ಲಂಡನ್ ತೊರೆದು ಭಾರತಕ್ಕೆ ಬಂದು IAS ಆಗಿದ್ದ ದಿವ್ಯಾ ಮಿತ್ತಲ್ ದಿಢೀರ್ ರಾಜೀನಾಮೆ

ಐಐಟಿ, ಐಐಎಂ ಪದವಿ ಪಡೆದು ಲಂಡನ್‌ನಲ್ಲಿ ಕೈತುಂಬ ಸಂಬಳದ ಉದ್ಯೋಗ ಬಿಟ್ಟು ಬಂದವರು ದಿವ್ಯಾ ಮಿತ್ತಲ್‌. ಆದ್ರೆ, ಭಾರತದ ನಾಗರಿಕ ಸೇವೆಗೆ ಸೇರಲು ಲಂಡನ್ ತೊರೆದು 2013 ನೇ ಬ್ಯಾಚ್‌ನಲ್ಲಿ ಉತ್ತರ ಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿಯಾಗಿ ಸೇವೆಗೆ ಸೇರಿದ್ದು, 13 ವರ್ಷಗಳ ನಿರಂತರ ಸೇವೆ ಸಲ್ಲಿಸಿದ್ದಾರೆ. ಆದ್ರೆ, ಅದೇನಾಯ್ತೋ ಏನೋ ಇದೀಗ ಏಕಾಏಕಿ ರಾಜೀನಾಮೆ ನೀಡಿದ್ದಾರೆ.

ಲಂಡನ್ ತೊರೆದು ಭಾರತಕ್ಕೆ ಬಂದು IAS ಆಗಿದ್ದ ದಿವ್ಯಾ ಮಿತ್ತಲ್ ದಿಢೀರ್ ರಾಜೀನಾಮೆ
Divya Mittal

Updated on: Aug 30, 2026 | 10:12 PM

ನವದೆಹಲಿ, (ಆಗಸ್ಟ್ 30):  ಲಂಡನ್‌ನಲ್ಲಿ ಉನ್ನತ ಉದ್ಯೋಗ ತೊರೆದು ತಾಯ್ನಾಡಿನ ಸೇವೆಗಾಗಿ ಐಎಎಸ್ ಆಗಿದ್ದ ದಿವ್ಯಾ ಮಿತ್ತಲ್ (IAS Officer Divya Mittal), 13 ವರ್ಷಗಳ ಸಾರ್ಥಕ ಸೇವೆಯ ನಂತರ ಸ್ವಯಂಪ್ರೇರಿತ ರಾಜೀನಾಮೆ ನೀಡಿದ್ದಾರೆ. ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ದಿವ್ಯಾ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಸ್ಥಾನದಿಂದ ಕೆಳಗಿಳಿದರೂ ದೇಶದ ಅಭಿವೃದ್ಧಿಗಾಗಿ ಜನಸೇವೆಯ ಮಿಷನ್ ಎಂದಿಗೂ ನಿಲ್ಲುವುದಿಲ್ಲ ಎಂದಿದ್ದಾರೆ. 2013ರ ಬ್ಯಾಚ್‌ನ ಈ ಅಧಿಕಾರಿ ವೈಯಕ್ತಿಕ ಕಾರಣಗಳಿಂದಾಗಿ ಮತ್ತು ದೇಶಕ್ಕಾಗಿ ಮತ್ತಷ್ಟು ವಿಭಿನ್ನವಾಗಿ ಸೇವೆ ಸಲ್ಲಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ದಿವ್ಯಾ ಮಿತ್ತಲ್ ಭಾವುಕ ಪೋಸ್ಟ್

ರಾಜೀನಾಮೆ ಬಗ್ಗೆ ದಿವ್ಯಾ ಮಿತ್ತಲ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಭಾವುಕ ಪೋಸ್ಟ್ ಮಾಡಿದ್ದಾರೆ. ಇಂದು ನನ್ನ ಕಣ್ಣುಗಳು ಕೃತಜ್ಞತೆಯಿಂದ ತುಂಬಿವೆ. ನನ್ನ ದೇಶದ ಮಣ್ಣು ನನಗೆ ನೀಡಿದ ಕನಸುಗಳು ಇನ್ನೂ ಬಾಕಿ ಇವೆ. ಅಧಿಕೃತ ಹುದ್ದೆ ಅಂತ್ಯವಾಗಬಹುದು, ಆದರೆ ದೇಶಕ್ಕಾಗಿ ನಾನು ಕಂಡ ಕನಸು ಮತ್ತು ನನ್ನ ಮಿಷನ್ ಬದಲಾಗುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ನೋಡಿ: ಕೆಪಿಎಸ್​ಸಿ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಜೈಲು ಪಾಲು!

ಇನ್ನು ರಾಜೀನಾಮೆಯ ಬಗ್ಗೆ ಬರೆಯುತ್ತಾ ದಿವ್ಯಾ ಅವರು ಒಂದು ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಲಾಹುರಿಯಾ ದಿಹ್ ಎಂಬ ಗುಡ್ಡಗಾಡು ಹಳ್ಳಿಗೆ ಮೊದಲ ಬಾರಿಗೆ ನೀರು ಬಂದಾಗ ಅಲ್ಲಿನ ಒಬ್ಬ ವೃದ್ಧೆ ಕಣ್ಣೀರು ಹಾಕುತ್ತಾ ದಿವ್ಯಾ ಅವರ ತಲೆ ಮುಟ್ಟಿ ಆಶೀರ್ವಾದ ಮಾಡಿದ್ದರಂತೆ. ಆ ತಾಯಿಯ ಸ್ಪರ್ಶ ನನ್ನನ್ನು ಸದಾ ಜೀವಂತವಾಗಿರಿಸುತ್ತದೆ. ಹುದ್ದೆ ಇಂದು ಹೋಗಬಹುದು, ಆದರೆ ಆ ಪ್ರೀತಿ ಎಂದಿಗೂ ಮಾಸದು ಎಂದು  ಭಾವುಕರಾಗಿ ಬರೆದುಕೊಂಡಿದ್ದಾರೆ.

ಯುಪಿಎಸ್‌ಸಿ ಪರೀಕ್ಷೆ ಬರೆಯಲು ನಿರ್ಧಾರ ತೆಗೆದುಕೊಳ್ಳುವ ಮುನ್ನ ದಿವ್ಯಾ ಮಿತ್ತಲ್ ಲಂಡನ್‌ನಲ್ಲಿ ಕೈತುಂಬ ಸಂಬಳ ಸಿಗುವ ಉದ್ಯೋಗದಲ್ಲಿದ್ದರು. ಆದರೆ ಸಂಬಳ, ಹಣಕ್ಕಿಂತ ಮಿಗಿಲಾಗಿ ಅವರನ್ನು ಕಾಡಿದ್ದು, ಐಎಎಸ್‌ ಅಧಿಕಾರಿಯಾಗುವುದು ಹಾಗೂ ಜನರ ಸೇವೆ ಮಾಡುವುದು. ಆದ್ದರಿಂದ ವಿದೇಶಿ ಕೆಲಸ ತೊರೆದು ಬಂದು 2013 ನೇ ಬ್ಯಾಚ್‌ನಲ್ಲಿ ಉತ್ತರ ಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿಯಾಗಿ ಸೇವೆಗೆ ಸೇರಿದ್ದರು. ಉತ್ತರ ಪ್ರದೇಶದ ದೇವರಿ ಹಾಗೂ ಮಿರ್ಜಾಪುರದಂತಹ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಲಂಡನ್‌ನಿಂದ ತಾಯ್ನಾಡಿಗೆ ವಾಪಸ್

ದಿವ್ಯಾ ಮಿತ್ತಲ್ ಐಐಟಿ ದೆಹಲಿ ಮತ್ತು ಐಐಎಂ ಬೆಂಗಳೂರಿನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಓದಿ, ಲಂಡನ್‌ನಲ್ಲಿ ಕೈತುಂಬಾ ಸಂಬಳ ಬರುವ ಹಣಕಾಸು ಉದ್ಯೋಗದಲ್ಲಿದ್ದರು. ಜೀವನದಲ್ಲಿ ಎಲ್ಲವನ್ನೂ ಸಾಧಿಸಿದೆ ಎನಿಸಿದಾಗಲೂ ಅವರಿಗೆ ಒಳಗೇನೋ ಒಂದು ಕೊರಗು. ನನ್ನ ದೇಶದ ಮಣ್ಣು ನನಗೆ ನೀಡಿದ ಶಿಕ್ಷಣ ಮತ್ತು ಆತ್ಮವಿಶ್ವಾಸದ ಋಣವನ್ನು ನಾನು ತೀರಿಸಬೇಕು ಎಂಬ ಹಂಬಲ ಅವರಲ್ಲಿತ್ತು. ಇದೇ ಕಾರಣಕ್ಕೆ ಅವರು ಲಂಡನ್ ಕೆಲಸ ಬಿಟ್ಟು ಭಾರತಕ್ಕೆ ಮರಳಿ ಯುಪಿಎಸ್‌ಸಿ ಪರೀಕ್ಷೆ ಎದುರಿಸಿ ಐಎಎಸ್ ಅಧಿಕಾರಿಯಾಗಿದ್ದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us