ಭಾರತ ಎ ಪರ ತನುಷ್ ಕೋಟ್ಯಾನ್-ಅನ್ಶುಲ್ ದಾಖಲೆಯ ಜೊತೆಯಾಟ
England Lions vs India A: ಭಾರತ ಎ ಮತ್ತು ಇಂಗ್ಲೆಂಡ್ ಲಯನ್ಸ್ ನಡುವಣ ಎರಡು ಟೆಸ್ಟ್ ಪಂದ್ಯಗಳು ಡ್ರಾನಲ್ಲಿ ಅಂತ್ಯ ಕಂಡಿದೆ. ಕ್ಯಾಂಟರ್ಬೆರ್ರಿಯಲ್ಲಿ ನಡೆದ ಮೊದಲ ಟೆಸ್ಟ್ ಪ0ದ್ಯದಲ್ಲಿ ಭಾರತೀಯರು ಉತ್ತಮ ಪ್ರದರ್ಶನ ನೀಡಿದರೂ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸುವಲ್ಲಿ ಇಂಗ್ಲೆಂಡ್ ಲಯನ್ಸ್ ಯಶಸ್ವಿಯಾಯಿತು. ಇದೀಗ ದ್ವಿತೀಯ ಟೆಸ್ಟ್ ಕೂಡ ಡ್ರಾನಲ್ಲಿ ಕೊನೆಗೊಂಡಿದೆ.

ನಾರ್ಥಂಪ್ಟನ್ನ ಕೌಂಟಿ ಗ್ರೌಂಡ್ನಲ್ಲಿ ನಡೆದ ಇಂಗ್ಲೆಂಡ್ ಲಯನ್ಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಎ ತಂಡ ಭರ್ಜರಿ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಲಯನ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ಎ ಪರ ಕೆಎಲ್ ರಾಹುಲ್ 116 ರನ್ ಬಾರಿಸಿ ಮಿಂಚಿದ್ದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಧ್ರುವ್ ಜುರೇಲ್ 52 ರನ್‌ಗಳ ಕೊಡುಗೆ ನೀಡಿದ್ದರು. ಈ ಶತಕ ಮತ್ತು ಅರ್ಧಶತಕಗಳ ನೆರವಿನೊಂದಿಗೆ ಭಾರತ ಎ ತಂಡವು ಮೊದಲ ಇನಿಂಗ್ಸ್ನಲ್ಲಿ 348 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಲಯನ್ಸ್ ತಂಡವು 327 ರನ್ ಕಲೆಹಾಕಿ ಅಲ್ಪ ಹಿನ್ನಡೆ ಅನುಭವಿಸಿತು.
ದ್ವಿತೀಯ ಇನಿಂಗ್ಸ್:
21 ರನ್‌ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ಎ ತಂಡಕ್ಕೆ ಮತ್ತೊಮ್ಮೆ ಕೆಎಲ್ ರಾಹುಲ್ ಉತ್ತಮ ಆರಂಭ ಒದಗಿಸಿದರು. 64 ಎಸೆತಗಳನ್ನು ಎದುರಿಸಿದ ರಾಹುಲ್ 9 ಫೋರ್ಗಳೊಂದಿಗೆ 52 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಅಭಿಮನ್ಯು ಈಶ್ವರನ್ 80 ರನ್‌ಗಳ ಭರ್ಜರಿ ಇನಿಂಗ್ಸ್ ಆಡಿದರು.
ಇದಾಗ್ಯೂ 268 ರನ್ ಕಲೆಹಾಕುವಷ್ಟರಲ್ಲಿ ಭಾರತ ಎ ತಂಡವು 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಜೊತೆಗೂಡಿದ ತನುಷ್ ಕೋಟ್ಯಾನ್ ಹಾಗೂ ಅನ್ಶುಲ್ ಕಂಬೋಜ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.
ದಾಖಲೆಯ ಜೊತೆಯಾಟ:
8ನೇ ವಿಕೆಟ್ಗೆ ಜೊತೆಗೂಡಿದ ತನುಷ್ ಕೋಟ್ಯಾನ್ ಹಾಗೂ ಅನ್ಶುಲ್ ಕಂಬೋಜ್ ಭಾರತ ಎ ತಂಡಕ್ಕೆ ಆಸರೆಯಾಗಿ ನಿಂತರು. ಪರಿಣಾಮ ಎಂಟನೇ ವಿಕೆಟ್ಗೆ 149 ರನ್ಗಳು ಮೂಡಿಬಂತು. ಇದು ಭಾರತ ಎ ಪರ 8ನೇ ವಿಕೆಟ್ಗೆ ಮೂಡಿಬಂದ ಅತ್ಯಧಿಕ ರನ್‌ಗಳ ಮೊತೆಯಾಟ ಎಂಬುದು ವಿಶೇಷ.
ಇದಕ್ಕೂ ಮುನ್ನ 2010 ರಲ್ಲಿ ವೆಸ್ಟ್ ಇಂಡೀಸ್ ‘ಎ’ ವಿರುದ್ಧ ಭಾರತ ಎ ತಂಡದ ಪರ ಕಣಕ್ಕಿಳಿದ ಚೇತೇಶ್ವರ ಪೂಜಾರ ಮತ್ತು ಜಸ್ಕರನ್ ದೀಪ್ ಸಿಂಗ್ ಬಟ್ಟರ್ 137 ರನ್‌ಗಳ ಜೊತೆಯಾಟವಾಡಿರುವುದು ಈ ಹಿಂದಿನ ದಾಖಲೆಯಾಗಿತ್ತು.
ಇದೀಗ 149 ರನ್‌ಗಳ ಜೊತೆಯಾಟದೊಂದಿಗೆ ತನುಷ್ ಕೋಟ್ಯಾನ್ ಹಾಗೂ ಅನ್ಶುಲ್ ಕಂಬೋಜ್ ಭಾರತ ಎ ಪರ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಜೊತೆಯಾಟದ ನಡುವೆ ತನುಷ್ 108 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ 90 ರನ್ ಬಾರಿಸಿ ಅಜೇಯರಾಗಿ ಉಳಿದರೆ, ಅನ್ಶುಲ್ ಕಂಬೋಜ್ ಅಜೇಯ 51 ರನ್ ಬಾರಿಸಿದರು.
ಈ ಮೂಲಕ ಭಾರತ ಎ ತಂಡವು 7 ವಿಕೆಟ್ ನಷ್ಟಕ್ಕೆ 417 ರನ್ಗಳಿಸಿ ದ್ವಿತೀಯ ಇನಿಂಗ್ಸ್ ಅನ್ನು ಡಿಕ್ಲೇರ್ ಮಾಡಿಕೊಂಡಿದೆ. ಇದರ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಲಯನ್ಸ್ ತಂಡವು 32 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಇದರೊಂದಿಗೆ ಈ ಪಂದ್ಯದ ದಿನದಾಟ ಮುಕ್ತಾಯಗೊಂಡಿದ್ದು, ಭಾರತ ಎ ಹಾಗೂ ಇಂಗ್ಲೆಂಡ್ ಲಯನ್ಸ್ ನಡುವಣ ದ್ವಿತೀಯ ಟೆಸ್ಟ್ ಪಂದ್ಯ ಕೂಡ ಡ್ರಾನಲ್ಲಿ ಅಂತ್ಯಗೊಂಡಿದೆ.
ಭಾರತ ಎ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್ , ಕೆಎಲ್ ರಾಹುಲ್ , ಅಭಿಮನ್ಯು ಈಶ್ವರನ್ (ನಾಯಕ) , ಕರುಣ್ ನಾಯರ್ , ಧ್ರುವ್ ಜುರೆಲ್ ( ವಿಕೆಟ್ ಕೀಪರ್ ) , ನಿತೀಶ್ ಕುಮಾರ್ ರೆಡ್ಡಿ , ಶಾರ್ದೂಲ್ ಠಾಕೂರ್ , ತನುಷ್ ಕೋಟ್ಯಾನ್ , ಅನ್ಶುಲ್ ಕಂಬೋಜ್ , ತುಷಾರ್ ದೇಶಪಾಂಡೆ , ಖಲೀಲ್ ಅಹ್ಮದ್.
ಇದನ್ನೂ ಓದಿ: ಐಪಿಎಲ್ನ 3 ತಂಡಗಳು ಬ್ಯಾನ್, 2 ಟೀಮ್ಗಳು ಕ್ಯಾನ್ಸಲ್
ಇಂಗ್ಲೆಂಡ್ ಲಯನ್ಸ್ ಪ್ಲೇಯಿಂಗ್ 11: ಟಾಮ್ ಹೈನ್ಸ್ , ಬೆನ್ ಮೆಕಿನ್ನಿ , ಎಮಿಲಿಯೊ ಗೇ , ಜೋರ್ಡಾನ್ ಕಾಕ್ಸ್ , ಜೇಮ್ಸ್ ರೆವ್ (ನಾಯಕ) , ಮ್ಯಾಕ್ಸ್ ಹೋಲ್ಡನ್ , ಜಾರ್ಜ್ ಹಿಲ್ , ಕ್ರಿಸ್ ವೋಕ್ಸ್ , ಫರ್ಹಾನ್ ಅಹ್ಮದ್ , ಜೋಶ್ ಟಂಗ್ , ಎಡ್ವರ್ಡ್ ಜ್ಯಾಕ್.