Delhi Riots: ಉಮರ್ ಖಾಲಿದ್ ಭಾಷಣ ಪ್ರಚೋದನಕಾರಿ, ಅಸಹ್ಯಕರವಾಗಿದೆ; ಜಾಮೀನು ಅರ್ಜಿ ಕುರಿತು ದೆಹಲಿ ಹೈಕೋರ್ಟ್​ ನೋಟಿಸ್ ಜಾರಿ

| Updated By: ಸುಷ್ಮಾ ಚಕ್ರೆ

Updated on: Apr 22, 2022 | 11:54 AM

Umar Khalid: ಉಮರ್ ಖಾಲಿದ್ ಫೆಬ್ರವರಿ 2020ರ ಗಲಭೆಯ ‘ಮಾಸ್ಟರ್‌ಮೈಂಡ್‌’ ಎಂದು ಆರೋಪಿಸಲಾಗಿದೆ. ಇಂದು ದೆಹಲಿ ಹೈಕೋರ್ಟ್​ ಉಮರ್ ಖಾಲಿದ್ ಅವರ ಜಾಮೀನು ಅರ್ಜಿ ಕುರಿತು ನೋಟಿಸ್ ಜಾರಿ ಮಾಡಿದೆ. 

Delhi Riots: ಉಮರ್ ಖಾಲಿದ್ ಭಾಷಣ ಪ್ರಚೋದನಕಾರಿ, ಅಸಹ್ಯಕರವಾಗಿದೆ; ಜಾಮೀನು ಅರ್ಜಿ ಕುರಿತು ದೆಹಲಿ ಹೈಕೋರ್ಟ್​ ನೋಟಿಸ್ ಜಾರಿ
ಉಮರ್ ಖಾಲಿದ್
Follow us on

ನವದೆಹಲಿ: 2020ರ ಫೆಬ್ರವರಿಯಲ್ಲಿ ನಡೆದ ದೆಹಲಿ ಗಲಭೆಗೆ (Delhi Riots) ಸಂಬಂಧಿಸಿದಂತೆ ತನ್ನ ವಿರುದ್ಧ ದಾಖಲಾಗಿರುವ ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ (ಯುಎಪಿಎ) ಪ್ರಕರಣದಲ್ಲಿ ಜಾಮೀನು ನಿರಾಕರಿಸಿದ ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಉಮರ್ ಖಾಲಿದ್ ಸಲ್ಲಿಸಿದ ಮೇಲ್ಮನವಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಇಂದು (ಶುಕ್ರವಾರ) ನೋಟಿಸ್ ಜಾರಿ ಮಾಡಿದೆ. ಉಮರ್ ಖಾಲಿದ್ (Umae Khalid) ಜೆಎನ್​ಯು ಮಾಜಿ ವಿದ್ಯಾರ್ಥಿಯಾಗಿದ್ದಾರೆ. ಉಮರ್​​ ಖಾಲಿದ್​ರನ್ನು 2020ರ ಸೆಪ್ಟೆಂಬರ್ 14ರಂದು ಬಂಧಿಸಲಾಗಿತ್ತು. ಹೆಚ್ಚುವರಿ ಸೆಷನ್ಸ್ ನ್ಯಾಯಮೂರ್ತಿ ಅಮಿತಾಭ್ ರಾವತ್ ಅವರು ಪ್ರಕರಣದ ವಾದವನ್ನು ಆಲಿಸಿದ ನಂತರ ಮಾರ್ಚ್ 3ರಂದು ಆದೇಶವನ್ನು ಕಾಯ್ದಿರಿಸಿದ್ದರು. ವಿಚಾರಣೆಯ ವೇಳೆ ಆರೋಪಿಯು ತಮ್ಮ ವಿರುದ್ಧದ ಪ್ರಕರಣವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ಗೆ ಸಾಕ್ಷ್ಯಾಧಾರಗಳ ಕೊರತೆಯಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಇಂದು ದೆಹಲಿ ಹೈಕೋರ್ಟ್​ ಉಮರ್ ಖಾಲಿದ್ ಅವರ ಜಾಮೀನು ಅರ್ಜಿ ಕುರಿತು ನೋಟಿಸ್ ಜಾರಿ ಮಾಡಿದೆ.

ದೆಹಲಿ ಹೈಕೋರ್ಟ್​ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ರಜನೀಶ್ ಭಟ್ನಾಗರ್ ಅವರ ಪೀಠವು ಅಮರಾವತಿಯಲ್ಲಿ ಖಾಲಿದ್ ಮಾಡಿದ ಭಾಷಣವು ಅಸಹ್ಯಕರ ಮತ್ತು ಪ್ರಚೋದನಕಾರಿಯಾಗಿದೆ ಎಂದಿದೆ. ಖಾಲಿದ್ ಪರ ವಾದ ಮಂಡಿಸಿದ ಹಿರಿಯ ವಕೀಲ ತ್ರಿದೀಪ್ ಪೈಸ್, ಅಪರಾಧ ನಡೆದಾಗ ನನ್ನ ಕಕ್ಷಿದಾರರು ದೆಹಲಿಯಲ್ಲಿ ಇರಲಿಲ್ಲ ಎಂದು ವಾದಿಸಿದ್ದಾರೆ. ಅವರ ವಿರುದ್ಧ ಯಾವ ಆರೋಪಗಳನ್ನು ದಾಖಲಿಸಲಾಗಿದೆ ಎಂದು ಕೋರ್ಟ್ ಕೇಳಿದಾಗ, ಇನ್ನೂ ಆರೋಪಗಳನ್ನು ರೂಪಿಸಲಾಗಿಲ್ಲ ಎಂದು ವಕೀಲರು ಉತ್ತರಿಸಿದ್ದಾರೆ.

ಉಮರ್ ಖಾಲಿದ್ ಫೆಬ್ರವರಿ 2020ರ ಗಲಭೆಯ ‘ಮಾಸ್ಟರ್‌ಮೈಂಡ್‌’ ಎಂದು ಆರೋಪಿಸಲಾಗಿದೆ. ಖಾಲಿದ್ ವಿರುದ್ಧ ಭಯೋತ್ಪಾದನಾ- ವಿರೋಧಿ ಕಾನೂನು ಮತ್ತು ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆಯಡಿ ಆರೋಪಗಳನ್ನು ದಾಖಲಿಸಲಾಗಿದೆ. ದೆಹಲಿ ಗಲಭೆಯಲ್ಲಿ 53 ಜನರು ಮೃತಪಟ್ಟಿದ್ದರು, 700ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ದೆಹಲಿ ಗಲಭೆಗೆ ಪಿತೂರಿ ನಡೆಸಿದ ಪ್ರಕರಣದಲ್ಲಿ 18 ಜನರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಇದುವರೆಗೆ ಈ ಆರೋಪಿಗಳಲ್ಲಿ 6 ಜನರು ಜಾಮೀನು ಪಡೆದು ಹೊರಬಂದಿದ್ದಾರೆ.

“ಉಮರ್ ಖಾಲಿದ್ ಮಾಡಿದ ಭಾಷಣದ ಮೇಲೆ ಎಫ್‌ಐಆರ್ ಹಾಕಿರುವುದು ನಮಗೆ ಆಶ್ಚರ್ಯವೇನಿಲ್ಲ. ಮೇಲ್ನೋಟಕ್ಕೆ ಇದು ಸ್ವೀಕಾರಾರ್ಹವಲ್ಲ. ಪ್ರಜಾಪ್ರಭುತ್ವ ಮತ್ತು ವಾಕ್ ಸ್ವಾತಂತ್ರ್ಯದ ಆಧಾರದಲ್ಲಿ ಇದು ಸ್ವೀಕಾರಾರ್ಹವಲ್ಲ.” ಎಂದು ನ್ಯಾಯಪೀಠ ಹೇಳಿದೆ.

ಜಾಮೀನು ತಿರಸ್ಕರಿಸಿದ ಆದೇಶದ ವಿರುದ್ಧದ ಮೇಲ್ಮನವಿಯಲ್ಲಿ ನ್ಯಾಯಪೀಠವು ನೋಟಿಸ್ ಜಾರಿ ಮಾಡಿತು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪ್ರಸಾದ್ ಅವರು ಪ್ರಾಸಿಕ್ಯೂಷನ್ ಪರವಾಗಿ ನೋಟಿಸ್ ಸ್ವೀಕರಿಸಿದರು. ಈ ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 27ರಂದು ನಡೆಯಲಿದೆ.

ಮಾರ್ಚ್ 24 ರಂದು ಕರ್ಕರ್ಡೂಮಾ ನ್ಯಾಯಾಲಯವು ಖಾಲಿದ್‌ಗೆ ಜಾಮೀನು ನಿರಾಕರಿಸಿತು. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಅವರು ನಿರ್ದಿಷ್ಟ ವಸ್ತುಗಳಿಗಾಗಿ ರಚಿಸಲಾದ ವಾಟ್ಸಾಪ್ ಗುಂಪುಗಳ ಭಾಗವಾಗಿದ್ದಾರೆ ಎಂದು ಕಂಡುಹಿಡಿದರು. ದೆಹಲಿ ಪೊಲೀಸರು ಈ ಪ್ರಕರಣದಲ್ಲಿ 2020ರ ಸೆಪ್ಟೆಂಬರ್ 13ರಂದು ಖಾಲಿದ್‌ನನ್ನು ಬಂಧಿಸಿದ್ದರು. ಅದೇ ವರ್ಷ ನವೆಂಬರ್ 22ರಂದು ಯುಎಪಿಎ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು. ಖಾಲಿದ್ ಅವರು ಜುಲೈ 2021ರಲ್ಲಿ ಜಾಮೀನು ಅರ್ಜಿ ಸಲ್ಲಿಸಿದರು ಮತ್ತು ಹಲವಾರು ವಿಚಾರಣೆಗಳ ನಂತರ, ಕರ್ಕರ್ಡೂಮಾ ನ್ಯಾಯಾಲಯವು ಮಾರ್ಚ್‌ನಲ್ಲಿ ತನ್ನ ಆದೇಶವನ್ನು ಕಾಯ್ದಿರಿಸಿತ್ತು.

ಇದನ್ನೂ ಓದಿ: ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ನಿಂದ ಗಲಾಟೆ ಪ್ರಕರಣ; ಗಲಭೆ ಹಿಂದೆ AIMIM ಮುಖಂಡನ ಕೈವಾಡವಿರುವ ಶಂಕೆ

ದೆಹಲಿ ಗಲಭೆಗೆ ಪಿತೂರಿ ನಡೆಸಿದ್ದು JNU ಮಾಜಿ ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್

Published On - 11:51 am, Fri, 22 April 22