“ಕಾಂಗ್ರೆಸ್‌ನಂತೆ ನಾವು ಕೂಡ ತಪ್ಪು ಮಾಡಬಾರದು”; ಬಿಜೆಪಿಗೆ ನಿತಿನ್ ಗಡ್ಕರಿ ಎಚ್ಚರಿಕೆ

|

Updated on: Jul 13, 2024 | 11:42 AM

ಬಿಜೆಪಿ ವಿಭಿನ್ನ ಸಿದ್ಧಾಂತ ಹೊಂದಿರುವ ಪಕ್ಷವಾಗಿದ್ದು, ಜನರ ವಿಶ್ವಾಸ ಗಳಿಸುತ್ತಿದೆ. ಆದರೆ, ಕಾಂಗ್ರೆಸ್ ಮಾಡಿದ ತಪ್ಪುಗಳನ್ನೇ ನಾವು ಮಾಡಬಾರದು. ಹಾಗೇನಾದರೂ ಮಾಡಿದರೆ ಜನರ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ ಎಂದು ನಿತಿನ್ ಗಡ್ಕರಿ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್‌ನಂತೆ ನಾವು ಕೂಡ ತಪ್ಪು ಮಾಡಬಾರದು; ಬಿಜೆಪಿಗೆ ನಿತಿನ್ ಗಡ್ಕರಿ ಎಚ್ಚರಿಕೆ
ನಿತಿನ್ ಗಡ್ಕರಿ
Follow us on

ಪಣಜಿ: ಬಿಜೆಪಿಯು ಬೇರೆ ಪಕ್ಷಗಳಿಗಿಂತ ಭಿನ್ನ ಅಭಿಪ್ರಾಯ ಹೊಂದಿರುವ ಪಕ್ಷವಾಗಿದೆ ಮತ್ತು ಅದಕ್ಕಾಗಿಯೇ ಅದು ಮತದಾರರ ವಿಶ್ವಾಸವನ್ನು ಪದೇ ಪದೇ ಗೆದ್ದಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಪಣಜಿಯಲ್ಲಿ ಹೇಳಿದ್ದಾರೆ. ಅಧಿಕಾರದಿಂದ ನಿರ್ಗಮಿಸಿದ ಕಾಂಗ್ರೆಸ್‌ನ ಹಿಂದಿನ ತಪ್ಪುಗಳನ್ನು ಪುನರಾವರ್ತಿಸಿದರೆ ಜನರ ವಿಶ್ವಾಸ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಅವರು ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.

“ನಾವು ಕಾಂಗ್ರೆಸ್ ಮಾಡಿದ ತಪ್ಪುಗಳನ್ನು ಮುಂದುವರಿಸಿದರೆ ಅವರ ನಿರ್ಗಮನ ಮತ್ತು ನಮ್ಮ ಪ್ರವೇಶದಿಂದ ಯಾವುದೇ ಪ್ರಯೋಜನವಿಲ್ಲ” ಎಂದು ಗಡ್ಕರಿ ಒತ್ತಿ ಹೇಳಿದರು. ಪಣಜಿ ಬಳಿ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಸದಾನಂದ ತಾನವಾಡೆ ಮತ್ತು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೇರಿದಂತೆ ಗೋವಾ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಸಚಿವ ನಿತಿನ್ ಗಡ್ಕರಿ ಮಾತನಾಡಿದ್ದಾರೆ.

ಇದನ್ನೂ ಓದಿ: ಮೋದಿ ಬಹಳ ಆಧ್ಮಾತ್ಮಿಕ ವ್ಯಕ್ತಿ; ಆಸ್ಟ್ರಿಯಾದ ನೊಬೆಲ್ ವಿಜೇತ ಭೌತಶಾಸ್ತ್ರಜ್ಞ ಆಂಟನ್ ಝೈಲಿಂಗರ್ ಶ್ಲಾಘನೆ

ನಿತಿನ್ ಗಡ್ಕರಿ ಅವರು ಕಾಂಗ್ರೆಸ್ ಮಾಡಿದ ಅದೇ ತಪ್ಪುಗಳನ್ನು ಮಾಡದಂತೆ ತಮ್ಮ ಪಕ್ಷವನ್ನು ಎಚ್ಚರಿಸಿದ್ದಾರೆ. ತಮ್ಮ 40 ನಿಮಿಷಗಳ ಭಾಷಣದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ತಮ್ಮ ಆಪ್ತ ಮತ್ತು ಮಾಜಿ ಉಪಪ್ರಧಾನಿ ಎಲ್‌ಕೆ ಅಡ್ವಾಣಿ ಅವರ “ಬಿಜೆಪಿ ಒಂದು ಭಿನ್ನತೆ ಹೊಂದಿರುವ ಪಕ್ಷ” ಎಂಬ ಹೇಳಿಕೆಯನ್ನು ನೆನಪಿಸಿಕೊಂಡರು.

“ನಾವು ಭಿನ್ನತೆ ಹೊಂದಿರುವ ಪಕ್ಷ ಎಂದು ಅಡ್ವಾಣಿ ಹೇಳುತ್ತಿದ್ದರು. ನಾವು ಇತರ ಪಕ್ಷಗಳಿಗಿಂತ ಎಷ್ಟು ಭಿನ್ನವಾಗಿದ್ದೇವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು” ಎಂದು ಬಿಜೆಪಿಯ ನಾಯಕ ಗಡ್ಕರಿ ಹೇಳಿದ್ದಾರೆ. ಕಾಂಗ್ರೆಸ್‌ನ ತಪ್ಪುಗಳಿಂದಾಗಿ ಜನರು ಬಿಜೆಪಿಯನ್ನು ಆಯ್ಕೆ ಮಾಡಿದ್ದಾರೆ. ಹೀಗಾಗಿ, ಕಾಂಗ್ರೆಸ್​ನ ಅದೇ ತಪ್ಪುಗಳನ್ನು ಮಾಡದಂತೆ ತಮ್ಮ ಪಕ್ಷವನ್ನು ಎಚ್ಚರಿಸಿದ್ದಾರೆ.

“ನಾವು ಭ್ರಷ್ಟಾಚಾರ ಮುಕ್ತ ದೇಶವನ್ನು ರಚಿಸಬೇಕಾಗಿದೆ ಮತ್ತು ಅದಕ್ಕಾಗಿ ನಾವು ಯೋಜನೆಯನ್ನು ಹೊಂದಿರಬೇಕು” ಎಂದು ಗಡ್ಕರಿ ಒತ್ತಿ ಹೇಳಿದರು. ಮಹಾರಾಷ್ಟ್ರದ ರಾಜಕೀಯವನ್ನು ಉಲ್ಲೇಖಿಸಿದ ಗಡ್ಕರಿ ಮಹಾರಾಷ್ಟ್ರದಲ್ಲಿ ಜಾತಿಯ ಮೇಲೆ ರಾಜಕೀಯ ಮಾಡುವ ಪ್ರವೃತ್ತಿ ಇದೆ ಎಂದಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ನ ಕರಾಳ ಘಟ್ಟ; ಸಂವಿಧಾನ ಹತ್ಯಾ ದಿನದ ಕುರಿತು ಪಿಎಂ ಮೋದಿ ಪ್ರತಿಕ್ರಿಯೆ

“ನಾನು ಈ ಪ್ರವೃತ್ತಿಯನ್ನು ಅನುಸರಿಸದಿರಲು ನಿರ್ಧರಿಸಿದ್ದೇನೆ. ನಾನು ಜಾತಿ ರಾಜಕಾರಣದಲ್ಲಿ ತೊಡಗುವುದಿಲ್ಲ ಎಂದು ನಾನು ಜನರಿಗೆ ಹೇಳಿದ್ದೇನೆ. ಜಾತಿಗಳ ಬಗ್ಗೆ ಮಾತನಾಡುವವರನ್ನು ಅಧಿಕಾರದಿಂದ ಹೊರಹಾಕಲಾಗುತ್ತದೆ” ಎಂದು ಅವರು ಎಚ್ಚರಿಸಿದ್ದಾರೆ. ಒಬ್ಬ ವ್ಯಕ್ತಿಯನ್ನು ಅವನು ಹೊಂದಿರುವ ಮೌಲ್ಯಗಳಿಂದ ಗುರುತಿಸಲಾಗುತ್ತದೆ ಮತ್ತು ಅವನ ಜಾತಿಯಿಂದಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

2027ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರತಿ ಕ್ಷೇತ್ರಕ್ಕೂ ಭೇಟಿ ನೀಡಿ ಸಂಘಟನೆಯನ್ನು ಬಲಪಡಿಸುವಂತೆ ಗೋವಾ ಬಿಜೆಪಿ ಕಾರ್ಯಕರ್ತರಿಗೆ ಗಡ್ಕರಿ ಸೂಚನೆ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ