Peng Shuai: ಚೀನಿ ಟೆನಿಸ್ ತಾರೆ ಪೆಂಗ್ ಶುಯಿ ನಾಪತ್ತೆ ಬಗ್ಗೆ ದನಿ ಎತ್ತಿದ ವಿಶ್ವ ಟೆನಿಸ್ ತಾರೆಯರು: ಸಮಗ್ರ ತನಿಖೆ ನಡೆಸೀತೆ ಚೀನಾ ಸರ್ಕಾರ

TV9 Digital Desk

| Edited By: Ghanashyam D M | ಡಿ.ಎಂ.ಘನಶ್ಯಾಮ

Updated on:Nov 22, 2021 | 8:44 PM

China: ಸರಿಯಾಗಿ ನಡೆದುಕೊಳ್ಳಿ ‘ಇಲ್ಲದಿದ್ದರೆ’ ಎನ್ನುವುದು ಚೀನಾ ಸರ್ಕಾರ ಜನರನ್ನು ಅಧೀನದಲ್ಲಿ ಇರಿಸಿಕೊಳ್ಳಲು ಬಳಸುವ ಭಾಷೆ. ಇಂಥ ವ್ಯಕ್ತಿಗಳು ಮಾತ್ರವಲ್ಲ, ಅವರ ಕುಟುಂಬ ಸದಸ್ಯರೂ ಶಿಕ್ಷೆಗೆ ಒಳಪಡಬೇಕಾಗುತ್ತದೆ

Peng Shuai: ಚೀನಿ ಟೆನಿಸ್ ತಾರೆ ಪೆಂಗ್ ಶುಯಿ ನಾಪತ್ತೆ ಬಗ್ಗೆ ದನಿ ಎತ್ತಿದ ವಿಶ್ವ ಟೆನಿಸ್ ತಾರೆಯರು: ಸಮಗ್ರ ತನಿಖೆ ನಡೆಸೀತೆ ಚೀನಾ ಸರ್ಕಾರ
ಚೀನಾದಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಟೆನಿಸ್ ಆಟಗಾರ್ತಿ ಪೆಂಗ್ ಶುಯಿ.

ತನ್ನ ವಿರುದ್ಧ ದನಿ ಎತ್ತುತ್ತಿದ್ದಾರೆ ಎಂದು ಚೀನಾ ಸರ್ಕಾರಕ್ಕೆ ಭಾವನೆ ಬಂದರೆ ಸಾಕು, ಅಂಥವರು ತಣ್ಣಗೆ ನಾಪತ್ತೆಯಾಗುವುದು ಅಲ್ಲಿನ ವಾಡಿಕೆಯೇ ಆಗಿದೆ. ಸರಿಯಾಗಿ ನಡೆದುಕೊಳ್ಳಿ ‘ಇಲ್ಲದಿದ್ದರೆ’ ಎನ್ನುವುದು ಅಲ್ಲಿನ ಸರ್ಕಾರ ಜನರನ್ನು ಅಧೀನದಲ್ಲಿ ಇರಿಸಿಕೊಳ್ಳಲು ಬಳಸುವ ಭಾಷೆ. ಇಂಥ ವ್ಯಕ್ತಿಗಳು ಮಾತ್ರವಲ್ಲ, ಅವರ ಕುಟುಂಬ ಸದಸ್ಯರೂ ಶಿಕ್ಷೆಗೆ ಒಳಪಡಬೇಕಾಗುತ್ತದೆ. ಇಂಥ ಕ್ರಮಗಳು ಚೀನಾದಲ್ಲಿ ಹೊಸತೇನೂ ಅಲ್ಲ. ಆದರೆ ಟೆನಿಸ್ ಆಟಗಾರ್ತಿ ಪೆಂಗ್ ಶುಯಿ ಅವರಿಗೆ ಒದಗಿಸುವ ಸಂಕಷ್ಟಕ್ಕೆ ಬೇರೆಯದೇ ಆದ ಆಯಾಮವಿದೆ ಎನ್ನುತ್ತಾರೆ ಖ್ಯಾತ ಅಂಕಣಕಾರ ಬಿಕ್ರಮ್ ವೊಹ್ರಾ.

ಈ ಪ್ರಕರಣಕ್ಕೆ ಲೈಂಗಿಕ ದೌರ್ಜನ್ಯದ #Metoo ಆಯಾಮವೂ ಇದೆ ಎನ್ನುವುದು ಮತ್ತೊಂದು ಗಮನ ಸೆಳೆಯುವ ಅಂಶ. ಪೆಂಗ್ ಶುಯಿ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದ್ದ ಟೆನಿಸ್ ತಾರೆ. ಹೀಗಾಗಿಯೇ ಅವರಿಗೆ ವಿಶ್ವದೆಲ್ಲೆಡೆಯಿಂದ ಬೆಂಬಲ ಹರಿದುಬರುತ್ತಿದೆ. ಆಕೆ ಟೆನಿಸ್ ಆಟಗಾರ್ತಿಯಾಗಿರದಿದ್ದರೆ ಇಷ್ಟೊಂದು ಬೆಂಬಲ ವ್ಯಕ್ತವಾಗುತ್ತಿತ್ತು ಎಂದು ಹೇಳಲು ಸಾಧ್ಯವೇ ಇಲ್ಲ. ಚೀನಾದ ದೊಡ್ಡ ಶ್ರೀಮಂತ ಆಲಿಬಾಬಾ ಇಂಥದ್ದೇ ಕಾರಣಕ್ಕೆ ಸುದ್ದಿಯಾಗಿದ್ದರು. ಚೀನಾ ಮೂಲದ ಕೆನಡಿಯನ್ ಉದ್ಯಮಿ ಷಿಯೊ ಜಿನ್​ಹುವಾ ಅವರಿಗೆ ಮತ್ತುಬರುವ ಔಷಧಕೊಟ್ಟು ವ್ಹೀಲ್​ಚೇರ್​ ಮೇಲೆ ಕರೆದುಕೊಂಡು ಹೋಗಿದ್ದರು. ಹಾಂಗ್​ಕಾಂಗ್​ನ ಹೊಟೆಲ್​ನಲ್ಲಿ ಹಾಡಹಗಲೇ ನಡೆದಿದ್ದ ಈ ಘಟನೆಯನ್ನು ಎಲ್ಲರೂ ನಿಬ್ಬೆರಗಾಗಿ ನೋಡಿದ್ದರು. ಫಿಲಂಸ್ಟಾರ್ ಝಹೊ ವೆ ಸಹ ರಾತ್ರೋರಾತ್ರಿ ಕಗ್ಗತ್ತಲಲ್ಲಿ ಕರಗಿಹೋಗಿದ್ದರು. ವ್ಯಾಪ್ತಿ ಮೀರಿ ಮಾತನಾಡಿದರು ಎನ್ನುವ ಕಾರಣಕ್ಕೆ ಕಲಾವಿದ ಏ ವೆವೆ, ಅಷ್ಟೇಕೆ ಆಡಳಿತ ವಲಯದ ಗಾಳಿಸುದ್ದಿ ಪ್ರಕಟಿಸಿದ ಕಾರಣಕ್ಕೆ ಲೇಖಕಿ ಮತ್ತು ಪ್ರಕಾಶಕಿ ಗೈ ಮಿನ್​ಹಾಯ್ ಅವರಿಗೂ ಇದೇ ಗತಿಯಾಗಿತ್ತು.

ವಿಶ್ವದ ಟೆನಿಸ್ ತಾರೆಯರಾದ ಸೆರೆನಾ ವಿಲಿಯಮ್ಸ್, ನವಾಮಿ ಒಸಾಕಾ ಮತ್ತು ನೊವಾಕ್ ಡಿಕೊವಿಚ್ ಸೇರಿದಂತೆ ಹಲವರು ಪೆಂಗ್ ಶುಯಿ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದ ಬಗ್ಗೆ ಧೈರ್ಯವಾಗಿ ಮಾತನಾಡಿರುವ ರೋಗರ್ ಫೆಡರರ್, ‘ಅವರು ನಮ್ಮ ಟೆನಿಸ್ ಚಾಂಪಿಯನ್ನರ ಪೈಕಿ ಒಬ್ಬರು. ಹಿಂದೊಮ್ಮೆ ವಿಶ್ವದ ನಂಬರ್ 1 ಟೆನಿಸ್ ಆಟಗಾರ್ತಿಯಾಗಿದ್ದವರು. ಅವರ ಪರಿಸ್ಥಿತಿ ಬಗ್ಗೆ ನಮಗೆ ನಿಜಕ್ಕೂ ಕಾಳಜಿಯಿದೆ’ ಎಂದು ಹೇಳಿದ್ದರು. ಸ್ಕೈ ಇಟಾಲಿಯಾ ಮಾಧ್ಯಮ ಸಂಸ್ಥೆಯೊಂದಿಗೆ ಮಾತನಾಡಿದ ಫೆಡರರ್, ‘ಅವರು ಸುರಕ್ಷಿತವಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ವಿಶ್ವದ ಟೆನಿಸ್ ಕುಟುಂಬ ಈ ವಿಚಾರದಲ್ಲಿ ಒಂದಾಗಿದೆ. ನಾನು ನನ್ನ ಮಕ್ಕಳಿಗೆ ಯಾವಾಗಲೂ ಹೇಳುತ್ತಿರುತ್ತೇನೆ. ಟೆನಿಸ್ ಜಗತ್ತು ನನ್ನ ಎರಡನೇ ಕುಟುಂಬ ಇದ್ದಂತೆ. ನಾನು ಸುಮಾರು 20-25 ವರ್ಷ ಪ್ರವಾಸವನ್ನೇ ಮಾಡುತ್ತಿದ್ದೆ. ನನಗೆ ಪ್ರವಾಸಗಳೆಂದರೆ ಇಷ್ಟ. ಆಟಗಾರರೂ ಸೇರಿದಂತೆ ಟೆನಿಸ್ ಜಗತ್ತಿನಲ್ಲಿರುವ ಜನರು ನನಗೆ ಇಷ್ಟ. ಅವರು ವಿಶೇಷ ವ್ಯಕ್ತಿತ್ವ ಹೊಂದಿರುವವರು. ಆಕೆ ಅಂಥವರಲ್ಲಿ ಒಬ್ಬರು’ ಎಂದು ಫೆಡರರ್​ ಆತಂಕ ವ್ಯಕ್ತಪಡಿಸಿದ್ದರು. ಈ ಮಹಾನ್ ಟೆನಿಸ್ ಆಟಗಾರನ ಮಾತುಗಳಿಂದ ಸಹಜವಾಗಿಯೇ ಚೀನಾದ ಆಡಳಿತದ ಮೇಲೆ ಜಾಗತಿಕ ಮಟ್ಟದಲ್ಲಿ ಒತ್ತಡ ಬಿದ್ದಿತ್ತು.

35ರ ಹರೆಯದಲ್ಲಿರುವ ಪೆಂಗ್ ಶುಯಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಒಂದರಲ್ಲಿ ಪೆಂಗ್ ಶುಯಿ ಚೀನಾ ಸರ್ಕಾರದಲ್ಲಿ ಅತ್ಯಂತ ಪ್ರಭಾವಿ ಎನಿಸಿಕೊಂಡಿರುವ ಝಾಂಗ್ ಗೌಲಿ ವಿರುದ್ಧ ಲೈಂಗಿ ದೌರ್ಜನ್ಯದ ಆರೋಪ ಮಾಡಿದ್ದರು. ಝಾಂಗ್ ಗೌಲಿ ಈ ಮೊದಲು ಚೀನಾ ಕಮ್ಯುನಿಸ್ಟ್ ಪಕ್ಷದ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದರು. ಸರ್ಕಾರದಲ್ಲಿ ಹಲವು ಆಯಕಟ್ಟಿನ ಹುದ್ದೆಗಳನ್ನು ನಿರ್ವಹಿಸಿರುವ ಗೌಲಿ ಮೇಲೆ ಕೇಳಿ ಬಂದ ಆರೋಪವು ಅಲ್ಲಿನ ಸರ್ಕಾರದ ಮುಖಕ್ಕೆ ಮೊಟ್ಟೆ ಎಸೆದಂತೆ ಆಗಿದೆ.

ಇದನ್ನೂ ಓದಿ: ಬಿಕ್ರಮ್ ವೊಹ್ರಾ ಬರಹ: ನೂರು ಅಂಕಗಳಿಸಬೇಕೆಂಬ ಹುಚ್ಚು ಒತ್ತಡ, ಇದು ಈ ತಲೆಮಾರಿನ ಮೇಲೆ ನಡೆಯುತ್ತಿರುವ ದಾಳಿ

Peng-Shuai

ಇತ್ತೀಚೆಗಷ್ಟೇ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಪೆಂಗ್ ಶುಯಿ. ಇದನ್ನು ಜಗತ್ತು ಸರ್ಕಾರಿ ಪ್ರಾಯೋಜಿತ ನಾಟಕ ಎಂದು ಅನುಮಾನಿಸಿತ್ತು.

ಕ್ರೀಡಾಕೂಟದ ಒತ್ತಡ ಫೆಬ್ರುವರಿ 2022ರಲ್ಲಿ ಚೀನಾದಲ್ಲಿ ಚಳಿಗಾಲದ ಒಲಂಪಿಕ್ಸ್​ ನಡೆಯಲಿದೆ. ಕ್ರೀಡಾಕೂಟ ಆರಂಭವಾಗುವುದರ ಒಳಗೆ ಚೀನಾದಿಂದ ಸಮರ್ಪಕ ಉತ್ತರ ಬರದಿದ್ದರೆ ಹಲವು ದೇಶಗಳು ಕ್ರೀಡಾಕೂಟವನ್ನೇ ಬಹಿಷ್ಕರಿಸುವ ಸಾಧ್ಯತೆಯಿದೆ. ಇದನ್ನು ಅರ್ಥ ಮಾಡಿಕೊಂಡಿರುವ ಚೀನಾ ವಿದೇಶಾಂಗ ಇಲಾಖೆ ಈಗಾಗಲೇ ಸಂಕಷ್ಟ ಪರಿಹಾರ ಕ್ರಮಗಳಿಗೆ ಮುಂದಾಗಿದೆ. ಟೆನಿಸ್ ಕ್ರೀಡಾಕೂಟವೊಂದರಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಪೆಂಗ್ ಶುಯಿ ನಗುನಗುತ್ತಲೇ ಹಲವು ಮಕ್ಕಳಿಗೆ ಟೆನಿಸ್ ಬಾಲ್ ಮೇಲೆ ಸಹಿ ಹಾಕಿಕೊಟ್ಟರು. ಇದಾದ ನಂತರ ರೆಸ್ಟೊರೆಂಟ್ ಒಂದರಲ್ಲಿ ಗೆಳತಿಯರೊಂದಿಗೆ ಕಾಣಿಸಿಕೊಂಡರು. ಜಗತ್ತಿನ ಕಣ್ಣಿಗೆ ತನ್ನ ದೇಶದಲ್ಲಿ ಎಲ್ಲವೂ ಸರಿಯಿದೆ ಎನ್ನುವಂತೆ ತೋರಿಸಲು ಚೀನಾ ಮಾಡಿದ ನಾಟಕ ಇದು ಎಂಬುದು ಎಂಥವರಿಗೂ ಅರ್ಥವಾಗುವಂಥದ್ದು. ಇದ್ದಕ್ಕಿದ್ದಂತೆ ನಾಪತ್ತೆಯಾದ ಹಲವರು ಹೀಗೆಯೇ ಸಾರ್ವಜನಿಕವಾಗಿ ಕಾಣಿಸಿಕೊಂಡು, ಪೂರ್ವನಿರ್ಧರಿತ ನಾಟಕವನ್ನು ನಿರ್ವಹಿಸುವುದು ವಾಡಿಕೆಯೇ ಆಗಿದೆ. ನಾಪತ್ತೆಯಾದ ವ್ಯಕ್ತಿಯೊಬ್ಬರು ಕ್ಷೇಮವಾಗಿದ್ದಾರೆ ಎಂದು ತೋರಿಸಿಕೊಳ್ಳಲು ಚೀನಾದಲ್ಲಿ ಈ ಹಿಂದೆಯೂ ಇಂಥ ನಾಟಕಗಳು ನಡೆದಿತ್ತು.

ಪೆಂಗ್ ಶುಯಿ ಅವರ ಸ್ವಾತಂತ್ರ್ಯ ಎಷ್ಟರಮಟ್ಟಿಗೆ ಹರಣವಾಗಿದೆ ಎಂಬುದನ್ನು ಅಂದಾಜಿಸುವುದು ಕಷ್ಟ. ಇತ್ತೀಚೆಗೆ ನಡೆದ ‘ಹೇ, ನಾನು ಚೆನ್ನಾಗಿದ್ದೇನೆ’ ಎಂಬ ಸಾರ್ವಜನಿಕ ನಾಟಕವು ಪೂರ್ವನಿರ್ಧರಿತ. ಯಾವ ಸಂದರ್ಭದಲ್ಲಿ ಪೆಂಗ್ ಶುಯಿ ಸಾರ್ವಜನಿಕವಾಗಿ ಕಾಣಿಸಿಕೊಂಡರು ಎಂಬುದು ಸಹ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುವ ಸಂಗತಿಯೇ ಆಗಿದೆ. ಈ ಅವಧಿಯಲ್ಲಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಚೀನಾದ ಮೇಲೆ ಬಂದಿರುವ ಆರೋಪಗಳಿಗೆ ಉತ್ತರರೂಪದಲ್ಲಿದೆ. ಆದರೆ ಇಷ್ಟೇ ಸಾಕಾಗುವುದಿಲ್ಲ. ಪೆಂಗ್ ಶುಯಿ ಮತ್ತೊಮ್ಮೆ ಟೆನಿಸ್ ಅಂಕಣಕ್ಕೆ ಬರಬೇಕು. ದೇಶದಿಂದ ಹೊರಗೆ ತೆರಳು ಅವರಿಗೆ ಅವಕಾಶ ಸಿಗಬೇಕು. ಆಗ ಮಾತ್ರ ಚೀನಾ ಸರ್ಕಾರವು ಪೆಂಗ್ ಶುಯಿ ಅವರನ್ನು ಸಾರ್ವಜನಿಕವಾಗಿ ತೋರಿಸಿದ ರೀತಿಯು ನಾಟಕವಲ್ಲ ಎಂದು ನಂಬಬಹುದು.

ಆಕೆಗೆ ಇದ್ದಕ್ಕಿದ್ದಂತೆ ಏನಾದರೂ ಗಾಯವಾದರೆ, ಹುಷಾರು ತಪ್ಪಿದರೆ ಅಥವಾ ಆಕೆ ಟೆನಿಸ್​ನಿಂದ ನಿವೃತ್ತಿ ಘೋಷಿಸಿದರೆ ಚೀನಾದ ನಡೆಯನ್ನು ನಂಬಲು ಸಾಧ್ಯವೇ ಆಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ವಿಶ್ವದ ಟೆನಿಸ್ ಆಟಗಾರರು ಮತ್ತೆ ಚೀನಾದ ನಡೆಯನ್ನು ಅನುಮಾನಿಸುತ್ತಾರೆ.

ಇಷ್ಟೆಲ್ಲ ಹೇಳಿದ ಮೇಲೆ ಮತ್ತೊಂದು ನಿಜವನ್ನೂ ಹೇಳಬೇಕು. ವಿಶ್ವದ ಪ್ರಮುಖರು ಈ ವಿಚಾರದಲ್ಲಿ ತಮ್ಮ ಪ್ರತಿಭಟನಾ ಧ್ವನಿ ದಾಖಲಿಸುವುದು ಹೊರತುಪಡಿಸಿದರೆ ಬೇರೆ ಏನೂ ಮಾಡಲು ಸಾಧ್ಯವಿಲ್ಲ. ವಿಶ್ವ ಮಹಿಳಾ ಟೆನಿಸ್ ಒಕ್ಕೂಟದ ಅಧ್ಯಕ್ಷ ಮತ್ತು ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸ್ಟೀವ್ ಸಿಮನ್ ಈಚೆಗೆ ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ ಚೀನಾ ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದರು. ಪೆಂಗ್ ಶುಯಿ ಅವರ ಬಂಧನ ಮತ್ತು ಸೀಮಿತ ಅವಧಿಗೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ರೀತಿಯನ್ನು ಅನುಮಾನಿಸಿದ್ದರು. ‘ಪೆಂಗ್ ಶುಯಿ ಅವರನ್ನು ನೋಡಿದ್ದು ಒಳ್ಳೆಯ ವಿಚಾರವೇನೋ ಹೌದು. ಆದರೆ ಆಕೆಯು ಸ್ವತಂತ್ರವಾಗಿದ್ದಾರೆಯೇ? ತಮ್ಮ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆಯೇ ಎಂಬುದು ದೃಢಪಡಬೇಕಿದೆ. ಪೆಂಗ್​ ಶುಯಿ ಅವರ ಸ್ಥಿತಿಗತಿ ತಿಳಿಯಲು ಇದೊಂದು ವಿಡಿಯೊ ಸಾಕಾಗುವುದಿಲ್ಲ. ನನಗೆ ಪೆಂಗ್​ ಶುಯಿ ಅವರ ಆರೋಗ್ಯ ಮತ್ತು ಸುರಕ್ಷೆಯ ಬಗ್ಗೆ ಇನ್ನೂ ಆತಂಕವಿದೆ. ಲೈಂಗಿಕ ದೌರ್ಜನ್ಯದ ಬಗ್ಗೆ ಅವರು ಮಾಡಿದ್ದ ಆರೋಪಗಳನ್ನು ಹೊದಿಗೆ ಕೆಳಗೆ ಹಾಕಿ ಮುಚ್ಚಿಹಾಕಲಾಗಿದೆ. ಏನಾಗಬೇಕು ಎಂಬ ಬಗ್ಗೆ ನನಗೆ ಸ್ಪಷ್ಟತೆಯಿದೆ. ಚೀನಾದೊಂದಿಗೆ ನಮ್ಮ ಸಂಬಂಧವು ಕವಲುದಾರಿಗೆ ಬಂದು ನಿಂತಿದೆ ಎಂದು ಅವರು ಹೇಳಿದ್ದಾರೆ.

ಚಳಿಗಾಲದ ಒಲಂಪಿಕ್ಸ್​ನ ಆತಿಥೇಯ ದೇಶವಾದ ಚೀನಾವನ್ನು ವಿಶ್ವಸಮುದಾಯ ಬಹಿಷ್ಕರಿಸುವುದು ಅಷ್ಟು ಸುಲಭದ ನಿರ್ಧಾರವಲ್ಲ. ಸಹಜವಾಗಿಯೇ ಇದು ಹಲವು ದೇಶಗಳ ರಾಜತಾಂತ್ರಿಕ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ಬೀಜಿಂಗ್ ಸಹ ಪೆಂಗ್ ಶುಯಿ ವಿಚಾರದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆದುಕೊಳ್ಳಬೇಕಿದೆ. ಸಮಗ್ರ ತನಿಖೆ ನಡೆಸಬೇಕಿದೆ.

ಇದನ್ನೂ ಓದಿ: Political Analysis: ಉಳಿವಿನ ಕಲೆ ನೇವರಿಸುತ್ತಿರುವ ಗಾಂಧಿ ಕುಟುಂಬ: ಬಿಕ್ರಮ್ ವೊಹ್ರಾ ಬರಹ ಇದನ್ನೂ ಓದಿ: ಮೋದಿ ಅಮೆರಿಕ ಪ್ರವಾಸ: ಶ್ವೇತ ಭವನದಲ್ಲಿ ಕ್ವಾಡ್ ಔತಣ, ಚೀನಾ ವಿಚಾರದತ್ತ ಮುಖ್ಯ ಗಮನ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada