ದೆಹಲಿ ಜುಲೈ 27: ಪ್ರಧಾನಿ ನರೇಂದ್ರ ಮೋದಿಯವರ (Narendra Modi ನೇತೃತ್ವದಲ್ಲಿ ಇಂದು (ಶನಿವಾರ) ನೀತಿ ಆಯೋಗ (NITI Aayog) ಆಡಳಿತ ಮಂಡಳಿ (GC) ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಇಂಡಿಯಾ ಬಣದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿಲ್ಲ. ಆದರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಸಭೆಯಲ್ಲಿ ಭಾಗಿಯಾಗಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದರೂ ತನಗೆ ಮಾತನಾಡಲು ಬಿಡಲಿಲ್ಲ ಎಂದು ಆರೋಪಿಸಿ ಮಮತಾ ಸಭೆಯಿಂದ ಹೊರನಡೆದಿದ್ದಾರೆ. ಇತರ ರಾಜ್ಯಗಳ ಸಿಎಂಗಳಿಗೆ ಹೆಚ್ಚು ಹೊತ್ತು ಮಾತನಾಡಲು ಅವಕಾಶ ನೀಡಿದ್ದು, ನಾನು ಮಾತನಾಡಬೇಕಾದರೆ ಐದೇ ನಿಮಿಷದಲ್ಲಿ ಮೈಕ್ ಕಟ್ ಆಗಿದೆ ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ.
“ನಾನು ಸಭೆಯನ್ನು ಬಹಿಷ್ಕರಿಸಿ ಹೊರಗೆ ಬಂದಿದ್ದೇನೆ. ಚಂದ್ರಬಾಬು ನಾಯ್ಡು ಅವರಿಗೆ ಮಾತನಾಡಲು 20 ನಿಮಿಷ, ಅಸ್ಸಾಂ, ಗೋವಾ, ಛತ್ತೀಸ್ಗಢ ಸಿಎಂಗಳು 10-12 ನಿಮಿಷ ಮಾತನಾಡಿದರು. ಕೇವಲ ಐದು ನಿಮಿಷಗಳ ನಂತರ ನನ್ನನ್ನು ಮಾತನಾಡದಂತೆ ನಿಲ್ಲಿಸಲಾಯಿತು. ಇದು ಅನ್ಯಾಯ ಎಂದಿದ್ದಾರೆ ಮಮತಾ.
#WATCH | Delhi: West Bengal CM Mamata Banerjee says, “…I was speaking, my mic was stopped. I said why did you stop me, why are you discriminating. I am attending the meeting you should be happy instead of that you are giving more scope to your party your government. Only I am… pic.twitter.com/53U8vuPDpZ
— ANI (@ANI) July 27, 2024
ಸಭೆ ನಡೆಯುತ್ತಿರುವ ರಾಷ್ಟ್ರಪತಿ ಭವನದ ಸೌತ್ ಅವೆನ್ಯೂ ಬದಿಯ ಗೇಟ್‌ನ ಹೊರಗೆ ಸುದ್ದಿಗಾರರಲ್ಲಿ ಮಾತನಾಡಿದ ಮಮತಾ, ವಿರೋಧ ಪಕ್ಷದಿಂದ ಬಂದವರಲ್ಲಿ ನಾನು ಒಬ್ಬಳೇ, ಆದರೆರೀತಿ ಕಾರ್ಯನಿರ್ವಹಿಸುವುದಿಲ್ಲ 5 ನಿಮಿಷದಲ್ಲಿ ನನ್ನನ್ನು ತಡೆದರು. ಇದೊಂದು ಅಪಮಾನ. ನಾನು ಯಾವುದೇ ಹೆಚ್ಚಿನ ಸಭೆಗಳಿಗೆ ಹಾಜರಾಗುವುದಿಲ್ಲ. ಯಾವುದೇ ಸರ್ಕಾರವು ಈ . ಸರ್ಕಾರವು ಅಧಿಕಾರದಲ್ಲಿದ್ದಾಗ, ಅದು ಪ್ರತಿಯೊಬ್ಬರ ಬಗ್ಗೆ ಕಾಳಜಿ ವಹಿಸಬೇಕು ಎಂದಿದ್ದಾರೆ.
ಸಭೆಯನ್ನು ಬಹಿಷ್ಕರಿಸುತ್ತಿರುವ ಹಲವಾರು ಇಂಡಿಯಾ ಬ್ಲಾಕ್ ನಾಯಕರಲ್ಲಿ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರು ಕಳೆದ ವಾರ ಸಂಸತ್ತಿನಲ್ಲಿ ಮಂಡಿಸಿದ ಕೇಂದ್ರ ಬಜೆಟ್ “ತಮಿಳುನಾಡಿನ ಬಗ್ಗೆ ತಾರತಮ್ಯ ಧೋರಣೆ” ಹೊಂದಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
NITI ಆಯೋಗ್‌ನ ಆಡಳಿತ ಮಂಡಳಿಯು (GC) ಸರ್ಕಾರದ ಉನ್ನತ ಚಿಂತಕರ ಚಾವಡಿ ಪ್ರಾರಂಭವಾದಾಗಿನಿಂದ ಅದರ ಒಂಬತ್ತನೇ ಸಭೆ ನಡೆಸುತ್ತಿದೆ. ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆಯ ನಂತರ ಮತ್ತು ಈಗ ಕೇಂದ್ರ ಮಂತ್ರಿಗಳನ್ನು ಒಳಗೊಂಡಿರುವ ಆಡಳಿತ ಮಂಡಳಿಯ ಪುನರ್ರಚನೆಯ ನಂತರದ ಮೊದಲ ಸಭೆಯಾಗಿದೆ ಇದು.
ಇದನ್ನೂ ಓದಿ: NITI Aayog Governing Council meet: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ನಡೆಯಲಿದೆ ನೀತಿ ಆಯೋಗದ ಸಭೆ
ನೀತಿ ಆಯೋಗದ ಸಭೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಜರಾಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿತೀಶ್ ಕುಮಾರ್ ನೇತೃತ್ವದ ಜನತಾ ದಳ (ಯುನೈಟೆಡ್) ಬಿಹಾರದಲ್ಲಿ ಪ್ರಮುಖ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮಿತ್ರ ಪಕ್ಷವಾಗಿದೆ. ಆದಾಗ್ಯೂ ಸಭೆಯಲ್ಲಿ ಬಿಹಾರವನ್ನು ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಅವರು ಪ್ರತಿನಿಧಿಸಿದ್ದರು ಎಂದು ಪಿಟಿಐ ವರದಿ ಮಾಡಿದೆ. ನಿರ್ಣಾಯಕ ಸಭೆಗೆ ಕುಮಾರ್ ಗೈರುಹಾಜರಾಗಲು ಕಾರಣ ಏನು ಎಂಬುದು ಸದ್ಯ ತಿಳಿದು ಬಂದಿಲ್ಲ.
”ನೀತಿ ಆಯೋಗದ ಸಭೆಗೆ ಸಿಎಂ ಗೈರಾಗುತ್ತಿರುವುದು ಇದೇ ಮೊದಲಲ್ಲ, ಈ ಹಿಂದೆಯೂ ಸಿಎಂ ಸಭೆಗೆ ಹಾಜರಾಗಿರಲಿಲ್ಲ, ಬಿಹಾರವನ್ನು ಅಂದಿನ ಉಪ ಮುಖ್ಯಮಂತ್ರಿ ಪ್ರತಿನಿಧಿಸಿದ್ದರು. ಈ ಬಾರಿಯೂ ಇಬ್ಬರೂ ಡಿಸಿಎಂಗಳು ಸಭೆಗೆ ತೆರಳಿದ್ದಾರೆ. ಅಲ್ಲದೆ, ಬಿಹಾರದ ನಾಲ್ವರು ಕೇಂದ್ರ ಸಚಿವರು ಆಯೋಗದ ಸದಸ್ಯರಾಗಿದ್ದು, ಅವರು ಸಭೆಯಲ್ಲಿ ಉಪಸ್ಥಿತರಿರುತ್ತಾರೆ. ಈ ಬಗ್ಗೆ ಹೇಳುವುದಕ್ಕೆ ಏನೂ ಇಲ್ಲ ಎಂದು ಜೆಡಿಯು ವಕ್ತಾರ ನೀರಜ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.
ನೀತಿ ಆಯೋಗದ 9 ನೇ ಆಡಳಿತ ಮಂಡಳಿ ಸಭೆಯು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯೊಂದಿಗೆ ‘ವಿಕಸಿತ್ ಭಾರತ @2047’ ದಾಖಲೆಯನ್ನು ಚರ್ಚಿಸಿತು.
ವಿಕಸಿತ್ ಭಾರತ್ @ 2047 ಪ್ರತಿಯೊಬ್ಬ ಭಾರತೀಯನ ಮಹತ್ವಾಕಾಂಕ್ಷೆಯಾಗಿದೆ. ರಾಜ್ಯಗಳು ಜನರೊಂದಿಗೆ ನೇರವಾಗಿ ಸಂಪರ್ಕ ಹೊಂದಿರುವುದರಿಂದ ಈ ಗುರಿಯನ್ನು ಸಾಧಿಸುವಲ್ಲಿ ಸಕ್ರಿಯ ಪಾತ್ರವನ್ನು ವಹಿಸಬಹುದು. ಈ ದಶಕವು ಬದಲಾವಣೆಗಳು, ತಾಂತ್ರಿಕ ಮತ್ತು ಭೌಗೋಳಿಕ-ರಾಜಕೀಯ ಮತ್ತು ಅವಕಾಶಗಳಿಂದ ಕೂಡಿದೆ. ಭಾರತವು ಈ ಅವಕಾಶಗಳನ್ನು ಪಡೆದುಕೊಳ್ಳಬೇಕು ಮತ್ತು ನಮ್ಮ ನೀತಿಗಳನ್ನು ಅಂತರಾಷ್ಟ್ರೀಯ ಹೂಡಿಕೆಗಳಿಗೆ ಅನುಕೂಲಕರವಾಗಿಸಬೇಕು. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಇದು ಪ್ರಗತಿಯ ಮೆಟ್ಟಿಲು ಎಂದು ನೀತಿ ಆಯೋಗದ 9 ನೇ ಆಡಳಿತ ಮಂಡಳಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:25 pm, Sat, 27 July 24