ಸಾಮಾಜಿಕ ಆರ್ಥಿಕ ಸಮೀಕ್ಷೆ 2025 ಉರುಫ್ ಜಾತಿ ಗಣತಿ: ಮತ್ತೊಂದು ರಾಜಕೀಯ ಜಿದ್ದಾಜಿದ್ದಿಗೆ ಅಖಾಡ ರೆಡಿ
ಕರ್ನಾಟಕ ಹಿಂದುಳಿದ ವರ್ಗ ಆಯೋಗ ನಡೆಸಲು ಮುಂದಾಗಿರುವ ಸಾಮಾಜಿಕ ಆರ್ಥಿಕ ಸಮೀಕ್ಷೆ- 2025 ಉರುಫ್ ಜಾತಿ ಗಣತಿ ಉದ್ದೇಶ ಸ್ಪಷ್ಟ: ಕರ್ನಾಟಕ ಸರಕಾರದ ಯೋಜನೆಗಳು ನಿಜವಾಗಿಯೂ ಅರ್ಹ ಫಲಾನುಭವಿಗಳಿಗೆ ತಲುಪುತ್ತಿದೆಯೇ ಎಂಬುದನ್ನು ಕಂಡುಕೊಳ್ಳುವುದು. ಆದರೆ, ಗಣತಿಯ ಹಿಂದಿನ ನೀಲನಕ್ಷೆಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ, ಸರಕಾರದ ಈ ಉದ್ದೇಶ ಈಡೇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಈ ಬಾರಿಯ ದಸರಾ ರಜೆಯಲ್ಲಿ ನಮ್ಮ ಮತ್ತು ನಿಮ್ಮ ಮನೆಗೆ ಶಾಲಾ ಶಿಕ್ಷಕರು ಬರಲಿದ್ದಾರೆ. ಹಾಗೆ ಬಂದವರು ನಮ್ಮ ಮತ್ತು ನಿಮ್ಮ ಕುಟುಂಬದ ಜಾತಕವನ್ನೇ ಎತ್ತಿಕೊಂಡು ಹೋಗಲಿದ್ದಾರೆ. ಕರ್ನಾಟಕ ಸರಕಾರದ ನಿರ್ದೇಶನದಂತೆ, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಆರ್ಥಿಕ ಸಮೀಕ್ಷೆ-2025 ಉರುಫ್ ಜಾತಿ ಗಣತಿಯನ್ನು (Caste Census) ನಡೆಸಲಿದೆ. ಅದರ ಭಾಗವಾಗಿ ಸಾವಿರಾರು ಜನ ಶಿಕ್ಷಕರು 2.5 ಕೋಟಿಗೂ ಹೆಚ್ಚಿನ ಕುಟುಂಬಗಳ ಮನೆಗೆ ತೆರಳಿ, 60 ಕ್ಕೂ ಹೆಚ್ಚಿನ ಪ್ರಶ್ನೆಗಳನ್ನು ಕೇಳಲಿದ್ದಾರೆ. ಆ ಮೂಲಕ ಪ್ರತಿ ಕುಟುಂಬದ ಮಾಹಿತಿಯನ್ನು ಕಲೆ ಹಾಕಲಿದ್ದಾರೆ.
ಒಂದು ದಶಕದ ಹಿಂದೆ ನಡೆಸಿದ್ದ ಇಂಥದ್ದೇ ಸಮೀಕ್ಷೆಯ ವರದಿಯ ಕತೆ ಏನಾಯಿತು ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ. 2015 ರಲ್ಲಿ ನಡೆಸಿದ್ದ ಸಮೀಕ್ಷೆಯ ವರದಿಯನ್ನು 2024-25 ರಲ್ಲಿ ಅಂಗೀಕರಿಸಲಾಯಿತು. ಸಂಪುಟದ ಮುಂದೆ ಚರ್ಚೆಗಿಟ್ಟು ಇನ್ನೇನು ಅಂಗೀಕರಿಸಬೇಕು ಎನ್ನುವಷ್ಟರಲ್ಲಿ, ಅದಕ್ಕೆ ಪ್ರಬಲ ವಿರೋಧ ಬಂತು. ವಿರೋಧ ಪಕ್ಷಗಳು ಮತ್ತು ಪ್ರಬಲ ಸಮುದಾಯಗಳು ಆ ವರದಿಯ ವಿರುದ್ಧ ತೊಡೆತಟ್ಟಿದ್ದರಿಂದ, ಸಿದ್ದರಾಮಯ್ಯ ನೇತೃತ್ವದ ಸರಕಾರ ಆ ವರದಿಯನ್ನೇ ಕೈಬಿಟ್ಟಿತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಖುದ್ದಾಗಿ ನಿನ್ನೆ (ಸೆ. 12) ಘೋಷಿಸಿದ 2025 ರ ಸಾಮಾಜಿಕ ಆರ್ಥಿಕ ಸಮೀಕ್ಷೆ ಹೇಗೆ ವಿಭಿನ್ನ? ಈ ಸಮೀಕ್ಷೆಯ ಮೂಲಕ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರಕಾರ ಏನನ್ನು ಸಾಧಿಸಲು ಹೊರಟಿದೆ ಎಂಬುದನ್ನು ವಿಶ್ಲೇಷಿಸುವುದು ಅತ್ಯಗತ್ಯ. ಯಾಕೆಂದರೆ, ಈ ಕೆಲಸಕ್ಕೆ ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆ ಹಣ–450 ಕೋಟಿ ರೂಪಾಯಿ– ಖರ್ಚಾಗುತ್ತದೆ ಎಂಬುದನ್ನು ಕೇಳಿದರೆ ಮೈಜುಂ ಎನ್ನುತ್ತದೆ.
ಜಾತಿ ಗಣತಿ: ಶಿಕ್ಷಕರಿಗೆ ಶಿಕ್ಷೆ?
ದಸರಾ ರಜೆಯಲ್ಲಿ ಗಣತಿ ಮಾಡಲು ಬಂದಾಗ ಮನೆಯಲ್ಲಿ ಯಾರಾದರು ಒಬ್ಬರಾದರೂ ಇರಹುದು, ಆಗ ಗಣತಿಗೆ ಬೇಕಾಗುವ ಎಲ್ಲ ಮಾಹಿತಿ ಸಿಗಬಹುದು ಎಂಬುದು ಸರಕಾರದ ಲೆಕ್ಕಾಚಾರವಿರಬಹುದು. ಶಾಲಾ ಶಿಕ್ಷಣದ ಕೆಲಸ ಬಿಟ್ಟು ಬೇರೆ ಯಾವ ಕೆಲಸಕ್ಕೂ ಶಿಕ್ಷಕರನ್ನು ನಿಯೋಜಿಸಬಾರದು ಎಂಬ ವಿಚಾರದಲ್ಲಿ ಒಮ್ಮತವಿದ್ದರೂ, ಈ ಸಮೀಕ್ಷೆಯ ಕೆಲಸಕ್ಕೆ ಮತ್ತೆ ಶಿಕ್ಷಕರನ್ನೇ ನೇಮಿಸುತ್ತಿರುವುದು ದುರಂತವೇ ಸರಿ. ಉದಾತ್ತ ಉದ್ದೇಶವನ್ನಿಟ್ಟುಕೊಂಡು ಸರಕಾರ ಗಣತಿ ನಡೆಸುತ್ತಿರುವುದರಿಂದ, ಈ ಕೆಲಸವನ್ನು ತಮಗೆ ನೀಡಿರುವ ಸಾಮಾಜಿಕ ಜವಾಬ್ದಾರಿಯ ಭಾಗವೆಂದು ಪರಿಗಣಿಸಬೇಕು. ಮತ್ತು ಈ ಕೆಲಸ ಮಾಡಲು ಶಿಕ್ಷಕರೇ ಸರಿ ಎಂದು ಸರಕಾರಕ್ಕನ್ನಿಸಿರಬಹುದು. ಈ ಹಿನ್ನೆಲೆಯಲ್ಲಿ, ದಸರಾ ರಜೆಯಲ್ಲಿ ಸಮೀಕ್ಷೆಯ ಕೆಲಸವನ್ನು ಶಿಕ್ಷಕರು ಮಾಡಿದರೆ ತಪ್ಪಿಲ್ಲ. ಗಣತಿ ಕೆಲಸ ಮಾಡಿದ್ದಕ್ಕೆ ವಿಶೇಷ ಸಂಭಾವನೆಯನ್ನು ಸರಕಾರ ನೀಡುವುದರಿಂದ ಅವರಿಗೆ ಅನ್ಯಾಯವಾಗುತ್ತದೆ ಎಂದು ಹೇಳಲಾಗದು.
ಹಿಂದಿನ ಸಮೀಕ್ಷೆ ಮತ್ತು ಈ ಗಣತಿಯ ವ್ಯತ್ಯಾಸ
2015ರಲ್ಲಿ ನಡೆದ ಜಾತಿಗಣತಿಗೆ ಮತ್ತು 2025ರ ಜಾತಿ ಗಣತಿಯಲ್ಲಿ ಇರುವ ಒಂದು ಮುಖ್ಯ ವ್ಯತ್ಯಾಸವೇನೆಂದರೆ, ಈ ಬಾರಿಯ ಸಮೀಕ್ಷೆಯ ಮೂಲಕ ರಾಜ್ಯದ ಆರ್ಥಿಕ ಬೆಳವಣಿಗೆಯ ಸ್ಥೂಲ ಚಿತ್ರಣ ಸಿಗಬಹುದೆಂಬ ವಿಶ್ವಾಸ. ಅಂದರೆ, 450 ಕೋಟಿ ರೂಪಾಯಿ ಖರ್ಚು ಮಾಡಿ ಬರೀ ಸ್ಥೂಲ ಚಿತ್ರಣ ಸಿಕ್ಕರೆ ಸಾಕೆ? ಸ್ಪಷ್ಟ ಚಿತ್ರಣ ಯಾಕೆ ಸಿಗಲ್ಲ ಎಂದು ಕೇಳುವವರು ಕೆಲ ವಿಚಾರಗಳನ್ನು ವಿವೇಚಿಸಬೇಕಾಗಿದೆ.
ಒಂದು ದಶಕಕ್ಕೂ ಹಿಂದಿನ ಸ್ಥಿತಿಗೆ ಹೋಲಿಸಿದರೆ, ಕರ್ನಾಟಕ ಈಗ ಸ್ವಲ್ಪ ಶ್ರೀಮಂತವಾಗಿದೆ. ಸಾಮಾನ್ಯ ಜನರ ಕೈಯಲ್ಲಿ ಹಣ ಓಡಾಡುತ್ತಿದೆ. ತಲಾ ಆದಾಯ 1 ಲಕ್ಷ ರೂಪಾಯಿಯನ್ನು ಮೀರಿದೆ. ಯಾರ ಕೈಯಲ್ಲಿ ಹಣ ಇದೆ? ಯಾರು ಶ್ರೀಮಂತರಾಗಿದ್ದಾರೆ? ಯಾರು ಇನ್ನೂ ಬಡತನ ರೇಖೆಗಿಂತ ಕೆಳಗೆ ಇದ್ದಾರೆ? ಯಾವ ಭೌಗೋಳಿಕ ಪ್ರದೇಶದಲ್ಲಿ ಈ ರೀತಿಯ ವೈವಿಧ್ಯ (ವೈರುಧ್ಯ) ಜಾಸ್ತಿ ಇದೆ ಎನ್ನುವ ಎಲ್ಲ ವಿವರವನ್ನು ಈ ಸಮೀಕ್ಷೆ ಹೊರತರುವ ಸಾಧ್ಯತೆಯಿದೆ.
ದೇಶದ ಆರ್ಥಿಕತೆ ಮತ್ತು ಬೆಳವಣಿಗೆ ವಿಚಾರ ಬಂದಾಗ, ಸಾಮಾನ್ಯವಾಗಿ ಕಾಂಗ್ರೆಸ್ ಪಕ್ಷದ ನಾಯಕರು, ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ ಒಂದು ಆರೋಪವನ್ನು ಮಾಡುವುದಿದೆ: ಬಿಜೆಪಿಗೆ ಸಹಕರಿಸುವ ಕೆಲವೇ ಕೆಲವು ಬಂಡವಾಳಶಾಹಿಗಳಿಗೆ (crony capitalists) ಕೇಂದ್ರ ಸರಕಾರ ಅನುಕೂಲ ಮಾಡಿಕೊಡುತ್ತದೆ. ಅವರು ಶ್ರೀಮಂತರಾಗಲು ಏನು ಬೇಕೋ ಅದನ್ನು ಮಾಡಿಕೊಡುತ್ತದೆ. ಇದರಿಂದಾಗಿ ದೇಶದಲ್ಲಿ ಉಳ್ಳವರ ಮತ್ತು ಬಡವರ ನಡುವಿನ ಕಂದಕ ಇನ್ನಷ್ಟು ವಿಸ್ತಾರಗೊಂಡಿದೆ. ಕರ್ನಾಟಕದಲ್ಲಿ ಮಧ್ಯಮ ವರ್ಗವು ಮೇಲ್ಮಧ್ಯಮ ವರ್ಗವಾಗುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕದ ಒಟ್ಟು ಆರ್ಥಿಕ ಪರಿಸ್ಥಿತಿಯನ್ನು ಸಂಶೋಧನೆಯ ನಿಕಶಕ್ಕೆ ಒಡ್ಡಬೇಕಾಗಿದೆ. ಮತ್ತು ಶ್ರೀಮಂತರು ಮತ್ತು ಬಡವರ ನಡುವಿನ ಬೆಳೆಯುತ್ತಿರುವ ಕಂದಕಕ್ಕೆ ಕಾರಣಗಳೇನು ಎನ್ನುವ ಮಾಹಿತಿಯನ್ನು ಹೊರತೆಗೆಯಬೇಕಾಗಿದೆ. ಈ ಗಣತಿಯಲ್ಲಿ ಸಿಕ್ಕ ಹೊಳಹನ್ನು ಉಪಯೋಗಿಸಿಕೊಂಡು ಬಡವರು ಮತ್ತು ಶ್ರೀಮಂತರ ನಡುವಿನ ಕಂದಕ ಕಡಿಮೆ ಮಾಡುವ ನಿಟ್ಟಿನಲ್ಲಿ ಸರಕಾರ ಕಾರ್ಯಸೂಚಿಯೊಂದನ್ನು ತರಬಹುದು. ಮೋದಿ ಸರಕಾರವನ್ನು ಟೀಕಿಸುವ ಕಾಂಗ್ರೆಸ್ ನಾಯಕರಿಗೆ, ಆಗ ಒಂದು ಹೊಸ ಅಸ್ತ್ರ ಸಿಗಬಹುದು. ‘ನೋಡಿ, ನಾವು ಕರ್ನಾಟಕದಲ್ಲಿ ಉಳ್ಳವರ ಮತ್ತು ಬಡವರ ನಡುವಿನ ಕಂದಕ ಕಡಿಮೆ ಮಾಡಲು ಏನೆಲ್ಲ ಮಾಡುತ್ತಿದ್ದೇವೆ’ ಎಂದು ಹೇಳಲು ಈ ಗಣತಿ ಅನುವು ಮಾಡಿಕೊಡಬಹುದು.
ಅಸಲಿಗೆ ಆಗುತ್ತಿರುವುದೇನು ಮತ್ತು ಆಗುವುದೇನು?
ಆರ್ಥಿಕವಾಗಿ ಪ್ರಗತಿಯಾಗುತ್ತಿರುವ ಕರ್ನಾಟಕದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ ತೀವ್ರವಾಗಿ ಜಾಸ್ತಿಯಾಗುತ್ತಿರುವಂತೆ ಕಾಣುತ್ತಿದೆ. ಮತ್ತೊಂದೆಡೆ, ಸಮುದಾಯಗಳ ಮಧ್ಯೆ ಹಿಂದುಳಿದ ವರ್ಗದ ಹಣೆಪಟ್ಟಿ ಪಡೆಯಲು ತೀವ್ರ ಪೈಪೋಟಿ ಇದೆ. ಇದಕ್ಕೆ ರಾಜಕೀಯ ಪಕ್ಷಗಳ ಕುಮ್ಮಕ್ಕು ಇಲ್ಲದಿಲ್ಲ. ಈ ವೈರುಧ್ಯವನ್ನು ಸರಕಾರ ಹೇಗೆ ನಿಭಾಯಿಸುತ್ತದೆ ಎನ್ನುವುದೇ ದೊಡ್ಡ ಪ್ರಶ್ನೆ.
ಈಗ ಹಿಂದುಳಿದ ವರ್ಗಗಳ ಆಯೋಗ ನಡೆಸುವ ಈ ಗಣತಿಗೆ ಮುಗುಮ್ಮಾಗಿ ಜಾತಿಗಣತಿಯ ಲೇಬಲ್ ಬೇರೆ ಅಂಟಿಸಲಾಗಿದೆ. ಇದರ ಅರ್ಥ ಏನೆಂದರೆ ಈ ಗಣತಿಯ ಮೂಲಕ ಜಾತಿಗಳ ಮಾಹಿತಿ ಸಂಗ್ರಹಿಸಿ, ಯಾವ ಜಾತಿಯ ಜನ ಎಷ್ಟಿದ್ದಾರೆ? ಎಷ್ಟು ಜನ ಹಿಂದುಳಿದವರು? ಉಳಿದವರೆಷ್ಟು? ಈ ರೀತಿಯ ಲೆಕ್ಕಾಚಾರ ಮಾಡುತ್ತ ಕರ್ನಾಟಕದಲ್ಲಿ ಈಗಿರುವ ಮೀಸಲಾತಿ ಪ್ರಮಾಣವನ್ನು ಏರಿಸುವುದೇ ಈ ಗಣತಿಯ ಹಿಂದಿನ ಉದ್ದೇಶವಿರುವಂತೆ ಕಾಣುತ್ತಿದೆ. ಅಷ್ಟೇ ಅಲ್ಲ, ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಚುನಾವಣೆಯಲ್ಲಿ ಒಕ್ಕಲಿಗರು, ಲಿಂಗಾಯತರಿಗೆ ಹೆಚ್ಚಿನ ಪ್ರಾಶಸ್ತ್ಯ ಯಾಕೆ ಕೊಡಬೇಕು? ಅವರಿಗೆ ಹೆಚ್ಚಿನ ಸಂಖ್ಯೆಯ ಬಿ-ಫಾರ್ಮ್ ಯಾಕೆ ಕೊಡಬೇಕು ಎಂಬ ಚರ್ಚೆಗೆ, ಈ ಗಣತಿಯಲ್ಲಿ ಕಲೆ ಹಾಕಿದ ಮಾಹಿತಿ ಬಲ ನೀಡುವ ಸಾಧ್ಯತೆ ಇದೆ.
ಬಿಹಾರ ಮತ್ತು ತೆಲಂಗಾಣದ ಉದಾಹರಣೆ
ಬಿಹಾರದಲ್ಲಿ ಜಾತಿ ಗಣತಿಯನ್ನು ಮಾಡಿದ ನಂತರ ನಿತೀಶ್ ಕುಮಾರ್ ಸರಕಾರ ಮಾಡಿದ್ದು ಇದನ್ನೇ. ಜಾತಿ ಗಣತಿಯ ವರದಿಯನ್ನಿಟ್ಟುಕೊಂಡು ಈಗಾಗಲೇ ಇದ್ದ ಮೀಸಲಾತಿಯ ಪ್ರಮಾಣವನ್ನು ಪ್ರತಿಶತ 65 ಕ್ಕೆ ಏರಿಸಿತು. ಈ ರೀತಿಯ ನಿರ್ಧಾರವನ್ನು ರಾಜಕಾರಣಿಗಳು ತೆಗೆದುಕೊಂಡಾಗ ಜನ ಸುಮ್ಮನೆ ಕೂರುವುದಿಲ್ಲ ನೋಡಿ. ಪಾಟ್ನಾ ಉಚ್ಚ ನ್ಯಾಯಾಲಯದಲ್ಲಿ ಸರಕಾರದ ನಿರ್ಧಾರವನ್ನು ಪ್ರಶ್ನಿಸಿದರು. ಅವರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ, ಬಿಹಾರ ಸರಕಾರದ ಮೀಸಲಾತಿ ಏರಿಕೆಯ ಕ್ರಮವನ್ನು ‘ಸಂವಿಧಾನ ವಿರೋಧಿ’ ಎಂದು ಬಣ್ಣಿಸಿ ಆ ನಿರ್ಣಯವನ್ನು ತಿರಸ್ಕರಿಸಿತು. ಇದನ್ನು ಪ್ರಶ್ನಿಸಿದ ಬಿಹಾರ ಸರಕಾರವು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿತು. ಈಗ ಈ ಕೇಸು ಸರ್ವೋಚ್ಚ ನ್ಯಾಯಾಲಯದಲ್ಲಿದೆ.
ಪಕ್ಕದ ತೆಲಂಗಾಣ ರಾಜ್ಯದಲ್ಲಿ, ಇದೇ ರೀತಿಯ ಜಾತಿಗಣತಿಯನ್ನು ನಡೆಸಿದ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಾಡಿದ್ದೇನು ಎಂಬುದನ್ನು ನೋಡಿದಾಗ ಕರ್ನಾಟಕದಲ್ಲಿ ನಡೆಯುವ ಗಣತಿಯ ಫಲಿತಾಂಶ ಏನಾಗಬಹುದು ಎಂಬುದರ ಮುನ್ಸೂಚನೆ ಸಿಗುತ್ತದೆ. ತೆಲಂಗಾಣದಲ್ಲಿ ನಡೆದ ಗಣತಿಯ ಆಧಾರದ ಮೇಲೆ ಹಿಂದುಳಿದ ವರ್ಗದ ಮೀಸಲಾತಿ ಪ್ರಮಾಣವನ್ನು ಪ್ರತಿಶತ 43 ಕ್ಕೂ ಒಟ್ಟೂ ಮೀಸಲಾತಿಯ ಪ್ರಮಾಣವನ್ನು 63 ಕ್ಕೆ ಏರಿಸಬೇಕೆಂಬ ನಿರ್ಣಯವನ್ನು ತೆಲಂಗಾಣ ಸರ್ಕಾರ ತೆಗೆದುಕೊಂಡಿತು.
ಮೀಸಲಾತಿ ಕೊಟ್ಟರೆ ತಪ್ಪೇನು?
ಹಿಂದುಳಿದ ವರ್ಗಕ್ಕೆ, ತುಳಿತಕ್ಕೆ ಒಳಗಾದವರಿಗೆ ನೀಡುವ ಮೀಸಲಾತಿಯ ಏರಿಕೆ ವಿಚಾರದಲ್ಲಿ ಗೊಂದಲವಿದೆ. ಈ ಹಿಂದೆ ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠಗಳು ನೀಡಿದ ತೀರ್ಪನ್ನು ಅವಲೋಕಿಸಿದಾಗ, ಮೀಸಲಾತಿಯ ಪ್ರಮಾಣ ಪ್ರತಿಶತ ಐವತ್ತನ್ನು ಮೀರಬಾರದು ಎಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳು ಮಾಡುವ ಈ ರೀತಿಯ ನಿರ್ಣಯವು ಮತ್ತೆ ನ್ಯಾಯಾಲಯದಲ್ಲಿ ನರಳುವುದು ಖಂಡಿತ.
ನ್ಯಾಯಾಲಯಗಳು ಸರಕಾರದ ಕೈ ಕಟ್ಟಬಹುದು ಎಂಬ ವಿಚಾರವನ್ನು ಬದಿಗಿಟ್ಟು ನೋಡಿದರೂ, ಮೀಸಲಾತಿ ಕೊಡುವ ವಿಚಾರದ ಹಿಂದೆ ರಾಜಕೀಯ ಕಾಣುತ್ತಿದೆಯೇ ಹೊರತು ಶೋಷಿತ ವರ್ಗಗಳ ಸಬಲೀಕರಣಕ್ಕೆ ಇಡುತ್ತಿರುವ ಮೊದಲ ಹೆಜ್ಜೆಯಾಗಿ ಇದು ಕಾಣುತ್ತಿಲ್ಲ. ಓಬಿಸಿ ರಾಜಕೀಯದ ಮೂಲಕ ಕಾಂಗ್ರೆಸ್ ಪಕ್ಷದ ಪುನರುತ್ಥಾನವನ್ನು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಮಾಡಲು ಹೊರಟಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಕ್ಕೆ ಮೀಸಲಾತಿ ಪ್ರಮಾಣ ಏರಿಸುವುದರ ಹಿಂದೆ ಆಯಾ ಸಮುದಾಯಗಳಿಗೆ ನ್ಯಾಯ ಒದಗಿಸುವ ಕಾಳಜಿಗಿಂತ ರಾಜಕೀಯ ಕಾರಣಗಳೇ ಢಾಳಾಗಿ ಕಾಣುತ್ತಿವೆ. ಕುಟುಂಬ-ಕೇಂದ್ರಿತ ರಾಜಕೀಯ ಪಕ್ಷಗಳು ತಮಗೆ ನಿಷ್ಠಾವಂತರಾಗಿರುವ ಓಬಿಸಿ ನಾಯಕರುಗಳಿಗೆ ಮತ್ತು ಅವರ ಕುಟುಂಬದ ಸದಸ್ಯರುಗಳಿಗೆ ರಾಜಕೀಯದಲ್ಲಿ ಬೆಳೆಯಲು ಅನುವು ಮಾಡಿಕೊಡುವಂತಹ ವ್ಯವಸ್ಥೆಯನ್ನು ತರಲು ಈ ರೀತಿಯ ಮೀಸಲಾತಿ ಏರಿಕೆ ತಂತ್ರವನ್ನು ಬಳಸುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ. ಕರ್ನಾಟಕದಲ್ಲಿ ನಡೆಯುವ ಗಣತಿ ಕೂಡ ಇದೇ ರೀತಿಯ ಮೀಸಲಾತಿ ಏರಿಕೆಗೆ ಮೊದಲನೇ ಮೆಟ್ಟಿಲಾದರೆ ಆಶ್ಚರ್ಯ ಪಡಬೇಕಾಗಿಲ್ಲ.
ಬಿಹಾರದಲ್ಲಿ ತೆಲಂಗಾಣದಲ್ಲಿ ಆಗದಿದ್ದದು ಇಲ್ಲಿ ಆಗಲಿದೆಯೇ? ಅಂದರೆ ಈ ಜಾತಿ ಸಮೀಕ್ಷೆ ನೀಡುವ ವರದಿಯ ಆಧಾರದ ಮೇಲೆ, ಉಳ್ಳವರ ಮತ್ತು ಬಡವರ ನಡುವಿನ ಕಂದಕಕ್ಕೆ ಕಾರಣವನ್ನು ಹುಡುಕುವ ಸಾಧ್ಯತೆ ತುಂಬಾ ಕಡಿಮೆ. ಆರ್ಥಿಕ ವೈರುಧ್ಯವನ್ನು ಹೋಗಲಾಡಿಸಿ ಸಮಾನತೆ ತರುವಂತಹ ಕಾರ್ಯಕ್ರಮ ರೂಪಿಸಲು ಈ ಸಮೀಕ್ಷೆ ಸಹಕಾರಿಯಾಗುತ್ತದೆ ಎಂದು ಹೇಳಿದರೆ ಅದನ್ನು ಒಪ್ಪಿಕೊಳ್ಳಲು ಎಂಟೆದೆ ಬೇಕು. ಬದಲಿಗೆ, ಕಂದಕವನ್ನು ಹೆಚ್ಚಿಸುವ ಮೇಘಸ್ಫೋಟವಾಗುವ ಶಕ್ತಿ ಈ ಗಣತಿಗಯ ವರದಿಗಿರುತ್ತದೆ ನೋಡಿ.
ಈ ರೀತಿಯ ಅನುಮಾನ ಬರಲು ಇನ್ನೊಂದು ಪ್ರಬಲ ಕಾರಣವಿದೆ. ಒಂದು ಕ್ಷಣ ಈ ಸಮೀಕ್ಷೆಯ ಪ್ರಶ್ನಾವಳಿಗಳನ್ನು ವಿಮರ್ಶಿಸಿ ನೋಡಿ. ಗಣತಿ ಮಾಡಲು ಬಂದ ಸಮೀಕ್ಷಕರೊಬ್ಬರು ನಿಮಗೆ ಒಂದು ಪ್ರಶ್ನೆ ಕೇಳಿದ್ದಾರೆ ಎಂದಿಟ್ಟುಕೊಳ್ಳಿ: ‘ನೀವು ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳೆ?’ ಎಂಬ ಪ್ರಶ್ನೆಗೆ ನೀವು ‘ಹೌದು’ ಅಥವಾ ‘ಇಲ್ಲ’ ಎಂದು ಉತ್ತರಿಸುತ್ತೀರಿ. ಆಗ ಅವರು, ಒಂದು ಹೆಜ್ಜೆ ಮುಂದೆ ಹೋಗಿ ಗಂಗಾ ಕಲ್ಯಾಣ ಯೋಜನೆಯಡಿ ಪಡೆದ ಕೊಳವೆ ಬಾವಿಯಲ್ಲಿ ನೀರು ಎಷ್ಟಿದೆ? ಆ ನೀರಿನಿಂದ ಯಾವ ರೀತಿಯ ಪ್ರಯೋಜನ ಪಡೆಯುತ್ತೀರಿ? ಈ ರೀತಿಯ ಗುಣಾತ್ಮಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ. ಶುಷ್ಕವಾಗಿ ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸಿ ಶೇಕಡಾವಾರು ಮಾದರಿಯಲ್ಲಿ ಸರಕಾರಕ್ಕೆ ವರದಿಯನ್ನು ನೀಡುತ್ತಾರೆ. ಈ ರೀತಿಯ ವರದಿ ಸರಕಾರದ ಯೋಜನೆಗಳ ಪುನರ್ ವಿಮರ್ಶೆಗೆ ಮತ್ತು ಯೋಜನೆಗಳ ಸುಧಾರಣೆಗೆ ಸಹಕಾರಿಯಾಗುತ್ತದೆ ಎಂದು ನಂಬಲು ಯಾವ ಸಾಕ್ಷಾಧಾರಗಳು ಇಲ್ಲ.
ಗಣತಿಯ ಪಾರದರ್ಶಕತೆ
ಹಿಂದಿನ ಬಾರಿ ನಡೆಸಿದ್ದ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆಯ ಪಾರದರ್ಶಕತೆ ಭಾರಿ ವಿವಾದಕ್ಕೆ ಒಳಗಾಗಿತ್ತು. ಈ ಬಾರಿ ಕೂಡ ಆ ರೀತಿಯ ತಪ್ಪಾಗುವುದಿಲ್ಲ ಎಂದು ಹೇಳಲಾಗದು. ಆಧಾರ್ ಕಾರ್ಡ್ ಮತ್ತು ಫೋನ್ ನಂಬರ್ ಸೇರಿಸಿ ಬಿಟ್ಟರೆ, ಅದು ಸಾರ್ವಜನಿಕರ ದೃಷ್ಟಿಯಿಂದ ಒಂದು ಪಾರದರ್ಶಕ ವ್ಯವಸ್ಥೆಯಾಗಲಾರದು. ಹಾಗೊಮ್ಮೆ ಮಾಡಲೇಬೇಕೆಂದರೆ ಓಟಿಪಿ ವ್ಯವಸ್ಥೆಯನ್ನು ತಂದು ಆ ಒಟಿಪಿಯ ಮೂಲಕ ಕುಟುಂಬವನ್ನು ಗುರುತಿಸುವಂತಾಗಬೇಕು. ಆ ಮೂಲಕ ಮಾಹಿತಿಯನ್ನು ಸಂಗ್ರಹಿಸುವ ವ್ಯವಸ್ಥೆಯಾದರೆ ಆಗ ಒಂದು ಹಂತದ ಪಾರದರ್ಶಕತೆ ಬರಬಹುದು.
ಇನ್ನೊಂದು ಪ್ರಮುಖ ಅಂಶವನ್ನು ಇಲ್ಲಿ ಗಮನಿಸಿ. ಬಿಜೆಪಿ ಸರಕಾರದ ಮೇಲೆ, ಮತಗಳ್ಳತನದ ಆರೋಪ ಹೊರಿಸಲು ಇರುವ ಮೂಲ ಕಾರಣ: ಮತದಾರರ ಪಟ್ಟಿಯಲ್ಲಿರುವ ತಪ್ಪು. ಈ ಸಮೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿಸಿ ತಪ್ಪೇ ಆಗದಂತೆ ಮಾಡಿದರೆ ಬಿಜೆಪಿಗೆ ಟಾಂಗ್ ಕೊಡಲು ಮತ್ತು ಆಯೋಗ ತಯಾರಿಸಿದ ಮತದಾರರ ಪಟ್ಟಿಗೆ ಸವ್ವಾಸೇರು ಎನ್ನುವಂತೆ ತಾನೊಂದು ಮಾದರಿ ಎಂದು ತೋರಿಸುವ ಒಂದು ಸುವರ್ಣಾವಕಾಶ ಕರ್ನಾಟಕ ಸರಕಾರಕ್ಕಿದೆ. ಗಣತಿಯ ವಿವರವನ್ನು ವೆಬ್ಸೈಟ್ಗೆ ಹಾಕಿ ಪ್ರತಿಯೊಂದು ಕುಟುಂಬದ ಮಾಹಿತಿಯನ್ನು ಆಯಾ ಕುಟುಂಬದ ಸದಸ್ಯರಿಗೆ ಸಿಗುವಂತೆ ಮಾಡಿ ಅಲ್ಲಿ ತಪ್ಪಾಗಿದ್ದರೆ ಅದನ್ನು ತಿದ್ದುವ ವ್ಯವಸ್ಥೆ ಮಾಡಬೇಕು. ಆಗ ಯಾರೂ ಕೂಡ ತನ್ನ ಹೆಸರು ಬಿಟ್ಟಿದ್ದಾರೆ ಎಂದು ಆರೋಪ ಮಾಡಲಾಗದು. ಅದು ಅತ್ಯಂತ ಪಾರದರ್ಶಕ ವ್ಯವಸ್ಥೆಯಾಗಬಲ್ಲದು.
ಇದನ್ನೂ ಓದಿ: ಧರ್ಮಸ್ಥಳ ವಿರೋಧಿ ಅಭಿಯಾನದ ಮೂಲ ಸಂಚುಕೋರರು ಸಿಗುವುದು ಕಷ್ಟ: ಎಸ್ಐಟಿಗಿದೆ ತಾಂತ್ರಿಕ ಸಂಕಷ್ಟ
ಆದರೆ ಈಗ ಆಗುವುದೇನು? ಎಲ್ಲರಿಂದ ಮಾಹಿತಿ ಸಂಗ್ರಹಿಸಿ, ಮುಗುಮ್ಮಾಗಿ ವಿಶ್ಲೇಷಿಸಿ ಕೊನೆಗೆ, ತನ್ನ ನಿರ್ಧಾರವನ್ನು ಸಾರ್ವಜನಿಕರೆದುರು ಇಟ್ಟರೆ ಅದು ಪಾರದರ್ಶಕವಲ್ಲ. ಅಷ್ಟೇ ಅಲ್ಲ, ಪಾರದರ್ಶಕತೆಯಲ್ಲಿದ ಗಣತಿಯನ್ನು ಮಾಡಿದರೆ, ಚುನಾವಣಾ ಆಯೋಗದ ಮೇಲೆ ಕಾಂಗ್ರೆಸ್ ಪಕ್ಷದ ನಾಯಕರು ಯಾವ ರೀತಿಯ ಆರೋಪವನ್ನು ಮಾಡುತ್ತಿದ್ದಾರೋ ಅಂತದೇ ಗುರುತರ ಆರೋಪವನ್ನು, ಕರ್ನಾಟಕದಲ್ಲಿನ ಕಾಂಗ್ರೆಸ್ ಸರಕಾರ ಮುಂದೊಂದು ದಿನ ಎದುರಿಸಬೇಕಾಗಿ ಬರಬಹುದು. ಆರೋಪವನ್ನು ಮಾಡುವ ಸಮುದಾಯಗಳು ಪ್ರಬಲವಾಗಿದ್ದರೆ ಈ ಸಮೀಕ್ಷೆಯ ವರದಿಯನ್ನು ಮುಂದಿನ ದಿನಗಳಲ್ಲಿ ಜಾರಿಗೊಳಿಸುವುದು ಕೂಡ ಕಠಿಣವಾಗಬಲ್ಲದು.
ಇನ್ನಷ್ಟು ಅಭಿಮತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:51 pm, Sat, 13 September 25




