ಬಿಜೆಪಿಯನ್ನು ದೇಶದಿಂದಲೇ ಕಿತ್ತೊಗೆಯುತ್ತೇವೆ, ತಾಕತ್ತಿದ್ದರೆ ಟಿಎಂಸಿಯನ್ನು ತಡೆಯಿರಿ; ಅಮಿತ್​ ಶಾಗೆ ಅಭಿಷೇಕ್ ಬ್ಯಾನರ್ಜಿ ಸವಾಲು

| Updated By: ಸುಷ್ಮಾ ಚಕ್ರೆ

Updated on: Aug 28, 2021 | 5:08 PM

Abhishek Banerjee | ಯಾವ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆಯೋ ಅಲ್ಲಿಂದ ಬಿಜೆಪಿಯನ್ನು ಕಿತ್ತೊಗೆಯುತ್ತೇವೆ. ಸಿಬಿಐ, ಇ.ಡಿಯನ್ನು ಮುಂದಿಟ್ಟುಕೊಂಡು ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ. ಧೈರ್ಯವಿದ್ದರೆ ಟಿಎಂಸಿಯನ್ನು ತಡೆಯಲಿ ಎಂದು ಅಭಿಷೇಕ್ ಬ್ಯಾನರ್ಜಿಗೆ ಸವಾಲು ಹಾಕಿದ್ದಾರೆ.

ಬಿಜೆಪಿಯನ್ನು ದೇಶದಿಂದಲೇ ಕಿತ್ತೊಗೆಯುತ್ತೇವೆ, ತಾಕತ್ತಿದ್ದರೆ ಟಿಎಂಸಿಯನ್ನು ತಡೆಯಿರಿ; ಅಮಿತ್​ ಶಾಗೆ ಅಭಿಷೇಕ್ ಬ್ಯಾನರ್ಜಿ ಸವಾಲು
ಅಭಿಷೇಕ್ ಬ್ಯಾನರ್ಜಿ
Follow us on

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆಯ (Money Laundering Case) ಆರೋಪದಲ್ಲಿ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ (TMC MP Abhishek Banerjee) ಮತ್ತು ಅವರ ಪತ್ನಿ ರುಜಿರಾ ಬ್ಯಾನರ್ಜಿ ಅವರಿಗೆ ಇಂದು ಜಾರಿ ನಿರ್ದೇಶನಾಲಯ (ED) ಸಮನ್ಸ್ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಕಿಡಿ ಕಾರಿರುವ ಅಭಿಷೇಕ್ ಬ್ಯಾನರ್ಜಿ, ನಿಮಗೆ ಧೈರ್ಯವಿದ್ದರೆ ಟಿಎಂಸಿಯನ್ನು ತಡೆಯಿರಿ ನೋಡೋಣ ಎಂದು ನಾನು ಬಹಿರಂಗವಾಗಿಯೇ ಗೃಹ ಸಚಿವ ಅಮಿತ್ ಷಾ (Amit Shah) ಅವರಿಗೆ ಸವಾಲು ಹಾಕುತ್ತಿದ್ದೇನೆ. ನೀವು ಯಾವ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದೀರೋ ಆ ಎಲ್ಲ ರಾಜ್ಯಗಳನ್ನೂ ನಿಮ್ಮಿಂದ ನಾವು ಕಿತ್ತುಕೊಳ್ಳುತ್ತೇವೆ. ಆ ರಾಜ್ಯಗಳಲ್ಲಿ ಟಿಎಂಸಿ (TMC) ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಸವಾಲು ಹಾಕಿದ್ದಾರೆ.

ಇ.ಡಿ ಅಸ್ತ್ರ ಬಳಸಿ ನಮ್ಮನ್ನು ಹೆದರಿಸಬಹುದು ಎಂದು ಬಿಜೆಪಿ ತಿಳಿದುಕೊಂಡಿದ್ದರೆ ಅದು ಅವರ ತಪ್ಪು ಕಲ್ಪನೆ. ನಮ್ಮ ದೇಹದಲ್ಲಿ ರಕ್ತದ ಕೊನೆ ಹನಿ ಇರುವವರೆಗೂ ನಾವು ಬಿಜೆಪಿ ವಿರುದ್ಧ ಹೋರಾಡುತ್ತೇವೆ. ಇದಕ್ಕೆಲ್ಲ ಹೆದರಿ ಸುಮ್ಮನಾಗುವ ಪ್ರಶ್ನೆಯೇ ಇಲ್ಲ. ಯಾವ ರಾಜ್ಯಗಳಲ್ಲಿ ಬಿಜೆಪಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆಯೋ ಅಲ್ಲೆಲ್ಲ ಟಿಎಂಸಿ ಚುನಾವಣಾ ಕಣಕ್ಕೆ ಇಳಿಯಲಿದೆ. ಇದು ನೇತಾಜಿ ಸುಭಾಷ್​ಚಂದ್ರ ಬೋಸ್, ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸರು ಬದುಕಿ ಬಾಳಿದ ದೇಶ. ನಾವು ಯಾರಿಗೂ ಹೆದರಿ ಸುಮ್ಮನೆ ಕೂರುವವರಲ್ಲ ಎಂದು ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.

ಈ ದೇಶದಿಂದ ಬಿಜೆಪಿ ಪಕ್ಷವನ್ನು ಕಿತ್ತೊಗೆಯುವವರೆಗೂ ನಾವು ಹೋರಾಟ ಮಾಡುತ್ತಲೇ ಇರುತ್ತೇವೆ. ಇ.ಡಿ ಸಮನ್ಸ್​ಗೆಲ್ಲ ನಾವು ಹೆದರುವುದಿಲ್ಲ. ಇಂತಹ ಯಾವುದೇ ಅಸ್ತ್ರ ಪ್ರಯೋಗ ಮಾಡಿದರೂ ನಾವು ಹೋರಾಡಲು ಸಿದ್ಧರಿದ್ದೇವೆ. ಅವರು ಈ ರೀತಿ ನಮ್ಮ ವಿರುದ್ಧ ಅಸ್ತ್ರಗಳನ್ನು ಪ್ರಯೋಗ ಮಾಡಿದಾಗ ನಮ್ಮ ಹೋರಾಟ ಇನ್ನೂ ಹೆಚ್ಚಾಗುತ್ತದೆ. ಬಿಜೆಪಿಗೆ ತಾಕತ್ತಿದ್ದರೆ ಟಿಎಂಸಿಯನ್ನು ತಡೆಯಲಿ ಎಂದು ಅಭಿಷೇಕ್ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿದ್ದಾರೆ.

ಅಭಿಷೇಕ್ ಬ್ಯಾನರ್ಜಿ ದಂಪತಿ ಕಲ್ಲಿದ್ದಲು ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ಸಾಕ್ಷಿಗಳು ಸಿಕ್ಕಿರುವುದರಿಂದ ಅಭಿಷೇಕ್ ಬ್ಯಾನರ್ಜಿಗೆ ಸೆ. 6ರಂದು ಹಾಗೂ ಅವರ ಪತ್ನಿ ರುಜಿರಾಗೆ ಸೆ. 1ರಂದು ವಿಚಾರಣೆಗೆ ಹಾಜರಾಗುವಂತೆ ಇ.ಡಿ ಸಮನ್ಸ್ ನೀಡಿದೆ. ಕಳೆದ ವರ್ಷ ಈಸ್ಟರ್ನ್ ಕೋಲ್​ಫೀಲ್ಡ್ ಕಂಪನಿಗೆ ಸೇರಿದ ಕುನುಸ್ಟೋರಿಯಾ ಮತ್ತು ಕಜೋರಿಯಾ ಕಲ್ಲಿದ್ದಲು ಗಣಿಗಳಿಂದ ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೇಸ್ ದಾಖಲಿಸಿತ್ತು. ಈ ಕಲ್ಲಿದ್ದಲು ಕಳ್ಳಸಾಗಾಣಿಕೆಯಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ನಷ್ಟವಾಗಿತ್ತು. ಈ ಕಲ್ಲಿದ್ದಲು ಕಳ್ಳಸಾಗಾಣಿಕೆ ಮಾಡುತ್ತಿದ್ದರಿಂದ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಕುಟುಂಬ ಕಿಕ್​ಬ್ಯಾಕ್ ಪಡೆದಿದೆ ಎಂಬ ಆರೋಪ ಕೇಳಿಬಂದಿತ್ತು.

ಮಮತಾ ಬ್ಯಾನರ್ಜಿ ಅವರ ಉತ್ತರಾಧಿಕಾರಿ ಎಂದೇ ಕರೆಸಿಕೊಳ್ಳುತ್ತಿರುವ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ದಂಪತಿಯ ಜೊತೆಗೆ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳಾದ ಶ್ಯಾಮ್ ಸಿಂಗ್ ಮತ್ತು ಗ್ಯಾನ್​ವಂತ್ ಸಿಂಗ್ ಅವರಿಗೂ ಇಡಿ ಸಮನ್ಸ್​ ಜಾರಿಗೊಳಿಸಿದ್ದು, ಸೆ. 8 ಮತ್ತು 9ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಸಿಎಂ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ.

ಈ ಹಿಂದೆ ಪಶ್ಚಿಮ ಬಂಗಾಳದಲ್ಲಿರುವ ಕೆಲವು ಪ್ರಮುಖ ಕಲ್ಲಿದ್ದಲು ಗಣಿಗಳನ್ನು ರಾಜಕಾರಣಿಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ವಿಶೇಷ ಕೋರ್ಟ್‌ಗೆ ವರದಿ ನೀಡಿತ್ತು. ಅಕ್ರಮ ಹಣ ವರ್ಗಾವಣೆ ಕಾಯ್ದೆಗೆ ಸಂಬಂಧಿಸಿದಂತೆ 2020ರ ನವೆಂಬರ್​ನಲ್ಲಿ ಸಿಬಿಐ ದಾಖಲಿಸಿದ್ದ ಎಫ್​ಐಆರ್​ ಆಧರಿಸಿ ಜಾರಿ ನಿರ್ದೇಶನಾಲಯ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿತ್ತು. ಇಂದು ಇ.ಡಿ ಸಮನ್ಸ್​ ಜಾರಿಗೊಳಿಸಿರುವ ಬಗ್ಗೆ ಸಿಎಂ ಮಮತಾ ಬ್ಯಾನರ್ಜಿ ಕೂಡ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ತನಿಖಾ ಏಜೆನ್ಸಿಗಳನ್ನು ಬಿಜೆಪಿ ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದು ದೀದಿ ಕಿಡಿ ಕಾರಿದ್ದಾರೆ.

ಇದನ್ನೂ ಓದಿ: Coal Scam: ಅಕ್ರಮ ಹಣ ವರ್ಗಾವಣೆ ಪ್ರಕರಣ; ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ದಂಪತಿಗೆ ಇ.ಡಿಯಿಂದ ಸಮನ್ಸ್ ಜಾರಿ

ತ್ರಿಪುರದಲ್ಲಿ ಅಭಿಷೇಕ್ ಬ್ಯಾನರ್ಜಿ ಮೇಲಿನ ಹಲ್ಲೆ ಹಿಂದೆ ಅಮಿತ್ ಶಾ ಕೈವಾಡ; ಸಿಎಂ ಮಮತಾ ಬ್ಯಾನರ್ಜಿ ಆರೋಪ

(Wont be Scared Abhishek Banerjee Challenges Amit Shah to Stop TMC If he has Courage over ED Summons in Coal Scam)

Published On - 5:05 pm, Sat, 28 August 21