೆಗಳ ಅಧಿಕಾರಿ ಜೆ. ಮಂಜುನಾಥ್ ಅವರು ಲಂಚ ಪ್ರಕರಣದ ವಿಚಾರಣೆಯ ವೇಳೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಚ್‌ಪಿ ಸಂದೇಶ್ ಅವರ ಆಕ್ಷೇಪಾರ್ಹ ಹೇಳಿಕೆಗಳನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಕಲಾಪಕ್ಕೆ ತಡೆ ನೀಡುವಂತೆ ಕೋರಿದ್ದರು.
ಆಗ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್ ಅವರನ್ನು ಲಂಚ ಪ್ರಕರಣದಲ್ಲಿ ಏಕೆ ಆರೋಪಿಯನ್ನಾಗಿ ಮಾಡಲಿಲ್ಲ? ಎಂದು ಹೈಕೋರ್ಟ್ ನ್ಯಾಯಮೂರ್ತಿ ಹೆಚ್ಪಿ ಸಂದೇಶ್ ಪ್ರಶ್ನಿಸಿದ್ದರು. ಪ್ರಸ್ತುತ ಲಂಚ ಪ್ರಕರಣದಲ್ಲಿ ಜೈಲು ಸೇರಿರುವ ಐಎಎಸ್ ಅಧಿಕಾರಿ ಜೆ. ಮಂಜುನಾಥ್ ಅವರು ತಮ್ಮ ಪರವಾಗಿ ವಾದ ಮಂಡಿಸಲು ಅವಕಾಶ ನೀಡದೆ ತಮ್ಮ ವಿರುದ್ಧ ಕೆಲವು ಅಭಿಪ್ರಾಯಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
“ತನಿಖೆಯ ಆರಂಭಿಕ ಹಂತಗಳಲ್ಲಿ ಇಂತಹ ಹೇಳಿಕೆಗಳು ಜಾಮೀನು ಪರಿಹಾರದ ಹಕ್ಕು ಸೇರಿದಂತೆ ಕೆಲವು ವಿಷಯಗಳ ನ್ಯಾಯಯುತ ತನಿಖೆ ಮತ್ತು ತೀರ್ಮಾನದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಈ ನಿಟ್ಟಿನಲ್ಲಿ ಹೈಕೋರ್ಟ್ ಯೋಚನೆ ಮಾಡಿಲ್ಲ” ಎಂದು ಮನವಿಯಲ್ಲಿ ಹೇಳಲಾಗಿತ್ತು.
ಇದನ್ನೂ ಓದಿ: ಎಸಿಬಿ ಪ್ರಕರಣ ವಿಚಾರಣೆಯನ್ನು 3 ದಿನ ಮುಂದೂಡಲು ಸುಪ್ರೀಂ ಕೋರ್ಟ್ ಮನವಿ
ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯು ಸಲ್ಲಿಸಿರುವುದು ಜಾಮೀನು ಅರ್ಜಿ ಮಾತ್ರ. ಆದರೆ, ಹೈಕೋರ್ಟ್ ನ್ಯಾಯಮೂರ್ತಿಗಳು ಅದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಂತೆ ಪರಿಗಣಿಸಿ ವಿಚಾರಣೆ ನಡೆಸಿದ್ದಾರೆ. ತಮ್ಮ ಹಾಗೂ ತಮ್ಮ ನೇತೃತ್ವದ ಎಸಿಬಿ ಸಂಸ್ಥೆಯ ಪ್ರಾಮಾಣಿಕತೆ, ಬದ್ಧತೆಯ ಬಗ್ಗೆ ಅನಗತ್ಯ ಟೀಕೆ ಮಾಡಿದ್ದಾರೆ” ಎಂದು ಐಪಿಎಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಅರ್ಜಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು.
ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ಜೆ. ಮಂಜುನಾಥ್ ಅವರು ಭ್ರಷ್ಟಾಚಾರ ಪ್ರಕರಣದ ಆರೋಪಿಗೆ ಸಂಬಂಧಿಸಿದ ಜಾಮೀನು ಅರ್ಜಿಯಲ್ಲಿ ತಮ್ಮನ್ನು ಪ್ರತಿವಾದಿಯನ್ನಾಗಿ ಉಲ್ಲೇಖಿಸಿರುವ ಕ್ರಮವನ್ನು ಪ್ರಶ್ನಿಸಿ, ತಮ್ಮ ವಿರುದ್ಧದ ನ್ಯಾಯಮೂರ್ತಿಗಳ ಟೀಕೆಯನ್ನು ರದ್ದುಪಡಿಸಬೇಕೆಂದು ಕೋರಿದ್ದರು. ಈ ಅರ್ಜಿಯ ಬಗ್ಗೆ ಮೂರು ವಾರಗಳ ನಂತರ ಸುಪ್ರೀಂ ಕೋರ್ಟ್ನಲ್ಲಿ ಮುಂದಿನ ವಿಚಾರಣೆ ನಡೆಯಲಿದೆ.
Published On - 12:59 pm, Mon, 18 July 22