ನಾನು ಡ್ರಗ್ ಟೆಸ್ಟ್​ಗೆ ಸಿದ್ಧನಿದ್ದೇನೆ, ರಾಹುಲ್ ಗಾಂಧಿ ತಯಾರಿದ್ದಾರಾ?; ವೈಟ್ ಚಾಲೆಂಜ್​ಗೆ ಸಚಿವ ಕೆಟಿ ರಾಮರಾವ್ ಮರು ಸವಾಲು

White Challenge: ನಾನು ದೆಹಲಿಯ ಏಮ್ಸ್​ ಆಸ್ಪತ್ರೆಗೆ ತೆರಳಿ ಟೆಸ್ಟ್ ಮಾಡಿಸಿಕೊಳ್ಳಲು ಸಿದ್ಧನಿದ್ದೇನೆ. ರಾಹುಲ್ ಗಾಂಧಿ ಕೂಡ ಡ್ರಗ್ಸ್​ ಟೆಸ್ಟ್​ ಮಾಡಿಸಿಕೊಳ್ಳಲು ತಯಾರಿದ್ದಾರಾ? ಎಂದು ರೇವಂತ್ ರೆಡ್ಡಿಗೆ ಸಚಿವ ಕೆಟಿ ರಾಮರಾವ್ ಸವಾಲು ಹಾಕಿದ್ದಾರೆ.

ನಾನು ಡ್ರಗ್ ಟೆಸ್ಟ್​ಗೆ ಸಿದ್ಧನಿದ್ದೇನೆ, ರಾಹುಲ್ ಗಾಂಧಿ ತಯಾರಿದ್ದಾರಾ?; ವೈಟ್ ಚಾಲೆಂಜ್​ಗೆ ಸಚಿವ ಕೆಟಿ ರಾಮರಾವ್ ಮರು ಸವಾಲು
ಕೆಟಿ ರಾಮರಾವ್- ರೇವಂತ್ ರೆಡ್ಡಿ
Updated By: ಸುಷ್ಮಾ ಚಕ್ರೆ

Updated on: Sep 20, 2021 | 1:27 PM

ಹೈದರಾಬಾದ್: ಡ್ರಗ್ಸ್​ ಸೇವನೆಯ ಬಗ್ಗೆ ತೆಲಂಗಾಣದ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಹಾಕಿರುವ ವೈಟ್ ಚಾಲೆಂಜ್​ಗೆ ಟಿಆರ್​ಎಸ್ ಪಕ್ಷದ ಕಾರ್ಯಾಧ್ಯಕ್ಷ ಮತ್ತು ಸಚಿವರಾದ ಕೆಟಿ ರಾಮ ರಾವ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಯಾವುದೇ ಪರೀಕ್ಷೆಗೂ ಸಿದ್ಧನಿದ್ದೇನೆ. ನಾನು ದೆಹಲಿಯ ಏಮ್ಸ್​ ಆಸ್ಪತ್ರೆಗೆ ತೆರಳಿ ಟೆಸ್ಟ್ ಮಾಡಿಸಿಕೊಳ್ಳಲಿದ್ದೇನೆ. ರಾಹುಲ್ ಗಾಂಧಿ ಕೂಡ ಡ್ರಗ್ಸ್​ ಟೆಸ್ಟ್​ ಮಾಡಿಸಿಕೊಳ್ಳಲು ತಯಾರಿದ್ದಾರಾ? ಅವರು ಪರೀಕ್ಷೆ ಮಾಡಿಸಿಕೊಂಡರೆ ನಾನೂ ಮಾಡಿಸಿಕೊಳ್ಳುತ್ತೇನೆ ಎಂದಿದ್ದಾರೆ.

ಇತ್ತೀಚೆಗೆ ಡ್ರಗ್ ಸಂಸ್ಕೃತಿಯ ಬಗ್ಗೆ ಹೇಳಿಕೆ ನೀಡಿದ್ದ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರೇವಂತ್ ರೆಡ್ಡಿ ಎಲ್ಲ ರಾಜಕಾರಣಿಗಳು, ಸೆಲೆಬ್ರಿಟಿಗಳಿಗೆ ವೈಟ್ ಚಾಲೆಂಜ್ ಹಾಕಿದ್ದರು. ಯುವಪೀಳಿಗೆಗೆ ಮಾದರಿಯಾಗಬೇಕಾದ ಸಾರ್ವಜನಿಕ ಜೀವನದಲ್ಲಿ ಇರುವವರು ವೈಟ್ ಚಾಲೆಂಜ್ ಅನ್ನು ಸ್ವೀಕರಿಸಬೇಕು. ಈ ಸವಾಲನ್ನು ನಾನು ಮುನ್ಸಿಪಲ್ ಸಚಿವ ಕೆ.ಟಿ. ರಾಮರಾವ್ ಹಾಗೂ ಮಾಜಿ ಎಂಪಿ ಕೊಂಡ ವಿಶ್ವೇಶ್ವರ ರೆಡ್ಡಿ ಅವರಿಗೆ ಹಾಕುತ್ತಿದ್ದೇನೆ ಎಂದು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೆಟಿ ರಾಮರಾವ್ ಡ್ರಗ್ಸ್​ ಪ್ರಕರಣದಲ್ಲಿ ತಮ್ಮ ಹಾಗೂ ರೇವಂತ್ ರೆಡ್ಡಿ ನಡುವೆ ನಡೆದ ಟ್ವಿಟ್ಟರ್​ ವಾರ್​ಗೆ ಪೂರ್ಣವಿರಾಮ ಇಟ್ಟಿದ್ದಾರೆ. ಕೆಲವು ದಿನಗಳಿಂದ ಈ ವಿಷಯದಲ್ಲಿ ಇಬ್ಬರೂ ಪರಸ್ಪರರ ಮೇಲೆ ಟ್ವೀಟ್ ಮಾಡಿಕೊಂಡು ಚರ್ಚೆಗೆ ಕಾರಣರಾಗಿದ್ದರು. ಮಾಜಿ ಸಂಸದರಾಗಿರುವ ಕೊಂಡ ವಿಶ್ವೇಶ್ವರ ರೆಡ್ಡಿ ಕೂಡ ವೈಟ್ ಚಾಲೆಂಜ್ ಅನ್ನು ಸ್ವೀಕರಿಸಿದ್ದರು, ಹಾಗೇ ಡ್ರಗ್ ಪರಿಣಾಮಗಳ ಬಗ್ಗೆ ಯುವಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಕೆಲಸ ಶುರು ಮಾಡಿದ್ದರು.

ಇಂದು ಟ್ವೀಟ್ ಮೂಲಕ ಮತ್ತೊಮ್ಮೆ ಸ್ಪಷ್ಟನೆ ನೀಡಿರುವ ಸಚಿವ ಕೆಟಿ ರಾಮರಾವ್, ನಾನು ಯಾವುದೇ ರೀತಿಯ ಡ್ರಗ್ಸ್​ ಕೇಸ್​​ನ ಪರೀಕ್ಷೆಗೆ ಸಿದ್ಧನಿದ್ದೇನೆ. ಆದರೆ, ರಾಹುಲ್ ಗಾಂಧಿ ಟೆಸ್ಟ್ ಮಾಡಿಸಿಕೊಳ್ಳಲು ಸಿದ್ಧರಿದ್ದಾರಾ? ಚರ್ಲಪಲ್ಲಿ ಜೈಲಿನ ಮಾಜಿ ಕೈದಿಯಾಗಿರುವವರ ಜೊತೆ ನಾನು ಟೆಸ್ಟ್ ಮಾಡಿಸಿಕೊಂಡರೆ ಅದು ನನ್ನ ಗೌರವವನ್ನು ಕುಗ್ಗಿಸುತ್ತದೆ. ಒಂದುವೇಳೆ ನಾನು ಡ್ರಗ್ಸ್​ ಟೆಸ್ಟ್ ಮಾಡಿಸಿಕೊಂಡು ಅದರಲ್ಲಿ ನನ್ನದೇನೂ ತಪ್ಪಿಲ್ಲ ಎಂಬುದು ಸಾಬೀತಾದರೆ ನೀವು ಕ್ಷಮಾಪಣೆ ಕೇಳುತ್ತೀರಾ? ಹಾಗೇ, ನೋಟ್​ ಫಾರ್​ ಓಟ್ ಪರೀಕ್ಷೆಗೆ ನೀವು ಸಿದ್ಧರಿದ್ದೀರಾ? ಮತಕ್ಕಾಗಿ ನೋಟ್ ಹಂಚಿಲ್ಲ ಎಂಬ ಸವಾಲನ್ನು ಸ್ವೀಕರಿಸುತ್ತೀರಾ? ಎಂದು ಕೆಟಿಆರ್ ಟ್ವೀಟ್​ ಮೂಲಕ ಪ್ರತಿ ಸವಾಲು ಹಾಕಿದ್ದಾರೆ.

ಹಾಗೇ, ತಮ್ಮ ವಿರುದ್ಧ ಡ್ರಗ್ಸ್​ ಸೇವನೆಯ ಆರೋಪ ಮಾಡಿದ ರೇವಂತ್ ರೆಡ್ಡಿ ವಿರುದ್ಧ ಸಚಿವ ರಾಮ ರಾವ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಕಾಂಗ್ರೆಸ್ ಮುಖಂಡ ರೇವಂತ್ ರೆಡ್ಡಿ ವಿರುದ್ಧ ಕಾನೂನಿನ ಮೊರೆ ಹೋಗಿರುವ ಸಚಿವ ಕೆಟಿಆರ್​ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ನಂಬಿಕೆಯಿದೆ ಎಂದಿದ್ದಾರೆ.

ಇದನ್ನೂ ಓದಿ: ಆನೇಕಲ್ ಬಳಿಯ ಖಾಸಗಿ ರೆಸಾರ್ಟ್‌ನಲ್ಲಿ ರೇವ್‌ ಪಾರ್ಟಿ, ಡ್ರಗ್ಸ್ ನಶೆಯಲ್ಲಿದ್ದ 28 ಜನರನ್ನ ವಶಕ್ಕೆ ಪಡೆದ ಪೊಲೀಸರು

‘ಅಸಾದುದ್ದೀನ್ ಓವೈಸಿಗೆಲ್ಲ ಹೆದರುವುದಿಲ್ಲ..ತೆಲಂಗಾಣ ವಿಮೋಚನಾ ದಿನ ಆಚರಣೆ ಖಂಡಿತ ಮಾಡುತ್ತೇವೆ’-ಅಮಿತ್​ ಶಾ

(White Challenge i am Ready to Drug Test if Rahul Gandhi willing to Join KT Rama Rao Challenges Revanth Reddy)

Published On - 1:27 pm, Mon, 20 September 21