ದೆಹಲಿಯಲ್ಲಿ 49 ಡಿಗ್ರಿ ದಾಟಿದ ಉಷ್ಣಾಂಶ; ಭಾರತದ ವಿವಿಧೆಡೆ ಬಿಸಿಗಾಳಿ ಆತಂಕ

1966ರ ನಂತರ ದೆಹಲಿಯಲ್ಲಿ ದಾಖಲಾಗಿರುವ ಗರಿಷ್ಠ ಪ್ರಮಾಣದ ಉಷ್ಣಾಂಶ ಇದು

ದೆಹಲಿಯಲ್ಲಿ 49 ಡಿಗ್ರಿ ದಾಟಿದ ಉಷ್ಣಾಂಶ; ಭಾರತದ ವಿವಿಧೆಡೆ ಬಿಸಿಗಾಳಿ ಆತಂಕ
ಬಿಸಿ ಗಾಳಿ (ಪ್ರಾತಿನಿಧಿಕ ಚಿತ್ರ)
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:May 16, 2022 | 11:04 AM

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರ ಉಷ್ಣಾಂಶವು 49 ಡಿಗ್ರಿ ಸೆಲ್ಷಿಯಸ್ ದಾಟಿದ್ದು, ಹೊಸ ದಾಖಲೆ ಬರೆದಿದೆ. ಹರಿಯಾಣ ಗಡಿಯ ಮಂಗೇಶ್ವರ್ ಸಮೀಪ ಉಷ್ಣಾಂಶ 49 ಡಿಗ್ರಿ ದಾಖಲಾಗಿದ್ದರೆ, ಗುರುಗ್ರಾಮದಲ್ಲಿ 48 ಡಿಗ್ರಿ ವರದಿಯಾಗಿದೆ. 1966ರ ನಂತರ ದೆಹಲಿಯಲ್ಲಿ ದಾಖಲಾಗಿರುವ ಗರಿಷ್ಠ ಪ್ರಮಾಣದ ಉಷ್ಣಾಂಶ ಇದು. ಬಿಸಿಗಾಳಿ ವಾತಾವರಣ ಮತ್ತು ಉಷ್ಣಾಂಶದ ಏರಿಕೆಗೆ ಮಳೆ ಕೊರತೆಯೇ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗಿದೆ. ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯ ಪ್ರದೇಶಗಳಲ್ಲಿ ಉಷ್ಣಾಂಶ ಹೆಚ್ಚಾಗಿದೆ.

ದೆಹಲಿ ಉಷ್ಣಾಂಶದ ಬಗ್ಗೆ ನೀವು ತಿಳಿಯಬೇಕಾದ 10 ಮುಖ್ಯಾಂಶಗಳಿವು…

  1. ದೆಹಲಿಯ ಪಶ್ಚಿಮದಲ್ಲಿ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹಲವು ಬಾರಿ ಮೋಡಗಳು ದಟ್ಟೈಸಿದ್ದರೂ ಮಳೆ ಸುರಿದಿರಲಿಲ್ಲ. ಮೋಡ ಮುಸುಕಿದ ವಾತಾವರಣದೊಂದಿಗೆ ಬಿರುಗಾಳಿ ಬೀಸುವುದು ಸಾಮಾನ್ಯವಾಗಿತ್ತು. ಉಷ್ಣಾಂಶ ಹೆಚ್ಚಾಗಲು ಈ ಅಂಶವೂ ಕಾರಣವಾಗುತ್ತದೆ ಎಂದು ಹವಾಮಾನ ಇಲಾಖೆಯ ವಿಜ್ಞಾನಿ ಆರ್​.ಕೆ.ಜೆನಮನಿ ಹೇಳಿದ್ದಾರೆ.
  2. ಭಾನುವಾರ (ಮೇ 15) ರಾಷ್ಟ್ರ ರಾಜಧಾನಿಯಲ್ಲಿ ಈವರೆಗೆ ಅತಿಹೆಚ್ಚು ಉಷ್ಣಾಂಶ ದಾಖಲಾದ ದಿನ. ಕಳೆದ ಕೆಲ ವಾರಗಳಲ್ಲಿ ಎರಡು ದಿನ ಮಾತ್ರ ಅಲ್ಪಸ್ವಲ್ಪ ಮಳೆ ಬಿದ್ದಿತ್ತು. ಏಪ್ರಿಲ್ 21ರಂದು 0.3 ಮಿಮೀ ಮತ್ತು ಮೇ 4ರಂದು 1.4 ಮಿಮೀ ಮಳೆಯಾಗಿದೆ. ಈ ವರ್ಷದ ಏಪ್ರಿಲ್ ಕಳೆದ 70 ವರ್ಷಗಳಲ್ಲಿಯೇ ಅತ್ಯಂತ ಬಿಸಿ ತಿಂಗಳು ಎನಿಸಿತ್ತು.
  3. ದೆಹಲಿಯ ಬಹುತೇಕ ಹವಾಮಾನ ಕೇಂದ್ರಗಳಲ್ಲಿ ಉಷ್ಣಾಂಶ 45 ಡಿಗ್ರಿಗೂ ಹೆಚ್ಚು ದಾಖಲಾಗಿದೆ. ಮಂಗೇಶ್​ಪುರ ಮತ್ತು ನಜಾಫ್​ಗಡ್​ದಲ್ಲಿ 49 ಡಿಗ್ರಿ ದಾಟಿದೆ.
  4. ಕೇವಲ ದೆಹಲಿ ಮಾತ್ರವಲ್ಲ, ದೇಶದ ವಿವಿಧ ಭಾಗಗಳಲ್ಲಿಯೂ ಬಿಸಿಗಾಳಿ ಬೀಸುವ ಲಕ್ಷಣಗಳು ಕಂಡು ಬರುತ್ತಿವೆ. ರಾಜಸ್ಥಾನಕ್ಕೆ ಈಗಾಗಲೇ ರೆಡ್ ಅಲರ್ಟ್ ಘೋಷಿಸಲಾಗಿದೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಪೂರ್ವ ಮಧ್ಯಪ್ರದೇಶ ಮತ್ತು ದೆಹಲಿಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದ್ದು, ಮನೆಗಳಲ್ಲಿಯೇ ಉಳಿಯುವುದು ಕ್ಷೇಮ ಎಂದು ಹವಾಮಾನ ಇಲಾಖೆ ಹೇಳಿದೆ.
  5. ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಹಲವೆಡೆ ಶನಿವಾರ ಉಷ್ಣಾಂಶ 48 ಡಿಗ್ರಿಗೂ ಹೆಚ್ಚು ದಾಖಲಾಗಿತ್ತು.
  6. ಉತ್ತರ ಪ್ರದೇಶದ ಬಂಡಾದಲ್ಲಿ ಭಾನುವಾರ 49 ಡಿಗ್ರಿ ಉಷ್ಣಾಂಶ ದಾಖಲಾಗಿದ್ದರೆ, ಬಹುತೇಕ ಜಿಲ್ಲೆಗಳಲ್ಲಿ 45 ಡಿಗ್ರಿ ದಾಟಿತ್ತು.
  7. ರಾಜಸ್ಥಾನದ ಗಂಗಾನಗರ, ಚುರು, ಬಿಕಾನೆರ್ ಮತ್ತು ಆಲ್ವಾರ್ ಪ್ರದೇಶದಲ್ಲಿ ಉಷ್ಣಾಂಶ 45 ಡಿಗ್ರಿ ದಾಟಿದೆ.
  8. ಹವಾಮಾನ ವೈಪರಿತ್ಯದ ಬಗ್ಗೆ ಎಚ್ಚರಿಕೆ ನೀಡಲು ಹವಾಮಾನ ಇಲಾಖೆಯು ನಾಲ್ಕು ಬಣ್ಣಗಳ ಗುರುತು ನೀಡಿದೆ. ಹಸಿರು (ಯಾವುದೇ ಕ್ರಮ ಅಗತ್ಯವಿಲ್ಲ), ಹಳದಿ (ಮುಂದಿನ ಮಾಹಿತಿ ಗಮನಿಸಿ), ಆರೆಂಜ್ (ಸಿದ್ಧತೆ ಮಾಡಿಕೊಳ್ಳಿ, ಕೆಂಪು (ಕ್ರಮ ವಹಿಸಿ).
  9. 9 ದೇಶದ ವಾಯವ್ಯ ಮತ್ತು ಮಧ್ಯ ಭಾರತದಲ್ಲಿ ಸೋಮವಾರ ಮತ್ತು ಮಂಗಳವಾರವೂ ಬಿಸಿಗಾಳಿಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
  10. 10 ದೇಶದ ಉತ್ತರ ಮತ್ತು ಮಧ್ಯ ಭಾಗದಲ್ಲಿ ಉಷ್ಣಾಂಶ ವಿಪರೀತ ಎನಿಸುವಷ್ಟು ಹೆಚ್ಚಾಗಿದ್ದರೆ, ದಕ್ಷಿಣದ ಕೇರಳದಲ್ಲಿ ವ್ಯಾಪಕ ಮಳೆಯಾಗುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:04 am, Mon, 16 May 22