ಮಗುವಿಗೆ ಎದೆಹಾಲುಣಿಸುತ್ತಿದ್ದಾಗ ಪತ್ನಿಯನ್ನು ಕೊಂದ ಪತಿ, ಶಿಶು ಕೂಡಾ ಉಸಿರುಗಟ್ಟಿ ಸಾವು
ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಪತಿಯೊಬ್ಬ ಎದೆಹಾಲುಣಿಸುತ್ತಿದ್ದ ತನ್ನ ಪತ್ನಿ ಚಂಪಾಬಾಯಿ ಮಾನ್ಕರ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಈ ವೇಳೆ, ಅವರ ಆರು ತಿಂಗಳ ಮಗು ಕೂಡ ಉಸಿರುಗಟ್ಟಿ ಸಾವನ್ನಪ್ಪಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ದುರಂತ ಸಂಭವಿಸಿದ್ದು, ಆರೋಪಿ ಸುನಿಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಮಧ್ಯಪ್ರದೇಶ, ಜನವರಿ 16: ಮಗುವಿಗೆ ಎದೆಹಾಲುಣಿಸುತ್ತಿದ್ದ ಪತ್ನಿ ಮೇಲೆ ಪತಿ ಹಲ್ಲೆ(Attack) ನಡೆಸಿದ ಪರಿಣಾಮ ಆಕೆ ಎಲ್ಲಿಯೇ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ನಡೆದಿದೆ. ಹಲ್ಲೆಯ ಸಮಯದಲ್ಲಿ ದಂಪತಿಯ ಆರು ತಿಂಗಳ ಮಗು ಉಸಿರುಗಟ್ಟಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಜಿಲ್ಲೆಯ ಬೇಡ್ಯಾ ಪೊಲೀಸ್ ಠಾಣೆ ಪ್ರದೇಶದ ಬಕಾವಾ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.
ಪೊಲೀಸರ ಪ್ರಕಾರ, ಗುರುವಾರ ಬೆಳಗ್ಗೆ ಚಂಪಾಬಾಯಿ ಮಾನ್ಕರ್ ಮತ್ತು ಅವರ ಶಿಶು ಶವಗಳು ಅವರ ಮನೆಯಲ್ಲಿ ಪತ್ತೆಯಾಗಿತ್ತು. ಮಾಹಿತಿ ಪಡೆದ ನಂತರ ಪೊಲೀಸರು ಮತ್ತು ವಿಧಿವಿಜ್ಞಾನ ತಂಡಗಳು ಸ್ಥಳಕ್ಕೆ ತಲುಪಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರವೀಂದ್ರ ವರ್ಮಾ ತಿಳಿಸಿದ್ದಾರೆ. ಮಹಿಳೆಯ ಪತಿ ಸುನಿಲ್ ಶವಗಳ ಬಳಿ ಕುಳಿತಿರುವುದು ಕಂಡುಬಂದಿದ್ದು, ಅನುಮಾನದ ಮೇಲೆ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಚಂಪಾಬಾಯಿಯ ದೇಹದ ಮೇಲೆ ಹಲವು ಗಾಯದ ಗುರುತುಗಳು ಕಂಡುಬಂದಿವೆ. ವಿಚಾರಣೆಯ ಸಮಯದಲ್ಲಿ, ಸುನಿಲ್ ತನ್ನ ಹೆಂಡತಿಯನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಆಕೆಯ ಪಾತ್ರದ ಮೇಲಿನ ಅನುಮಾನದಿಂದಾಗಿ ಈ ಅಪರಾಧ ನಡೆದಿದೆ ಎಂದು ತಿಳಿದುಬಂದಿದೆ.
ಮತ್ತಷ್ಟು ಓದಿ: ಬಾಂಗ್ಲಾದೇಶದ ಪ್ರಜೆ ಎಂದು ಆರೋಪಿಸಿ ಕಾರ್ಮಿಕನ ಮೇಲೆ ಮಾರಣಾಂತಿಕ ಹಲ್ಲೆ!
ಬುಧವಾರ ರಾತ್ರಿ ದಂಪತಿ ನಡುವೆ ಜಗಳವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಜಗಳದಲ್ಲಿ, ಚಂಪಾಬಾಯಿ ತಮ್ಮ ಮಗುವಿಗೆ ಹಾಲುಣಿಸುತ್ತಿದ್ದಾಗ ಸುನಿಲ್ ಆಕೆಯ ಮೇಲೆ ಹಲ್ಲೆ ನಡೆಸಿ, ಬಾಗಿಲಿಗೆ ತಳ್ಳಿ, ಕೈ, ಕಾಲಿನ ಮೇಲೆ ಕೋಲಿನಿಂದ ಹೊಡೆದಿದ್ದಾನೆ. ಆಕೆ ಮೂರ್ಛೆ ಹೋಗಿದ್ದಾಳೆಂದು ನಂಬಿ ಆರೋಪಿ ನಿದ್ರೆಗೆ ಜಾರಿದ್ದ ಎಂದು ವರದಿಯಾಗಿದೆ.
ಅವರ ಇಬ್ಬರು ಮಕ್ಕಳು ಈ ಘಟನೆಯನ್ನು ಕಣ್ಣಾರೆ ಕಂಡಿದ್ದಾರೆ.ಮರಣೋತ್ತರ ಪರೀಕ್ಷೆಯ ನಂತರ ಎರಡೂ ಶವಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:12 am, Fri, 16 January 26
