ಕರಾಚಿ: ತಪ್ಪು ಮಾಡಿದ ಮನುಷ್ಯರಿಗೇ ಶಿಕ್ಷೆ ಸಿಗಲು ಹಲವಾರು ವರ್ಷಗಳು ಕಾಯಬೇಕಾದ ಪರಿಸ್ಥಿತಿ ನ್ಯಾಯಾಂಗ ವ್ಯವಸ್ಥೆಯಲ್ಲಿದೆ. ಆದರೆ, ಇದೇ ಮೊದಲ ಬಾರಿಗೆ ತಮ್ಮ ಮಾಲೀಕನ ಮೇಲೆ ದಾಳಿ ಮಾಡಿದ ತಪ್ಪಿಗೆ ಎರಡು ಸಾಕು ನಾಯಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಹಾಗಂತ ಇದೇನೂ ನ್ಯಾಯಾಲಯ ನೀಡಿರುವ ತೀರ್ಪಲ್ಲ. ಇದೇನಿದು ವಿಚಿತ್ರ ಅಂತೀರಾ? ಈ ಘಟನೆ ನಡೆದಿರುವುದು ಭಾರತದಲ್ಲಲ್ಲ; ಪಕ್ಕದ ದೇಶ ಪಾಕಿಸ್ತಾನದಲ್ಲಿ.
ಪಾಕಿಸ್ತಾನದ ಕರಾಚಿಯಲ್ಲಿ ಹಿರಿಯ ವಕೀಲರಾಗಿರುವ ಮಿರ್ಜಾ ಅಖ್ತರ್ ಅಲಿ ಎಂಬುವವರು ಕಳೆದ ತಿಂಗಳ ವಾಕಿಂಗ್ ಹೋಗಿದ್ದಾಗ ಇದ್ದಕ್ಕಿದ್ದಂತೆ 2 ಜರ್ಮನ್ ಶೆಫರ್ಡ್ ನಾಯಿಗಳು ಅವರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದವು. ಬೆಳಗ್ಗೆ ವಾಕಿಂಗ್ ಹೋದಾಗ ಇದ್ದಕ್ಕಿದ್ದಂತೆ ರಸ್ತೆಗೆ ಓಡಿಬಂದ ನಾಯಿಗಳು ಹಲ್ಲೆ ನಡೆಸಿದ್ದರಿಂದ ವಕೀಲರು ಶಾಕ್ ಆಗಿದ್ದರು. ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಕೀಲರ ಮೇಲೆ ನಾಯಿಗಳು ಆಕ್ರಮಣ ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಆ ವಿಡಿಯೋವನ್ನು ಹರಿಬಿಡಲಾಗಿತ್ತು.
ಈ ಘಟನೆಯ ಬಳಿಕ ಆ ನಾಯಿಗಳ ಮಾಲೀಕರು ವಕೀಲರ ಬಳಿ ಕ್ಷಮಾಪಣೆಯನ್ನೂ ಕೇಳಿದ್ದರು. ಆದರೆ, ಆಕ್ರಮಣಕಾರಿಯಾದ ನಾಯಿಗಳನ್ನು ಮನೆಯಲ್ಲಿ ಕಟ್ಟಿಹಾಕದೆ ಜನರು ಓಡಾಡುವ ಪ್ರದೇಶದಲ್ಲಿ ಬಿಟ್ಟಿದ್ದಕ್ಕೆ ವಕೀಲ ಮಿರ್ಜಾ ಅಖ್ತರ್ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರವನ್ನು ಇಲ್ಲಿಗೇ ಬಿಡದ ಅವರು ತಮ್ಮ ಮೇಲೆ ನಾಯಿಗಳು ಹಲ್ಲೆ ನಡೆಸಿವೆ ಎಂದು ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದರು. ಆದರೆ, ನಾಯಿಗಳ ಮಾಲೀಕರು ಮನವಿ ಮಾಡಿಕೊಂಡಿದ್ದರಿಂದ ಇಬ್ಬರೂ ಒಂದು ಒಪ್ಪಂದ ಮಾಡಿಕೊಂಡಿದ್ದರು.
Violent #Dogattack in #DHA Phase 7, Street number 14. #Karachi.#Pakistan pic.twitter.com/TxFhq6TiQL
— Asad Zaman ?? (@asadweb) June 27, 2021
ನಾಯಿಗಳು ದಾಳಿ ಮಾಡಿದ್ದರಿಂದ ನನಗೆ ಗಾಯಗಳಾಗಿವೆ, ಸಾರ್ವಜನಿಕ ಪ್ರದೇಶದಲ್ಲಿ ಅವಮಾನವೂ ಆಗಿದೆ. ಹೀಗಾಗಿ, ನೀವು ಬಹಿರಂಗ ಕ್ಷಮಾಪಣೆ ಕೇಳಬೇಕು. ಹಾಗೇ, ಇನ್ನೆಂದೂ ನಿಮ್ಮ ಮನೆಯಲ್ಲಿ ಅಪಾಯಕಾರಿ ತಳಿಯ ನಾಯಿಗಳನ್ನು ಸಾಕಬಾರದು. ನನ್ನ ಮೇಲೆ ಆಕ್ರಮಣ ಮಾಡಿದ ನಾಯಿಗಳೆರಡನ್ನೂ ತಕ್ಷಣ ಕೊಲ್ಲಬೇಕು. ನಿಮ್ಮ ಮನೆಯಲ್ಲಿ ಇದೇ ರೀತಿಯ ಬೇರೆ ನಾಯಿಗಳನ್ನು ಸಾಕಿದ್ದರೆ ಅವುಗಳನ್ನು ಕೂಡಲೇ ಬೇರೆಯವರಿಗೆ ಕೊಡಬೇಕು ಎಂಬುದು ಹಿರಿಯ ವಕೀಲ ಮಿರ್ಜಾ ಅಖ್ತರ್ ಅವರ ಕಂಡೀಷನ್ ಆಗಿತ್ತು.
ಈ ವಿಚಾರ ಕೋರ್ಟ್ ಮೆಟ್ಟಿಲೇರಬಹುದು ಎಂಬ ಭೀತಿಯಿಂದ ನಾಯಿಗಳ ಮಾಲೀಕ ತನ್ನ ಪ್ರೀತಿಯ 2 ನಾಯಿಗಳಿಗೆ ಮರಣದಂಡನೆ ಶಿಕ್ಷೆ ನೀಡಲು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಉಳಿದೆಲ್ಲ ನಿಯಮಗಳಿಗೂ ಒಪ್ಪಿಗೆ ನೀಡುವುದಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇಬ್ಬರೂ ಸಹಿ ಮಾಡಿಕೊಂಡ ಒಪ್ಪಂದದ ಪ್ರತಿಯನ್ನು ನ್ಯಾಯಾಲಯಕ್ಕೆ ನೀಡಲಾಗಿದೆ.
ಸಾಕುನಾಯಿಗಳಿಗೆ ಈ ರೀತಿ ಮರಣದಂಡನೆ ವಿಧಿಸುವ ತೀರ್ಮಾನಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ನಾಯಿಯನ್ನು ನಾವು ಪಳಗಿಸಿದ ರೀತಿಯಲ್ಲೇ ಇರಬೇಕು, ಮನುಷ್ಯರಂತೆ ವರ್ತಿಸಬೇಕೆಂದು ಬಯಸುವುದು ತಪ್ಪು. ಬುದ್ಧಿವಂತಿಕೆ ಇರುವ ಮನುಷ್ಯನೇ ಎಷ್ಟೋ ಬಾರಿ ಗೊತ್ತಿದ್ದರೂ ಅಪರಾಧಗಳನ್ನು ಮಾಡುತ್ತಾನೆ. ಅವನಿಗೇ ಶಿಕ್ಷೆ ವಿಧಿಸಲು ಕೋರ್ಟ್ಗಳು ವರ್ಷಾನುಗಟ್ಟಲೆ ಸಮಯ ತೆಗೆದುಕೊಳ್ಳುತ್ತವೆ. ಅಂಥದ್ದರಲ್ಲಿ ಮೂಕಪ್ರಾಣಿಗಳನ್ನು ಕೊಲ್ಲುವುದು ಸರಿಯಲ್ಲ ಎಂಬ ಕಾಮೆಂಟ್ಗಳು ಈ ವಿಡಿಯೋಗೆ ಬಂದಿವೆ.
ಇದನ್ನೂ ಓದಿ: Viral Video: ಕಂಠಪೂರ್ತಿ ಕುಡಿದು ಬೈಕ್ ಓಡಿಸಿದ ಪುಣ್ಯಾತ್ಮ ಏನೆಲ್ಲ ಮಾಡಿದ ಗೊತ್ತಾ?; ವೈರಲ್ ವಿಡಿಯೋ ಇಲ್ಲಿದೆ
Viral Video: ದಲಿತ ಯುವಕನನ್ನು ಮರಕ್ಕೆ ಕಟ್ಟಿಹಾಕಿ ಗುಪ್ತಾಂಗಕ್ಕೆ ಥಳಿಸಿದ ಶಾಕಿಂಗ್ ವಿಡಿಯೋ ವೈರಲ್
Published On - 1:51 pm, Wed, 14 July 21