ಚಂದ್ರಯಾನ-3 ಕಾರ್ಯಾಚರಣೆ ಪೂರ್ಣಗೊಂಡ ಬಳಿಕ, ಪ್ರಗ್ಯಾನ್ ರೋವರ್, ವಿಕ್ರಮ್ ಲ್ಯಾಂಡರ್ ಏನಾಗಲಿವೆ?

ಚಂದ್ರಯಾನ-3 ಅನ್ನು ಮರಳಿ ಭೂಮಿಗೆ ಕರೆತರುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿಲ್ಲ. ಅದರ ಲ್ಯಾಂಡರ್ ಮತ್ತು ರೋವರ್ ಎರಡೂ ಶಾಶ್ವತವಾಗಿ ಚಂದ್ರನ ಮೇಲ್ಮೈಯಲ್ಲೇ ಉಳಿಯಲಿವೆ. ಒಂದು ವೇಳೆ ಲ್ಯಾಂಡರ್ ಮತ್ತು ರೋವರ್ ಎರಡೂ 14 ದಿನಗಳ ಬಳಿಕ ಮರಳಿ ಕಾರ್ಯಾಚರಣೆ ನಡೆಸಿದರೆ, ಇಸ್ರೋಗೆ ಚಂದ್ರನ ಮೇಲ್ಮೈಯಿಂದ ಇನ್ನಷ್ಟು ಮಾಹಿತಿಗಳು ಲಭ್ಯವಾಗಲಿವೆ.

ಚಂದ್ರಯಾನ-3 ಕಾರ್ಯಾಚರಣೆ ಪೂರ್ಣಗೊಂಡ ಬಳಿಕ, ಪ್ರಗ್ಯಾನ್ ರೋವರ್, ವಿಕ್ರಮ್ ಲ್ಯಾಂಡರ್ ಏನಾಗಲಿವೆ?
ಚಂದ್ರಯಾನ-3 (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Ganapathi Sharma

Updated on: Sep 02, 2023 | 6:04 PM

ಚಂದ್ರಯಾನ-3 (Chandrayaan-3) ಯೋಜನೆಯ ವಿಕ್ರಮ್ ಲ್ಯಾಂಡರ್ ಆಗಸ್ಟ್ 23ರಂದು ಚಂದ್ರನ ಮೇಲ್ಮೈಯಲ್ಲಿ ಇಳಿದ ಬಳಿಕ, ಅದರ ಪ್ರಗ್ಯಾನ್ ರೋವರ್ (Pragyan Rover) ರಾಂಪ್ ಮೂಲಕ ಕೆಳಗಿಳಿದು, ಚಂದ್ರನ ದಕ್ಷಿಣ ಧ್ರುವದ ಅನ್ವೇಷಣೆಯನ್ನು ತನ್ನ ಪೂರ್ಣ ಸಾಮರ್ಥ್ಯದೊಡನೆ ಆರಂಭಿಸಿತು. ಚಂದ್ರಯಾನ-3 ಈಗ ಬಹುತೇಕ ತನ್ನ ಹತ್ತು ದಿನಗಳ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದೆ. ಪ್ರಗ್ಯಾನ್ ಮತ್ತು ವಿಕ್ರಮ್ ಎರಡೂ ಹದಿನಾಲ್ಕು ಭೂ ದಿನಗಳ ಕಾರ್ಯಾಚರಣಾ ಆಯುಷ್ಯ ಹೊಂದಿವೆ. ಆದ್ದರಿಂದ, ಈಗಾಗಲೇ ಅವೆರಡೂ ತಮ್ಮ ಜೀವನದ ಅರ್ಧಕ್ಕೂ ಹೆಚ್ಚಿನ ಭಾಗವನ್ನು ಪೂರ್ಣಗೊಳಿಸಿವೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಡೀಪ್ ಸ್ಪೇಸ್ ಆ್ಯಂಟೆನಾ ಜಾಲದ ನೆರವಿನಿಂದ, ಪ್ರಗ್ಯಾನ್ ಮತ್ತು ವಿಕ್ರಮ್ ಭೂಮಿಗೆ ನಿರಂತರವಾಗಿ ಮಾಹಿತಿಗಳನ್ನು ಕಳುಹಿಸಿ ಕೊಡುತ್ತಿವೆ.

ವಿಕ್ರಮ್ ಮತ್ತು ಪ್ರಗ್ಯಾನ್ ಎರಡರ ಕಾರ್ಯಾಚರಣಾ ಅವಧಿ ಪೂರ್ಣಗೊಂಡ ಬಳಿಕ, ಅವುಗಳನ್ನು ಚಂದ್ರನ ಮೇಲ್ಮೈಯಲ್ಲಿ ಹಾಗೇ ಬಿಡಲಾಗುತ್ತದೆ. ಅವೆರಡನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಲ್ಯಾಂಡರ್ ಮತ್ತು ರೋವರ್ ಎರಡೂ ಕಾರ್ಯಾಚರಣಾ ಸಾಮರ್ಥ್ಯಕ್ಕಾಗಿ ಸೌರಶಕ್ತಿಯ ಮೇಲೆ ಅವಲಂಬಿತವಾಗಿವೆ. ಆದರೆ, ಚಂದ್ರನ ದಿನದ ಬಳಿಕ, ಹದಿನಾಲ್ಕು ಭೂ ದಿನಗಳಿಗೆ ಸಮಾನವಾದ ಚಂದ್ರನ ಒಂದು ರಾತ್ರಿಯನ್ನು ಎದುರಿಸುವ ಲ್ಯಾಂಡರ್ ಸಾಮರ್ಥ್ಯದ ಕುರಿತು ಸಾಕಷ್ಟು ಅನಿಶ್ಚಿತತೆಗಳಿವೆ.

ಮೊದಲ ಹದಿನಾಲ್ಕು ಭೂ ದಿನಗಳ ಹಗಲಿನ ಬಳಿಕ, ಚಂದ್ರನಲ್ಲಿ ಹದಿನಾಲ್ಕು ಭೂ ದಿನಗಳಿಗೆ ಸಮಾನವಾದ ರಾತ್ರಿ ಎದುರಾಗುತ್ತದೆ. ಈ ದೀರ್ಘ ರಾತ್ರಿಯ ಅವಧಿಯಲ್ಲಿ ವಿಕ್ರಮ್ ಮತ್ತು ಪ್ರಗ್ಯಾನ್ ಎರಡೂ ಸುಪ್ತಾವಸ್ಥೆಯಲ್ಲಿ ಇರಲಿವೆ. ಯಾಕೆಂದರೆ, ಅವುಗಳು ಸೂರ್ಯನ ಬೆಳಕನ್ನು ಆಧರಿಸಿ, ಹಗಲಿನ ವೇಳೆಯಲ್ಲಿ ಮಾತ್ರವೇ ಕಾರ್ಯಾಚರಿಸುತ್ತವೆ. ಈಗಾಗಲೇ ಇರುವ ಸವಾಲುಗಳೊಡನೆ, ಚಂದ್ರನ ರಾತ್ರಿ ಇನ್ನಷ್ಟು ತೊಂದರೆದಾಯಕವಾಗಿದೆ. ರಾತ್ರಿಯ ವೇಳೆ ಚಂದ್ರನ ಮೇಲ್ಮೈ ತಾಪಮಾನ -208 ಡಿಗ್ರಿ ಫ್ಯಾರನ್‌ಹೀಟ್ (-133 ಡಿಗ್ರಿ ಸೆಲ್ಸಿಯಸ್) ತಲುಪುತ್ತದೆ. ಈ ಮಿತಿಮೀರಿದ ತಣ್ಣನೆಯ ವಾತಾವರಣ ರೋವರ್ ಮತ್ತು ಲ್ಯಾಂಡರ್ ಎರಡರ ಪರಿಣಾಮಕಾರಿ ಕಾರ್ಯಾಚರಣೆಗೆ ಮತ್ತು ಅವೆರಡರಲ್ಲಿರುವ ವೈಜ್ಞಾನಿಕ ಉಪಕರಣಗಳಿಗೆ ಪೂರಕವಾಗಿರುವುದಿಲ್ಲ.

ಚಂದ್ರಯಾನ-3 ಅನ್ನು ಮರಳಿ ಭೂಮಿಗೆ ಕರೆತರುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿಲ್ಲ. ಅದರ ಲ್ಯಾಂಡರ್ ಮತ್ತು ರೋವರ್ ಎರಡೂ ಶಾಶ್ವತವಾಗಿ ಚಂದ್ರನ ಮೇಲ್ಮೈಯಲ್ಲೇ ಉಳಿಯಲಿವೆ. ಒಂದು ವೇಳೆ ಲ್ಯಾಂಡರ್ ಮತ್ತು ರೋವರ್ ಎರಡೂ 14 ದಿನಗಳ ಬಳಿಕ ಮರಳಿ ಕಾರ್ಯಾಚರಣೆ ನಡೆಸಿದರೆ, ಇಸ್ರೋಗೆ ಚಂದ್ರನ ಮೇಲ್ಮೈಯಿಂದ ಇನ್ನಷ್ಟು ಮಾಹಿತಿಗಳು ಲಭ್ಯವಾಗಲಿವೆ.

ಬಾಹ್ಯಾಕಾಶ ತ್ಯಾಜ್ಯ ಎನ್ನಲಾಗದು!

ಅವುಗಳು ಒಂದು ವೇಳೆ ಕಾರ್ಯಾಚರಣೆ ಸ್ಥಗಿತಗೊಳಿಸಿದ ಬಳಿಕ, ಅವುಗಳನ್ನು ಬಾಹ್ಯಾಕಾಶ ತ್ಯಾಜ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ. ಯಾಕೆಂದರೆ, ಅವೆರಡೂ ಕಾರ್ಯಾಚರಣೆ ಮುಗಿದ ಬಳಿಕ ಚಂದ್ರನ ಮೇಲ್ಮೈಯಲ್ಲೇ ಇರಲಿವೆ. ಬಾಹ್ಯಾಕಾಶ ಅವಶೇಷಗಳು ಎನ್ನುವ ಪದವನ್ನು ಭೂಮಿಯ ಕಕ್ಷೆಯಲ್ಲಿ ಉಳಿದಿರುವ, ಕಾರ್ಯಾಚರಣೆ ನಡೆಸುತ್ತಿರುವ ಬಾಹ್ಯಾಕಾಶ ನೌಕೆಗಳಿಗೆ ಅಪಾಯ ಒಡ್ಡಬಲ್ಲ ವಸ್ತುಗಳಿಗೆ ಮಾತ್ರವೇ ಬಳಸಬಹುದಾಗಿದೆ. ಪರಿತ್ಯಜಿಸಲ್ಪಟ್ಟು ಕಕ್ಷೆಯಲ್ಲಿ ಸುತ್ತುವ ಉಪಗ್ರಹಗಳು, ಅವುಗಳ ವಿಘಟನೆಯಿಂದ ಉಂಟಾಗುವ ತುಣುಕುಗಳು, ಹಾಗೂ ವಿವಿಧ ಬಾಹ್ಯಾಕಾಶ ಚಟುವಟಿಕೆಗಳಿಂದ ಉಂಟಾಗುವ ಅವಶೇಷಗಳನ್ನು ಬಾಹ್ಯಾಕಾಶ ತ್ಯಾಜ್ಯಗಳೆಂದು ಪರಿಗಣಿಸಲಾಗುತ್ತದೆ.

ಅಪೋಲೋ ಲೂನಾರ್ ಮಾಡ್ಯುಲ್ (ಎಲ್ಎಂ)

ಚಂದ್ರನ ಮೇಲೆ ಅಪೋಲೋ ಗಗನಯಾತ್ರಿಗಳನ್ನು ಇಳಿಸಿದ ಲೂನಾರ್ ಮಾಡ್ಯುಲ್ ಎರಡು ಭಾಗಗಳನ್ನು ಹೊಂದಿತ್ತು. ಅವೆಂದರೆ, ಗಗನಯಾತ್ರಿಗಳನ್ನು ಚಂದ್ರನ ಮೇಲ್ಮೈಗೆ ಇಳಿಸುವ ಡಿಸೆಂಟ್ ಹಂತ ಹಾಗೂ ಅವರನ್ನು ಮರಳಿ ಕಕ್ಷೆಯಲ್ಲಿರುವ ಕಮಾಂಡ್ ಮಾಡ್ಯೂಲ್‌ಗೆ ಕೊಂಡೊಯ್ಯುವ ಅಸೆಂಟ್ ಹಂತ. ಅಪೋಲೋ ಎಲ್ಎಂ ಯಾವುದೇ ರೋವರ್ ಹೊಂದಿರಲಿಲ್ಲ. ಅದರ ಬದಲಿಗೆ, ಅಪೋಲೋ ಯೋಜನೆಯ ಸಂದರ್ಭದಲ್ಲಿ, ಗಗನಯಾತ್ರಿಗಳು ಚಂದ್ರನ ಮೇಲ್ಮೈಯನ್ನು ಅನ್ವೇಷಿಸಲು ಲೂನಾರ್ ರೋವಿಂಗ್ ವೆಹಿಕಲ್ (ಎಲ್ಆರ್‌ವಿ) ಅಥವಾ ಸಾಮಾನ್ಯವಾಗಿ ‘ಮೂನ್ ಬಗ್ಗಿ’ ಎಂದು ಕರೆಯಲಾಗುವ ವಾಹನವನ್ನು ಬಳಸಿದ್ದರು. ಈ ಎಲ್ಆರ್‌ವಿ ವಿಶೇಷವಾಗಿ ನಿರ್ಮಿಸಿದ ವಿದ್ಯುತ್ ಚಾಲಿತ ವಾಹನವಾಗಿದ್ದು, ಇದರ ಮೂಲಕ ಗಗನಯಾತ್ರಿಗಳು ಚಂದ್ರನ ಮೇಲ್ಮೈಯಲ್ಲಿ ದೂರ ದೂರಕ್ಕೆ ಚಲಿಸಲು ಅನುಕೂಲ ಕಲ್ಪಿಸುತ್ತಿತ್ತು. ಆ ಮೂಲಕ ಚಂದ್ರನ ಮೇಲ್ಮೈಯಲ್ಲಿ ಪ್ರಯೋಗಗಳನ್ನು ನಡೆಸಿ, ಸುಲಭವಾಗಿ ಚಂದ್ರನ ಮೇಲ್ಮೈ ಮಾದರಿಗಳನ್ನು ಸಂಗ್ರಹಿಸಲಾಗುತ್ತಿತ್ತು. ಈ ವಾಹನವನ್ನು ಅಪೋಲೋ 15, 16 ಮತ್ತು 17 ಯೋಜನೆಗಳಲ್ಲಿ ಚಂದ್ರನೆಡೆಗೆ ಕೊಂಡೊಯ್ಯಲಾಗಿದ್ದು, ಇದು ಆ ಯೋಜನೆಗಳಲ್ಲಿ ಮಹತ್ವದ ಪಾತ್ರ ನಿರ್ವಹಿಸಿತ್ತು.

ಇದನ್ನೂ ಓದಿ: ಮಾನವ ಸುರಿಹೊಂಡವಾಯ್ತೇ ಚಂದ್ರನಂಗಳ? ಅನ್ವೇಷಣೆ ಜತೆಗಿದೆ ಸಾಲು ಸಾಲು ಸವಾಲು

ಅಪೋಲೋ 10ರ ಅಸೆಂಟ್ ಹಂತದ ಇಂಜಿನ್ ಅನ್ನು ಇಂಧನ ಖಾಲಿಯಾಗುವ ತನಕ ಉರಿಸಿ, ಅದನ್ನು ಚಂದ್ರನ ಮೇಲ್ಮೈಯಿಂದ ದೂರದ ಹೀಲಿಯೋಸೆಂಟ್ರಿಕ್ ಕಕ್ಷೆಗೆ ಸೇರಿಸಲಾಗುತ್ತಿತ್ತು. ಆದರೆ ಅಪೋಲೋ 11ರ ಅಸೆಂಟ್ ಹಂತವನ್ನು ಚಂದ್ರನ ಕಕ್ಷೆಯಲ್ಲೇ ಬಿಡಲಾಗಿದ್ದು, ಅದು ಕ್ರಮೇಣ ಪತನಗೊಂಡಿತು. ಅಪೋಲೋ 13ನ್ನು ಹೊರತುಪಡಿಸಿ, ಮತ್ತೆಲ್ಲ ಅಸೆಂಟ್ ಹಂತಗಳನ್ನು ಚಂದ್ರನ ಮೇಲ್ಮೈ ಕಂಪನಗಳ ಮಾಹಿತಿಗಳನ್ನು ಪಡೆಯಲು ಅನುಕೂಲವಾಗುವಂತೆ ರೂಪಿಸಲಾಗಿತ್ತು.

ರಷ್ಯಾದ ಲೂನೋಖೋದ್ 1 ಯೋಜನೆ

1970ರಲ್ಲಿ ಉಡಾವಣೆಗೊಳಿಸಿದ ಲೂನೋಖೋದ್ 1 ರಷ್ಯಾದ ಮೊದಲ ಚಂದ್ರನ ಮೇಲಿನ ರೋವರ್ ಆಗಿತ್ತು. ಅದು ದೊಡ್ಡದಾದ, ರೋವರ್ ಆಗಿದ್ದು, ಚಂದ್ರನ ಮೇಲ್ಮೈಯನ್ನು ಹತ್ತು ತಿಂಗಳುಗಳ ಕಾಲ ಅನ್ವೇಷಿಸಿತ್ತು. ಲೂನೋಖೋದ್ 1 ರೋವರ್ 2.3 ಮೀಟರ್ ಉದ್ದವಿದ್ದು, 1.5 ಮೀಟರ್ ಎತ್ತರವಿತ್ತು. ಅದು ಎಂಟು ಸ್ವತಂತ್ರವಾಗಿ ಕಾರ್ಯಾಚರಿಸಬಲ್ಲ ಚಕ್ರಗಳನ್ನು ಹೊಂದಿದ್ದು, ಅದರೊಡನೆ ಕ್ಯಾಮರಾಗಳು, ಸ್ಪೆಕ್ಟ್ರೋಮೀಟರ್‌ಗಳು, ಹಾಗೂ ಒಂದು ಸೀಸ್ಮೋಮೀಟರ್‌ನಂತಹ ಉಪಕರಣಗಳಿದ್ದವು. ರೋವರ್‌ನಲ್ಲಿ ಒಂದು ಲೇಸರ್ ರಿಫ್ಲೆಕ್ಟರ್ ಇದ್ದು, ಅದರ ಮೂಲಕ ವಿಜ್ಞಾನಿಗಳಿಗೆ ಭೂಮಿ ಮತ್ತು ಚಂದ್ರರ ನಡುವಿನ ದೂರವನ್ನು ಅಳೆಯಲು ಸಾಧ್ಯವಾಗುತ್ತಿತ್ತು.

ಇದನ್ನೂ ಓದಿ: ಚಂದ್ರನಂಗಳದ ವಿಜಯದಿಂದ ಸೂರ್ಯ ಅನ್ವೇಷಣೆಯಡೆಗೆ: ಆದಿತ್ಯ-ಎಲ್1 ನೊಂದಿಗೆ ಮುಂದುವರಿಯಲಿದೆ ಭಾರತದ ಜೈತ್ರಯಾತ್ರೆ

ಲೂನೋಖೋದ್ 1 ರೋವರ್ ಚಂದ್ರನ ಮೇಲಿನ ಸೀ ಆಫ್ ರೇನ್ಸ್ ಎಂಬಲ್ಲಿ, ಅಂದಾಜು 38 ಡಿಗ್ರಿ ಉತ್ತರ ಅಕ್ಷಾಂಶ ಹಾಗೂ 35 ಡಿಗ್ರಿ ಪಶ್ಚಿಮ ರೇಖಾಂಶದಲ್ಲಿ ಇಳಿದಿತ್ತು. ಅದು ಚಂದ್ರನ ಮೇಲ್ಮೈಯನ್ನು ಬಹುತೇಕ ಮೂರು ತಿಂಗಳ ಕಾಲ (11 ಚಂದ್ರನ ದಿನಗಳು) ಅನ್ವೇಷಿಸುತ್ತಾ, ಒಟ್ಟು 10.54 ಕಿಲೋಮೀಟರ್ ಸಂಚರಿಸಿತ್ತು. ಈ ರೋವರ್ ಚಂದ್ರನ ಮೇಲ್ಮೈಯ 20,000ಕ್ಕೂ ಹೆಚ್ಚು ಛಾಯಾಚಿತ್ರಗಳು ಹಾಗೂ 200ಕ್ಕೂ ಹೆಚ್ಚು ಪ್ಯಾನೋರಮಾಗಳನ್ನು ಭೂಮಿಗೆ ಕಳುಹಿಸಿತ್ತು. ಅದು 500ಕ್ಕೂ ಹೆಚ್ಚು ಮಣ್ಣಿನ ಪರೀಕ್ಷೆಗಳನ್ನು ನಡೆಸಿತ್ತು. ಲೂನೋಖೋದ್ 1 ರೋವರ್ ಇಂದಿಗೂ ಚಂದ್ರನ ಮೇಲ್ಮೈಯಲ್ಲಿದ್ದರೂ, ಕಾರ್ಯಾಚರಣೆ ಸ್ಥಗಿತಗೊಳಿಸಿದೆ.

ಚೀನಾದ ಚಾಂಗ್ಇ 3 ಮತ್ತು 4 ಯೋಜನೆಗಳು

ಚಾಂಗ್ಇ 3 ಮತ್ತು ಚಾಂಗ್ಇ 4 ಚೀನಾದ ಚಂದ್ರ ಅನ್ವೇಷಣಾ ಯೋಜನೆಗಳಾಗಿವೆ. ಚಾಂಗ್ಇ 3 ಯೋಜನೆಯನ್ನು 2013ರಲ್ಲಿ ಉಡಾವಣೆಗೊಳಿಸಲಾಯಿತು. ಅದು ಡಿಸೆಂಬರ್ ತಿಂಗಳಲ್ಲಿ ಚಂದ್ರನ ಮೇಲ್ಮೈಯಲ್ಲಿ ಇಳಿಯಿತು. ಅದು ಯುತು ಎಂಬ ರೋವರನ್ನು ಒಯ್ದಿದ್ದು, ಅದು ಇಂದಿಗೂ ಚಂದ್ರನ ಮೇಲ್ಮೈಯನ್ನು ಅನ್ವೇಷಿಸುತ್ತಿದೆ. ಚಾಂಗ್ಇ 4 ಯೋಜನೆಯನ್ನು 2018ರಲ್ಲಿ ಉಡಾವಣೆಗೊಳಿಸಲಾಗಿತ್ತು. ಅದು ಜನವರಿ ತಿಂಗಳಲ್ಲಿ, ಚಂದ್ರನ ದೂರದ ಬದಿಯಲ್ಲಿ ಇಳಿದಿತ್ತು. ಅದು ಒಯ್ದಿದ್ದ ಯುತು 2 ರೋವರ್ ಇಂದಿಗೂ ಕಾರ್ಯಾಚರಿಸುತ್ತಿದೆ.

ಗಿರೀಶ್ ಲಿಂಗಣ್ಣ

(ಲೇಖಕರು; ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)