
ಸೋನ್ಭದ್ರ, ಜೂನ್ 25: ಒಂದು ಕ್ಷಣದ ಅಸಡ್ಡೆ ಅಥವಾ ಸೋಮಾರಿತನ ಹೇಗೆ ಪ್ರಾಣಾಪಾಯವನ್ನುಂಟು ಮಾಡಬಹುದು ಎಂಬುದಕ್ಕೆ ಉತ್ತರ ಪ್ರದೇಶದ ಸೋನ್ಭದ್ರ ಜಿಲ್ಲೆಯಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿ. ಐಸ್ಕ್ರೀಂ(Ice Cream)ಗಾಗಿ ಬಾಲ್ಕನಿಯಿಂದ ಕೈ ಚಾಚಿದ್ದ ವ್ಯಕ್ತಿ ಆಯತಪ್ಪಿ ಕೆಳಗೆ ಬಿದ್ದಿರುವ ಘಟನೆಯ ವಿಡಿಯೋ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ ಹಾಗೂ ಲಭ್ಯವಿರುವ ವಿವರಗಳ ಪ್ರಕಾರ, ರಸ್ತೆಯಲ್ಲಿ ಐಸ್ ಕ್ರೀಂ ಮಾರಾಟಗಾರ ಹೋಗುತ್ತಿರುವುದನ್ನು ಗಮನಿಸಿದ ವ್ಯಕ್ತಿ ಆತನನ್ನು ಕೂಗಿ ಕರೆದಿದ್ದಾರೆ. ಆದರೆ, ಕೆಳಗೆ ಇಳಿದು ಬಂದು ಐಸ್ ಕ್ರೀಂ ಕೊಳ್ಳುವ ಬದಲು, ಆತ ಬಾಲ್ಕನಿಯಲ್ಲೇ ನಿಂತು ಕೆಳಗಿನಿಂದಲೇ ಐಸ್ ಕ್ರೀಂ ಅನ್ನು ಕೊಡುವಂತೆ ಕೇಳಿದ್ದಾರೆ.
ಐಸ್ ಕ್ರೀಂ ಕೊಡಲು ಮಾರಾಟಗಾರ ಕೆಳಗಿನಿಂದ ಕೈಯನ್ನು ಮೇಲಕ್ಕೆ ಚಾಚಿದ್ದಾನೆ. ಇದನ್ನು ಹಿಡಿಯಲು ಬಾಲ್ಕನಿಯಲ್ಲಿದ್ದ ವ್ಯಕ್ತಿ ಅಂಚಿನಿಂದ ಮುಂದಕ್ಕೆ ಬಾಗಿ ಕೈ ಚಾಚಿದ್ದಾರೆ. ಐಸ್ ಕ್ರೀಂ ಹಿಡಿಯುವ ತರಾತುರಿಯಲ್ಲಿ ಅವರ ದೇಹದ ಸಮತೋಲನ ಸಂಪೂರ್ಣವಾಗಿ ತಪ್ಪಿದೆ.
ಮತ್ತಷ್ಟು ಓದಿ: Beyond Ice Cream: ಹಲ್ಲು ತೆಗೆದ ನಂತರ ಐಸ್ ಕ್ರೀಮ್ ಬದಲು ಈ ಆಹಾರ ಸೇವಿಸಬಹುದು? ಇಲ್ಲಿದೆ ನೋಡಿ
ಕಣ್ಮುಚ್ಚಿ ಬಿಡುವಷ್ಟರಲ್ಲಿ ಅವರು ಬಾಲ್ಕನಿಯ ರೇಲಿಂಗ್ ಮೇಲಿಂದ ನೇರವಾಗಿ ಕೆಳಗೆ ರಸ್ತೆಗೆ ಬಿದ್ದಿದ್ದಾರೆ. ಇದನ್ನು ಕಂಡು ಸುತ್ತಮುತ್ತಲಿನ ಜನರು ಆಘಾತದಿಂದ ಕಿರುಚಾಡಿದ್ದಾರೆ. ಆತ ಕೆಳಗೆ ಬೀಳುತ್ತಿದ್ದಂತೆ ವಿಡಿಯೋ ಕಟ್ ಆಗಿದೆ. ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಈ ಕ್ಲಿಪ್ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ವಿಡಿಯೋ
ದೈನಂದಿನ ಜೀವನದಲ್ಲಿ ಸಣ್ಣ ಶಾರ್ಟ್ಕಟ್ ಹುಡುಕಲು ಹೋಗಿ ಇಂತಹ ಗಂಭೀರ ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳಬಾರದು ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ. ಸದ್ಯಕ್ಕೆ ಬಾಲ್ಕನಿಯಿಂದ ಬಿದ್ದ ವ್ಯಕ್ತಿಯ ಪರಿಸ್ಥಿತಿ ಏನಾಗಿದೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಎತ್ತರದ ಜಾಗಗಳಲ್ಲಿ ಅಥವಾ ಬಾಲ್ಕನಿಗಳ ಮೇಲೆ ನಿಲ್ಲುವಾಗ ಸಾರ್ವಜನಿಕರು ಕಡ್ಡಾಯವಾಗಿ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂಬುದಕ್ಕೆ ಈ ವಿಡಿಯೋ ಒಂದು ಎಚ್ಚರಿಕೆಯ ಗಂಟೆಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ