Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತದಾನ ಸಾಂವಿಧಾನಿಕ ಹಕ್ಕು, ಅರ್ಹ ನಾಯಕರನ್ನು ಆಯ್ಕೆ ಮಾಡಲು ಇರುವ ಅವಕಾಶ

18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯನಿಗೂ ಮತದಾನ ಮಾಡುವ ಹಕ್ಕಿದೆ ಹಾಗೂ ಇದು ಕಡ್ಡಾಯವಾಗಿದೆ. ಮತದಾನವನ್ನು ಒಬ್ಬ ವ್ಯಕ್ತಿಯು ಸ್ವೇಚ್ಛೆಯಿಂದ ಮಾಡಬೇಕೇ ಹೊರತು ಮನ ಪರಿವರ್ತನೆಯಿಂದಲ್ಲ.

ಮತದಾನ ಸಾಂವಿಧಾನಿಕ ಹಕ್ಕು, ಅರ್ಹ ನಾಯಕರನ್ನು ಆಯ್ಕೆ ಮಾಡಲು ಇರುವ ಅವಕಾಶ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: May 09, 2023 | 8:45 AM

ಮತದಾನ ಮಾಡುವುದು ರಾಜ್ಯ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಮತದಾನವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಲಾಗಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯನಿಗೂ ಮತದಾನ ಮಾಡುವ ಹಕ್ಕಿದೆ ಹಾಗೂ ಇದು ಕಡ್ಡಾಯವಾಗಿದೆ. ಮತದಾನವನ್ನು ಒಬ್ಬ ವ್ಯಕ್ತಿಯು ಸ್ವೇಚ್ಛೆಯಿಂದ ಮಾಡಬೇಕೇ ಹೊರತು ಮನ ಪರಿವರ್ತನೆಯಿಂದಲ್ಲ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಪ್ರಜೆಗೂ ಸರಿಯಾದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮನಸ್ಥಿತಿ ಇದ್ದೇ ಇರುತ್ತದೆ. ಹಾಗಾಗಿ ಮತದಾರನು ತನ್ನ ಸ್ವಂತ ಆಲೋಚನೆಗಳನ್ನೇ ಅನುಸರಿಸಬೇಕು. ಚುನಾವಣೆಗೆ ಇನ್ನೇನು ಒಂದು ದಿನ ಉಳಿದಿದೆ. ಸಾಮಾನ್ಯ ದಿನಗಳಲ್ಲಿ ಕಷ್ಟಗಳಿಗೆ ನೆರವು ಕೇಳಿ ಬಂದ ಜನರಿಗೆ ಉತ್ತರಿಸದೇ ಇದ್ದ ಪಕ್ಷಗಳು, ಬಡವರ ಹಸಿವಿಗೆ ಸ್ಪಂದಿಸದೆ ಇದ್ದ ರಾಜಕಾರಣಿಗಳ ಕೈಗಳು, ಆಶ್ವಾಸನೆ ಕೊಟ್ಟು ಗೆದ್ದ ನಂತರ ಅದನ್ನು ಭರಿಸಲಾಗದ ಪಾರ್ಟಿಗಳು ಎಲ್ಲರೂ ಎಲ್ಲವೂ ಚುನಾವಣೆಯ ಸಂದರ್ಭದಲ್ಲಿ ಜನರನ್ನರಸಿ ಬರುತ್ತವೆ. ವಿವಿಧ ರಾಜ್ಯಗಳಿಗೆ ಭೇಟಿ, ಹಳ್ಳಿಯತ್ತ ತಿರುಗಿಯೂ ನೋಡದ ರಾಜಕಾರಣಿಗಳು ಹಳ್ಳಿಯ ಜನರ ಭೇಟಿ, ರೋಡ್ ಶೋ ಇವೆಲ್ಲವೂ ಮತದಾನ ಪಡೆಯಲು ಮಾಡುವ ಒಂದು ವಿಧವಾದ ನಾಟಕೀಯ ತಂತ್ರ.

ಇದೆಲ್ಲಾ ಸ್ವಲ್ಪ ಮಟ್ಟಿಗೆ ಅರಿತ ಜನ ಮತದಾನ ಮಾಡಲು ಹಿಂಜರಿಯುತ್ತಾರೆ. ಕಾರಣ ಯಾವ ಅಭ್ಯರ್ಥಿ ಗೆದ್ದರೂ ನಮಗೇನು ಪ್ರಯೋಜನವಿಲ್ಲ ಎಂಬ ಯೋಚನೆ. ಮತದಾನವೆಂಬುದು ಪವಿತ್ರವಾದ ಕಾರ್ಯ. ದೇಶಕ್ಕೆ ಉತ್ತಮ ನಾಯಕನನ್ನು ಆಯ್ಕೆ ಮಾಡುವ ಪ್ರಕ್ರಿಯೆ. ಒಂದು ದೇಶದ ಅಭಿವೃದ್ಧಿ ಆ ದೇಶದ ನಾಗರಿಕನ ಕೈಯಲ್ಲಿ ಇರುತ್ತದೆ. ಅವನ ಒಂದು ಮತಕ್ಕೆ ದೇಶವನ್ನೇ ಬದಲಿಸುವ ಶಕ್ತಿ ಇರುತ್ತದೆ. ಮತದಾನ ಮಾಡುವಾಗ ನಮ್ಮ ಹಿರಿಯರು ಬೆಂಬಲಿಸುತ್ತಿದ್ದ ಕಾರಣಕ್ಕೆ ಒಂದು ಪಕ್ಷ ಅಥವಾ ವ್ಯಕ್ತಿಗೆ ಮತದಾನ ಮಾಡುವ ಬದಲು ಪ್ರಸ್ತುತ ಸಮಾಜವನ್ನು ನಿಭಾಯಿಸಲು ಯಾವ ಅಭ್ಯರ್ಥಿ ಬಲಿಷ್ಠನೋ, ಯಾರಿಂದ ಜನರಿಗೆ ನೆರವು ಸಿಗುತ್ತದೆ ಎಂಬ ನಂಬಿಕೆ ಇರುತ್ತದೆಯೋ ಅವರನ್ನು ಆಯ್ಕೆ ಮಾಡುವುದು ಉತ್ತಮ.

ಭವ್ಯ ಭಾರತದ ಉತ್ತಮ ಪ್ರಜೆಗಳೆನಿಸಿರುವ ನಾವು ಮತದಾನದ ಸಂದರ್ಭದಲ್ಲಿ ಯಾವುದೇ ಆಮಿಷಗಳ ಸ್ವತ್ತಾಗದೆ, ತಮ್ಮ ಸ್ವಂತ ನಿರ್ಧಾರವನ್ನು ತೆಗೆದುಕೊಂಡು ಭಾರತದ ಅಭಿವೃದ್ಧಿಯ ಪಾಲುದಾರರಾಗಬೇಕು. ಯಾವುದೇ ಆಸೆ ಆಮಿಷಗಳಿಗೆ ಮತವನ್ನು ಮಾರಾಟ ಮಾಡಿದರೆ, ನಮ್ಮತನವನ್ನು ಮಾರಾಟ ಮಾಡಿದಂತೆ. ಉತ್ತಮ ವ್ಯಕ್ತಿ ಆಯ್ಕೆ ಮಾಡುವ ಮೂಲಕ ನಮ್ಮನ್ನು ಕಾಪಾಡುತ್ತಿರುವ ರಾಜ್ಯಕ್ಕೆ ಕೊಡುಗೆ ಕೊಡಬಹುದು. ಒಂದು ಮತದಿಂದ ಏನೂ ಬದಲಾವಣೆ ಆಗುವುದಿಲ್ಲ ಎಂದು ಮತದಾರರು ಯೋಚಿಸಿದರೆ ಅದು ಅವರ ದಡ್ಡತನ. ಪ್ರಜಾಪ್ರಭುತ್ವದಲ್ಲಿ ಒಂದೊಂದು ಮತವು ಅತೀ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ ಹೈವೋಲ್ಟೇಜ್ ಬಹಿರಂಗ ಪ್ರಚಾರಕ್ಕೆ ತೆರೆ; ಯಾವುದಕ್ಕೆಲ್ಲ ನಿರ್ಬಂಧ? ಇಲ್ಲಿದೆ ಮಾಹಿತಿ

ಈ ಚುನಾವಣಾ ವ್ಯವಸ್ಥೆಯಲ್ಲಿ “ನೋಟಾ” ಎಂಬ ಆಯ್ಕೆ ಇರುತ್ತದೆಂಬುವುದೂ ತಿಳಿದಿರುವುದಿಲ್ಲ. ನೋಟಾ ಅಥವಾ “ಮೇಲಿನ ಯಾವುದೂ ಅಲ್ಲ” ಎಂಬುದು ಮತದಾರರು ಸ್ಪರ್ಧಿಸುವ ಎಲ್ಲಾ ಅಭ್ಯರ್ಥಿಗಳಿಗೆ ಅಧಿಕೃತವಾಗಿ ನಿರಾಕರಣೆಯ ಮತವನ್ನು ನೋಂದಾಯಿಸಲು ಅನುವು ಮಾಡಿಕೊಡುವ ಆಯ್ಕೆಯಾಗಿದೆ. ಮತದಾರನು ನೋಟಾ ಒತ್ತಿದರೆ ಅದು ಮತದಾರ ಯಾವುದೇ ಪಕ್ಷಕ್ಕೆ ಮತ ಹಾಕಲು ಆಯ್ಕೆ ಮಾಡಿಲ್ಲ ಎಂದು ಸೂಚಿಸುತ್ತದೆ. 27 ಸೆಪ್ಟೆಂಬರ್ 2013 ರಂದು, ಭಾರತದ ಸರ್ವೋಚ್ಚ ನ್ಯಾಯಾಲಯವು ಚುನಾವಣೆಯಲ್ಲಿ “ಮೇಲಿನ ಯಾವುದೂ ಅಲ್ಲ” ಮತವನ್ನು ಚಲಾಯಿಸುವ ಹಕ್ಕನ್ನು ಅನ್ವಯಿಸಬೇಕು ಎಂದು ತೀರ್ಪು ನೀಡಿತು. ಒಂದು ವೇಳೆ ಮತದಾರರು ಅಧಿಕ ಪ್ರಮಾಣದಲ್ಲಿ ನೋಟಾ ವನ್ನು ಒತ್ತಿದ್ದರೆ ಪುನಃ ಅಭ್ಯರ್ಥಿಗಳು ಬದಲಾಗಿ ಮತ್ತೆ ಮತದಾನ ನಡೆಯುವ ಸಾಧ್ಯತೆಗಳು ಇರುತ್ತದೆ.

ಮುಖ್ಯವಾಗಿ ಯುವಜನರು ಚುನಾವಣೆಯ ಸಂದರ್ಭದಲ್ಲಿ ಎಚ್ಚರದಿಂದ ಮತ ಚಲಾಯಿಸಬೇಕು. ಮನೆಯ ಹಿರಿಯರ ಮತ ಚಲಾಯಿಸುವಾಗ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಪಾತ್ರ ವಹಿಸಬೇಕು. ಹಾಗಾಗಿ ಮತದಾರರೇ ಎಚ್ಚರದಿಂದ ನಿಮ್ಮ ಮತವನ್ನು ಚಲಾಯಿಸಿ.

ಲಾವಣ್ಯ ಶ್ರೀಧರ್