Shiva Statue: ರಾಜಸ್ಥಾನದ ಉದಯಪುರದ ಬಳಿ ನಾಳೆ ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆ ಲೋಕಾರ್ಪಣೆ
ಬೆಟ್ಟದ ತುದಿಯಲ್ಲಿ ಸ್ಥಾಪಿಸಲಾದ ಈ ಪ್ರತಿಮೆಯನ್ನು ಧ್ಯಾನದ ಭಂಗಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಪ್ರತಿಮೆ 20 ಕಿಲೋಮೀಟರ್ ದೂರದಿಂದಲೂ ಗೋಚರಿಸುತ್ತದೆ.
ಜೈಪುರ: ರಾಜಸ್ಥಾನದ ರಾಜ್‌ಸಮಂದ್ ಜಿಲ್ಲೆಯ ನಾಥದ್ವಾರ ಪಟ್ಟಣದಲ್ಲಿ ಸ್ಥಾಪಿಸಲಾಗಿರುವ 369 ಅಡಿ ಎತ್ತರದ ಶಿವನ ಪ್ರತಿಮೆಯನ್ನು (Shiva Statue) ನಾಳೆ (ಶನಿವಾರ) ಲೋಕಾರ್ಪಣೆ ಮಾಡಲಾಗುವುದು. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot), ವಿಧಾನಸಭಾ ಸ್ಪೀಕರ್ ಸಿಪಿ ಜೋಶಿ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಈ ಪ್ರತಿಮೆ ಲೋಕಾರ್ಪಣೆಯಾಗಲಿದ್ದು, ಇದು ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಉದಯಪುರದಿಂದ 45 ಕಿಮೀ ದೂರದಲ್ಲಿ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಈ ಪ್ರತಿಮೆಯ 10 ವಿಶೇಷತೆಗಳು ಹೀಗಿವೆ.
- ತತ್ ಪದಂ ಸಂಸ್ಥಾನದಿಂದ ಈ ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆಯನ್ನು ನಿರ್ಮಿಸಲಾಗಿದೆ.
- ಈ ಸ್ಥಳದಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿ ನಡೆಯಲಿದೆ.
- ಈ ಶಿವನ ಪ್ರತಿಮೆಯ ಉದ್ಘಾಟನೆಯ ನಂತರ ನಾಳೆಯಿಂದ (ಅಕ್ಟೋಬರ್ 29) ನವೆಂಬರ್ 6ರವರೆಗೆ 9 ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮವು ಮುಂದುವರಿಯುತ್ತದೆ.
- 9 ದಿನಗಳ ಕಾರ್ಯಕ್ರಮದಲ್ಲಿ ಧರ್ಮ ಪ್ರಚಾರಕ ಮೊರಾರಿ ಬಾಪು ಕೂಡ ರಾಮ್ ಕಥಾವನ್ನು ಪಠಿಸಲಿದ್ದಾರೆ.
- “ಶ್ರೀನಾಥ ಅವರು ನಗರದಲ್ಲಿ ಸ್ಥಾಪಿಸಲಾದ ಈ ಅದ್ಭುತ ಶಿವನ ಪ್ರತಿಮೆಯು ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೊಸ ಆಯಾಮವನ್ನು ನೀಡುತ್ತದೆ” ಎಂದು ಸಂಸ್ಥಾನದ ಟ್ರಸ್ಟಿ ಮತ್ತು ಮೀರಜ್ ಗ್ರೂಪ್ ಅಧ್ಯಕ್ಷ ಮದನ್ ಪಲಿವಾಲ್ ಹೇಳಿದ್ದಾರೆ.
- ಬೆಟ್ಟದ ತುದಿಯಲ್ಲಿ ಸ್ಥಾಪಿಸಲಾದ ಈ ಪ್ರತಿಮೆಯನ್ನು ಧ್ಯಾನದ ಭಂಗಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಪ್ರತಿಮೆ 20 ಕಿಲೋಮೀಟರ್ ದೂರದಿಂದಲೂ ಗೋಚರಿಸುತ್ತದೆ.
- ವಿಶೇಷ ದೀಪಗಳಿಂದ ಪ್ರಕಾಶಿಸಲ್ಪಟ್ಟಿರುವುದರಿಂದ ರಾತ್ರಿಯಲ್ಲೂ ಈ ಪ್ರತಿಮೆಯು ಸ್ಪಷ್ಟವಾಗಿ ಗೋಚರಿಸುತ್ತದೆ.
- ಇದು ವಿಶ್ವದ ಅತಿ ಎತ್ತರದ ಶಿವನ ವಿಗ್ರಹವಾಗಿದ್ದು, ಇದರಲ್ಲಿ ಲಿಫ್ಟ್‌ಗಳು, ಮೆಟ್ಟಿಲುಗಳು ಮತ್ತು ಭಕ್ತರಿಗಾಗಿ ಸಭಾಂಗಣವನ್ನು ನಿರ್ಮಿಸಲಾಗಿದೆ. ಒಳಗೆ ಹೋಗಲು 4 ಲಿಫ್ಟ್‌ಗಳು ಮತ್ತು 3 ಕಡೆಯಿಂದ ಮೆಟ್ಟಿಲುಗಳಿವೆ.
- ಇದರ ನಿರ್ಮಾಣಕ್ಕೆ ಮೂರು ಸಾವಿರ ಟನ್ ಉಕ್ಕು ಮತ್ತು ಕಬ್ಬಿಣ, 2.5 ಲಕ್ಷ ಕ್ಯೂಬಿಕ್ ಟನ್ ಕಾಂಕ್ರೀಟ್ ಮತ್ತು ಮರಳನ್ನು ಬಳಸಲಾಗಿದ್ದು, ಇದು ಪೂರ್ಣಗೊಳ್ಳಲು 10 ವರ್ಷಗಳನ್ನು ತೆಗೆದುಕೊಂಡಿತು. 2012ರ ಆಗಸ್ಟ್‌ನಲ್ಲಿ ಆಗ ಸಿಎಂ ಆಗಿದ್ದ ಅಶೋಕ್ ಗೆಹ್ಲೋಟ್ ಮತ್ತು ಮೊರಾರಿ ಬಾಪು ಅವರ ಸಮ್ಮುಖದಲ್ಲಿ ಈ ಯೋಜನೆಗೆ ಅಡಿಪಾಯ ಹಾಕಲಾಗಿತ್ತು.
- ಈ ಪ್ರತಿಮೆಯ ಸುತ್ತಲಿನ ಸ್ಥಳವು ಬಂಗೀ ಜಂಪಿಂಗ್, ಜಿಪ್ ಲೈನ್ ಮತ್ತು ಗೋ-ಕಾರ್ಟ್‌ನಂತಹ ಚಟುವಟಿಕೆಗಳನ್ನು ಹೊಂದಿದೆ. ಇದು ಪ್ರವಾಸಿಗರಿಗೆ ಫುಡ್ ಕೋರ್ಟ್, ಅಡ್ವೆಂಚರ್ ಪಾರ್ಕ್ ಮತ್ತು ಜಂಗಲ್ ಕೆಫೆಯ ಸೌಲಭ್ಯವನ್ನು ಒದಗಿಸುತ್ತದೆ.
Published On - 5:48 pm, Fri, 28 October 22