AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿವಿ ಆಚಾರ್ಯ ವಿಶ್ಲೇಷಣೆ: ಕೇಂದ್ರ ಸರ್ಕಾರಕ್ಕಿದೆ ಜನಗಣತಿಯ ಸಂವಿಧಾನಬದ್ಧ ಅಧಿಕಾರ; ಕಾನೂನಾತ್ಮಕ ಅಂಶಗಳ ಇಣುಕುನೋಟ

ಕರ್ನಾಟಕದ ಜಾತಿಗಣತಿಗೆ ಎದುರಾಗಿರುವ ವಿರೋಧದ ಬಗ್ಗೆ ಇತ್ತೀಚೆಗೆ ಪ್ರಕಟಣೆ ಬಿಡುಗಡೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ನಡೆಸಲು ಉದ್ದೇಶಿಸಿರುವ ಜನಗಣತಿ ಜತೆ ರಾಜ್ಯದ ಸಮೀಕ್ಷೆಯನ್ನು ಹೋಲಿಸಿದ್ದರು. ಆದರೆ ಸಂವಿಧಾನದ ಪ್ರಕಾರ ನೋಡಿದರೆ, ಈ ಹೋಲಿಕೆಯೇ ಅಪ್ರಸ್ತುತವಾಗುತ್ತದೆ. ಯಾಕೆ? ಸಂವಿಧಾನದಲ್ಲಿ ಜನಗಣತಿ ಬಗ್ಗೆ ಏನಿದೆ? ಕರ್ನಾಟಕ ಹೈಕೋರ್ಟ್ ತೀರ್ಪಿನಲ್ಲಿ ಹೇಳಿದ್ದೇನು? ಹಿರಿಯ ನ್ಯಾಯವಾದಿ ಬಿವಿ ಆಚಾರ್ಯ ವಿಶ್ಲೇಷಣೆ ಇಲ್ಲಿದೆ.

ಬಿವಿ ಆಚಾರ್ಯ ವಿಶ್ಲೇಷಣೆ: ಕೇಂದ್ರ ಸರ್ಕಾರಕ್ಕಿದೆ ಜನಗಣತಿಯ ಸಂವಿಧಾನಬದ್ಧ ಅಧಿಕಾರ; ಕಾನೂನಾತ್ಮಕ ಅಂಶಗಳ ಇಣುಕುನೋಟ
ಕೇಂದ್ರ ಸರ್ಕಾರಕ್ಕಿದೆ ಜನಗಣತಿಯ ಸಂವಿಧಾನಬದ್ಧ ಅಧಿಕಾರ; ಕಾನೂನಾತ್ಮಕ ಅಂಶಗಳ ಇಣುಕುನೋಟ (ಸಾಂದರ್ಭಿಕ ಚಿತ್ರ)
Ganapathi Sharma
|

Updated on:Oct 01, 2025 | 12:22 PM

Share

ಕೇಂದ್ರ ಸರ್ಕಾರ ನಡೆಸಲು ಉದ್ದೇಶಿಸಿರುವ ಜನಗಣತಿಯನ್ನು ಕರ್ನಾಟಕದ ಹಿಂದುಳಿದ ವರ್ಗಗಗಳ ಆಯೋಗ ಈಗ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗೆ (Caste Census) ಹೋಲಿಸಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇತ್ತೀಚೆಗೆ ಪತ್ರಿಕಾ ಪ್ರಟಣೆ ಬಿಡುಗಡೆ ಮಾಡಿದ್ದಾರೆ. ಇದು ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡುವಂತಿದೆ. ಯಾಕೆಂದರೆ, ಕೇಂದ್ರ ಸರ್ಕಾರ ನಡೆಸಲು ಉದ್ದೇಶಿಸಿರುವ ಜನಗಣತಿಗೂ ರಾಜ್ಯ ಸರ್ಕಾರ ನಡೆಸುತ್ತಿರುವ ಸಮೀಕ್ಷೆಗೂ ಅದರ ವ್ಯಾಪ್ತಿ, ಉದ್ದೇಶ ಮತ್ತು ಸಮೀಕ್ಷೆ ನಡೆಸುವ ಅಧಿಕಾರದ ವಿಚಾರದಲ್ಲಿ ಬಹಳ ವ್ಯತ್ಯಾಸವಿದೆ. ಸಂವಿಧಾನದ (ಏಳನೇ ಶೆಡ್ಯೂಲ್​​ನ ಪಟ್ಟಿ 1, ಅಥವಾ ಕೇಂದ್ರ ಪಟ್ಟಿ ಗಮನಿಸಿದರೆ ತಿಳಿಯುತ್ತದೆ) ಪ್ರಕಾರ, ಜನಗಣತಿ ನಡೆಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. 1948ರಲ್ಲಿ ಸಂಸತ್ತಿನಲ್ಲಿ ಅನುಮೋದನೆ ದೊರೆತ ಜನಗಣತಿ ಕಾಯ್ದೆ (Census Act, 1948) ಪ್ರಕಾರ, ಕೇಂದ್ರ ಸರ್ಕಾರಕ್ಕೆ ಜನಗಣತಿ ನಡೆಸುವ ಅಧಿಕಾರ ಇದೆ.

ಕೇಂದ್ರ ಸರ್ಕಾರಕ್ಕಿದೆ ಜನಗಣತಿ ನಡೆಸುವ ಸಂವಿಧಾನಬದ್ಧ ಅಧಿಕಾರ

1948 ರ ಗಣತಿ ಕಾಯ್ದೆಯ ನಿಬಂಧನೆಗಳ ಪ್ರಕಾರ, ಜನಗಣತಿ ನಡೆಸಲು ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಉನ್ನತ ಅಧಿಕಾರವಿದೆ. ಅದೇ ರೀತಿ ದಂಡ ವಿಧಿಸುವ ಆಯ್ಕೆಗಳೂ ಇವೆ. ಸಮೀಕ್ಷೆಯ ಕುರಿತು ಇತ್ತೀಚೆಗೆ ನೀಡಿದ ತೀರ್ಪಿನಲ್ಲಿ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ ಕೂಡ ಅದನ್ನು ವಿವರವಾಗಿ (ಪ್ಯಾರಾ 28 ಮತ್ತು 31) ಉಲ್ಲೇಖಿಸಿದೆ. ಜನಗಣತಿ ಅಧಿಕಾರಿಯೊಬ್ಬರು ಯಾವುದೇ ಪ್ರಶ್ನೆಯನ್ನು ಕೇಳಿದರೆ, ಪ್ರತಿಯೊಬ್ಬ ವ್ಯಕ್ತಿಯು ತನಗೆ ತಿಳಿದ ಮಟ್ಟಿಗೆ ಅದಕ್ಕೆ ಉತ್ತರಿಸಲು ಬದ್ಧನಾಗಿರುತ್ತಾನೆ. ವಿಫಲನಾದರೆ ದಂಡ ವಿಧಿಸಬಹುದಾಗಿದೆ ಎಂಬ 34ನೇ ಪ್ಯಾರಾದ ಅಂಶವನ್ನೂ ಕೋರ್ಟ್ ಉಲ್ಲೇಖಿಸಿದೆ.

ರಾಜ್ಯದ ಸಮೀಕ್ಷೆ ವೇಳೆ ಮಾಹಿತಿ ನೀಡುವುದು ಕಡ್ಡಾಯವಲ್ಲ

ರಾಜ್ಯ ಸರ್ಕಾರಗಳ ಸಮೀಕ್ಷೆ ವೇಳೆ ಮಾಹಿತಿ ನೀಡುವುದು ಕಡ್ಡಾಯವಲ್ಲ ಎಂಬುದನ್ನೂ ಹೈಕೋರ್ಟ್ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ. ರಾಜ್ಯ ಸರ್ಕಾರ ನಡೆಸುವ ಸಮೀಕ್ಷೆ ಒಂದು ದತ್ತಾಂಶ ಸಂಗ್ರಹ ಪ್ರಕ್ರಿಯೆ ಅಷ್ಟೇ. ಇಲ್ಲಿ ನಾಗರಿಕನಿಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲೇಬೇಕಾದ ಅಥವಾ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲೇಬೇಕಾದ ಬಾಧ್ಯತೆ ಇರುವುದಿಲ್ಲ. ಇಲ್ಲಿ, ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸಿದರೆ ದಂಡ ವಿಧಿಸುವ ಅಧಿಕಾರವೂ ಇಲ್ಲ. ಇದನ್ನು ತೀರ್ಪಿನ 33 ಹಾಗೂ 34ನೇ ಪ್ಯಾರಾದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಹಿಂದೂ ಧರ್ಮದಲ್ಲಿಲ್ಲದ ಹೊಸ ಜಾತಿ ಕರ್ನಾಟಕದಲ್ಲಿ ಹುಟ್ಟಿದ್ದು ಯಾಕೆ?

ಹೀಗಾಗಿ, ಕರ್ನಾಟಕದ ಹಿಂದುಳಿದ ವರ್ಗಗಳ ಆಯೋಗ ನಡೆಸುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯನ್ನು ಕೇಂದ್ರ ಸರ್ಕಾರದ ಜನಗಣತಿ ಜತೆ ಹೋಲಿಸುವುದು ಸಂಪೂರ್ಣ ಅಪ್ರಸ್ತುತ. ರಾಜ್ಯ ಸರ್ಕಾರದ ಸಮೀಕ್ಷೆಯಲ್ಲಿ ಭಾಗವಹಿಸುವುದು ಐಚ್ಛಿಕ ಅಥವಾ ಸ್ವಯಂಪ್ರೇರಿತವಾಗಿದ್ದರೆ, ಕೇಂದ್ರ ಸರ್ಕಾರ ನಡೆಸುವ ಜನಗಣತಿಯಲ್ಲಿ ಭಾಗಿಯಾಗುವುದು ಸಂವಿಧಾನ ಪ್ರಕಾರ ಪ್ರತಿಯೊಬ್ಬ ನಾಗರಿಕನ ಬಾಧ್ಯತೆಯಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ನಡೆಸುವ ಜನಗಣತಿಯನ್ನು ಯಾರೂ ಬಹಿಷ್ಕರಿಸುವ ವಿಚಾರವೇ ಉದ್ಭವಿಸುವುದಿಲ್ಲ. ಆದರೆ, ರಾಜ್ಯ ಸರ್ಕಾರದ ಸಮೀಕ್ಷೆ ಹಾಗಲ್ಲವೇ ಅಲ್ಲ.

ಇನ್ನಷ್ಟು ಅಭಿಮತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:19 am, Wed, 1 October 25