ಉತ್ತರಾಖಂಡ ರೆಸಾರ್ಟ್​ ರಿಸೆಪ್ಷನಿಸ್ಟ್​ ಕೊಲೆ ಪ್ರಕರಣ; ಫಾರೆನ್ಸಿಕ್ ವರದಿಯಲ್ಲಿ ಅಚ್ಚರಿಯ ಸತ್ಯ ಬಯಲು

ಮರಣೋತ್ತರ ಪರೀಕ್ಷೆ ವರದಿಯಲ್ಲಿ ವೈದ್ಯರಿಗೆ ಅಂಕಿತಾ ಭಂಡಾರಿಯ ಮೃತದೇಹದಲ್ಲಿ ಅತ್ಯಾಚಾರದ ಯಾವುದೇ ಲಕ್ಷಣಗಳು ಕಂಡುಬಂದಿರಲಿಲ್ಲ. ಆದರೂ ದೃಢೀಕರಣಕ್ಕಾಗಿ ಆಕೆಯ ಸ್ವಾಬ್ ಅನ್ನು ವಿಧಿವಿಜ್ಞಾನ ತಂಡಕ್ಕೆ ಕಳುಹಿಸಲಾಗಿತ್ತು.

ಉತ್ತರಾಖಂಡ ರೆಸಾರ್ಟ್​ ರಿಸೆಪ್ಷನಿಸ್ಟ್​ ಕೊಲೆ ಪ್ರಕರಣ; ಫಾರೆನ್ಸಿಕ್ ವರದಿಯಲ್ಲಿ ಅಚ್ಚರಿಯ ಸತ್ಯ ಬಯಲು
ಅಂಕಿತಾ ಭಂಡಾರಿ- ಪುಲ್ಕಿತ್ ಆರ್ಯ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Oct 17, 2022 | 3:55 PM

ಉತ್ತರಾಖಂಡ: ಉತ್ತರಾಖಂಡದ (Uttarakhand Resort) ರೆಸಾರ್ಟ್​ವೊಂದರ 19 ವರ್ಷದ ರಿಸೆಪ್ಷನಿಸ್ಟ್​ ಅಂಕಿತಾ ಭಂಡಾರಿ (Ankitha Bhandari) ಹತ್ಯೆ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಬಿಜೆಪಿ ನಾಯಕನ ಮಗನನ್ನು ಬಂಧಿಸಲಾಗಿತ್ತು. ಅಲ್ಲದೆ, ಆ ಬಿಜೆಪಿ ನಾಯಕನನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿವಿಜ್ಞಾನ ತಂಡವು ಅಂಕಿತಾಳ ಡಿಎನ್‌ಎ ಪರೀಕ್ಷೆಯಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ನಡೆದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂಬ ವಿಷಯವನ್ನು ಬಯಲು ಮಾಡಿದೆ.

ಉತ್ತರಾಖಂಡದ ಪೊಲೀಸ್ ತಂಡ ಅಂಕಿತಾ ಅವರ ಸ್ವಾಬ್ ಅನ್ನು ಡಿಎನ್‌ಎ ಪರೀಕ್ಷೆಗಾಗಿ ಫಾರೆನ್ಸಿಕ್ ತಂಡಕ್ಕೆ ಕಳುಹಿಸಿತ್ತು. ಆ ತಂಡ ಅಂಕಿತಾ ಅವರ ಸ್ವಾಪ್‌ನಲ್ಲಿ ಬೇರೆಯವರ ಡಿಎನ್‌ಎ ಪತ್ತೆಯಾಗಿಲ್ಲ ಎಂದು ತಿಳಿಸಿದೆ. ಈ ಪ್ರಕರಣದಲ್ಲಿ ಉತ್ತರಾಖಂಡ ಪೊಲೀಸರು ಶೀಘ್ರವೇ ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ವೈದ್ಯರಿಗೆ ಅಂಕಿತಾ ಭಂಡಾರಿಯ ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯದ ಯಾವುದೇ ಲಕ್ಷಣಗಳು ಕಂಡುಬಂದಿರಲಿಲ್ಲ. ಆದರೂ ಸಂಪೂರ್ಣ ದೃಢೀಕರಣಕ್ಕಾಗಿ ಆಕೆಯ ಸ್ವಾಬ್ ಅನ್ನು ವಿಧಿವಿಜ್ಞಾನ ತಂಡಕ್ಕೆ ಕಳುಹಿಸಲಾಗಿತ್ತು. ಅಂಕಿತಾ ಭಂಡಾರಿ ನಾಪತ್ತೆಯಾದ 6 ದಿನಗಳ ನಂತರ ಪೊಲೀಸರಿಗೆ ಶವವಾಗಿ ಪತ್ತೆಯಾಗಿದ್ದಳು. ಆಕೆಯ ದೇಹವನ್ನು ಹೃಷಿಕೇಶದ ಸಮೀಪದ ಚೀಲಾ ಕಾಲುವೆಯಿಂದ ಹೊರತೆಗೆಯಲಾಗಿತ್ತು. ರೆಸಾರ್ಟ್‌ನಲ್ಲಿ ಗ್ರಾಹಕರಿಗೆ ಲೈಂಗಿಕ ಸೇವೆಯನ್ನು ನೀಡುವಂತೆ ಬಿಜೆಪಿ ನಾಯಕನ ಮಗ ಪುಲ್ಕಿತ್ ಆರ್ಯ ಮತ್ತು ಇತರರು ಆಕೆಗೆ ಒತ್ತಡ ಹೇರಿದ್ದರು ಎನ್ನಲಾಗಿತ್ತು.

ಇದನ್ನೂ ಓದಿ: ಉತ್ತರಾಖಂಡ್ ಕೊಲೆ ಪ್ರಕರಣ; ನೀರಿನಲ್ಲಿ ಮುಳುಗಿ ಯುವತಿಯ ಸಾವು ಸಂಭವಿಸಿದೆ: ಮರಣೋತ್ತರ ಪರೀಕ್ಷೆ ವರದಿ

ಇದಕ್ಕೂ ಮೊದಲು, ಅಂತಿಮ ಶವಪರೀಕ್ಷೆಯ ವಿವರಗಳು ಬರುವವರೆಗೂ ಆಕೆಯ ಅಂತಿಮ ವಿಧಿಗಳನ್ನು ನಡೆಸಲು ಆಕೆಯ ಕುಟುಂಬ ನಿರಾಕರಿಸಿತ್ತು. ಪ್ರಾಥಮಿಕ ವರದಿಯಲ್ಲಿ ಆಕೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿತ್ತು. ಆದರೆ, ಅಂಕಿತಾ ಅವರ ಬೆರಳುಗಳು, ಕೈಗಳು ಮತ್ತು ಬೆನ್ನಿನ ಮೇಲೆ ಗಾಯದ ಗುರುತುಗಳು ಕಂಡುಬಂದಿತ್ತು.

ತನ್ನ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬಿಜೆಪಿ ನಾಯಕನ ಮಗ ಪುಲ್ಕಿತ್ ಆರ್ಯನನ್ನು ಬಂಧಿಸಲಾಗಿತ್ತು. ತಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂದು ಆ ಯುವತಿಯ ಕುಟುಂಬದವರು ದೂರನ್ನು ಸಲ್ಲಿಸಿದ ನಂತರ ಪೊಲೀಸರು ತನಿಖೆ ನಡೆಸಿದ್ದರು. ನಾಪತ್ತೆಯಾಗಿದ್ದ ಯುವತಿಯನ್ನು ಕೊಂದು, ಆಕೆಯ ಶವವನ್ನು ಚೀಲಾ ಕಾಲುವೆಗೆ ಎಸೆದಿರುವುದಾಗಿ ತಪ್ಪೊಪ್ಪಿಕೊಂಡ ನಂತರ ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ, ರೆಸಾರ್ಟ್​ ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ವ್ಯವಸ್ಥಾಪಕ ಅಂಕಿತ್ ಗುಪ್ತಾ ಅವರನ್ನು ಬಂಧಿಸಲಾಗಿತ್ತು.

ಕೊಲೆ ಪ್ರಕರಣದ ಹಿನ್ನೆಲೆ: ಕೊಲೆ ಆರೋಪಿ ಪುಲ್ಕಿತ್ ಆರ್ಯ ಹರಿದ್ವಾರದ ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಪುತ್ರ. ವಿನೋದ್ ಆರ್ಯ ಅವರಿಗೆ ರಾಜ್ಯ ಸಚಿವ ಶ್ರೇಣಿಯ ಸ್ಥಾನವನ್ನು ನೀಡಲಾಗಿತ್ತು. ಆದರೆ, ಅವರು ಉತ್ತರಾಖಂಡ ಸರ್ಕಾರದಲ್ಲಿ ಯಾವುದೇ ಇಲಾಖೆಯ ಜವಾಬ್ದಾರಿಯನ್ನು ಹೊಂದಿಲ್ಲ. ತನ್ನ ರೆಸಾರ್ಟ್‌ನ ರಿಸೆಪ್ಷನಿಸ್ಟ್​ ಆಗಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿ ನಾಪತ್ತೆಯಾಗಿದ್ದಾಳೆ ಎಂದು ಪುಲ್ಕಿತ್ ಆರ್ಯ ಅವರೇ ಸೋಮವಾರ ಪೊಲೀಸರಿಗೆ ದೂರು ನೀಡಿದ್ದರು. ಇದು ಅಧಿಕಾರಿಗಳನ್ನು ದಾರಿ ತಪ್ಪಿಸುವ ಯತ್ನವಾಗಿತ್ತು ಎಂಬುದು ಆರೋಪಿಯನ್ನು ವಿಚಾರಣೆ ನಡೆಸಿದ ಬಳಿಕ ಪೊಲೀಸರಿಗೆ ಗೊತ್ತಾಗಿತ್ತು. ರೆಸಾರ್ಟ್​ ಮಾಲೀಕನಾಗಿದ್ದ ಪುಲ್ಕಿತ್ ಆರ್ಯ ತನ್ನ ರೆಸಾರ್ಟ್​​ನಲ್ಲಿ ರಿಸೆಪ್ಷನಿಸ್ಟ್​ ಆಗಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿಯನ್ನು ಹತ್ಯೆ ಮಾಡಿದ್ದ. ಆ ಯುವತಿಯ ಮೃತದೇಹ ಕಾಲುವೆಯಲ್ಲಿ ಪತ್ತೆಯಾಗಿದ್ದ ಇದಾದ ಬಳಿಕ ಉತ್ತರಾಖಂಡದ ಆ ರೆಸಾರ್ಟ್‌ನ ಕೆಲವು ಭಾಗಗಳನ್ನು ಆಡಳಿತವು ಬುಲ್ಡೋಜರ್​ನಿಂದ ಕೆಡವಿತ್ತು. ಅದಾದ ಬಳಿಕ ಆ ರೆಸಾರ್ಟ್​ಗೆ ಸ್ಥಳೀಯರು ಬೆಂಕಿ ಹಚ್ಚಿ ತಮ್ಮ ಆಕ್ರೋಶ ಹೊರಹಾಕಿದ್ದರು. ಸ್ಥಳೀಯ ಬಿಜೆಪಿ ಶಾಸಕ ರೇಣು ಬಿಷ್ತ್ ಅವರ ಕಾರನ್ನು ಕೂಡ ಜನರು ಧ್ವಂಸಗೊಳಿಸಿದ್ದರು.

ಇದನ್ನೂ ಓದಿ: ಉತ್ತರಾಖಂಡದಲ್ಲಿ ಹತ್ಯೆಯಾದ ಯುವತಿಯ ಶವ ಪತ್ತೆ; ರೆಸಾರ್ಟ್​ ನೆಲಸಮ, ಬಿಜೆಪಿ ನಾಯಕನ ಉಚ್ಛಾಟನೆ

ಪುಲ್ಕಿತ್ ಆರ್ಯ ಅವರ ರೆಸಾರ್ಟ್​ನಲ್ಲಿರುವ ಅತಿಥಿಗಳಿಗೆ ಲೈಂಗಿಕವಾಗಿ ಸಹಕರಿಸಲು ಅಂಕಿತಾಗೆ ಆಮಿಷವೊಡ್ಡಿದ್ದ ಎನ್ನಲಾಗಿದೆ. ಆದರೆ, ವೇಶ್ಯಾವಾಟಿಕೆಗೆ ಒಳಗಾಗಲು ಆಕೆ ನಿರಾಕರಿಸಿದ್ದಳು. ಇದೇ ವಿಚಾರವಾಗಿ ಆಕೆಯೊಂದಿಗೆ ಜಗಳವಾಡಿದ ನಂತರ ಪುಲ್ಕಿತ್ ಅಂಕಿತಾಳನ್ನು ಕೊಲೆ ಮಾಡಿದ್ದ. ಪೊಲೀಸ್ ವಿಚಾರಣೆಯ ಬಳಿಕ ಈ ವಿಚಾರ ಬಯಲಾಗಿತ್ತು. ಬಳಿಕ ಆಕೆಯ ಶವ ಕಾಲುವೆಯಲ್ಲಿ ಪತ್ತೆಯಾಗಿತ್ತು. ಇದೀಗ ಆಕೆಯ ಫಾರೆನ್ಸಿಕ್ ವರದಿ ಹೊರಬಿದ್ದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:27 pm, Mon, 17 October 22