ರಾಜಕೀಯ ಕಿಡಿಗೆ ಕಾರಣರಾದ ಉರಿಗೌಡ, ನಂಜೇಗೌಡ ಅಸ್ತಿತ್ವದ ಬಗ್ಗೆ ಇತಿಹಾಸ ಹೇಳುವುದೇನು?

|

Updated on: Mar 16, 2023 | 2:25 PM

ಉರಿಗೌಡ, ನಂಜೇಗೌಡ ವಿವಾದ: ರಾಜಕೀಯ ಕಿಡಿಗೆ ಕಾರಣರಾದ ಉರಿಗೌಡ, ನಂಜೇಗೌಡ ಇದ್ದರೇ? ಅವರೇ ಟಿಪ್ಪುವನ್ನು ಹತ್ಯೆ ಮಾಡಿದ್ದರೇ? ಇತಿಹಾಸ ಏನು ಹೇಳುತ್ತದೆ? ತಿಳಿಯುವ ಪ್ರಯತ್ನ ಇಲ್ಲಿದೆ.

ರಾಜಕೀಯ ಕಿಡಿಗೆ ಕಾರಣರಾದ ಉರಿಗೌಡ, ನಂಜೇಗೌಡ ಅಸ್ತಿತ್ವದ ಬಗ್ಗೆ ಇತಿಹಾಸ ಹೇಳುವುದೇನು?
ಟಿಪ್ಪು ಸುಲ್ತಾನ್
Follow us on

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯದಲ್ಲಿ ಮತ್ತೆ ಉರಿಗೌಡ ಮತ್ತು ನಂಜೇಗೌಡ (Urigowda, Nanjegowda) ಹೆಸರುಗಳು ಭಾರೀ ಸದ್ದು ಮಾಡಲು ಆರಂಭಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಮಂಡ್ಯ ರೋಡ್​ ಶೋ ಹಿಂದಿನ ದಿನ ಹೆದ್ದಾರಿಯಲ್ಲಿ ಉರಿ ಗೌಡರು ಮತ್ತು ದೊಡ್ಡ ನಂಜೇಗೌಡರ ದ್ವಾರ ಹಾಕಿದ್ದು ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಅದನ್ನು ತೆರವು ಮಾಡಲಾಗಿತ್ತು. ಆದರೆ, ಮರುದಿನ ಹೇಳಿಕೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಉರಿಗೌಡ ಮತ್ತು ನಂಜೇಗೌಡರ ಶಾಶ್ವತ ದ್ವಾರ ನಿರ್ಮಿಸುತ್ತೇವೆ ಎಂದು ಹೇಳಿದ್ದರು. ಉರಿಗೌಡ ಹಾಗೂ ನಂಜೇಗೌಡರು ಮೈಸೂರಿನ ಹುಲಿ ಎಂದೇ ಖ್ಯಾತನಾಗಿದ್ದ ಟಿಪ್ಪು ಸುಲ್ತಾನನ್ನು (Tipu Sultan) ಹತ್ಯೆ ಮಾಡಿದ್ದರು ಎಂಬುದು ಕೆಲವು ಬಿಜೆಪಿ ನಾಯಕರ ವಾದ. ಇದಕ್ಕೆ ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್​​ ನಾಯಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಆದರೆ, ಇತಿಹಾಸದಲ್ಲಿ ಉಲ್ಲೇಖವಾಗಿರುವ ಅಂಶಗಳು ಬೇರೆಯದೇ ಕಥೆಯನ್ನು ಹೇಳುತ್ತವೆ. ಹಾಗಿದ್ದರೆ, ರಾಜಕೀಯ ಕಿಡಿಗೆ ಕಾರಣರಾದ ಉರಿಗೌಡ, ನಂಜೇಗೌಡ ಇದ್ದರೇ? ಅವರೇ ಟಿಪ್ಪುವನ್ನು ಹತ್ಯೆ ಮಾಡಿದ್ದರೇ? ಇತಿಹಾಸ ಏನು ಹೇಳುತ್ತದೆ? ತಿಳಿಯುವ ಪ್ರಯತ್ನ ಇಲ್ಲಿದೆ.

ಉರಿಗೌಡ, ನಂಜೇಗೌಡ ಚರ್ಚೆ ಶುರುವಾಗಿದ್ದು ಎಲ್ಲಿಂದ?

ಲೇಖಕ ಹಾಗೂ ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಬರೆದ ‘ಟಿಪ್ಪು ನಿಜಕನಸುಗಳು’ ನಾಟಕವು ಉರಿಗೌಡ, ನಂಜೇಗೌಡರ ಕುರಿತಾದ ಚರ್ಚೆಗೆ ನಾಂದಿ ಹಾಡಿತು. ನಾಟಕವೂ ಸ್ವತಃ ವಿವಾದಕ್ಕೆ ಕಾರಣವಾಯಿತು. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದ ಲೇಖಕರು, ನಾಟಕವು ಟಿಪ್ಪುವಿನ ಕ್ರೌರ್ಯದ ಕುರಿತಾಗಿದೆಯೇ ವಿನಃ ಮುಸ್ಲಿಂ ಸಮುದಾಯದ ವಿರುದ್ಧ ಅಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರು. ಜತೆಗೆ, ಟಿಪ್ಪುವಿನ ದೌರ್ಜನ್ಯವನ್ನು ಸಹಿಸದ ಒಕ್ಕಲಿಗ ಸಮುದಾಯದ ಊರಿಗೌಡ ಮತ್ತು ನಂಜೇಗೌಡರು ಆತನನ್ನು ಹತ್ಯೆ ಮಾಡಿದ್ದರು ಎಂದು ಪ್ರತಿಪಾದಿಸಿದ್ದರು.

ಇತಿಹಾಸ ಪುಟಗಳಲ್ಲೇನಿದೆ?

ನಾಲ್ಕನೇ ಆಂಗ್ಲೋ – ಮೈಸೂರು ಯುದ್ಧದಲ್ಲಿ ಮರಾಠರು ಮತ್ತು ಹೈದರಾಬಾದ್​​ನ ನಿಜಾಮರ ಬೆಂಬಲದೊಂದಿಗೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಪಡೆಗಳು ಟಿಪ್ಪು ಸುಲ್ತಾನ್​​ನನ್ನು ಸೋಲಿಸಿದವು. ತನ್ನ ಪ್ರಬಲ ನೆಲೆ ಶ್ರೀರಂಗಪಟ್ಟಣದಲ್ಲಿ 1799ರ ಮೇ 4ರಂದು ಟಿಪ್ಪು ಸುಲ್ತಾನನ ಹತ್ಯೆಯಾಯಿತು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಆದರೆ, ಈ ಇತಿಹಾಸವೇ ಸುಳ್ಳು ಎಂಬುದು ಬಿಜೆಪಿ ನಾಯಕರ ಮತ್ತು ಇತರ ಕೆಲವು ಮಂದಿಯ ವಾದವಾಗಿದೆ.

ಇತಿಹಾಸ ತಜ್ಞರು ಹೇಳುವುದೇನು?

‘ಮಳವಳ್ಳಿ ಸಂಘರ್ಷ ಹಾಗೂ ಅಲ್ಲಿನ ಸ್ಥಳೀಯ ಮೌಖಿಕ ಇತಿಹಾಸದ ನೆಲೆಗಟ್ಟಿನಲ್ಲಿ ಹೇಳುವುದಾದರೆ ಉರಿಗೌಡ ಮತ್ತು ನಂಜೇಗೌಡರು ಇದ್ದರು ಎನ್ನಬಹುದು. ಆದರೆ, ಈ ವಾದಕ್ಕೆ ಪೂರಕ ದಾಖಲೆಗಳನ್ನು ಒದಗಿಸುವುದು ಕಷ್ಟಸಾಧ್ಯ. ಯಾಕೆಂದರೆ ಭಾರತೀಯ ಪುರಾತತ್ವ ಇಲಾಖೆಯ ಟಿಪ್ಪಣಿಯಲ್ಲೂ ‘ಟಿಪ್ಪುವಿನ ಮೃತದೇಹ ಸಿಕ್ಕಿತು’ ಎಂದಷ್ಟೇ ಉಲ್ಲೇಖಿಸಲಾಗಿದೆ. ಒಂದು ವೇಳೆ ಆತ ಯಾರಿಂದಲಾರೂ ಕೊಲೆಯಾಗಿದ್ದರೆ, ಟಿಪ್ಪುವಿನ ಹತ್ಯೆಯಾಗಿತ್ತು ಎಂದು ಉಲ್ಲೇಖಿಸಿರುತ್ತಿದ್ದರಲ್ಲವೇ? ಹಿಗಾಗಿ, ಊರಿಗೌಡ ಮತ್ತು ನಂಜೇಗೌಡ ಎಂಬವರ ಅಸ್ತಿತ್ವದ ಬಗ್ಗೆ ಮೌಖಿಕ ಇತಿಹಾಸದ ನೆಲೆಗಟ್ಟಿನಲ್ಲಿ ವ್ಯಾಖ್ಯಾನಿಸಬಹುದೇ ಹೊರತು ಅಧಿಕೃತ ದಾಖಲೆಗಳನ್ನು ನೀಡುವುದು ಕಷ್ಟಸಾಧ್ಯ ಎಂದು ಮೈಸೂರಿನ ಹೆಸರು ಬಹಿರಂಗಪಡಿಸಲು ಇಚ್ಛಿಸದ ಇತಿಹಾಸ ತಜ್ಞರೊಬ್ಬರು ತಿಳಿಸಿದ್ದಾರೆ.

ಊರಿಗೌಡ ಮತ್ತು ನಂಜೇಗೌಡರು ಟಿಪ್ಪುವನ್ನು ಹತ್ಯೆ ಮಾಡಿದ್ದರು ಎಂಬ ರಾಜಕೀಯ ನಾಯಕರ ವಾದದ ಬಗ್ಗೆ ಏನೂ ಹೇಳಲಾಗದು. ಒಂದು ವೇಳೆ ಅವರ ವಾದದಂತೆಯೇ ಅದು ನಿಜವಾಗಿದ್ದರೆ ಅದನ್ನು ದಾಖಲೆ ಸಮೇತ ಬಹಿರಂಗಪಡಿಸಬಹುದಲ್ಲವೇ? ಆದರೆ ಇದು ಕಷ್ಟಸಾಧ್ಯ ಎಂದು ಹೆಸರು ಉಲ್ಲೇಖಿಸಲು ಇಚ್ಛಿಸದ ಮತ್ತೊಬ್ಬರು ಹಿರಿಯ ಇತಿಹಾಸ ತಜ್ಞರು ಹೇಳಿದ್ದಾರೆ.

ಮಳವಳ್ಳಿ ಸಂಘರ್ಷ ಮತ್ತು ಮೌಖಿಕ ಇತಿಹಾಸ

ಮಳವಳ್ಳಿಗೆ ಟಿಪ್ಪುವಿನ ಬೆಂಬಲಿಗರು ಅತಿಕ್ರಮಣ ಎಸಗಿದ್ದು, ಅವರ ವಿರುದ್ಧ ಅಲ್ಲಿನ ಗೌಡರು ಮುನಿದಿದ್ದು ನಿಜ ಎಂಬುದನ್ನು ಮೌಖಿಕ ಇತಿಹಾಸದಿಂದ ತಿಳಿಯಬಹುದಾಗಿದೆ ಎನ್ನುತ್ತಾರೆ ಮಳವಳ್ಳಿಯವರೇ ಆದ ಪ್ರೊಫೆಸರ್ ಶರ್ವಾಣಿ ಗೌಡ. ಮಳವಳ್ಳಿಯ ಕೆಲವು ಜಾನಪದ ಗೀತೆಗಲ್ಲಿ ಬರುವ ದಂಡಿನ ಮಾರಮ್ಮ ಮತ್ತು ಉರಿಗೌಡ, ನಂಜೇಗೌಡರ ಕಥೆಗಳು ಟಿಪ್ಪುವಿನ ಬಂಟರು ಮತ್ತು ಸ್ಥಳೀಯ ಜನರ ನಡುವೆ ನಡೆದ ಕಲಹಗಳ ಬಗ್ಗೆ ಮಾಹಿತಿ ಒದಗಿಸುತ್ತವೆ ಎನ್ನುತ್ತಾರವರು.

ಮಳವಳ್ಳಿ ಕೆರೆಗೂ ಮೊದಲೇ ಒಂದು ದೇಗುಲವಿದೆ. ಅದನ್ನು ದಂಡಿನ ಮಾರಮ್ಮ ಎಂದು ಕರೆಯಲಾಗುತ್ತದೆ. ಈ ಮಾರಮ್ಮನ ಹಿಂದೆ ಒಂದು ಕಥೆ ಇದೆ. ಮಾರಮ್ಮ ಎಂಬ ಹೆಣ್ಣುಮಗಳು ಕುರಿ ಮೇಯಿಸುತ್ತಿದ್ದವಳು. ಒಂದು ದಿನ ಆಕೆ ಕುರಿ ಮೇಯಿಸುತ್ತಿದ್ದಾಗ ಮುಸಲ್ಮಾನ ದೊರೆ ದಂಡೆತ್ತಿ ಬರುತ್ತಾನೆ. ಮಾರೆಹಳ್ಳಿ ಎಂಬ ಪ್ರದೇಶದಲ್ಲಿ ಮುಸಲ್ಮಾನ ದೊರೆ ಹಾಗೂ ಮಾರಮ್ಮನ ಮುಖಾಮುಖಿಯಾಗುತ್ತದೆ. ಮಳವಳ್ಳಿಗೆ ಮುಸಲ್ಮಾನ ದೊರೆಯ ಸೈನ್ಯ ನುಗ್ಗಿದರೆ ಅಪಾಯವಾಗಬಹುದು ಎಂದರಿತ ಮಾರಮ್ಮ ಅವರನ್ನು ತಡೆಯಲು ಮುಂದಾಗುತ್ತಾಳೆ. ಈ ವೇಳೆ ಮಾರಮ್ಮ ಹಾಗೂ ಮುಸ್ಲಿಂ ಸೈನ್ಯದ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಸಾಧ್ಯವಾದರೆ ನೀವು ಐದು ಜನ ನನ್ನನ್ನು ಎದುರಿಸಿ ಗೆದ್ದರೆ ನಂತರ ಮುಂದುವರಿಯಬಹುದು ಎಂದು ಮಾರಮ್ಮ ಅವರಿಗೆ ಸವಾಲೊಡ್ಡುತ್ತಾಳೆ. ಬಳಿಕ ವೀರಗಚ್ಚೆ ಹಾಕಿ ನಿಂತು ಅವರೊಡನೆ ಸೆಣಸುತ್ತಾಳೆ. ಮಾರಮ್ಮನ ಜತೆ ಸೆಣಸಾಟದಲ್ಲಿ ಹಿನ್ನಡೆಯಾದ ಸೈನ್ಯ ಪಲಾಯನ ಮಾಡುತ್ತದೆ. ಈ ನೆನಪಿಗಾಗಿ, ಮತ್ತು ಮಹಿಳೆಯ ಸ್ಮರಣಾರ್ಥವಾಗಿ ದಂಡಿನ ಮಾರಮ್ಮ ದೇಗುಲ ನಿರ್ಮಾಣ ಮಾಡಲಾಗಿದೆ ಎಂಬುದು ಜನಪದ ಹಾಡುಗಳಿಂದ ತಿಳಿಯುತ್ತದೆ ಎಂದಿದ್ದಾರೆ ಶರ್ವಾಣಿ ಗೌಡ.

ಇದನ್ನೂ ಓದಿ: ಟಿಪ್ಪುವನ್ನು ಉರಿಗೌಡ ನಂಜೇಗೌಡ ಕೊಂದ್ರಾ? ಯಾರಿವರು? ಇತಿಹಾಸ ತಜ್ಞ ಪ್ರೊ. ನಂಜರಾಜೇ ಅರಸ್ ಹೇಳಿದ್ದಿಷ್ಟು

ನಂತರ ಮತ್ತೆ ಮುಸಲ್ಮಾನ ದೊರೆಯ ಬೆಂಬಲಿಗರ ದಾಳಿ ಹಾಗೂ ದಬ್ಬಾಳಿಕೆ ಮಳವಳ್ಳಿ ಮೇಲೆ ನಡೆದಿತ್ತು. ಮುಸಲ್ಮಾನ ದೊರೆ ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಮುಂದಾಗಿದ್ದು, ಹೆಣ್ಣುಮಗಳೊಬ್ಬಳನ್ನು ಮದುವೆ ಮಾಡಿಕೊಡುವಂತೆ ಬಲವಂತಪಡಿಸಿದ್ದ. ಆ ಸಂದರ್ಭದಲ್ಲಿ ನಾಯಿಯೊಂದಕ್ಕೆ ವಧುವಿನ ಹಾರ ಹಾಕಿ ಒಂದಷ್ಟು ಮಂದಿ ಗೌಡ ಜನಾಂಗದವರು ತಮಿಳುನಾಡಿನ ಸತ್ಯಮಂಗಲಂ, ಕೊಲ್ಲಾಚಿ, ಕುಳ್ಳಪಟ್ಟಿ ಕಡೆ ಓಡಿಹೋಗಿ ಅಲ್ಲಿ ನೆಲೆಸಿದ್ದರು. ಅವರನ್ನು ‘ಓಡಗೌಡರು’ ಎಂದೇ ಕರೆಯಲಾಗುತ್ತದೆ ಎಂದು ಅವರು ‘ಟಿವಿ9 ಕನ್ನಡ ಡಿಜಿಟಲ್​​’ಗೆ ಮಾಹಿತಿ ನೀಡಿದ್ದಾರೆ.

ಮಾರೆಹಳ್ಳಿಗಿಂದ ನಾಲ್ಕು ಮೈಲಿ ದೂರದಲ್ಲಿ ಕೆಂಡಗಣ್ಣೇಶ್ವರ ಹೆಸರಿನ ದೇಗುಲವಿದೆ. ಈ ದೇವರನ್ನು ಆರಾಧಿಸುವ ಜನಾಂಗದವರು ಈಗಲೂ ಕೆಂಡೇಗೌಡ, ಕೆಂಡಗಣ್ಣಯ್ಯ, ಉರಿಗೌಡ, ನಂಜೇಗೌಡ ಎಂಬ ಹೆಸರುಗಳನ್ನಿಟ್ಟುಕೊಳ್ಳುತ್ತಾರೆ. ಮಳವಳ್ಳಿಯ ಕಿರುಗಾವಲು ಎಂಬ ಊರಿನಲ್ಲಿ ಈಗಲೂ ನಂಜೇಗೌಡ ಎಂಬ ಹೆಸರಿಡುತ್ತಾರೆ ಎಂದಿದ್ದಾರೆ ಶರ್ವಾಣಿ ಗೌಡ.

ಉರಿಗೌಡ ಮತ್ತು ನಂಜೇಗೌಡರೇ ಟಿಪ್ಪುವನ್ನು ಹತ್ಯೆ ಮಾಡಿದ್ದರು ಎಂದು ಕೆಲವು ವರ್ಗದವರು ಆಡಿಕೊಳ್ಳುವುದು ನಿಜ. ಅವರಿಬ್ಬರ ಸ್ಮರಣಾರ್ಥ ಈಗಲೂ ಮಕ್ಕಳಿಗೆ ಅವರ ಹೆಸರನ್ನಿಡುವ ಪದ್ಧತಿಯೂ ಊರಿನಲ್ಲಿದೆ. ಆದರೆ, ಅವರೇ ಹತ್ಯೆ ಮಾಡಿದ್ದರೇ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದು ಅವರು ಹೇಳಿದ್ದಾರೆ.

ಟಿಪ್ಪು ಸಾವು ಹೇಗಾಯ್ತು?

ಒಕ್ಕಲಿಗರು ಟಿಪ್ಪುವನ್ನು ಕೊಲ್ಲಲು ಯತ್ನಿಸಿದ ಉಲ್ಲೇಖ ಇತಿಹಾಸದಲ್ಲಿ ಇಲ್ಲ. ಬ್ರಿಟಿಷರು, ಮರಾಠರು ಮತ್ತು ನಿಜಾಮರನ್ನು ಒಳಗೊಂಡ ಮಿತ್ರ ಪಡೆಗಳು ಆತನನ್ನು ಹತ್ಯೆ ಮಾಡಿದ್ದವು ಎಂದು ಟಿಪ್ಪು ಸುಲ್ತಾನ್‌ನನ್ನು ಮೂಲೆಗುಂಪು ಮಾಡಲು ಬ್ರಿಟಿಷರ ರೂಪಿಸಿದ್ದ ಯುದ್ಧ ಯೋಜನೆಗೆ ಸಂಬಂಧಿಸಿದ ನಕ್ಷೆಗಳ ಕುರಿತು ಅಧ್ಯಯನ ಮಾಡಿರುವ ಬೆಂಗಳೂರು ಮೂಲದ ಸುನಿಲ್ ಬಾಬೂ ಎಂಬವರು ‘ಇಂಡಿಯನ್ ಎಕ್ಸ್​​ಪ್ರೆಸ್’ ಪತ್ರಿಕೆಗೆ ಇತ್ತೀಚೆಗೆ ನೀಡಿದ್ದ ಸಂದರ್ಶನದಲ್ಲಿ ಉಲ್ಲೇಖಿಸಿದ್ದರು.

‘ಉರಿಗೌಡ ಮತ್ತು ನಂಜೇಗೌಡರು ಹೈದರ್ ಅಲಿಯ ಸೈನಿಕರು. ನಿಜವಾಗಿ ಅವರು ಟಿಪ್ಪು ಮತ್ತು ಆತನ ತಾಯಿಯನ್ನು ಮರಾಠರ ಜತೆಗಿನ ಯುದ್ಧದ ವೇಳೆ ರಕ್ಷಿಸಿದ್ದರು. ಆದಾಗ್ಯೂ, ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪು ಅಸುನೀಗಿದ. ಇದಕ್ಕೆ ರಾಣಿ ಲಕ್ಷ್ಮಮ್ಮಣ್ಣಿ. ಬ್ರಿಟಿಷರು ಮತ್ತು ನಿಜಾಮರ ನಡುವಣ ವ್ಯವಸ್ಥಿತ ಒಪ್ಪಂದ ಮತ್ತು ಪೂರ್ವ ನಿರ್ಧರಿತ ದಾಳಿಯೇ ಕಾರಣ. ಟಿಪ್ಪು ಬಹಳ ಸಮರ್ಥನಾಗಿದ್ದು, ಅತ್ಯಂತ ಬಲಿಷ್ಠವಾದ ಸೈನ್ಯವನ್ನೂ ಹೊಂದಿದ್ದ. ಹೀಗಾಗಿ ಆತನನ್ನು ಕೇವಲ ಇಬ್ಬರು ಹತ್ಯೆ ಮಾಡಿದರು ಎಂಬುದನ್ನು ಒಪ್ಪಲಾಗದು’ ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದ ಪ್ರಾಧ್ಯಾಪಕ ಎನ್​ಎಸ್ ರಂಗರಾಜು ಇತ್ತೀಚೆಗೆ ತಿಳಿಸಿದ್ದನ್ನು ‘ಇಂಡಿಯನ್ ಎಕ್ಸ್​​ಪ್ರೆಸ್’ ಉಲ್ಲೇಖಿಸಿದೆ.

ಟಿಪ್ಪು ಸುಲ್ತಾನ್​ನನ್ನು ಉರಿಗೌಡ ಮತ್ತು ನಂಜೇಗೌಡ ಹತ್ಯೆ ಮಾಡಿದ್ದರು ಎಂಬುದು ಸುಳ್ಳು ಮತ್ತು ನಕಲಿ ವಾದ ಎಂದು ಖ್ಯಾತ ಇತಿಹಾಸ ತಜ್ಞ ಪ್ರೊ. ನಂಜರಾಜೇ ಅರಸ್ ಪ್ರತಿಪಾದಿಸಿದ್ದಾರೆ. ಉರಿಗೌಡ, ನಂಜೇಗೌಡ ಕೇವಲ ಕಾಲ್ಪನಿಕ ವ್ಯಕ್ತಿಗಳು. ರಾಣಿ ಲಕ್ಷಮ್ಮಣ್ಣಿ ತಿರುಮಲ್ ರಾವ್ ಹಾಗೂ ನಾರಾಯಣ್ ರಾವ್ ಜೊತೆ ಇದ್ದವರು. ಆದರೆ‌ ಈಗ ಅವರನ್ನು ಉರಿಗೌಡ ನಂಜೆಗೌಡ ಅಂತ ಸುಳ್ಳು ಹೇಳಲಾಗುತ್ತಿದೆ. ಬ್ರಿಟಿಷ್, ಪರ್ಷಿಯನ್ ದಾಖಲೆಗಳಲ್ಲೂ ಇವರ ಪರಿಚಯ ಇಲ್ಲ. ಇವರು ಕೇವಲ‌ ಕಾಲ್ಪನಿಕ ಎಂಬುದು ನಂಜರಾಜೇ ಅರಸ್ ವಾದವಾಗಿದೆ.

ಇನ್ನಷ್ಟು ಪ್ರಮುಖ ಸುದ್ದಿ ಹಾಗೂ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:00 am, Thu, 16 March 23