Viral Video: ಮಧ್ಯಪ್ರದೇಶದಲ್ಲಿ ಪೊಲೀಸರಿಂದ ಕೊಲೆ ಆರೋಪಿ ಬಿಜೆಪಿ ನಾಯಕನ ಅಕ್ರಮ ಹೋಟೆಲ್ ಧ್ವಂಸ

| Updated By: Digi Tech Desk

Updated on: Jan 04, 2023 | 11:31 AM

ಇಂದೋರ್‌ನ ವಿಶೇಷ ತಂಡ ಮಂಗಳವಾರ ಸಂಜೆ 60 ಡೈನಮೈಟ್‌ಗಳನ್ನು ಸ್ಫೋಟಿಸಿ ಹೊಟೇಲ್ ಅನ್ನು ಕೆಡವಿದೆ. ಕೆಲವೇ ಸೆಕೆಂಡುಗಳಲ್ಲಿ ಹೋಟೆಲ್​ನ ಕಟ್ಟಡ ನೆಲಸಮವಾಯಿತು.

Viral Video: ಮಧ್ಯಪ್ರದೇಶದಲ್ಲಿ ಪೊಲೀಸರಿಂದ ಕೊಲೆ ಆರೋಪಿ ಬಿಜೆಪಿ ನಾಯಕನ ಅಕ್ರಮ ಹೋಟೆಲ್ ಧ್ವಂಸ
ಮಿಶ್ರಿ ಚಂದ್ ಗುಪ್ತಾ ಅವರ ಹೋಟೆಲ್ ನೆಲಸಮಗೊಳ್ಳುತ್ತಿರುವ ದೃಶ್ಯ
Follow us on

ಸಾಗರ್: ಮಧ್ಯಪ್ರದೇಶದಲ್ಲಿ ಜಗದೀಶ್ ಯಾದವ್ (Jagadeesh Yadav) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಆಕ್ರೋಶ ಭುಗಿಲೆದ್ದಿದೆ. ನಡುವೆಯೇ ಅಮಾನತುಗೊಂಡ ಭಾರತೀಯ ಜನತಾ ಪಾರ್ಟಿ (BJP) ಮುಖಂಡ ಮಿಶ್ರಿ ಚಂದ್ ಗುಪ್ತಾ (Mishri Chand Gupta) ಅವರ ಅಕ್ರಮ ಹೋಟೆಲ್ ಅನ್ನು ಜಿಲ್ಲಾಡಳಿತ ಮಂಗಳವಾರ ನೆಲಸಮಗೊಳಿಸಿದೆ. ಡಿಸೆಂಬರ್ 22ರಂದು ಜಗದೀಶ್ ಯಾದವ್ ಅವರ ಮೇಲೆ ಎಸ್ ಯುವಿ ಕಾರು ಚಲಾಯಿಸಿ ಹತ್ಯೆಗೈದ ಆರೋಪ ಬಿಜೆಪಿ ಮುಖಂಡರ ಮೇಲಿತ್ತು.

ಇಂದೋರ್‌ನ ವಿಶೇಷ ತಂಡ ಮಂಗಳವಾರ ಸಂಜೆ 60 ಡೈನಮೈಟ್‌ಗಳನ್ನು ಸ್ಫೋಟಿಸಿ ಹೊಟೇಲ್ ಅನ್ನು ಕೆಡವಿದೆ. ಕೆಲವೇ ಸೆಕೆಂಡುಗಳಲ್ಲಿ ಹೋಟೆಲ್​ನ ಕಟ್ಟಡ ನೆಲಸಮವಾಯಿತು. ಈ ವೇಳೆ ಸಾಗರ್ ಜಿಲ್ಲಾಧಿಕಾರಿ ದೀಪಕ್ ಆರ್ಯ, ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ತರುಣ್ ನಾಯಕ್ ಮತ್ತು ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಇದನ್ನೂ ಓದಿ: ಬಿಹಾರದಲ್ಲಿ ಮನೆ ನೆಲಸಮ ಮಾಡಲು ಬುಲ್ಡೋಜರ್ ಬಳಸಿದ ಪೊಲೀಸರಿಗೆ ಹೈಕೋರ್ಟ್ ತರಾಟೆ

“ಸುರಕ್ಷತಾ ದೃಷ್ಟಿಯಿಂದ ಹೋಟೆಲ್ ಸುತ್ತಲೂ ಬ್ಯಾರಿಕೇಡ್‌ಗಳನ್ನು ಹಾಕುವ ಮೂಲಕ ಸಂಚಾರವನ್ನು ನಿಲ್ಲಿಸಲಾಗಿದೆ. ಹೋಟೆಲ್ ಸುತ್ತಮುತ್ತಲಿನ ಕಟ್ಟಡಗಳಲ್ಲಿ ವಾಸಿಸುವ ಜನರನ್ನೂ ಎಚ್ಚರಿಸಲಾಗಿದೆ. ನೆಲಸಮದ ವೇಳೆ ಯಾವುದೇ ರೀತಿಯ ನಷ್ಟ ಸಂಭವಿಸಿಲ್ಲ. ಕಟ್ಟಡವನ್ನು ಮಾತ್ರ ನೆಲಸಮ ಮಾಡಲಾಗಿದೆ” ಎಂದು ಜಿಲ್ಲಾಧಿಕಾರಿ ದೀಪಕ್ ಆರ್ಯ ಹೇಳಿದ್ದಾರೆ.

ಕೋರೆಗಾಂವ್ ನಿವಾಸಿ ಜಗದೀಶ್ ಯಾದವ್ ಡಿಸೆಂಬರ್ 22ರಂದು ಎಸ್​ಯುವಿ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದರು. ಬಿಜೆಪಿ ಮುಖಂಡ ಮಿಶ್ರಿ ಚಂದ್ ಗುಪ್ತಾ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಆರೋಪ ಮಾಡಲಾಗಿತ್ತು. ಈ ಪ್ರಕರಣದಲ್ಲಿ 8 ಆರೋಪಿಗಳ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪೈಕಿ ಐವರನ್ನು ಬಂಧಿಸಲಾಗಿದೆ. ಮಿಶ್ರಿ ಚಂದ್ ಗುಪ್ತಾ ಇನ್ನೂ ನಾಪತ್ತೆಯಾಗಿದ್ದಾರೆ.

ಇದನ್ನೂ ಓದಿ: Davanagere: ಮಾಜಿ ಶಾಸಕನ ಸಮಾಧಿ ಧ್ವಂಸ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಜಗದೀಶ್ ಯಾದವ್ ಸ್ವತಂತ್ರ ಕೌನ್ಸಿಲರ್ ಕಿರಣ್ ಯಾದವ್ ಅವರ ಸೋದರಳಿಯ. ನಾಗರಿಕ ಸಂಸ್ಥೆಯ ಚುನಾವಣೆಯಲ್ಲಿ ಕಿರಣ್ ಯಾದವ್ ಅವರು ಮಿಶ್ರಿ ಚಂದ್ ಗುಪ್ತಾ ಅವರ ಪತ್ನಿ ಮೀನಾ ಅವರನ್ನು 83 ಮತಗಳಿಂದ ಸೋಲಿಸಿದ್ದರು. ಇದೇ ದ್ವೇಷದಿಂದ ಜಗದೀಶ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:29 am, Wed, 4 January 23