ಅಮೆರಿಕಾ ಡಿಜಿಟಲ್ ಹಣದ ರೂಪದಲ್ಲಿ ಡಾಲರ್ (dollar) ಅನ್ನು ಉಪಯೋಗಿಸುವ ಕುರಿತಾಗಿ ಹಲವು ಉಪಾಯಗಳನ್ನು ಹುಡುಕಾಡುತ್ತಿದೆ. ಆದರೆ ಹಲವು ದೇಶಗಳು ಅಂತಾರಾಷ್ಟ್ರೀಯ ವ್ಯವಹಾರದಲ್ಲಿ ಡಾಲರ್ ಬಳಕೆಯನ್ನು ಕಡಿಮೆಗೊಳಿಸಲು ಸಾಧ್ಯವಿರುವ ಉಪಾಯಗಳನ್ನು ಹುಡುಕಾಡುತ್ತಿವೆ. ಈ ದೇಶಗಳು ಆದಷ್ಟು ಶೀಘ್ರವಾಗಿ ವಿದೇಶಗಳೊಡನೆ ಖರೀದಿ – ಮಾರಾಟ ವ್ಯವಹಾರಗಳಲ್ಲಿ ಅಗತ್ಯವಾಗಿದ್ದ ಡಾಲರ್ ಬಳಕೆಯನ್ನು (ಅದರೊಡನೆ ಬೆಳೆಯುತ್ತಿರುವ ಚೀನಾದ ಕರೆನ್ಸಿ ಯುವಾನ್ ಅನ್ನು) ಕಡಿಮೆಗೊಳಿಸಲು ಪ್ರಯತ್ನ ನಡೆಸುತ್ತಿವೆ ಎಂದು ಫ್ರಾಂಟಿಯರ್ ಇಂಡಿಯಾದ ಸಂಪಾದಕರಾದ ಜೋಸೆಫ್ ಚಾಕೋ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿಂದಿನಂತೆಯೇ ಭಾರತವೂ ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ವತಂತ್ರವಾಗಿ ತನ್ನ ಸ್ಥಾನವನ್ನು ಹೊಂದಲು ಅಗತ್ಯ ಕ್ರಮಗಳನ್ನು ತೋರಿಸುತ್ತಿದೆ. ಅದಕ್ಕೆ ಇತ್ತೀಚಿನ ಉದಾಹರಣೆ ಎಂದರೆ, ಮಲೇಷ್ಯಾದೊಡನೆ 19 ಬಿಲಿಯನ್ ಡಾಲರ್ ಮೊತ್ತದ ದ್ವಿಪಕ್ಷೀಯ ವ್ಯವಹಾರವನ್ನು ಡಾಲರ್ ಬದಲಿಗೆ ಭಾರತೀಯ ರೂಪಾಯಿಯಲ್ಲಿ ನಡೆಸುವ ಒಪ್ಪಂದ ಕೈಗೊಂಡಿರುವುದು.
ಈಗ 18 ರಾಷ್ಟ್ರಗಳು ಭಾರತದೊಡನೆ ಭಾರತೀಯ ರೂಪಾಯಿಯಲ್ಲಿ ವ್ಯವಹಾರ ನಡೆಸಲು ಒಪ್ಪಿಕೊಂಡಿವೆ. ಈಗಾಗಲೇ ಅಂತಾರಾಷ್ಟ್ರೀಯ ಮಾರುಕಟ್ಟೆ ಹಣದುಬ್ಬರದಲ್ಲಿ ಸಿಲುಕಿದ್ದು, ಭಾರತ ಜಾಗತಿಕವಾಗಿ ಡಾಲರ್ ದೂರವಿಡುವ ಪ್ರಯತ್ನಗಳ ಲಾಭ ಪಡೆದುಕೊಳ್ಳುತ್ತಿದೆ.
ಉದ್ದಿಮೆಗಳು ಈಗ ವಿದೇಶಗಳಿಂದ ಉತ್ಪನ್ನಗಳನ್ನು ಖರೀದಿಸಿ, ಅದಕ್ಕಾಗಿ ಈ ಮೊದಲು ಬಳಸುತ್ತಿದ್ದ ಹಣದ ಬದಲು ರುಪಾಯಿಯನ್ನು ಬಳಸಬಹುದು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬೋಟ್ಸ್ವಾನಾ, ಫಿಜಿ, ಜರ್ಮನಿ, ಗಯಾನಾ, ಇಸ್ರೇಲ್, ಕೀನ್ಯಾ, ಮಲೇಷ್ಯಾ, ಮಾರಿಷಸ್, ಮಯನ್ಮಾರ್, ನ್ಯೂಜಿಲೆಂಡ್, ಒಮಾನ್, ರಷ್ಯಾ, ಸೀಷೆಲ್ಸ್, ಸಿಂಗಾಪುರ, ಶ್ರೀಲಂಕಾ, ತಾಂಜಾನಿಯಾ, ಉಗಾಂಡಾ ಹಾಗೂ ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ಹದಿನೆಂಟು ರಾಷ್ಟ್ರಗಳಲ್ಲಿ ರುಪಾಯಿ ಬಳಕೆಗೆ ಅನುಮತಿ ನೀಡಿದೆ.
ಭಾರತೀಯ ಬ್ಯಾಂಕ್‌ಗಳಲ್ಲಿ ಈಗಾಗಲೇ ವೋಸ್ತ್ರೋ ಖಾತೆಗಳನ್ನು ತೆರೆದಿರುವುದರಿಂದ, ರುಪಾಯಿ ಬಳಕೆಯ ಕ್ರಮ ಪರಿಣಾಮಕಾರಿಯಾಗುತ್ತದೆ.
ವ್ಯಾಪಾರ ಸಹಭಾಗಿ ರಾಷ್ಟ್ರಗಳು ಇನ್ನೊಂದು ದೇಶದಿಂದ ಹಣವನ್ನು ರಫ್ತು ಮಾಡುವುದಿಲ್ಲ. ಬದಲಿಗೆ ಉತ್ಪನ್ನಗಳನ್ನು ಖರೀದಿಸಿ, ಬಳಿಕ ತಮ್ಮ ದೇಶಗಳಲ್ಲಿ ಮಾರಾಟ ಮಾಡುತ್ತವೆ. ಇಂತಹ ಒಂದು ಯೋಜನೆ ಎರಡೂ ರಾಷ್ಟ್ರಗಳಿಗೆ ತಮ್ಮ ಪರಸ್ಪರ ಹೂಡಿಕೆ ಹೆಚ್ಚಿಸಲು ನೆರವಾಗುತ್ತವೆ.
ಇಂತಹ ರಾಷ್ಟ್ರಗಳು ಈ ಹಣವನ್ನು ಭಾರತೀಯ ಉದ್ದಿಮೆಗಳಲ್ಲಿ ಹೂಡಿಕೆ ಮಾಡಿ, ಭಾರತದಿಂದ ಸರಕು ಮತ್ತು ಸೇವೆಗಳನ್ನು ಖರೀದಿಸಲಿವೆ. ಇದು ವಹಿವಾಟು ವೆಚ್ಚಗಳನ್ನು ಕಡಿಮೆಗೊಳಿಸಿ, ವ್ಯಾಪಾರವನ್ನು ಹೆಚ್ಚಿಸಲು ನೆರವಾಗಲಿದೆ. ಪ್ರಸ್ತುತ ರುಪಾಯಿಯನ್ನು ವ್ಯಾಪಾರ ಮತ್ತು ಬಿಲ್ಲಿಂಗ್ ಹಣವಾಗಿ ಬಳಸುವ ಬಹುತೇಕ ರಾಷ್ಟ್ರಗಳಿಗೆ ಭಾರತ ವ್ಯಾಪಾರ ಸಹಯೋಗಿಯಾಗಿದೆ. ಆ ಮೂಲಕ ವರ್ತಕರು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎದುರಿಸುವ ವಿನಿಮಯ ದರದ ಅಪಾಯವನ್ನೂ ಕಡಿಮೆಗೊಳಿಸಲಿದೆ.
ಈ ಕ್ರಮ ಭಾರತದ ವ್ಯಾಪಾರದ ಕೊರತೆಯನ್ನೂ ನೀಗಿಸಲು ನೆರವಾಗಲಿದೆ. ಎಪ್ರಿಲ್ 2022ರಿಂದ, ಜನವರಿ 2023ರ ಅವಧಿಯಲ್ಲಿ ಭಾರತದ ಸರಕು ವ್ಯಾಪಾರ ಕೊರತೆ 233 ಬಿಲಿಯನ್ ಡಾಲರ್ ಆಗಿತ್ತು. ಈಗ ಹೆಚ್ಚಿನ ರಾಷ್ಟ್ರಗಳು ರೂಪಾಯಿಯಲ್ಲಿ ವ್ಯವಹರಿಸಲು ಮುಂದೆ ಬಂದಿರುವ ಕಾರಣ, ಭಾರತ ಇನ್ನೂ ಹೆಚ್ಚು ರಫ್ತು ಕೈಗೊಳ್ಳಲು ಸಾಧ್ಯವಾಗುತ್ತದೆ.
ಇದರಿಂದಾಗಿ ಹಣಕಾಸು ಮಾರುಕಟ್ಟೆಗಳು ವಿಸ್ತಾರ ಹೊಂದಿ, ಹೆಚ್ಚಿನ ಪ್ರಮಾಣದಲ್ಲಿ ರುಪಾಯಿ ಲಭ್ಯತೆ ಹೊಂದಿರುವ ರಾಷ್ಟ್ರಗಳಿಗೆ ಡಾಲರ್ ಲೆಕ್ಕದ ಅಮೆರಿಕಾದ ಹೂಡಿಕೆಯಷ್ಟು, ಅಥವಾ ಅದಕ್ಕಿಂತ ಹೆಚ್ಚಿನ ಬಡ್ಡಿದರ ಲಭಿಸಲಿದೆ.
ಇದನ್ನೂ ಓದಿ: Expert Opinion: ಭಾರತದ ವಿದ್ಯುತ್ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಒದಗಿಸಿದ ಸೋಲಾರ್, ಪವನ ವಿದ್ಯುತ್ ಉಪಕ್ರಮ
ರಷ್ಯಾದ ಮೇಲೆ ಪಾಶ್ಚಾತ್ಯ ನಿರ್ಬಂಧಗಳ ಪರಿಣಾಮವಾಗಿ, ಬ್ರಿಕ್ಸ್ ಒಕ್ಕೂಟ ಈಗಾಗಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯ ವ್ಯಾಪಾರವನ್ನು ಡಾಲರ್ ಮುಕ್ತಗೊಳಿಸಲು ಪ್ರಯತ್ನಿಸುತ್ತಿವೆ. ಇದು ಚೀನಾವನ್ನು ಅಮೆರಿಕಾಗೆ ಪ್ರತಿಸ್ಪರ್ಧಿ ಆಯ್ಕೆಯಾಗಿ ಹೊರಹೊಮ್ಮುವಂತೆ ಮಾಡಿದೆ. ಆದರೆ ಈ ಬೆಳವಣಿಗೆ ಚೀನಾವನ್ನು ಅಮೆರಿಕಾದಂತೆಯೇ ಆಕ್ರಮಣಕಾರಿ ಪ್ರವೃತ್ತಿಯ ದೇಶ ಎಂದು ಭಾವಿಸಿರುವ ಭಾರತ ಮತ್ತು ಇತರ ಏಷ್ಯಾದ ರಾಷ್ಟ್ರಗಳು ಒಪ್ಪಿಕೊಳ್ಳಲು ಸಾಧ್ಯವಾಗದಂತೆ ಮಾಡಿದೆ. ಚೀನಾ ತನ್ನ ನೆರೆಹೊರೆಯ ಸಾಂಸ್ಕೃತಿಕ, ಆರ್ಥಿಕ, ಹಾಗೂ ಮಿಲಿಟರಿ ಶಕ್ತಿಯುತ ರಾಷ್ಟ್ರಗಳ ಜೊತೆ ಹಲವಾರು ಹಿಂಸಾತ್ಮಕ ಗಡಿ ಚಕಮಕಿಗಳಲ್ಲಿ ಭಾಗಿಯಾಗಿದೆ. ಚೀನಾಗೆ ಹೋಲಿಸಿದರೆ, ಅಮೆರಿಕಾ ತನ್ನ ನೆರೆಯ ರಾಷ್ಟ್ರಗಳೊಡನೆ ಉತ್ತಮ ಸಂಬಂಧ ಹೊಂದಿದೆ.
ಇನ್ನೊಂದೆಡೆ, ಭಾರತ ಕೇವಲ ಪಾಕಿಸ್ತಾನದೊಡನೆ ಮಾತ್ರವೇ (ಚೀನಾದೊಡನೆ ಹೇಗಿದ್ದರೂ ವಿವಾದ ಮುಂದುವರಿಯುತ್ತಲೇ ಇದೆ) ಸಮಸ್ಯೆಯನ್ನು ಹೊಂದಿದೆ. ಪಾಕಿಸ್ತಾನದ ಗುಣ ಲಕ್ಷಣಗಳು ಒಂದು ವೈರಸ್‌ನ ಲಕ್ಷಣಗಳಂತೆಯೇ ಕಂಡುಬರುತ್ತದೆ. ಪಾಕಿಸ್ತಾನ ಒಂದು ದೃಢವಾದ ರಾಷ್ಟ್ರವಾಗಿ ಉಳಿಯಲು ಸಾಧ್ಯವಾಗುತ್ತಿಲ್ಲ, ಅಭಿವೃದ್ಧಿ ಹೊಂದುತ್ತಲೂ ಇಲ್ಲ ಮತ್ತು ತನ್ನ ಸ್ವಸಾಮರ್ಥ್ಯದಿಂದ ಉಳಿಯಲೂ ಸಾಧ್ಯವಿಲ್ಲ. ಆದ್ದರಿಂದಲೇ ಅದು ವೈರಸ್‌ನಂತೆ ತನ್ನ ಉಳಿವಿಗಾಗಿ ಚೀನಾ, ಟರ್ಕಿ ಹಾಗೂ ಅಮೆರಿಕಾದಂತಹ ರಾಷ್ಟ್ರಗಳ ಮೇಲೆ ಅವಲಂಬಿತವಾಗಿದೆ. ಪಾಕಿಸ್ತಾನದ ನೆರೆಹೊರೆಯಲ್ಲಿರುವ, ಭಾರತ ಸೇರಿದಂತೆ ಎಲ್ಲ ರಾಷ್ಟ್ರಗಳೂ ಭಯೋತ್ಪಾದನೆಯ ಆತಂಕ ಎದುರಿಸುತ್ತಿವೆ.
ಇತ್ತೀಚೆಗೆ ಭಾರತ ಮತ್ತು ಮಲೇಷ್ಯಾಗಳ ನಡುವೆ ಅಸಮಾಧಾನ ತಲೆದೋರುವ ಸಾಧ್ಯತೆಗಳಿದ್ದವು. ಆದರೆ ಎರಡು ರಾಷ್ಟ್ರಗಳ ನಡುವಿನ ವ್ಯಾಪಾರ ರುಪಾಯಿಯ ಮೂಲಕ ನಡೆಯಲಾರಂಭಿಸಿತು. ಅಮೆರಿಕಾ ಮತ್ತು ಚೀನಾಗಳು ದೈತ್ಯ ಶಕ್ತಿಗಳು ಎಂಬ ಅಂಶ ಅವುಗಳಿಗೆ ಹಿನ್ನಡೆ ಉಂಟುಮಾಡಿದರೆ, ಮೃದು ಧೋರಣೆಯ ರಾಷ್ಟ್ರವೆಂಬ ಶಕ್ತಿ ಭಾರತಕ್ಕೆ ಮೇಲುಗೈ ಒದಗಿಸುತ್ತದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪ್ರಾಂತೀಯವಾಗಿ ಸಾಮಾನ್ಯ ಹಣವನ್ನು ಬಳಸಿಕೊಳ್ಳುವ ಕುರಿತು ಬ್ರಿಕ್ಸ್‌ಗೆ ಸಲಹೆ ನೀಡಿದ್ದು, ಒಂದು ವೇಳೆ ಬ್ರಿಕ್ಸ್ ಇದನ್ನು ಅನುಮೋದಿಸಿದರೆ, ಬೆಳೆಯುತ್ತಿರುವ ಭಾರತೀಯ ರುಪಾಯಿಯೂ ಅಂತಾರಾಷ್ಟ್ರೀಯ ವ್ಯವಹಾರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಇದು ಯುವಾನ್ ಮತ್ತು ರೂಬಲ್‌ಗೆ ಹೋಲಿಸಿದರೆ ರುಪಾಯಿಯ ಸ್ಥಾನವನ್ನೂ ಹೆಚ್ಚಿಸಲಿದೆ. ಚೀನಾದ ಯುವಾನ್‌ಗೆ ಹೋಲಿಸಿದರೆ, ಬ್ರಿಕ್ಸ್, ಆಸಿಯಾನ್, ಆಫ್ರಿಕಾ ಮತ್ತು ಹಲವು ಯುರೋಪಿಯನ್ ರಾಷ್ಟ್ರಗಳು ಪ್ರಚಲಿತ ಕರೆನ್ಸಿಯಾಗಿ ರುಪಾಯಿಯ ಕುರಿತು ಮೃದು ಧೋರಣೆ ಹೊಂದಿರಲಿವೆ.
ಭಾರತ ಈಗಾಗಲೇ ಯುಎಇಯಂತಹ ಒಪೆಕ್ ರಾಷ್ಟ್ರದೊಡನೆ ತೈಲ ರಹಿತ ವಹಿವಾಟನ್ನು ರೂಪಾಯಿಯಲ್ಲಿ ನಡೆಸುವ ಕುರಿತು ಮಾತುಕತೆ ನಡೆಸುತ್ತಿದೆ. ಭಾರತ ಈಗ ಡಾಲರ್ ಮುಕ್ತ ವಹಿವಾಟು ವಲಯವನ್ನು ಪ್ರವೇಶಿಸುತ್ತಿದ್ದು, ಇದಕ್ಕೆ ಅಮೆರಿಕಾದ ಸ್ವಯಂಕೃತ ತಪ್ಪುಗಳು ಮತ್ತು ರಷ್ಯಾ ಹಾಗೂ ಚೀನಾದ ಪ್ರಯತ್ನಗಳೂ ಕಾರಣವಾಗಿವೆ. ಭಾರತ ಅಂತಾರಾಷ್ಟ್ರೀಯ ವ್ಯವಹಾರದಲ್ಲಿ ಯುವಾನ್ ಪಾತ್ರವಿಲ್ಲದಿರುವಿಕೆಯನ್ನು ಮತ್ತು ಯುವಾನ್ ಬದಲಿ ಆಯ್ಕೆ ಆಗಿಲ್ಲದಿರುವುದನ್ನು ಬಯಸುತ್ತದೆ. ರಷ್ಯಾ ಭಾರತದೊಡನೆ ರುಪೀ – ರೂಬಲ್ ತೈಲ ವ್ಯಾಪಾರದಲ್ಲಿ ಯುವಾನ್ ಅನ್ನೂ ಒಳಗೊಳ್ಳುವ ಪ್ರಸ್ತಾಪ ನೀಡಿದಾಗ, ಭಾರತ ಅದನ್ನು ತಿರಸ್ಕರಿಸಿ, ಯುಎಇ ದಿರ್‌ಹಮ್ ಅನ್ನು ಆಯ್ಕೆ ಮಾಡಿತ್ತು.
ರೂಪಾಯಿ – ಯುವಾನ್‌ಗಳ ನಡುವಿನ ಸ್ಪರ್ಧೆ ಅತ್ಯಂತ ಕನಿಷ್ಠ ವ್ಯಾಪ್ತಿಯಲ್ಲಿ ನಡೆಯುತ್ತಿದೆ. ಅಂತಾರಾಷ್ಟ್ರೀಯ ಹಣಕಾಸು ವಹಿವಾಟಿನ ಕೇವಲ 7%ವನ್ನು ಯುವಾನ್ ನಿಯಂತ್ರಿಸುತ್ತಿದೆ. ಇದು ಯೂರೋ, ಯೆನ್ ಹಾಗೂ ಪೌಂಡ್ ಸ್ಟರ್ಲಿಂಗ್ ಗಿಂತಲೂ ಕಡಿಮೆಯಾಗಿದೆ. ಯುವಾನ್ ಜಾಗತಿಕವಾಗಿ ಡಾಲರ್‌ಗಿಂತ ಹಿಂದುಳಿದಿದ್ದು, ಡಾಲರ್ ಜಾಗತಿಕ ಹಣಕಾಸು ವಹಿವಾಟಿನ 90%ವನ್ನು ನಿಯಂತ್ರಿಸುತ್ತದೆ. ಜಾಗತಿಕ ಪ್ರಭಾವ ಕಡಿಮೆಯಾಗುತ್ತಾ ಬರುತ್ತಿದ್ದರೂ, ಅಮೆರಿಕಾ ಇಂದಿಗೂ ಚೀನಾ ಸೇರಿದಂತೆ ಯಾವುದೇ ರಾಷ್ಟ್ರಕ್ಕೂ ಸಮಸ್ಯೆ ತಂದೊಡ್ಡಬಲ್ಲ ಸಾಮರ್ಥ್ಯ ಹೊಂದಿದೆ. ಅಮೆರಿಕಾಗೆ ಯುವಾನ್ ಬದಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ರುಪಾಯಿಯ ಮೂಲಕ ವ್ಯಾಪಾರ ನಡೆಯುವುದು ಹೆಚ್ಚು ಒಪ್ಪಿತವಾಗಿದೆ.
ಒಂದು ವೇಳೆ ಚೀನಾದ ಯುವಾನ್ ಪ್ರಾಥಮಿಕ ಜಾಗತಿಕ ಹಣವಾಗಿ ರೂಪುಗೊಳ್ಳಲಿದೆಯೇ? ಅದಕ್ಕೆ ಭಾರತೀಯ ರುಪಾಯಿ ಸ್ಪರ್ಧೆಯೊಡ್ಡಲು ಸಾಧ್ಯವೇ ಎಂದು ಈಗಲೇ ಊಹಿಸುವುದು ಕಷ್ಟ ಸಾಧ್ಯ. ಆದರೆ ಈಗಾಗಲೇ ಈ ನಿಟ್ಟಿನಲ್ಲಿ ಬದಲಾವಣೆಗಳು ತೋರಿರುವುದಂತೂ ನಿರ್ವಿವಾದ ಸತ್ಯ.
ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
Published On - 6:59 pm, Wed, 5 April 23