ನವದೆಹಲಿ: ಪಂಜಾಬ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇತ್ತೀಚೆಗೆ ಭದ್ರತಾ ಲೋಪ ಎದುರಾಗಿತ್ತು. ಈ ಕುರಿತು ಚರ್ಚೆ ಹಾಗೂ ವಿಚಾರಣೆಗಳು ನಡೆಯುತ್ತಿರುವ ನಡುವೆಯೇ ಖಲಿಸ್ತಾನಿ ಸಂಘಟನೆಯೊಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ನೇರ ಬೆದರಿಕೆ ಹಾಕಿದೆ. ಯಾವುದೇ ಕಾರಣಕ್ಕೂ ಗಣರಾಜ್ಯೋತ್ಸವದಂದು ತ್ರಿವರ್ಣ ಧ್ವಜವನ್ನು ಹಾರಿಸಲು ಬಿಡುವುದಿಲ್ಲ. ಜನವರಿ 26ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಅಡ್ಡಿ ಪಡಿಸುವ ಹಾಗೂ ತ್ರಿವರ್ಣ ಧ್ವಜ ಹಾರಿಸದಂತೆ ತಡೆಯುವವರಿಗೆ ಖಲಿಸ್ತಾನಿ ಗುಂಪು 1 ಮಿಲಿಯನ್ (10 ಲಕ್ಷ ರೂ.) ಬಹುಮಾನವನ್ನು ಘೋಷಿಸಿದೆ.
ಕೆಲವು ದಿನಗಳ ಹಿಂದಷ್ಟೇ ಪಂಜಾಬ್ನಲ್ಲಿ ಪ್ರತಿಭಟನಾಕಾರರು ರಸ್ತೆಗೆ ಅಡ್ಡ ಹಾಕಿದ್ದರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ 20 ನಿಮಿಷಗಳ ಕಾಲ ಫ್ಲೈಓವರ್ ಮೇಲೆ ಸಿಲುಕಿದ್ದರು. ಇದರಿಂದ ಮೋದಿಯವರು ಜನವರಿ 5ರಂದು ಪಂಜಾಬ್ ಭೇಟಿಯನ್ನು ಮೊಟಕುಗೊಳಿಸಿ, ವಿಮಾನದ ಮೂಲಕ ದೆಹಲಿಗೆ ವಾಪಾಸ್ ಹೋಗಿದ್ದರು.
ಭದ್ರತಾ ವೈಫಲ್ಯದ ನಂತರ ನರೇಂದ್ರ ಮೋದಿ ಅವರ ಬೆಂಗಾವಲು ಪಡೆ ಹುಸೇನಿವಾಲಾದಲ್ಲಿ ಹುತಾತ್ಮರ ಸ್ಮಾರಕದಲ್ಲಿ ಕಾರ್ಯಕ್ರಮಕ್ಕೆ ಹಾಜರಾಗದೆ ಹಿಂತಿರುಗಿದರು. ಫಿರೋಜ್ಪುರದ ರ್ಯಾಲಿಯಲ್ಲಿ ಪ್ರಧಾನಿಗೂ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಈ ಇಡೀ ಘಟನೆಯ ತನಿಖೆಗೆ ಈಗಾಗಲೇ ಸುಪ್ರೀಂ ಕೋರ್ಟ್ ಸಮಿತಿಯನ್ನು ರಚಿಸಿದೆ.
ಖಲಿಸ್ತಾನಿ ಭಯೋತ್ಪಾದಕ ಗುಂಪು ‘ಸಿಖ್ಸ್ ಫಾರ್ ಜಸ್ಟೀಸ್’ ಮತ್ತೊಮ್ಮೆ ಭಾರತದಲ್ಲಿ ಗಣರಾಜ್ಯೋತ್ಸವದ ಆಚರಣೆಯನ್ನು ಗುರಿಯಾಗಿಸಿಕೊಂಡಿದೆ. ಅದರ ಬೆಂಬಲಿಗರು ಪ್ರಧಾನಿ ನರೇಂದ್ರ ಮೋದಿಯನ್ನು ನಿರ್ಬಂಧಿಸಬೇಕು ಮತ್ತು ಜನವರಿ 26ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸದಂತೆ ತಡೆಯೊಡ್ಡಬೇಕು ಎಂದು ತೀವ್ರಗಾಮಿ ಖಲಿಸ್ತಾನ್ ಪರ ಸಂಘಟನೆಯು ಜನರಿಗೆ ಆಫರ್ ನೀಡಿದೆ. ಖಲಿಸ್ತಾನಿ ಗುಂಪು ನರೇಂದ್ರ ಮೋದಿಯವರಿಗೆ ತಡೆಯೊಡ್ಡುವವರಿಗೆ 10 ಲಕ್ಷ ರೂ. ಬಹುಮಾನ ಘೋಷಿಸಿದೆ.
ಇದನ್ನೂ ಓದಿ: National Youth Day 2022: ಭಾರತದ ಯುವಜನತೆಗೆ ಟೆಕ್ನಾಲಜಿಯೂ ಗೊತ್ತು, ಪ್ರಜಾಪ್ರಭುತ್ವದ ಮೌಲ್ಯದ ಅರಿವೂ ಇದೆ: ಪ್ರಧಾನಿ ಮೋದಿ
Published On - 5:01 pm, Wed, 12 January 22