ವೈಜಾಗ್ ಉಕ್ಕಿನ ಸ್ಥಾವರ ಸ್ಫೋಟ; ಕರಗಿದ ಕಬ್ಬಿಣ ಸೋರಿಕೆಯಿಂದ 8 ಕಾರ್ಮಿಕರು ಸಾವು

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಸ್ಟೀಲ್ ಪ್ಲಾಂಟ್‌ನಲ್ಲಿ ಇಂದು ನಡೆದ ಭೀಕರ ಕೈಗಾರಿಕಾ ಅಪಘಾತದಲ್ಲಿ, ಕರಗಿದ ದ್ರವರೂಪದ ಕಬ್ಬಿಣವು ಮೇಲಕ್ಕೆತ್ತುವ ಕಾರ್ಯಾಚರಣೆಯ ವೇಳೆ ಸಿಡಿದು ಬಿದ್ದ ಪರಿಣಾಮ 8 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಶೋಧ ಕಾರ್ಯ ಮುಂದುವರಿದಂತೆ ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದುರಂತವು ರಾಷ್ಟ್ರೀಯ ಇಸ್ಪಾತ್ ನಿಗಮ್ ಲಿಮಿಟೆಡ್ (RINL) ನಿಯಂತ್ರಣದ ಪ್ಲಾಂಟ್‌ನಲ್ಲಿ ನಡೆದಿದ್ದು, ಇದನ್ನು 'ವೈಜಾಗ್ ಸ್ಟೀಲ್ ಪ್ಲಾಂಟ್' ಎಂದೇ ಜನಪ್ರಿಯವಾಗಿ ಕರೆಯಲಾಗುತ್ತದೆ.

ವೈಜಾಗ್ ಉಕ್ಕಿನ ಸ್ಥಾವರ ಸ್ಫೋಟ; ಕರಗಿದ ಕಬ್ಬಿಣ ಸೋರಿಕೆಯಿಂದ 8 ಕಾರ್ಮಿಕರು ಸಾವು
Vizag Steel Blast
Image Credit source: x

Updated on: Jun 08, 2026 | 8:35 PM

ವಿಶಾಖಪಟ್ಟಣಂ, ಜೂನ್ 8: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಪ್ರಸಿದ್ಧ ವೈಜಾಗ್ ಸ್ಟೀಲ್ ಪ್ಲಾಂಟ್‌ನ (Visakhapatnam Steel Plant) ಎಸ್‌ಎಂಎಸ್-2 ವಿಭಾಗದಲ್ಲಿ ದುರಂತ ಘಟನೆ ಸಂಭವಿಸಿದೆ. ಕಾರ್ಖಾನೆಯಲ್ಲಿ ಎಂದಿನಂತೆ ಕೆಲಸ ನಡೆಯುತ್ತಿದ್ದಾಗ, ಕರಗಿದ ದ್ರವರೂಪದ ಕಬ್ಬಿಣವನ್ನು ಕ್ರೇನ್​ನಲ್ಲಿ ಸಾಗಿಸುತ್ತಿದ್ದಾಗ ಬೃಹತ್ ಬಕೆಟ್ ಇದ್ದಕ್ಕಿದ್ದಂತೆ ಉರುಳಿಬಿದ್ದಿದೆ. ಅತಿ ಹೆಚ್ಚು ಬಿಸಿಯಾಗಿದ್ದ ಕರಗಿದ ಕಬ್ಬಿಣವು ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ನೇರವಾಗಿ ಚೆಲ್ಲಿದ್ದರಿಂದ, ಸ್ಥಳದಲ್ಲೇ 8 ಜನ ಕಾರ್ಮಿಕರು ಮೃತಪಟ್ಟಿದ್ದಾರೆ.

ಈ ಘಟನೆಯಲ್ಲಿ ಹಲವು ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದು, ಅವರಲ್ಲಿ ಕೆಲವರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಸ್ಟೀಲ್ ಪ್ಲಾಂಟ್ ಜನರಲ್ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಸಂಭವಿಸುತ್ತಿದ್ದಂತೆ ಕಾರ್ಖಾನೆಯ ಸುರಕ್ಷತಾ ಸಿಬ್ಬಂದಿ, ಅಗ್ನಿಶಾಮಕ ದಳ ಮತ್ತು ಸ್ಥಳೀಯ ಪೊಲೀಸರು ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದ್ದಾರೆ.

ಇದನ್ನೂ ಓದಿ: Viral News: ಹೆಂಡತಿಗೆ ಕೈಕೊಟ್ಟು ಅತ್ತೆಯನ್ನೇ ಮದುವೆಯಾದ ಅಳಿಯ!

ಕ್ರೇನ್ ಮೂಲಕ ಚಲಾಯಿಸಲಾಗುತ್ತಿದ್ದ ಬಕೆಟ್‌ನಲ್ಲಿ ಕರಗಿದ ಕಬ್ಬಿಣವನ್ನು ಸಾಗಿಸುವಾಗ ಈ ಅನಾಹುತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆ ಸಮಯದಲ್ಲಿ ಆ ಲೋಹವು ಸುಮಾರು 1,600 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಹೊಂದಿತ್ತು ಎಂದು ವರದಿಯಾಗಿದ್ದು, ಇದೇ ಕಾರಣಕ್ಕೆ ಈ ಅಪಘಾತವು ಅತ್ಯಂತ ಭೀಕರ ಹಾಗೂ ವಿನಾಶಕಾರಿಯಾಗಿ ಮಾರ್ಪಟ್ಟಿದೆ.

ಆ ಪ್ರದೇಶದಲ್ಲಿ ಹರಡಿಕೊಂಡಿರುವ ಕರಗಿದ ಕಬ್ಬಿಣದ ತಾಪಮಾನವನ್ನು ಕಡಿಮೆ ಮಾಡಲು ಮತ್ತು ಸಿಲುಕಿರುವ ಇತರ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು ತೀವ್ರ ಪ್ರಯತ್ನ ನಡೆಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಸ್ಟೀಲ್ ಪ್ಲಾಂಟ್‌ನ ಉನ್ನತ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.


ಇದನ್ನೂ ಓದಿ: ಪೇಂಟ್ ಹೊಡೆಯುವ ನೆಪದಲ್ಲಿ ಬಂದವರು ಕೇವಲ 5 ನಿಮಿಷದ ಗ್ಯಾಪ್‌ನಲ್ಲಿ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣದೊಂದಿಗೆ ಎಸ್ಕೇಪ್

ತಾಂತ್ರಿಕ ದೋಷ ಅಥವಾ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆಯೇ ಎಂಬುದನ್ನು ಪತ್ತೆಹಚ್ಚಲು ಕಾರ್ಖಾನೆಯ ಆಡಳಿತ ಮಂಡಳಿಯು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಕಾರ್ಮಿಕರ ಸಾವು ಕೈಗಾರಿಕಾ ವಲಯದಲ್ಲಿ ತೀವ್ರ ಕಳವಳ ಮತ್ತು ಶೋಕವನ್ನು ಉಂಟುಮಾಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:32 pm, Mon, 8 June 26

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us