ಕಪ್ಪು ಬಾವುಟ ಬೀಸುವುದು ಮಾನನಷ್ಟ, ಕಾನೂನುಬಾಹಿರವಲ್ಲ; ಸಿಎಂ ಬೆಂಗಾವಲು ಪಡೆಯನ್ನು ಪ್ರತಿಭಟಿಸಿದ ಪ್ರಕರಣ ರದ್ದುಗೊಳಿಸಿದ ಕೇರಳ ಹೈಕೋರ್ಟ್
‘ಕಪ್ಪು ಬಾವುಟ ಬೀಸುವುದು ಕಾನೂನು ಬಾಹಿರವಲ್ಲ ಅಥವಾ ಮಾನನಷ್ಟವಲ್ಲ’ ಎಂದು ಹೇಳಿರುವ ಕೇರಳ ಹೈಕೋರ್ಟ್ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬೆಂಗಾವಲು ವಾಹನದ ವಿರುದ್ಧ ಪ್ರತಿಭಟನೆ ನಡೆಸಿದ ಮೂವರು ಯುವಕರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದೆ.
ತಿರುವನಂತಪುರಂ: ಯಾವುದೇ ಬಣ್ಣದ ಧ್ವಜವನ್ನು ಪ್ರತಿಭಟನೆಯ ರೂಪವಾಗಿ ಪ್ರದರ್ಶಿಸಿದರೂ ಅಂತಹ ಕೃತ್ಯವನ್ನು ನಿಷೇಧಿಸುವ ಯಾವುದೇ ಕಾನೂನು ಇಲ್ಲ. ಹೀಗಾಗಿ, ಅದನ್ನು ಮಾನನಷ್ಟ ಅಥವಾ ಕಾನೂನುಬಾಹಿರ ಎಂದು ಪರಿಗಣಿಸಲಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಬೆಂಗಾವಲು ವಾಹನಕ್ಕೆ ಮೂವರು ಕಪ್ಪು ಬಾವುಟ ತೋರಿಸಿದ್ದಕ್ಕೆ ಅವರ ಮೇಲೆ ಕೇಸ್ ದಾಖಲಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಈ ತೀರ್ಪು ನೀಡಿದೆ.
ಅರ್ಜಿದಾರರು 2017ರ ಏಪ್ರಿಲ್ 9ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಬೆಂಗಾವಲು ಪಡೆಗೆ ಯುವಕರು ಕಪ್ಪು ಬಾವುಟ ಬೀಸಿದ್ದರು ಮತ್ತು ಪೊಲೀಸ್ ಸಿಬ್ಬಂದಿ ವಿರುದ್ಧ ಬಲಪ್ರಯೋಗ ಮಾಡಿದರು ಎಂದು ಆರೋಪಿಸಲಾಗಿತ್ತು. ವ್ಯಕ್ತಿಯೊಬ್ಬರಿಗೆ ಕಪ್ಪು ಬಾವುಟ ತೋರಿಸುವುದು ಕಾನೂನು ಬಾಹಿರವಲ್ಲ ಮತ್ತು ಮಾನನಷ್ಟವಾಗುವುದಿಲ್ಲ ಎಂದು ಗಮನಿಸಿದ ಕೇರಳ ಹೈಕೋರ್ಟ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಬೆಂಗಾವಲು ಪಡೆಗೆ ಕಪ್ಪು ಬಾವುಟ ಬೀಸಿದ್ದಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಿದೆ.
ಬುಧವಾರದ ನೀಡಿದ ತೀರ್ಪಿನಲ್ಲಿ, ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು ಪರಿಣಾಮಕಾರಿ ಪ್ರಜಾಪ್ರಭುತ್ವಕ್ಕಾಗಿ ಪ್ರತಿಭಟನೆಗಳು ಅತ್ಯಗತ್ಯ ಎಂದು ಹೇಳಿದ್ದಾರೆ. 2017ರಲ್ಲಿ ನಡೆದ ಘಟನೆಯಲ್ಲಿ ಎರ್ನಾಕುಲಂ ಜಿಲ್ಲೆಯ ಪರವೂರ್‌ನ ಮೂವರು ಯುವಕರು ಪಿಣರಾಯಿ ವಿಜಯನ್ ಅವರ ಬೆಂಗಾವಲು ಪಡೆಗೆ ಮಾನಹಾನಿ ಮಾಡುವ ಉದ್ದೇಶದಿಂದ ಕಪ್ಪು ಬಾವುಟ ಬೀಸಿದ್ದಾರೆ ಎಂದು ಆರೋಪಿಸಲಾಗಿತ್ತು. ಪೊಲೀಸರು ಅವರನ್ನು ಬೆಂಗಾವಲು ಪಡೆಯತ್ತ ಸಾಗದಂತೆ ತಡೆಯಲು ಪ್ರಯತ್ನಿಸಿದಾಗ ಅವರು ಪೊಲೀಸ್ ಸಿಬ್ಬಂದಿಯನ್ನು ತಳ್ಳುವ ಮೂಲಕ ಬಲಪ್ರಯೋಗ ಮಾಡಿದ್ದರು.
ಇದನ್ನೂ ಓದಿ: Viral: ಕೇರಳ ಸಿಎಂ ಕಾರಿಗೆ ಅಪತ್ತು ತಂದ ಸ್ಕೂಟಿ ಮಹಿಳೆ, ಪಿಣರಾಯಿ ವಿಜಯನ್ ಕಾರು-ಬೆಂಗಾವಲು ವಾಹನಗಳ ಮಧ್ಯೆ ಸರಣಿ ಅಪಘಾತ
ಪೊಲೀಸರು 2020ರಲ್ಲಿ ಪರವೂರಿನಲ್ಲಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಅವರ ವಿರುದ್ಧ ಮಾನನಷ್ಟ, ಸಾರ್ವಜನಿಕ ನೌಕರನಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸುವ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಂತರ ಆರೋಪಿಗಳು ಪ್ರಕರಣವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇದೇ ರೀತಿ 2023ರಲ್ಲಿ ಕೇರಳ ರಾಜ್ಯದ ಎಲ್ಲಾ 140 ವಿಧಾನಸಭಾ ಕ್ಷೇತ್ರಗಳಿಗೆ ಯಾತ್ರೆಯ ಭಾಗವಾಗಿ ಸಿಎಂ ಪಿಣರಾಯಿ ವಿಜಯನ್ ಮತ್ತು ಅವರ ಕ್ಯಾಬಿನೆಟ್ ಸಹೋದ್ಯೋಗಿಗಳು ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ಕಪ್ಪು ಬಾವುಟ ಬೀಸಿದ್ದಕ್ಕಾಗಿ ಕೇರಳದ ಪೊಲೀಸರು ವಿರೋಧ ಪಕ್ಷಗಳ ಕಾರ್ಯಕರ್ತರ ವಿರುದ್ಧ ನೂರಾರು ಪ್ರಕರಣಗಳನ್ನು ದಾಖಲಿಸಿದ್ದರು. ಇದಲ್ಲದೆ, ವಿಜಯನ್ ಅವರ ಬೆಂಗಾವಲು ಪಡೆಗೆ ಕಪ್ಪು ಬಾವುಟವನ್ನು ಬೀಸಿದ ಪ್ರತಿಭಟನಾಕಾರರ ಮೇಲೆ ಸಿಪಿಐ(ಎಂ) ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಇದನ್ನೂ ಓದಿ: ಕೇರಳ: ಶಬರಿಮಲೆಯಿಂದ ವಾಪಸಾಗುವಾಗ ಕರ್ನಾಟಕದ ಯಾತ್ರಿಕರಿದ್ದ ಬಸ್ ಪಲ್ಟಿ, ಹಲವರಿಗೆ ಗಾಯ
ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೂ ಜನವರಿಯಲ್ಲಿ ಎಸ್‌ಎಫ್‌ಐ ಕಾರ್ಯಕರ್ತರು ಕಪ್ಪು ಬಾವುಟ ತೋರಿಸಿದ್ದರು. ಈ ಘಟನೆಯಿಂದ ಕೆರಳಿದ ಮೊಹಮ್ಮದ್ ಖಾನ್ ಅವರು ತಮ್ಮ ಕಾರಿನಿಂದ ಕೆಳಗಿಳಿದು ಕೊಲ್ಲಂ ಜಿಲ್ಲೆಯ ರಸ್ತೆಯಲ್ಲಿ ಧರಣಿ ನಡೆಸಿದ್ದರು. ನಂತರ ಪೊಲೀಸರು ಎಸ್‌ಎಫ್‌ಐ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ