ದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಒಂದರ ಹಗರಣದಲ್ಲಿ ಆರೋಪಿಯಾಗಿರುವ ದೇಶಭ್ರಷ್ಟ ಉದ್ಯಮಿ ಮೆಹುಲ್ ಚೋಕ್ಸಿ ಡೊಮಿನಿಕಾದಲ್ಲಿ ವಿಮಾನದಿಂದ ಇಳಿಯುವ ವೇಳೆಗೆ ಅವರ ಜೊತೆಗೆ ಒಬ್ಬಾಕೆ ಹುಡುಗಿ ಇದ್ದಳು ಆದರೆ ಆಕೆ ಮೆಹುಲ್ ಚೋಕ್ಸಿಯ ಪ್ರಿಯತಮೆ ಆಗಿರಲಿಲ್ಲ ಎಂದು ಉದ್ಯಮಿಯ ಆಪ್ತ ಮೂಲಗಳು ಮಾಹಿತಿ ನೀಡಿವೆ. ಬದಲಾಗಿ ಅವಳು, ಚೋಕ್ಸಿ ಬಂಧನಕ್ಕೆ ಸಹಕರಿಸಿದ ಗುಂಪಿನ ಸದಸ್ಯೆ ಎಂದು ಹೇಳಲಾಗಿದೆ.
ಮೆಹುಲ್ ಚೋಕ್ಸಿ ಕೆಲವು ದಿನಗಳ ಹಿಂದೆ ಆಂಟಿಗುವಾ ಮತ್ತು ಬರ್ಬುಡಾದಿಂದ ಕಣ್ಮರೆಯಾಗಿದ್ದರು. ಬಳಿಕ, ಚೋಕ್ಸಿಯನ್ನು ಪತ್ತೆಹಚ್ಚಿ ಡೊಮಿನಿಕಾದಲ್ಲಿ ಬಂಧಿಸಲಾಗಿತ್ತು. ಡೊಮಿನಿಕಾದಲ್ಲಿ ಪ್ರಿಯತಮೆಯೊಂದಿಗೆ ಸಿಕ್ಕಿಬಿದ್ದ ಮೆಹುಲ್ ಚೋಕ್ಸಿಯನ್ನು ಅಲ್ಲಿನ ಪೊಲೀಸರು ಸರಿಯಾಗಿ ವಿಚಾರಿಸಿಕೊಂಡಿದ್ದಾರೆ ಎಂದು ಈ ಮೊದಲು ಹೇಳಲಾಗಿತ್ತು. ಆದರೆ, ಇದೀಗ ಅದು ಆತನ ಪ್ರಿಯತಮೆ ಅಲ್ಲ ಎಂದು ತಿಳಿದುಬಂದಿದೆ.
ಅದಕ್ಕೂ ಮುನ್ನ ಚೋಕ್ಸಿಗೆ ಕೊರೊನಾ ಸೋಂಕು ಪರೀಕ್ಷೆ ಮಾಡಿಸಿದಾಗ ಆತನಿಗೆ ಸೋಂಕು ಇಲ್ಲ ಎಂಬುದು ಪತ್ತೆಯಾಗಿದೆ. ಇದೀಗ ಡೊಮಿನಿಕಾದಲ್ಲಿ ವೈದ್ಯರು ಆತನಿಗೆ ಆರೈಕೆ ಮಾಡುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಒಂದರ ಹಗರಣದಲ್ಲಿ ಆರೋಪಿಯಾಗಿರುವ ದೇಶಭ್ರಷ್ಟ ಉದ್ಯಮಿ ಮೆಹುಲ್ ಚೋಕ್ಸಿ ಸದ್ಯ ಡೊಮಿನಿಕಾ ಪೊಲೀಸರ ವಶದಲ್ಲಿದ್ದಾರೆ.
ಡೊಮಿನಿಕಾದಿಂದ ಆಂಟಿಗುವಾಕ್ಕೆ ಚೋಕ್ಸಿಯನ್ನು ಕಳಿಸಲು ಅವಕಾಶ ನೀಡುವುದಿಲ್ಲ ಎಂದು ಅಲ್ಲಿನ ಪ್ರಧಾನಿ ಗಸ್ಟನ್ ಬ್ರೌನ್ ಈಗಾಗಲೇ ಹೇಳಿದ್ದಾರೆ. ಇದೀಗ ಚೋಕ್ಸಿಯನ್ನು ಭಾರತಕ್ಕೆ ಕಳಿಸುವ ಸಿದ್ಧತೆ ನಡೆದಿದೆ, ಅವರನ್ನು ಕರೆದೊಯ್ಯಲು ಖಾಸಗಿ ವಿಮಾನವೊಂದು ಡೊಮಿನಿಕಾದ ಡೌಗ್ಲಾಸ್-ಚಾರ್ಲ್ಸ್ ಏರ್ಪೋರ್ಟ್ ತಲುಪಿದೆ ಎಂದು ಗಸ್ಟನ್ ಬ್ರೌನ್ ಹೇಳಿದ್ದಾರೆ.
ವಜ್ರದ ವ್ಯಾಪಾರಿ ಮೆಹುಲ್ ಚೋಸ್ಕಿ ಮತ್ತು ಅವನ ಸಂಬಂಧಿ ನೀರವ್ ಮೋದಿ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ (Punjab National Bank -PNB) 13,500 ಕೋಟಿ ರೂಪಾಯಿ ವಂಚನೆ ಎಸಗಿ ಪರಾರಿಯಾಗಿದ್ದಾರೆ. ಇಬ್ಬರು ವಿರುದ್ಧವೂ ಸಿಬಿಐ (CBI) ಮತ್ತು ಜಾರಿ ನಿರ್ದೇಶನಾಲಯ (ED) ತನಿಖೆ ನಡೆಸುತ್ತಿದ್ದು, ಇಬ್ಬರೂ ಭಾರತಕ್ಕೆ ವಾಪಸಾಗಬೇಕಾಗಿದ್ದಾರೆ.
ಡೊಮಿನಿಕಾದಲ್ಲಿ ಬಂಧಿಸಲ್ಪಟ್ಟ ದೇಶಭ್ರಷ್ಟ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಮೈಮೇಲೆಲ್ಲ ಗಾಯ; ವಕೀಲರಿಂದ ಗಂಭೀರ ಆರೋಪ
Published On - 6:24 pm, Mon, 31 May 21