
ಕೋಲ್ಕತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ (West Bengal Assembly Elections 2026) ಐತಿಹಾಸಿಕ ಗೆಲುವು ದಾಖಲಿಸಿರುವ ಬಿಜೆಪಿಯಲ್ಲಿ ಈಗ ಸರ್ಕಾರ ಮತ್ತು ಮಂತ್ರಿಮಂಡಲ ರಚನೆಯ ಕಸರತ್ತು ನಡೆಯುತ್ತಿದೆ. ಇವತ್ತು ಶುಕ್ರವಾರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ. ಮುಖ್ಯಮಂತ್ರಿ ಯಾರೆಂದು ಸಂಜೆಯೊಳಗೆ ಸ್ಪಷ್ಟವಾಗುತ್ತದೆ. ಕೆಲ ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ಪ್ರಕಾರ, ಸುವೇಂದು ಅಧಿಕಾರಿ (Suvendu Adhikari) ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಆಗಲಿದ್ದಾರೆ ಎನ್ನಲಾಗಿದೆ. ಮಮತಾ ಬ್ಯಾನರ್ಜಿಯನ್ನು ಎರಡು ಬಾರಿ ಸೋಲಿಸಿದ ದಿಗ್ಗಜರಾದ ಸುವೇಂದು ಅಧಿಕಾರಿ ಸದ್ಯ ಬಂಗಾಳ ಬಿಜೆಪಿಯಲ್ಲಿ ಅಗ್ರಗಣ್ಯ ನಾಯಕ. ಸಹಜವಾಗಿ ಅವರು ಸಿಎಂ ರೇಸ್ನಲ್ಲಿ ಟಾಪ್ನಲ್ಲಿದ್ದಾರೆ.
ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾದರೆ, ಇಬ್ಬರು ಡಿಸಿಎಂಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಇಬ್ಬರಲ್ಲಿ ಒಬ್ಬರು ಮಹಿಳೆಯಾಗಿರುತ್ತಾರೆ. ದಕ್ಷಿಣ ಅಸಾನ್ಸೋಲ್ನಲ್ಲಿ ಗೆದ್ದಿರುವ ಬಿಜೆಪಿ ಮಹಿಳಾ ನಾಯಕಿ ಅಗ್ನಿಮಿತ್ರಾ ಪೌಲ್ ಅವರು ಡಿಸಿಎಂ ಆಗಬಹುದು. ಮಾಜಿ ಕೇಂದ್ರ ಸಚಿವ ನಿಸಿತ್ ಪ್ರಾಮಾಣಿಕ್ ಅವರು ಎರಡನೇ ಡಿಸಿಎಂ ಆಗಬಹುದು ಎಂದು ವರದಿಗಳು ಹೇಳುತ್ತಿವೆ. ಬುಡಕಟ್ಟು ಸಮುದಾಯದ ವ್ಯಕ್ತಿಯನ್ನೂ ಡಿಸಿಎಂ ಸ್ಥಾನಕ್ಕೆ ಪರಿಗಣಿಸುವ ಸಾಧ್ಯತೆ ಇದೆ ಎಂದು ಎನ್ಡಿಟಿವಿ ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಬಂಗಾಳ ಚುನಾವಣೆ 2026: ಎಸ್ಐಆರ್ ಸುತ್ತಲಿನ ಆರೋಪಗಳು ಹಾಗೂ ಸತ್ಯಾಸತ್ಯತೆಗಳು
ಪಶ್ಚಿಮ ಬಂಗಾಳದಲ್ಲಿ ಈ ಹಿಂದೆ ಯಾರೂ ಕೂಡ ಡಿಸಿಎಂ ಆಗಿದ್ದಿಲ್ಲ. ಆ ಮಟ್ಟಿಗೆ ಇದು ಮಹತ್ವ ಎನಿಸಲಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಕೋಲ್ಕತಾಗೆ ಆಗಮಿಸಿದ್ದಾರೆ. ಇವತ್ತು ಅಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದೆ. ಅಲ್ಲಿ ನಾಯಕನ ಆಯ್ಕೆ ಆಗಲಿದೆ. ಬಿಜೆಪಿ ಸಂಸದ ರಾಹುಲ್ ಸಿನ್ಹಾ ಪ್ರಕಾರ ಸಂಜೆ 6 ಗಂಟೆಯೊಳಗೆ ಪಕ್ಷದ ಸಭೆಯ ತೀರ್ಮಾನ ಸ್ಪಷ್ಟವಾಗಿ ಬಹಿರಂಗವಾಗಲಿದೆ.
ಪಶ್ಚಿಮ ಬಂಗಾಳದ 294 ಕ್ಷೇತ್ರಗಳ ಪೈಕಿ 293 ಕ್ಷೇತ್ರಗಳಿಗೆ ಚುನಾವಣೆ ಪೂರ್ಣಗೊಂಡು ಫಲಿತಾಂಶ ಪ್ರಕಟವಾಗಿದೆ. ಬಹುಮತಕ್ಕೆ 148 ಸ್ಥಾನಗಳ ಅಗತ್ಯವಿದೆ. ಏಕಾಂಗಿಯಾಗಿ ಸ್ಪರ್ಧಿಸಿದ್ದ ಬಿಜೆಪಿ ಬರೋಬ್ಬರಿ 207 ಸ್ಥಾನಗಳಿಸಿ ಸ್ಪಷ್ಟ ಬಹುಮತ ಪಡೆದಿದೆ.
ಇದನ್ನೂ ಓದಿ: ಸುವೇಂದು ಅಧಿಕಾರಿಯ ಪಿಎ ಹತ್ಯೆಗೆ ಬಿಹಾರದಿಂದ ಶಾರ್ಪ್ ಶೂಟರ್ಸ್, 40 ಲಕ್ಷ ರೂ.ಗೆ ಕಾಂಟ್ರಾಕ್ಟ್! ಅಚ್ಚರಿಯ ಮಾಹಿತಿ ಬಯಲು
ಟಿಎಂಸಿ 80, ಕಾಂಗ್ರೆಸ್ 2 ಸ್ಥಾನಗಳನ್ನು ಪಡೆದರೆ ಇತರರಿಗೆ ದಕ್ಕಿದ್ದು 4 ಸ್ಥಾನ ಮಾತ್ರ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ