ಪ್ರವಾಹ ಸಂತ್ರಸ್ತರ ಸಹಾಯಕ್ಕೆ ಹೋಗಿ ತಾನೇ ನೆರೆಯಲ್ಲಿ ಸಿಲುಕಿದ ಗೃಹ ಸಚಿವ; ಏರ್​ಲಿಫ್ಟ್​ ಮೂಲಕ ಮಂತ್ರಿಯ ರಕ್ಷಣೆ!

ಪ್ರವಾಹ ಸಂತ್ರಸ್ತರ ಸಹಾಯಕ್ಕೆ ಹೋಗಿ ತಾನೇ ನೆರೆಯಲ್ಲಿ ಸಿಲುಕಿದ ಗೃಹ ಸಚಿವ; ಏರ್​ಲಿಫ್ಟ್​ ಮೂಲಕ ಮಂತ್ರಿಯ ರಕ್ಷಣೆ!
ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ

Madhya Pradesh Floods: ಸುತ್ತಲೂ ಪ್ರವಾಹದ ನೀರು ಆವರಿಸಿದ್ದರಿಂದ ಮನೆಯೊಂದರ ಟೆರೇಸ್​ ಮೇಲೆ ನಿಂತಿದ್ದ ಗೃಹ ಸಚಿವ ನರೋತ್ತಮ್ ಮಿಶ್ರಾ ತಮ್ಮ ಸರ್ಕಾರದ ಅಧಿಕಾರಿಗಳಿಗೆ ಮೆಸೇಜ್ ಕಳುಹಿಸಿ ಹೆಲಿಕಾಪ್ಟರ್ ಕಳುಹಿಸಲು ಸೂಚಿಸಿದರು.

TV9kannada Web Team

| Edited By: Sushma Chakre

Aug 05, 2021 | 5:48 PM

ಭೂಪಾಲ್: ಮಧ್ಯಪ್ರದೇಶದಲ್ಲಿ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿರುವುದರಿಂದ ನದಿಗಳೆಲ್ಲ ತುಂಬಿ ಹರಿದು ಊರುಗಳೆಲ್ಲ ಮುಳುಗಡೆಯಾಗಿದೆ. ಪ್ರವಾಹದಿಂದ ಮಧ್ಯಪ್ರದೇಶದ ಚಂಬಲ್ ಪ್ರದೇಶದ ಕ್ವಾರಿ ಹಾಗೂ ಚಂಬಲ್ ನದಿಗಳು ಉಕ್ಕಿ ಹರಿಯುತ್ತಿದೆ. ಹೀಗಾಗಿ, ಈ ಭಾಗಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ನಿನ್ನೆ ಮಧ್ಯಪ್ರದೇಶದ ಡಾಟಿಯಾ ಜಿಲ್ಲೆಯಲ್ಲಿ ಭಾರೀ ಪ್ರವಾಹ ಉಂಟಾಗಿ ಸಾಕಷ್ಟು ಜನರು ಹಳ್ಳಿಗಳಲ್ಲಿ ಸಿಲುಕಿದ್ದರು. ಅಲ್ಲಿನ ಜನರಿಗೆ ಸಹಾಯ ಮಾಡಲು ತಮ್ಮ ತಂಡದೊಂದಿಗೆ ತೆರಳಿದ್ದ ಗೃಹ ಸಚಿವರೇ ಪ್ರವಾಹದಲ್ಲಿ ಸಿಲುಕಿಕೊಂಡಿದ್ದು, ಅಲ್ಲಿರುವ ಜನರನ್ನು ರಕ್ಷಣೆ ಮಾಡುವ ಬದಲು ಸಚಿವರನ್ನು ಹೇಗೆ ಕಾಪಾಡುವುದು ಎಂಬುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತು. ಬಳಿಕ ಏರ್​ಲಿಫ್ಟ್​ ಮೂಲಕ ಸಚಿವರನ್ನು ರಕ್ಷಣೆ ಮಾಡಿದ ಘಟನೆಯೂ ನಡೆಯಿತು.

ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ತಮ್ಮ ಸ್ವಕ್ಷೇತ್ರದ ಜನರು ಪ್ರವಾಹದಲ್ಲಿ ಸಿಲುಕಿರುವುದನ್ನು ಕಂಡು ತಾವೇ ಸಹಾಯಕ್ಕೆ ಧಾವಿಸಿದ್ದರು. ಆ ಕ್ಷೇತ್ರದ ಹಳ್ಳಿಗೆ ಪ್ರವಾಹದ ನೀರು ಬಂದಿದ್ದರಿಂದ ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದುಕೊಂಡು ಹೋಗಲು ರಕ್ಷಣಾ ತಂಡಗಳು ತೆರಳಿದ್ದವು. ಆ ವೇಳೆ ಬೋಟಿನಲ್ಲಿ ಗೃಹ ಸಚಿವ ಮಿಶ್ರಾ ಕೂಡ ತೆರಳಿದ್ದರು. ಎಸ್​ಡಿಆರ್​ಎಫ್​ ತಂಡದೊಂದಿಗೆ ಗೃಹ ಸಚಿವರು ಪ್ರವಾಹದಿಂದ ಸುತ್ತುವರೆದ ಮನೆಯಗಳ ಬಳಿ ಹೋಗುತ್ತಿದ್ದಂತೆ ಜೋರಾಗಿ ಗಾಳಿ, ಮಳೆ ಶುರುವಾಯಿತು. ಅಲ್ಲದೆ, ನೀರಿನ ಮಟ್ಟ ಏರತೊಡಗಿ ಮನೆಗಳು ಮುಳುಗಲಾರಂಬಿಸಿದವು.

ಅಲ್ಲಿದ್ದ ಜನರೆಲ್ಲರೂ ಮನೆಯೊಂದರ ಟೆರೇಸ್ ಮೇಲೆ ಹತ್ತಿ ನಿಂತರು. ಉಳಿದವರು ಮನೆಗಳ ಹೆಂಚಿನ ಮೇಲೆ ನಿಂತರು. ಆ ಗಾಳಿ, ಮಳೆಯಲ್ಲಿ ಬೋಟ್​ನಲ್ಲಿ ಸಚಿವರನ್ನು ವಾಪಾಸ್ ಕರೆದುಕೊಂಡು ಹೋಗುವುದು ಸಾಧ್ಯವೇ ಇರಲಿಲ್ಲ. ಪ್ರವಾಹದ ನೀರಿನ ಮಟ್ಟವೂ ಏರಿಕೆಯಾಗಿದ್ದರಿಂದ ಜನರನ್ನು ರಕ್ಷಣೆ ಮಾಡಲು ಬಂದ ರಕ್ಷಣಾ ಸಿಬ್ಬಂದಿ ಗೃಹ ಸಚಿವರನ್ನು ರಕ್ಷಣೆ ಮಾಡುವುದು ಹೇಗೆಂಬುದಕ್ಕೆ ತಲೆ ಕೆಡಿಸಿಕೊಳ್ಳುವಂತಾಯಿತು.

ಸುತ್ತಲೂ ಪ್ರವಾಹದ ನೀರು ಆವರಿಸಿದ್ದರಿಂದ ಮನೆಯೊಂದರ ಟೆರೇಸ್​ ಮೇಲೆ ನಿಂತಿದ್ದ ಗೃಹ ಸಚಿವ ನರೋತ್ತಮ್ ಮಿಶ್ರಾ ತಮ್ಮ ಸರ್ಕಾರದ ಅಧಿಕಾರಿಗಳಿಗೆ ಮೆಸೇಜ್ ಕಳುಹಿಸಿ ಹೆಲಿಕಾಪ್ಟರ್ ಕಳುಹಿಸುವಂತೆ ಸೂಚಿಸಿದರು. ಅದಾದ ಅರ್ಧ ಗಂಟೆಯೊಳಗೆ ಭಾರತೀಯ ವಾಯು ಸೇನೆಯ ಹೆಲಿಕಾಪ್ಟರ್ ಆಗಮಿಸಿತು. ಆ ಹೆಲಿಕಾಪ್ಟರ್ ಮೂಲಕ ಗೃಹ ಸಚಿವರನ್ನು ಏರ್​ಲಿಫ್ಟ್ ಮಾಡಲಾಯಿತು. ಜನರಿಗೆ ನಾನೇ ಸಹಾಯ ಮಾಡುತ್ತೇನೆಂದು ಹೋದ ಸಚಿವರು ಏರ್​ಲಿಫ್ಟ್ ಮೂಲಕ ಬಚಾವಾಗಿ ಬರುವಂತಾಯಿತು.

ಮಧ್ಯಪ್ರದೇಶದಲ್ಲಿ ಕಳೆದ 2 ದಿನಗಳಿಂದ 1,250 ಗ್ರಾಮಗಳೇ ಪ್ರವಾಹದಿಂದ ಮುಳುಗಡೆಯಾಗಿದೆ. 6 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ. ಇನ್ನೂ 2 ಸಾವಿರಕ್ಕೂ ಹೆಚ್ಚು ಜನರು ಅಪಾಯದಲ್ಲಿದ್ದಾರೆ. ಇನ್ನೂ ಮೂರ್ನಾಲ್ಕು ದಿನ ಮಧ್ಯಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: Viral Video: ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲೇ ಯೋಗಾಸನ ಮಾಡಿದ ಯುವತಿ; ಶಾಕಿಂಗ್ ವಿಡಿಯೋ ಇಲ್ಲಿದೆ

Shocking News: ಪೊಲೀಸರಂತೆ ಬಸ್ ನಿಲ್ಲಿಸಿ 1.2 ಕೋಟಿ ರೂ. ಕದ್ದೊಯ್ದ ಕಳ್ಳರು; ಸಿನಿಮಾ ಸ್ಟೈಲ್​ನಲ್ಲಿ ದರೋಡೆ!

(Viral Video Madhya Pradesh Home Minister Narottam Mishra Airlifted After Trying Flood Rescue On Boat in Datia)

Follow us on

Related Stories

Most Read Stories

Click on your DTH Provider to Add TV9 Kannada