Bengal Panchayat Polls: ಪಶ್ಚಿಮ ಬಂಗಾಳದಲ್ಲಿ ನಡೆದ ಘರ್ಷಣೆಯಲ್ಲಿ ಟಿಎಂಸಿ ಕಾರ್ಯಕರ್ತ ಗುಂಡೇಟಿಗೆ ಬಲಿ, 6 ಮಂದಿಗೆ ಗಾಯ
ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಘರ್ಷಣೆಯಲ್ಲಿ ಟಿಎಂಸಿ ಕಾರ್ಯಕರ್ತರೊಬ್ಬರು ಗುಂಡಿಗೆ ಬಲಿಯಾಗಿದ್ದು, 6 ಮಂದಿ ಗಾಯಗೊಂಡಿದ್ದಾರೆ
ಪಶ್ಚಿಮ ಬಂಗಾಳ(West Bengal)ದಲ್ಲಿ ನಡೆಯಲಿರುವ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಘರ್ಷಣೆಯಲ್ಲಿ ಟಿಎಂಸಿ ಕಾರ್ಯಕರ್ತರೊಬ್ಬರು ಗುಂಡೇಟಿಗೆ ಬಲಿಯಾಗಿದ್ದು, 6 ಮಂದಿ ಗಾಯಗೊಂಡಿದ್ದಾರೆ. ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ಜುಲೈ 8 ರಂದು ನಡೆಯಲಿದ್ದು, ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಇಲ್ಲಿಯವರೆಗೆ 11 ಮಂದಿ ಮೃತಪಟ್ಟಿದ್ದಾರೆ.
ಎರಡು ಗುಂಪುಗಳ ನಡುವೆ ರಾಜಕೀಯ ಘರ್ಷಣೆ ನಡೆದಿದೆ, ಏಳು ಮಂದಿಗೆ ಬುಲೆಟ್ಗಳು ತಾಗಿವೆ. ಅದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಬಾಬು ಹಕ್ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಬುರ್ದ್ವಾನ್ನಿಂದ ಕಚ್ಚಾ ಬಾಂಬ್ಗಳನ್ನು ಹಾಗೂ ಕತ್ವಾದಲ್ಲಿ ಬಾಂಬ್ ತಯಾರಿಸಲು ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನವಾಗಿದ್ದ ಜೂನ್ 15ರಂದು ಉತ್ತರ ದಿನಾಜ್‌ಪುರ ಜಿಲ್ಲೆಯ ಚೋಪ್ರಾದಲ್ಲಿ ಘರ್ಷಣೆ ಸಂಭವಿಸಿದ್ದು ಆ ಸಂದರ್ಭದಲ್ಲು ಗಾಯಗೊಂಡಿದ್ದ ಸಿಪಿಐ(ಎಂ) ಕಾರ್ಯಕರ್ತರೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮತ್ತಷ್ಟು ಓದಿ: ಪಶ್ಚಿಮ ಬಂಗಾಳದಲ್ಲಿ ರಾಮನವಮಿಯಂದು ಘರ್ಷಣೆ: ಪರಸ್ಪರ ಆರೋಪ ಮಾಡಿ ವಿಡಿಯೊ ಹಂಚಿಕೊಂಡ ಟಿಎಂಸಿ, ಬಿಜೆಪಿ
ನಾಮಪತ್ರ ಸಲ್ಲಿಕೆ ಮತ್ತು ಉಮೇದುವಾರಿಕೆ ಹಿಂಪಡೆಯುವ ಅವಧಿಯಲ್ಲಿ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರಿಂದ ತಮ್ಮ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಹಿಂಸಾಚಾರ ಮತ್ತು ಬೆದರಿಕೆಯನ್ನು ಎದುರಿಸಿದ್ದಾರೆ ಎಂದು ಬಂಗಾಳದ ವಿರೋಧ ಪಕ್ಷಗಳು ಆರೋಪಿಸಿದ್ದವು.
ಪಕ್ಷದ ಕಾರ್ಯಕರ್ತರಿಗೆ ಬುಲೆಟ್ ತಗುಲಿದ್ದು, ಲಾಠಿಯಿಂದ ಥಳಿಸಲಾಗಿದೆ ಎಂದು ಪದಾಧಿಕಾರಿ ಹೇಳಿದ್ದರು. ಚೋಪ್ರಾ ಪಟ್ಟಣದಿಂದ ಸುಮಾರು 50 ಕಿಮೀ ದೂರದಲ್ಲಿರುವ ಸಿಲಿಗುರಿಯಲ್ಲಿರುವ ಖಾಸಗಿ ನರ್ಸಿಂಗ್ ಹೋಮ್‌ಗೆ ದಾಖಲಾಗಿದ್ದ 23 ವರ್ಷದ ವ್ಯಕ್ತಿಯ ಸ್ಥಿತಿ ಗಂಭೀರವಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ