Virologist Jacob John: ಎರಡು ಸಾಂಕ್ರಾಮಿಕಗಳು ಜೊತೆಯಾಗಿ ಕಾಡುತ್ತಿವೆ: ವೈರಾಣು ತಜ್ಞ ಡಾ ಟಿ ಜೇಕಬ್ ಜಾನ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 16, 2022 | 6:06 PM

Coronavirus in India: ಈಗ ಜಗತ್ತಿನಾದ್ಯಂತ ಕಂಡು ಬರುತ್ತಿರುವ ಒಮಿಕ್ರಾನ್​​ಗೆ Wuhan-D614G ವೈರಾಣುವಿನ ಯಾವುದೇ ರೂಪಾಂತರಿಯು ಮೂಲವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಕೊರೊನಾ ಸೋಂಕು ಇನ್ನಷ್ಟು ದಿನಗಳು ಇರಬಹುದು ಎಂಬ ವಿಶ್ಲೇಷಣೆಗಳು ಚಾಲ್ತಿಗೆ ಬಂದಿವೆ.

Virologist Jacob John: ಎರಡು ಸಾಂಕ್ರಾಮಿಕಗಳು ಜೊತೆಯಾಗಿ ಕಾಡುತ್ತಿವೆ: ವೈರಾಣು ತಜ್ಞ ಡಾ ಟಿ ಜೇಕಬ್ ಜಾನ್
ವೈರಾಣು ತಜ್ಞ ಡಾ.ಟಿ.ಜೇಕಬ್ ಜಾನ್
Follow us on

ದೆಹಲಿ: ಕೊವಿಡ್-19ರಿಂದ ಪ್ರತ್ಯೇಕಗೊಂಡಿರುವ ರೂಪಾಂತರಿ ಒಮಿಕ್ರಾನ್ ಹಲವು ಭಿನ್ನತೆಗಳೊಂದಿಗೆ ಜಗತ್ತನ್ನು ವ್ಯಾಪಿಸಿಕೊಳ್ಳುತ್ತಿದೆ. ಹೀಗಾಗಿ ನಾವು ಜಗತ್ತಿನಲ್ಲಿ ಎರಡು ಪಿಡುಗುಗಳು ಜೊತೆಜೊತೆಗೆ ಹರಡುತ್ತಿವೆ ಎಂದು ಹೇಳಬಹುದು. ಈ ಪೈಕಿ ಒಂದು ಆತಂಕ ಡೆಲ್ಟಾ ರೂಪಾಂತರಿಯದ್ದಾಗಿದ್ದರೆ, ಮತ್ತೊಂದು ಅದರ ಹತ್ತಿರದ ಗುಣಲಕ್ಷಣಗಳನ್ನು ಹೋಲುವ ವೈರಾಣುಗಳ ಸಂಕಲನ ಎಂದು ಖ್ಯಾತ ವೈರಾಣು ತಜ್ಞ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಕೇಂದ್ರದ (Indian Council of Medical Research – ICMR) ಡಾ.ಟಿ.ಜೇಕಬ್ ಜಾನ್ ಹೇಳಿದ್ದಾರೆ. ಈ ಕುರಿತು ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿರುವ ಅವರು, ಕೊರೊನಾ ಪಿಡುಗು ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ. ಈಗ ಜಗತ್ತಿನಾದ್ಯಂತ ಕಂಡು ಬರುತ್ತಿರುವ ಒಮಿಕ್ರಾನ್​​ಗೆ Wuhan-D614G ವೈರಾಣುವಿನ ಯಾವುದೇ ರೂಪಾಂತರಿಯು ಮೂಲವಲ್ಲ. ಈ ರೂಪಾಂತರಿಯ ಮೂಲಕ ವೈರಾಣು ಯಾವುದು ಎನ್ನುವ ಬಗ್ಗೆ ಇನ್ನೂ ಗೊಂದಲಗಳಿವೆ. ಇದು ಬಹುಶಃ Wuhan-D614G ವೈರಾಣುವಿನ ಅಜ್ಜ, ಮುತ್ತಜ್ಜರಿಂದ ರೂಪಾಂತರ ಹೊಂದಿರಬಹುದು. ಈ ಪಿಡುಗು ಮತ್ತಷ್ಟು ಕಾಲ ಇರಬಹುದು ಎಂದು ಶಂಕಿಸಿದರು.

SARS-CoV-2 ವೈರಾಣುಗಳು ಅಮಿನೊ ಆಸಿಡ್ ರೂಪಾಂತರದಿಂದ ಸ್ವಭಾವ ಬದಲಿಸಿಕೊಳ್ಳುತ್ತವೆ. ಇದೀಗ ಕಂಡು ಬರುತ್ತಿರುವ D614G ರೂಪಾಂತರಗಳು ಇದೇ ರೀತಿ ಹರಡುತ್ತಿವೆ. ಒಮಿಕ್ರಾನ್​ ಎನ್ನುವುದು ವುಹಾನ್ ಮೂಲದ ವೈರಾಣುವಿನಿಂದ ಹರಡುತ್ತಿಲ್ಲ ಎನ್ನುವುದು ಖಚಿತವಾಗಿರುವ ಕಾರಣ ನಾವೀಗ ವಿಶ್ವದಲ್ಲಿ ಎರಡು ಪಿಡುಗುಗಳು ಒಂದರ ಜೊತೆಗೆ ಮತ್ತೊಂದು ವ್ಯಾಪಿಸುತ್ತಿವೆ ಎಂದು ಭಾವಿಸಬೇಕಿದೆ. ಡೆಲ್ಟಾ ಮತ್ತು ಇತರ ಹತ್ತಿರದ ರೂಪಾಂತರಿಗಳನ್ನು ಒಂದು ರೀತಿಯಾಗಿ, ಒಮಿಕ್ರಾನ್ ಮತ್ತು ಭವಿಷ್ಯದಲ್ಲಿ ಉದ್ಭವಿಸುವ ಅದರ ಇತರ ರೂಪಾಂತರಿಗಳನ್ನು ಮತ್ತೊಂದು ರೀತಿಯಾಗಿ ಪರಿಗಣಿಸಬೇಕಿದೆ ಎಂದರು.

ಈ ರೂಪಾಂತರಿಗಳಿಂದ ಬರುವ ಕಾಯಿಲೆಯ ಸ್ವರೂಪವೂ ಭಿನ್ನವಾದುದು. ವಿಷಮಶೀತಜ್ವರ (ನ್ಯುಮೊನಿಯಾ), ಹೈಪೊಕ್ಸಿಯಾ, ಬಹು ಅಂಗಗಳ ವೈಫಲ್ಯ, ಉಸಿರಾಟ ಅಂಗಗಳ ಮೇಲಿನ ಅಥವಾ ಕೆಳಗಿನ ಅಂಗಗಳ ಸಮಸ್ಯೆಗಳ ಜೊತೆಗೆ ಈಗಾಗಲೇ ಅಸ್ತಿತ್ವದಲ್ಲಿರುವ ಹಲವು ರೀತಿಯ ಆಗಾಗ ಕಾಣಿಸಿಕೊಳ್ಳುವ ಕಾಯಿಲೆಗಳು ಅಥವಾ ವೃದ್ಧಾಪ್ಯದಿಂದ ಕಾಡುವ ಕಾಯಿಲೆಗಳ ಸ್ವರೂಪಗಳು ಪ್ರತಿ ರೂಪಾಂತರಿಯಿಂದಲೂ ಬೇರೆಬೇರೆ ಎಂಬುದನ್ನು ಮನಗಾಣಬೇಕಿದೆ.

3ನೇ ಅಲೆಯ ಉತ್ತುಂಗ ನಾವು ಮುಟ್ಟಿದ್ದೇವೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಹಾನಗರಗಳಲ್ಲಿ ಸೋಂಕು ಪ್ರಕರಣಗಳು ಬೇಗನೇ ಹೆಚ್ಚಾಗುತ್ತವೆ, ಅಲ್ಲಿಯೇ ಸೋಂಕು ಪ್ರಕರಣಗಳು ಬೇಗ ಇಳಿಕೆಯೂ ಆಗುತ್ತವೆ ಎಂದರು. ವಿವಿಧ ರೂಪಾಂತರಿಗಳು ವ್ಯಾಪಕವಾಗಿ ಹರಡಿಕೊಂಡಿರುವ ಸಂದರ್ಭ ಇದು. ಹೀಗಾಗಿಯೇ ಇದು ರಾಷ್ಟ್ರೀಯ ಪಿಡುಗು ಎಂದು ಅಭಿಪ್ರಾಯಪಟ್ಟರು.

ಕೊವಿಡ್-19ರ ಮುಂದಿನ ರೂಪಾಂತರಿಗಳು ಅತ್ಯಂತವಾಗಿ ಹರಡಬಲ್ಲವಾದರೂ, ಮರಣದ ಪ್ರಮಾಣ ಕಡಿಮೆ ಇರಬಹುದೇ ಎಂದು ಕೇಳಿದ್ದಕ್ಕೆ, ಇದು ಹೀಗೆ ಎಂದು ಹೇಳಲು ಆಗುವುದಿಲ್ಲ. ಡೆಲ್ಟಾ ರೂಪಾಂತರಿಯು ತಡವಾಗಿ ಬಂದರೂ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಒಮಿಕ್ರಾನ್ ಭಾರತದಲ್ಲಿ ಅತ್ಯಂತ ವೇಗವಾಗಿ ಹರಡುವ ರೂಪಾಂತರಿಯಾಗಿದೆ ಎಂದು ಹೇಳಿದರು. ಭಾರತದಲ್ಲಿ 2,71,202 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ದೇಶದಲ್ಲಿ ಕೊವಿಡ್-19 ಪ್ರಕರಣಗಳ ಸಂಖ್ಯೆಯು 37,12,21,164ಕ್ಕೆ ಮುಟ್ಟಿದೆ. 7,743 ಪ್ರಕರಣಗಳು ಒಮಿಕ್ರಾನ್ ರೂಪಾಂತರವೇ ಆಗಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಇದನ್ನೂ ಓದಿ: ಕೋಲಾರ: ಕಾಂಗ್ರೆಸ್ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದವರಿಗೆ ಕೊರೊನಾ; ಈವರೆಗೆ 63 ಪೊಲೀಸರಿಗೆ ಸೋಂಕು ದೃಢ
ಇದನ್ನೂ ಓದಿ: ಹೆಚ್ಚುತ್ತಿರುವ ಕೊರೊನಾ ಸೋಂಕು; ಉತ್ತರ ಪ್ರದೇಶದಲ್ಲಿ ಜ.23ರವರೆಗೆ ಎಲ್ಲ ಶಾಲಾ-ಕಾಲೇಜುಗಳೂ ಬಂದ್

Published On - 6:05 pm, Sun, 16 January 22