Venkaiah Naidu: ರಾಜ್ಯಸಭೆಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಗೆ ಬೀಳ್ಕೊಡುಗೆ; ಇದೊಂದು ಭಾವುಕ ಕ್ಷಣ ಎಂದ ಪ್ರಧಾನಿ ಮೋದಿ

ಎರಡು ದಿನಗಳ ಹಿಂದಷ್ಟೇ ಉಪರಾಷ್ಟ್ರಪತಿ ಚುನಾವಣೆ ನಡೆದಿದ್ದು, ನೂತನ ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್ ಆಗಸ್ಟ್​ 11ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Venkaiah Naidu: ರಾಜ್ಯಸಭೆಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಗೆ ಬೀಳ್ಕೊಡುಗೆ; ಇದೊಂದು ಭಾವುಕ ಕ್ಷಣ ಎಂದ ಪ್ರಧಾನಿ ಮೋದಿ
ವೆಂಕಯ್ಯ ನಾಯ್ಡುImage Credit source: Hindustan Times
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 08, 2022 | 12:42 PM

ನವದೆಹಲಿ: ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು (Venkaiah Naidu) ಅವರಿಗೆ ಇಂದು ರಾಜ್ಯಸಭೆಯಲ್ಲಿ ಬೀಳ್ಕೊಡುಗೆ ನೀಡಲಾಗಿದೆ. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಇತರ ಹಿರಿಯ ನಾಯಕರು ಭಾಗವಹಿಸಿದ್ದಾರೆ. ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವೆಂಕಯ್ಯ ನಾಯ್ಡು ಅವರಿಗೆ ಭಾರತೀಯ ಭಾಷೆಗಳ ಬಗ್ಗೆ ಒಲವಿದೆ. ಅವರು ಸದನದ ಅಧ್ಯಕ್ಷತೆಯನ್ನು ಹೇಗೆ ವಹಿಸಿದರು ಎಂಬುದರಲ್ಲಿಯೇ ಇದು ಗೊತ್ತಾಗುತ್ತದೆ. ರಾಜ್ಯಸಭೆಯ ಉತ್ಪಾದಕತೆಯನ್ನು ಹೆಚ್ಚಿಸಲು ಅವರು ಬಹಳ ಕೊಡುಗೆ ನೀಡಿದ್ದಾರೆ. ವೆಂಕಯ್ಯ ನಾಯ್ಡು ಅವರ ಭಾಷೆಗಳ ಮೇಲೆ ಅವರ ಹಿಡಿತ ಬಹಳ ಉತ್ತಮವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನಾನು ವೆಂಕಯ್ಯ ನಾಯ್ಡು ಅವರ ಜೊತೆ ಬಹಳ ಸಮಯ ಕೆಲಸ ಮಾಡಿದ್ದೇನೆ. ಅವರು ವಿಭಿನ್ನ ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದನ್ನು ನಾನು ನೋಡಿದ್ದೇನೆ ಮತ್ತು ಅವರು ಪ್ರತಿಯೊಂದನ್ನು ಅತ್ಯಂತ ಸಮರ್ಪಣಾಭಾವದಿಂದ ನಿರ್ವಹಿಸುತ್ತಾರೆ. ನಮ್ಮ ಉಪರಾಷ್ಟ್ರಪತಿಯಾಗಿ ಯುವಜನ ಕಲ್ಯಾಣಕ್ಕಾಗಿ ಸಾಕಷ್ಟು ಸಮಯವನ್ನು ಮೀಸಲಿಟ್ಟಿದ್ದೀರಿ. ನಿಮ್ಮ ಬಹಳಷ್ಟು ಕಾರ್ಯಕ್ರಮಗಳು ಯುವ ಶಕ್ತಿಯ ಮೇಲೆ ಕೇಂದ್ರೀಕೃತವಾಗಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಉಪರಾಷ್ಟ್ರಪತಿ ಚುನಾವಣೆ ನಡೆದಿದ್ದು, ನೂತನ ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್ ಆಗಸ್ಟ್​ 11ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜಗದೀಪ್ ಧನಕರ್ ಮತ್ತು ಅವರ ಪತ್ನಿಯನ್ನು ವೆಂಕಯ್ಯ ನಾಯ್ಡು ಮತ್ತು ಅವರ ಪತ್ನಿ ಉಷಾ ನಾಯ್ಡು ಉಪರಾಷ್ಟ್ರಪತಿ ನಿವಾಸಕ್ಕೆ ಬರಮಾಡಿಕೊಂಡಿದ್ದರು. ಬಳಿಕ ಆ ಭವನವನ್ನು ಅವರಿಗೆ ಪರಿಚಯಿಸಿ, ಕಾರ್ಯದರ್ಶಿ ಕಚೇರಿಯ ಪರಿಚಯ ಮಾಡಿಕೊಟ್ಟಿದ್ದರು.

ರಾಜ್ಯಸಭಾ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂದು ನಾವೆಲ್ಲರೂ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿಯ ಮುಕ್ತಾಯವಾಗುತ್ತಿರುವುದರಿಂದ ಧನ್ಯವಾದ ಹೇಳಲು ಇಲ್ಲಿಗೆ ಸೇರಿದ್ದೇವೆ. ಈ ಸದನಕ್ಕೆ ಇದು ಅತ್ಯಂತ ಭಾವನಾತ್ಮಕ ಕ್ಷಣವಾಗಿದೆ. ಸದನದ ಹಲವಾರು ಐತಿಹಾಸಿಕ ಕ್ಷಣಗಳಿಗೆ ನೀವು ಸಾಕ್ಷಿಯಾಗಿದ್ದೀರಿ ಎಂದು ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

ಇಂದು ಕೇಂದ್ರ ಸಚಿವ ಕಿರಣ್ ರಿಜಿಜು ನವದೆಹಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ (ತಿದ್ದುಪಡಿ) ಮಸೂದೆ, 2022 ಅನ್ನು ಲೋಕಸಭೆಯಲ್ಲಿ ಮಂಡಿಸುವ ನಿರೀಕ್ಷೆಯಿದೆ. ರಾಜ್ಯಸಭೆಯಲ್ಲಿ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕೇಂದ್ರೀಯ ವಿಶ್ವವಿದ್ಯಾಲಯಗಳ (ತಿದ್ದುಪಡಿ) ಮಸೂದೆ, 2022ಯನ್ನು ಮಂಡಿಸಲಿದ್ದಾರೆ.

ಇದನ್ನೂ ಓದಿ: Jagdeep Dhankhar: ಭಾರತದ ನೂತನ ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್ ಆಯ್ಕೆ

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್​ಡಿಎ ಅಭ್ಯರ್ಥಿ ಜಗದೀಪ್ ಧನಕರ್ ಭರ್ಜರಿ ಜಯ ಗಳಿಸಿದ್ದರು. ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಮಾರ್ಗರೆಟ್ ಆಳ್ವ ಅವರ ವಿರುದ್ಧ ಗೆಲುವು ಗಳಿಸಿದ್ದರು. ಒಟ್ಟು ಚಲಾವಣೆಯಾದ 725 ಮತಗಳ ಪೈಕಿ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್ 528 ಮತಗಳನ್ನು ಪಡೆದಿದ್ದರೆ, ವಿರೋಧ ಪಕ್ಷದ ಅಭ್ಯರ್ಥಿ ಮಾರ್ಗರೇಟ್ ಆಳ್ವಾ ಅವರು 182 ಮತಗಳನ್ನು ಪಡೆದಿದ್ದಾರೆ. 15 ಮತಗಳನ್ನು ಅಸಿಂಧು ಎಂದು ಘೋಷಿಸಲಾಗಿತ್ತು. ಆ ಮೂಲಕ ಧನಕರ್ ಅವರು 346 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಈ ಮೂಲಕ ಜಗದೀಪ್ ಧನಕರ್ ಭಾರತದ 14ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:25 am, Mon, 8 August 22