ನಾವು ಪಾಕಿಸ್ತಾನದೊಳಗೆ ದಾಳಿ ಮಾಡಲು ಹಿಂಜರಿಯುವುದಿಲ್ಲ; ಬೆಲ್ಜಿಯಂನಲ್ಲಿ ಸಚಿವ ಜೈಶಂಕರ್ ಎಚ್ಚರಿಕೆ
ಭಯೋತ್ಪಾದನಾ ದಾಳಿಗಳಿಂದ ಪ್ರಚೋದಿಸಲ್ಪಟ್ಟರೆ ಭಾರತ ಪಾಕಿಸ್ತಾನದೊಳಗೆ ನುಸುಳಿ ದಾಳಿ ಮಾಡಲು ಹಿಂಜರಿಯುವುದಿಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿದ ಒಂದು ತಿಂಗಳ ನಂತರ ಯುರೋಪ್‌ಗೆ ಪ್ರಯಾಣಿಸುತ್ತಿರುವ ಜೈಶಂಕರ್, ಪಾಕಿಸ್ತಾನವು ಸಾವಿರಾರು ಭಯೋತ್ಪಾದಕರಿಗೆ ಬಹಿರಂಗವಾಗಿ ತರಬೇತಿ ನೀಡುತ್ತಿದೆ. ಅವರನ್ನು ಭಾರತದ ಮೇಲೆ ಎತ್ತಿ ಕಟ್ಟುತ್ತಿದೆ ಎಂದು ಆರೋಪಿಸಿದರು.

ಬ್ರಸೆಲ್ಸ್, ಜೂನ್ 10: ಬೆಲ್ಜಿಯಂನಲ್ಲಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್ ಇಂದು ಪಾಕಿಸ್ತಾನದ ವಿರುದ್ಧ ಹರಿಹಾಯ್ದಿದ್ದಾರೆ. ಭಯೋತ್ಪಾದಕ ದಾಳಿಗಳಿಂದ ಪ್ರಚೋದಿಸಲ್ಪಟ್ಟರೆ ಭಾರತವು ಪಾಕಿಸ್ತಾನದ ಒಳಗೆ ನುಗ್ಗಿ ದಾಳಿ ಮಾಡುತ್ತದೆ ಎಂದು ಎಚ್ಚರಿಸಿದರು. ಪಹಲ್ಗಾಮ್ ದಾಳಿಯಂತಹ ಅನಾಗರಿಕ ಕೃತ್ಯಗಳ ಸಂದರ್ಭದಲ್ಲಿ ಭಯೋತ್ಪಾದಕ ಸಂಘಟನೆಗಳು ಮತ್ತು ಅವರ ನಾಯಕರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಅವರು ಹೇಳಿದರು. ಭಯೋತ್ಪಾದಕರು ಎಲ್ಲಿದ್ದರೂ ನಮಗೆ ಮುಖ್ಯವಲ್ಲ. ಅವರು ಪಾಕಿಸ್ತಾನದೊಳಗೆ ಇದ್ದರೆ ನಾವು ಪಾಕಿಸ್ತಾನದೊಳಗೇ ನುಗ್ಗಿ ಹೊಡೆಯುತ್ತೇವೆ ಎಂದು ಅವರು ಹೇಳಿದರು.
ಪಾಕಿಸ್ತಾನ ಸಾವಿರಾರು ಭಯೋತ್ಪಾದಕರಿಗೆ ಬಯಲಿನಲ್ಲಿ ತರಬೇತಿ ನೀಡುತ್ತದೆ ಎಂದು ಜೈಶಂಕರ್ ಹೇಳಿದ್ದಾರೆ. “ಏಪ್ರಿಲ್‌ನಲ್ಲಿ ಭಾರತದಲ್ಲಿ ಮಾಡಿದ ರೀತಿಯ ಅನಾಗರಿಕ ಕೃತ್ಯಗಳನ್ನು ನೀವು ಮುಂದುವರಿಸಿದರೆ, ಅದಕ್ಕೆ ಪ್ರತೀಕಾರ ಇದ್ದೇ ಇರುತ್ತದೆ. ಆ ಪ್ರತೀಕಾರವು ಭಯೋತ್ಪಾದಕ ಸಂಘಟನೆಗಳು ಮತ್ತು ಭಯೋತ್ಪಾದಕ ನಾಯಕತ್ವದ ವಿರುದ್ಧ ಇರುತ್ತದೆ” ಎಂದು ಜೈಶಂಕರ್ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಮೋದಿಯನ್ನು ಎದುರಿಸುವುದು ಇಷ್ಟು ಕಷ್ಟವೆಂದು ಉಗ್ರರು ಕನಸಿನಲ್ಲಿಯೂ ಊಹಿಸಿರುವುದಿಲ್ಲ: ಮೋದಿ
ಏಪ್ರಿಲ್ 22ರಂದು 26 ಜೀವಗಳನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಗಿರುವ ಸಂದರ್ಭದಲ್ಲೇ ವಿದೇಶಾಂಗ ಸಚಿವಾಲಯದಿಂದ ಈ ಹೇಳಿಕೆ ಬಂದಿದೆ. ಭಾರತವು ಮೇ 7ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ದಾಳಿಗಳನ್ನು ನಡೆಸಿತು. ಮೇ 10 ರಂದು ಎರಡೂ ಕಡೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ನಡುವಿನ ಮಾತುಕತೆಯ ನಂತರ ಕದನವಿರಾಮ ಘೋಷಿಸಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ