ಹಿಂದೂ ಧರ್ಮದಲ್ಲಿಲ್ಲದ ಹೊಸ ಜಾತಿ ಕರ್ನಾಟಕದಲ್ಲಿ ಹುಟ್ಟಿದ್ದು ಯಾಕೆ?
ಜಾತಿ ಗಣತಿಗೆ ದಿನಗಣನೆ ಆರಂಭವಾದ ಬೆನ್ನಲ್ಲೇ ಜಾತಿ ಕುರಿತ ವಿವಾದದ ಜ್ವಾಲೆ ಕರ್ನಾಟಕದಲ್ಲಿ ತೀವ್ರಗೊಂಡಿದೆ. ಜಾತಿ ಪದ್ಧತಿ ಇರುವವರೆಗೆ ಸಮಾಜದಲ್ಲಿ ಸಮಾನತೆ ಬರುವುದಿಲ್ಲ, ಜಾತಿ ಪದ್ಧತಿ ತೊಲಗಬೇಕು ಎಂದು ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅವಧಿಯಲ್ಲಿಯೇ ಕರ್ನಾಟಕದಲ್ಲಿ ಹೊಸ ಜಾತಿಗಳು ಹುಟ್ಟಿದ್ದು ಇತಿಹಾಸದ ವ್ಯಂಗ್ಯವಲ್ಲವೇ?

ಸೆಪ್ಟೆಂಬರ್ 17, ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ದಿನ. ಕಾಂಗ್ರೆಸ್ ನಾಯಕರು ಬೆಳ್ಳಂಬೆಳಗ್ಗೆ ತಮ್ಮ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕಾರ್ಯನಿರತರಾಗಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ರಾಷ್ಟ್ರೀಯ ನಾಯಕರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಆ ದಿನ ಬೆಳಿಗ್ಗೆಯೇ ರಾಮಸ್ವಾಮಿ ಪೆರಿಯಾರ್ ಅವರ ಗುಣಗಾನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಪೆರಿಯಾರ್ ಅವರಂತೆ, ತಾವು ಕೂಡ ಜಾತಿ ಪದ್ಧತಿ ನಿವಾರಣೆಗೆ ಬದ್ಧ ಎನ್ನುವ ಅರ್ಥ ಬರುವಂತೆ, ಪೆರಿಯಾರ್ ಅವರ ಹೋರಾಟದ ಗುಣಗಾನ ಮಾಡಿದ್ದರು. ಕಾಂಗ್ರೆಸ್ ಪಕ್ಷದ ನಾಯಕರ ನಡೆಯನ್ನು ಹಲವಾರು ಜನ ಪಕ್ಷಾತೀತವಾಗಿ ಮೆಚ್ಚಿಕೊಂಡರು. ದೇಶಕ್ಕೆ ಶಾಪವಾಗಿರುವ ಜಾತಿ ಪದ್ಧತಿಯ ನಿವಾರಣೆ ಮಾಡಲು ಕಾಂಗ್ರೆಸ್ ಪಕ್ಷ ಕಟಿಬದ್ಧವಾಗಿದೆ ಎನ್ನುವ ಸೂಚನೆ ಸಿಕ್ಕಿತು ಎಂದು ಕೆಲವರು ಅಂದುಕೊಂಡರು. ಕೆಲವೇ ಗಂಟೆಗಳಲ್ಲಿ ಒಂದು ವಿಚಿತ್ರ ಬೆಳವಣಿಗೆ ನಡೆಯಿತು. ಕರ್ನಾಟಕದ ಹಿಂದುಳಿದ ವರ್ಗದ ಆಯೋಗ ತಯಾರಿಸಿದೆ ಎನ್ನಲಾದ ಜಾತಿಯ ಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ಸೋಮವಾರದಿಂದ ಪ್ರಾರಂಭವಾಗಲಿರುವ ‘ಸಾಮಾಜಿಕ ಆರ್ಥಿಕ ಸಮೀಕ್ಷೆ– 2025’ ಉರುಫ್ ಜಾತಿ ಗಣತಿ ನಡೆಯುವ ಸಂದರ್ಭದಲ್ಲಿ ಜನ ತಮ್ಮನ್ನು ಯಾವ ರೀತಿ ಗುರುತಿಸಿಕೊಳ್ಳಬೇಕು ಎಂಬುದರ ಸೂಚಕವಾಗಿರುವ ಜಾತಿ ಗಣತಿಯ ಪಟ್ಟಿ ಆ ದಿನ ಹೊರಬಿದ್ದಿತ್ತು. ಒಂದಲ್ಲ ಎರಡಲ್ಲ ಬರೋಬ್ಬರಿ 1561 ಜಾತಿಗಳನ್ನು ಅಲ್ಲಿ ನಮೂದಿಸಲಾಗಿತ್ತು. ಆ ಪಟ್ಟಿಯನ್ನು ನೋಡುತ್ತಿದ್ದಂತೆ ಜನ ಕಂಗಾಲಾದರು, ಋಣಾತ್ಮಕವಾಗಿ ತಮ್ಮ ಪ್ರತಿಕ್ರಿಯೆಯನ್ನು ನೀಡಲು ಪ್ರಾರಂಭಿಸಿದರು.
ಈ ಕುರಿತು ಚರ್ಚಿಸಿದ ಕೆಲವರಂತೂ ಕರ್ನಾಟಕ ಉಚ್ಚ ನ್ಯಾಯಾಲಯದ ಬಾಗಿಲು ತಟ್ಟಿದರು. ಅವರ ಅರ್ಜಿಯನ್ನು ಸ್ವೀಕರಿಸಿದ ನ್ಯಾಯಾಲಯವು ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರ, ಹೀಗೆ ಎಲ್ಲರಿಗೂ ನೋಟಿಸ್ ಜಾರಿ ಮಾಡಿ, ಅಭಿಪ್ರಾಯ ಸಲ್ಲಿಸಲು ಕೋರಿದೆ. ಈ ಸಂದರ್ಭದಲ್ಲಿ ಏಳುವ ಮೂಲಭೂತ ಪ್ರಶ್ನೆಗಳಿಗೆ, ತನ್ನ ತೀರ್ಪಿನಲ್ಲಿ ಉಚ್ಚ ನ್ಯಾಯಾಲಯ ಬೆಳಕು ಚೆಲ್ಲಬಹುದು ಎಂಬುದನ್ನು ನಿರೀಕ್ಷಿಸಬಹುದು. ಆ ಮೂಲಭೂತ ಪ್ರಶ್ನೆಗಳು ಯಾವವು? ಅವು ಯಾಕೆ ಮುಖ್ಯ ಎಂಬುದನ್ನು ಚರ್ಚಿಸುವುದರಲ್ಲಿ ತಪ್ಪಿಲ್ಲ.
- ಅಧಿಕೃತವಾಗಿ ಹೇಳಿರುವಂತೆ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ನಡೆಸುವ ಸಮೀಕ್ಷೆಯ ಹೆಸರು ಸಾಮಾಜಿಕ ಆರ್ಥಿಕ ಸಮೀಕ್ಷೆ. ಆದರೆ ಅಸಲಿನಲ್ಲಿ ನಡೆಯುವುದೇನೆಂದರೆ ಜನರ ಜಾತಿಗಣತಿ. ಜನರ ಜಾತಿಯ ವಿಚಾರವನ್ನು ಸಮೀಕ್ಷೆಯ ಹೆಸರಲ್ಲಿ ಕಲೆ ಹಾಕಲು ಹಿಂದುಳಿದ ವರ್ಗದ ಆಯೋಗಕ್ಕೆ ಅಧಿಕಾರ ಇದೆಯೆ? ಪ್ರಾಯಶಃ ನ್ಯಾಯಾಲಯ ಇದನ್ನು ಪರಿಗಣಿಸಬಹುದು.ಹಾಗಾಗಿ ಈ ವಿಚಾರವನ್ನು ಲಂಬಿಸುವುದು ಸೂಕ್ತವಲ್ಲ.
- ಇದು ಜಾತಿ ಸಮೀಕ್ಷೆ ಅಲ್ಲವೆಂದಾದರೆ, ಸಾಮಾಜಿಕ ಆರ್ಥಿಕ ಸಮೀಕ್ಷೆಯ ಸಂದರ್ಭದಲ್ಲಿ ಜಾತಿ ಬಗ್ಗೆ ಮಾಹಿತಿ ಕಲೆ ಹಾಕುವುದು ಯಾಕೆ? ಸರಕಾರದ ವಾದವೇನೆಂದರೆ, ಜಾತಿಯ ಬಗೆಗೆ ಮಾಹಿತಿಯನ್ನು ಹಂಚಿಕೊಳ್ಳಲು ಇಷ್ಟವಿಲ್ಲದವರು ಕೊನೆಯ ಕಾಲಂನಲ್ಲಿ ಅದನ್ನು ನಮೂದಿಸಬಹುದು. ಜಾತಿಯ ಮಾಹಿತಿಯನ್ನು ಕೊಡಬೇಕು ಎನ್ನುವುದು ಕಡ್ಡಾಯವಲ್ಲ. ಆದರೆ ಸಾಮಾಜಿಕ ಆರ್ಥಿಕ ಸಮೀಕ್ಷೆಯ ವಿಚಾರದ ಸಂದರ್ಭದಲ್ಲಿ, ಜಾತಿಗೆ ಸಂಬಂಧಿಸಿದ ಮಾಹಿತಿಯನ್ನು ಕಲೆ ಹಾಕುವುದೇ ತಪ್ಪು. ಮತ್ತು ಜಾತಿಗೆ ಸಂಬಂಧಿಸಿ ಕಾಲಂನ್ನು ಈ ಸಮೀಕ್ಷೆಯ ಪ್ರಶ್ನಾವಳಿಗೆ ಸೇರಿಸಿದ್ದು ತಪ್ಪು ಎಂಬುದು ಹಲವಾರು ಜನರ ವಾದ. ಈ ಕುರಿತು, ನ್ಯಾಯಾಲಯ ಒಂದು ಸ್ಪಷ್ಟ ನಿಲುವನ್ನು ತೆಗೆದುಕೊಂಡು ಸರಕಾರಕ್ಕೆ ನಿರ್ದೇಶನವನ್ನು ನೀಡಬಹುದು.
- ಎಲ್ಲದಕ್ಕಿಂತ ಹೆಚ್ಚಿನ ಮತ್ತು ಗಂಭೀರ ವಿಚಾರಕ್ಕೆ ಈಗ ಬರೋಣ. ಈಗ ಹರಿಬಿಟ್ಟಿರುವ ಪಟ್ಟಿಯ ಪ್ರಕಾರ, ಕ್ರಿಶ್ಚಿಯನ್ ಬ್ರಾಹ್ಮಣ, ಕ್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ಮೊಗವೀರ– ಹೀಗೆ ಹಲವಾರು ಹೊಸ ಜಾತಿಗಳ ಹೆಸರುಗಳನ್ನು ಈಗಾಗಲೇ ಇರುವ ಜಾತಿಗಳ ಹೆಸರಿನ ಜೊತೆ ಸೇರಿಸಲಾಗಿದೆ. ಹಿಂದೂ ಧರ್ಮದ ನಂಬಿಕೆ ಪ್ರಕಾರ, ಹುಟ್ಟಿನಿಂದ ಜಾತಿ ಬರುತ್ತದೆ. ಅಂದರೆ, ಭಾರತದಲ್ಲಿ ಈಗ ಇರುವ ಜಾತಿಗಳನ್ನು ಬಿಟ್ಟು ಹೊಸ ಜಾತಿಗಳು ಹುಟ್ಟಲು ಸಾಧ್ಯವೇ ಇಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ, ತಾನೇ ಮುಂದಾಗಿ ಹೊಸ ಜಾತಿಗಳು ಹುಟ್ಟಿವೆ ಎಂದು ಪಟ್ಟಿ ಮಾಡಲು ಹೇಗೆ ಸಾಧ್ಯ? ಇಲ್ಲದ ಹೊಸ ಜಾತಿಗಳನ್ನು ಪಟ್ಟಿ ಮಾಡಲು ಆಯೋಗಕ್ಕೆ ಅಧಿಕಾರ ನೀಡಿದವರು ಯಾರು? ಇಲ್ಲಿ ಇನ್ನೊಂದು ವಿಚಾರ ಹೇಳಲೇಬೇಕು. ಜಾತಿಯೊಳಗೆ ಬರುವ ಉಪ ಪಂಗಡಗಳನ್ನು ಬೇರೆ ಜಾತಿಯೆಂದು ಪರಿಗಣಿಸುವ ಆಯೋಗದ ನಿರ್ಧಾರ ತಪ್ಪು. ಉದಾಹರಣೆಗೆ ಬ್ರಾಹ್ಮಣ ಎಂಬುದು ಒಂದು ಜಾತಿ. ಈ ಜಾತಿಯ ಕೆಳಗೆ ಹವ್ಯಕ ಬ್ರಾಹ್ಮಣ ಅಥವಾ ಶಿವಳ್ಳಿ ಬ್ರಾಹ್ಮಣ ಅಥವಾ ಮಾಧ್ವ, ಸ್ಮಾರ್ಥ – ಹೀಗೆ ಹಲವಾರು ಉಪ ಜಾತಿಗಳು/ಪಂಗಡಗಳು ಇವೆ. ಈ ಉಪ ಪಂಗಡಗಳನ್ನೇ ಬೇರೆ ಬೇರೆ ಜಾತಿಗಳೆಂದು ಪರಿಗಣಿಸುವುದು ಹಿಂದೂ ಧರ್ಮದ ಜಾತಿ ಪರಿಕಲ್ಪನೆಗೆ ಮಾಡುವ ಅಪಚಾರವಲ್ಲವೇ? ಇದೇ ರೀತಿಯ ತರ್ಕ ಬಳಸಿ, ಹಲವಾರು ಜಾತಿಗಳನ್ನು ವಿಭಜಿಸಿ, ಒಡೆದಾಳುವ ನೀತಿಯನ್ನು ಆಯೋಗ ಅನುಸರಿಸಿದಂತೆ ಕಾಣುತ್ತಿದೆ. ಆಯೋಗದ ಕುರಿತು ಜನರಿಗೆ ತಪ್ಪು ಅಭಿಪ್ರಾಯ ಮೂಡಲು ಇದು ಪ್ರಮುಖ ಕಾರಣವಾಗಿದೆ. ಇದನ್ನೂ ಸಹ ನ್ಯಾಯಾಲಯ ಪರಾಮರ್ಶಿಸಿದರೆ ತಪ್ಪಿಲ್ಲ. ಈಗ ಬಂದಿರುವ ಮಾಹಿತಿಯ ಆಧಾರದ ಮೇಲೆ ಹೇಳುವುದಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ರಿಶ್ಚಿಯನ್-ಹಿಂದೂ-ಈ ರೀತಿಯ ಜಾತಿಗಳ ಪಟ್ಟಿಯನ್ನು ತೆಗೆಯಲು ಹೇಳಿದ್ದಾರೆ ಎನ್ನುವ ವಿಚಾರ. ಈ ರೀತಿಯ ಜಾತಿಗಳಿವೆ ಎಂದು ಪರಿಗಣಿಸಿದ್ದು ಮೊದಲ ತಪ್ಪಾದರೆ, ತಮ್ಮ ಸಂಪುಟ ಸದಸ್ಯರ ಒತ್ತಾಯಕ್ಕೆ ಮಣಿದು ಆ ಪಟ್ಟಿಯಿಂದ ಈ ಜಾತಿಗಳ ಹೆಸರನ್ನು ತೆಗೆಯಲು ಆದೇಶಿಸಿದ್ದು ಮತ್ತೊಂದು ತಪ್ಪು. ಈ ವಿಚಾರವನ್ನು ಗಮನಿಸಿದಾಗ ಒಂದು ವಿಚಾರ ಸ್ಪಷ್ಟವಾಗುತ್ತದೆ: ಈಗ ನಡೆಸಲು ಮುಂದಾಗಿರುವ ಸಾಮಾಜಿಕ ಆರ್ಥಿಕ ಸಮೀಕ್ಷೆಯ ಹೆಸರಿನಲ್ಲಿ ಕಲೆ ಹಾಕುತ್ತಿರುವ ಜಾತಿ ಕುರಿತಾದ ಮಾಹಿತಿ ರಾಜಕೀಯ ಕಾರಣಕ್ಕೆ ವಿನಃ ಅಭಿವೃದ್ಧಿಗೋಸ್ಕರ ಅಲ್ಲ ಎಂಬುದು ನಿಚ್ಚಳವಾಗುತ್ತದೆ.
- ಪ್ರತಿವರ್ಷ ಶಾಲಾ ಕಾಲೇಜುಗಳಿಗೆ ಪ್ರವೇಶ ಪಡೆಯುವ ಮಕ್ಕಳು ಮತ್ತು ಸರ್ಕಾರಿ ಉದ್ಯೋಗಕ್ಕೆ ಬರುವ ಯುವಜನರು ಜಾತಿ ಪ್ರಮಾಣ ಪತ್ರವನ್ನು ತರುವುದು ಸಾಮಾನ್ಯ. ಹೀಗೆ ನೀಡಿದ ಅರ್ಜಿಗಳನ್ನು ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಪರೀಕ್ಷಿಸಿ ತಹಶೀಲ್ದಾರ್ ಅವರು ಆ ಮಕ್ಕಳಿಗೆ ಮತ್ತು ಯುವ ಜನರಿಗೆ ಜಾತಿ ಪ್ರಮಾಣ ನೀಡುವುದು ರೂಢಿಯಲ್ಲಿದೆ. ಹೀಗಿರುವಾಗ ಮತ್ತೆ ಜಾತಿಯ ಗಣತಿ ವಿಚಾರ ಯಾರಿಗೆ ಮತ್ತು ಯಾಕೆ ಬೇಕು? ಈ ವಿಚಾರದ ಬಗ್ಗೆ, ಸರಕಾರ ಸಾಮಾನ್ಯ ಜನರಿಗೆ ಸ್ಪಷ್ಟತೆಯನ್ನು ನೀಡಿಲ್ಲ.
- ರಾಜ್ಯದ ಜನರ ಖಾಸಗಿತನಕ್ಕೆ ಸಂಬಂಧಿಸಿದ್ದು ಸೇರಿ ಎಲ್ಲ ವಿಚಾರಗಳನ್ನು ಕಲೆ ಹಾಕುವ ಆಯೋಗ ಈ ದತ್ತಾಂಶವನ್ನು ಸುರಕ್ಷಿತವಾಗಿಡುತ್ತದೆ ಎಂಬುದಕ್ಕೆ ಗ್ಯಾರಂಟಿ ಎಲ್ಲಿದೆ? ಈ ಸಂದರ್ಭದಲ್ಲಿ ಒಂದು ಪ್ರಶ್ನೆ ಉದ್ಭವಿಸಬಹುದು: ಕೇಂದ್ರ ಸರ್ಕಾರ ಜನಗಣತಿಯನ್ನು ಮಾಡುವಾಗ ಎಲ್ಲ ತರಹದ ಮಾಹಿತಿಯನ್ನು ಕಲೆ ಹಾಕುತ್ತದೆ. ಕೇಂದ್ರದ ವಿಚಾರ ಬಂದಾಗ ಸರಿ, ರಾಜ್ಯದ ವಿಚಾರ ಬಂದಾಗ ತಪ್ಪು ಎಂದು ಹೇಳುವುದು ಎಷ್ಟು ಸಮಂಜಸ? ಕೇಂದ್ರದಲ್ಲಿ ಕಾಂಗ್ರೆಸ್, ಬಿಜೆಪಿ ಹೀಗೆ–ಹಲವಾರು ಪಕ್ಷಗಳು ಅಧಿಕಾರ ನಡೆಸಿವೆ. ಆಯಾ ಕಾಲದಲ್ಲಿ ನಡೆಸಿದ ಜನಗಣತಿಯ ಮಾಹಿತಿಯ ಗೋಪ್ಯತೆಯನ್ನು ಎಲ್ಲರೂ ಕಾಪಾಡಿದ್ದಾರೆ. ಆದ್ದರಿಂದ ಕೇಂದ್ರ ಸರಕಾರ ನಡೆಸುವ ಜನಗಣತಿ ವಿಚಾರದಲ್ಲಿ ಜನರಿಗೆ ವಿಶ್ವಾಸಾರ್ಹತೆ ಇದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುವ ಈ ಸಮೀಕ್ಷೆಯ ಮಾಹಿತಿ ಖಾಸಗಿ ಕಂಪನಿಗಳ ಪಾಲಾಗುವುದಿಲ್ಲ ಎಂಬ ಶಂಕೆ ಉದ್ಭವಿಸಿದರೆ ಅದಕ್ಕೆ ಮೂಲ ಕಾರಣ, ಆಯೋಗದ ಮತ್ತು ಜನರ ನಡುವೆ ಇರುವ ನಂಬಿಕೆಯ ಕೊರತೆ. ಇದು ಸದ್ಯಕ್ಕಂತೂ ದೂರವಾಗುವ ಲಕ್ಷಣ ಕಾಣುತ್ತಿಲ್ಲ.
- ಇನ್ನೊಂದು ವೈರುಧ್ಯವನ್ನು ಈ ಸಂದರ್ಭದಲ್ಲಿ ಪ್ರಸ್ತಾಪಿಸುವುದು ಸೂಕ್ತ. 2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಹಾರದಲ್ಲಿ ಪ್ರಚಾರ ಮಾಡುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಓರ್ವ ಪತ್ರಕರ್ತನನ್ನು ವೇದಿಕೆಯ ಮೇಲೆ ಕರೆದು, ‘ನಿನ್ನ ಜಾತಿ ಯಾವುದು?’ ಎಂದು ಕೇಳಿ ಒಂದು ಅಚಾತುರ್ಯದ ಕೆಲಸ ಮಾಡಿದ್ದರು. ಅದಾದ ನಂತರ, ಲೋಕಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರೊಬ್ಬರು ರಾಹುಲ್ ಗಾಂಧಿಯವರಿಗೆ ‘ನಿಮ್ಮ ಜಾತಿ ಯಾವುದು?’ ಎಂದು ಕೇಳಿದ್ದಕ್ಕೆ ಇಡೀ ಕಾಂಗ್ರೆಸ್ ಪಕ್ಷ ಮುಗಿಬಿದ್ದಿತ್ತು. ಇದರ ಅರ್ಥವೇನೆಂದರೆ, ನಮ್ಮ ನಾಯಕರಿಗೆ ಜನರ ಜಾತಿಯ ವಿಚಾರ ಬೇಕು. ಆದರೆ ತಮ್ಮ ಖಾಸಗಿ ವಿಚಾರವನ್ನು ಹೊರ ಜಗತ್ತಿಗಿಡಲು ಅವರು ಹಿಂದೇಟು ಹಾಕುತ್ತಾರೆ.
- ಈ ಲೇಖನದ ಪ್ರಾರಂಭದಲ್ಲಿ ಹೇಳಿದ ವಿಚಾರಕ್ಕೆ ಈಗ ವಾಪಸ್ ಬರೋಣ. ಸೆಪ್ಟೆಂಬರ್ 17ರಂದು ಕಾಂಗ್ರೆಸ್ ಪಕ್ಷ ಹಿರಿಯರು ಪೆರಿಯಾರ್ ಹುಟ್ಟುಹಬ್ಬವನ್ನು (ಮೋದಿ ಹುಟ್ಟುಹಬ್ಬಕ್ಕೆ ಟಾಂಗ್ ಕೊಡಲು ಇರಬಹುದು) ವೈರಲ್ ಮಾಡಲು ಪ್ರಯತ್ನಿಸಿದ್ದು ತಪ್ಪಲ್ಲ. ಪೆರಿಯಾರ್ ಅವರು ಜಾತಿ ನಿರ್ವಂಶಗೊಳಿಸಲು ಕರೆಕೊಟ್ಟು ಜನರನ್ನು ಎಬ್ಬಿಸಲು ಪ್ರಯತ್ನಿಸಿದ್ದರು. ಅಂತಹ ಪೆರಿಯಾರ್ ಅವರನ್ನು ನೆನಪಿಸಿಕೊಂಡ ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ತಮ್ಮದೇ ಅವಧಿಯಲ್ಲಿ ಮತ್ತಷ್ಟು ಹೊಸ ಜಾತಿ ಹುಟ್ಟಿಗೆ ಅವಕಾಶ ನೀಡುತ್ತಿರುವುದು ಎಷ್ಟು ಸರಿ? ಜಾತಿಗಣತಿಯಂತಹ ಕಾರ್ಯಕ್ರಮದ ಮೂಲಕ ಜಾತಿ ವ್ಯವಸ್ಥೆಯ ಬೇರನ್ನು ಮತ್ತಷ್ಟು ಭದ್ರಗೊಳಿಸಲು ಹೊರಟಿರುವ ಕಾಂಗ್ರೆಸ್ ಪಕ್ಷ, ಪೆರಿಯಾರ್ ಅವರನ್ನು ನೆನಪಿಸಿಕೊಂಡಿದ್ದು ರಾಜಕೀಯ ಕಾರಣಕ್ಕೆ ಹೊರತು ಸಾಮಾಜಿಕ ಪರಿವರ್ತನೆಗಾಗಿ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಇದನ್ನೂ ಓದಿ: ಸಾಮಾಜಿಕ ಆರ್ಥಿಕ ಸಮೀಕ್ಷೆ 2025 ಉರುಫ್ ಜಾತಿ ಗಣತಿ: ಮತ್ತೊಂದು ರಾಜಕೀಯ ಜಿದ್ದಾಜಿದ್ದಿಗೆ ಅಖಾಡ ರೆಡಿ
ಇನ್ನಷ್ಟು ಅಭಿಮತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:05 pm, Sat, 20 September 25




