AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಂದೇ ಭಾರತ್ ಸ್ಲೀಪರ್ ರೈಲಿಗೆ ಭಾರೀ ಡಿಮ್ಯಾಂಡ್; ರೈಲ್ವೆ ಇಲಾಖೆಯಿಂದ ಮಹತ್ವದ ನಿರ್ಧಾರ

ಇತ್ತೀಚೆಗೆಷ್ಟೇ ಪ್ರಧಾನಿ ನರೇಂದ್ರ ಮೋದಿ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಚಾಲನೆ ನೀಡಿದ್ದರು. ಪ್ರೀಮಿಯಂ ರಾತ್ರಿ ಪ್ರಯಾಣಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಭಾರತೀಯ ರೈಲ್ವೆ ತನ್ನ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಪರಿಚಯಿಸಿದೆ. ಇದು ವಿಮಾನದ ರೀತಿಯದ್ದೇ ಐಷಾರಾಮಿ ಮತ್ತು ಆರಾಮದಾಯಕ ಪ್ರಯಾಣದ ಅನುಭವವನ್ನು ಪ್ರಯಾಣಿಕರಿಗೆ ನೀಡುತ್ತದೆ. ಸ್ಲೀಪರ್ ರೈಲಿನ ಟಿಕೆಟ್​​ಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆ ಕೆಲವು ಹೊಸ ಪ್ರಯೋಗಗಳನ್ನು ಮಾಡಲು ಮುಂದಾಗಿದೆ. ಆ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ವಂದೇ ಭಾರತ್ ಸ್ಲೀಪರ್ ರೈಲಿಗೆ ಭಾರೀ ಡಿಮ್ಯಾಂಡ್; ರೈಲ್ವೆ ಇಲಾಖೆಯಿಂದ ಮಹತ್ವದ ನಿರ್ಧಾರ
Vande Bharat Sleeper Train
ಸುಷ್ಮಾ ಚಕ್ರೆ
|

Updated on:Jan 29, 2026 | 3:25 PM

Share

ನವದೆಹಲಿ, ಜನವರಿ 29: ಭಾರತ ದೇಶದ ಮೊದಲ ಸೆಮಿ ಹೈ ಸ್ಪೀಡ್ ಸ್ಲೀಪರ್ ರೈಲಾದ ವಂದೇ ಭಾರತ್ ಸ್ಲೀಪರ್ (Vande Bharat Sleeper Train) ಗುವಾಹಟಿ ಮತ್ತು ಹೌರಾ ನಡುವೆ ಈಗಾಗಲೇ ಸಂಚರಿಸುತ್ತಿದೆ. ಪ್ರಯಾಣಿಕರು ಇದನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಇದರ ಜನಪ್ರಿಯತೆ ಹೆಚ್ಚುತ್ತಿರುವ ಕಾರಣದಿಂದಾಗಿ ಭಾರತೀಯ ರೈಲ್ವೆ ಈ ರೈಲಿನಲ್ಲಿ ಹೊಸ ಪ್ರಯೋಗಗಳನ್ನು ನಡೆಸಲು ಮುಂದಾಗಿದೆ. ಹೆಚ್ಚಿನ ಜನರಿಗೆ ಈ ಸ್ಲೀಪರ್ ರೈಲಿನಲ್ಲಿ ಸಂಚರಿಸಲು ಸಹಾಯವಾಗಲಿ ಎಂಬ ಉದ್ದೇಶದಿಂದ ಈ ರೈಲಿನಲ್ಲಿ ಕೋಚ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದೆ.

ಸದ್ಯಕ್ಕೆ ವಂದೇ ಭಾರತ್ ಸ್ಲೀಪರ್ ರೈಲುಗಳು 16 ಬೋಗಿಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಇದು 823 ಬರ್ತ್‌ಗಳನ್ನು ಹೊಂದಿವೆ. ಆದರೆ, ಮುಂದಿನ ದಿನಗಳಲ್ಲಿ ಇನ್ನೂ 8 ಬೋಗಿಗಳನ್ನು ಸೇರಿಸಲಾಗುತ್ತದೆ. ಒಟ್ಟು 24 ಬೋಗಿಗಳ ಸಾಮರ್ಥ್ಯವನ್ನು ಹೊಂದಿರುವ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದರಲ್ಲಿ 1,224 ಬರ್ತ್‌ಗಳಿರಲಿದೆ.

ಇದನ್ನೂ ಓದಿ: Vande Bharat Sleeper: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿನ ವಿಶೇಷತೆ, ಟಿಕೆಟ್ ದರ ಏನು?

ವಂದೇ ಭಾರತ್ ಸ್ಲೀಪರ್ ಅನ್ನು ಪ್ರಾರಂಭಿಸಿದ 10 ದಿನಗಳಲ್ಲಿ ಹೆಚ್ಚಿನ ಪ್ರಯಾಣಿಕರು ಆರಾಮದಾಯಕ ಪ್ರಯಾಣವನ್ನು ಆನಂದಿಸಲು ಅನುವು ಮಾಡಿಕೊಡಲು ರೈಲ್ವೆ ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಧರಿಸಿದೆ. ವಂದೇ ಭಾರತ್ ಸ್ಲೀಪರ್ ರೈಲುಗಳಲ್ಲಿ ಕೋಚ್‌ಗಳ ಸಂಖ್ಯೆಯನ್ನು ರೈಲ್ವೆ ಇಲಾಖೆ ವಿಸ್ತರಿಸುತ್ತಿದೆ. ಮೊದಲ ಬಾರಿಗೆ, ವಂದೇ ಭಾರತ್ ರೈಲುಗಳಿಗೆ 24 ಕೋಚ್‌ಗಳನ್ನು ಸೇರಿಸಲು ನಿರ್ಧರಿಸಲಾಗಿದೆ.

ಪ್ರಸ್ತುತ 16 ಬೋಗಿಗಳ ವಂದೇ ಭಾರತ್ ರೈಲಿನಲ್ಲಿ ಎಲ್ಲಾ ತರಗತಿಗಳಲ್ಲಿ 823 ಬರ್ತ್‌ಗಳಿವೆ. ಆದರೆ, 24 ಬೋಗಿಗಳ ವಂದೇ ಭಾರತ್ ರೈಲಿನಲ್ಲಿ 1,224 ಬರ್ತ್‌ಗಳಿರಲಿವೆ. ಇದು ಬರ್ತ್‌ಗಳ ಸಂಖ್ಯೆಯನ್ನು ಮೂರನೇ ಒಂದು ಭಾಗದಷ್ಟು ಹೆಚ್ಚಿಸುತ್ತದೆ. ರೈಲ್ವೆ ಇಲಾಖೆಯ ಪ್ರಕಾರ, 24 ಬೋಗಿಗಳ ರೈಲನ್ನು ಮೇಕ್ ಇನ್ ಇಂಡಿಯಾ ಉಪಕ್ರಮದಡಿಯಲ್ಲಿ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್)ಯಲ್ಲಿ ತಯಾರಿಸಲಾಗುವುದು.

ಇದನ್ನೂ ಓದಿ: ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ವಿದ್ಯಾರ್ಥಿಗಳು, ಲೋಕೋ ಪೈಲಟ್ ಜೊತೆ ಮೋದಿ ಸಂವಾದ

ಭಾರತೀಯ ರೈಲ್ವೆ ವಿನ್ಯಾಸಗೊಳಿಸುತ್ತಿರುವ 24 ಬೋಗಿಗಳ ಮೊದಲ ರೈಲು 2026ರ ಅಂತ್ಯದ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದೆ. ಈ ರೈಲು 17 ಎಸಿ 3-ಬೋಗಿಗಳು, 5 ಎಸಿ 2-ಬೋಗಿಗಳು, 1 ಎಸಿ ಪ್ರಥಮ ದರ್ಜೆ ಕೋಚ್ ಮತ್ತು 1 ಎಸಿ ಪ್ಯಾಂಟ್ರಿ ಕಾರ್ ಅನ್ನು ಒಳಗೊಂಡಿರುತ್ತದೆ. 24 ಬೋಗಿಗಳ ವಂದೇ ಭಾರತ್ ಆರಾಮದಾಯಕ ಬರ್ತ್‌ಗಳು ರೀಡಿಂಗ್ ಲ್ಯಾಂಪ್, ಮೊಬೈಲ್-ಲ್ಯಾಪ್‌ಟಾಪ್ ಚಾರ್ಜಿಂಗ್ ಪಾಯಿಂಟ್‌ಗಳು, ವೈ-ಫೈ ಮಾಹಿತಿ ಮತ್ತು ಮನರಂಜನಾ ವ್ಯವಸ್ಥೆ, ನಿರ್ವಾತ ಶೌಚಾಲಯಗಳು, ಹೆಚ್ಚಿನ ಲಗೇಜ್ ಸ್ಥಳ, ಆಧುನಿಕ ಒಳಾಂಗಣಗಳು, ಅಂಗವಿಕಲ ಪ್ರಯಾಣಿಕರಿಗಾಗಿ ವಿಶೇಷ ಶೌಚಾಲಯಗಳು ಮತ್ತು ರ‍್ಯಾಂಪ್‌ಗಳನ್ನು ಹೊಂದಿರುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:24 pm, Thu, 29 January 26