ಬಾಗಲಕೋಟೆ ತಾಲ್ಲೂಕಿನ ಶಿರೂರು ಗ್ರಾಮದ ಸಿದ್ದೇಶ್ವರ ಜಾತ್ರಾ ಪ್ರಯುಕ್ತವಾಗಿ ಎತ್ತಿನ ಬಂಡಿ ಓಟ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಶಿರೂರು ಗ್ರಾಮದ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಂದ ರೈತರು ಎತ್ತಿನ ಬಂಡಿಯನ್ನ ಸ್ಪರ್ಧೆಗಾಗಿ ಕರೆತಂದಿದ್ದರು.
ಶಿರೂರು ಗ್ರಾಮದ ಬಾಗಲಕೋಟೆ ರಾಯಚೂರು ಹೆದ್ದಾರಿಯಲ್ಲಿ ಎತ್ತುಗಳ ಭರ್ಜರಿ ಓಟ ನೋಡುಗರ ಕಣ್ಮನ ಸೆಳೆಯಿತು.ಆಯೋಜಕರು ವಿಷಲ್ ಹೊಡೆಯುತ್ತಲೇ ಚಂಗನೆ ನೆಗೆಯುತ್ತಾ ಓಡುವ ಎತ್ತುಗಳ ಓಟ ರೋಮಾಂಚನಕಾರಿಯಾಗಿತ್ತು.
ಈ ಸ್ಪರ್ಧೆ ನೋಡುವುದಕ್ಕೆ ಸುತ್ತಮುತ್ತಲಿನ ಹಳ್ಳಿಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ರೈತರು, ಯುವಕರು ಸೇರಿದ್ದರು. ವರ್ಷವಿಡೀ ದುಡಿದು ದಣಿದ ರೈತರಿಗೆ ಈ ಸ್ಪರ್ಧೆ ಭರ್ಜರಿ ಮನರಂಜನೆ ನೀಡಿತು.
ಶಿರೂರು ಗ್ರಾಮದಲ್ಲಿ ಸಿದ್ದೇಶ್ವರ ಜಾತ್ರೆ ಬಂದಾಗ ಪ್ರತಿ ವರ್ಷ ಈ ಬಂಡಿ ಓಟದ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ರೈತರು ಎತ್ತುಗಳಿಗೆ ಬಣ್ಣ ಬಳಿದು ಅಲಂಕಾರ ಮಾಡಿಕೊಂಡು ಸುತ್ತಮುತ್ತಲಿನ ಹಳ್ಳಿ ಮತ್ತು ತಾಲ್ಲೂಕಿನಿಂದ ನೂರಾರು ರೈತರು ಬಂದು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ.
ತಮ್ಮ ಎತ್ತುಗಳನ್ನು ಸ್ಪರ್ಧೆಯಲ್ಲಿ ಓಡಿಸಿ ಅವುಗಳ ಓಟವನ್ನು ಕಂಡು ಹರ್ಷಪಡುತ್ತಾರೆ. ಇನ್ನು ಸ್ಪರ್ಧೆಯಲ್ಲಿ ವಿಶೇಷ ಬಹುಮಾನವಿದ್ದು, ಮೊದಲನೇ ಬಹುಮಾನ 25 ಸಾವಿರ ರೂ. ದ್ವಿತೀಯ ಬಹುಮಾನ 20 ಸಾವಿರ ರೂ, ತೃತೀಯ ಬಹುಮಾನ 15 ಸಾವಿರ ರೂಪಾಯಿಯನ್ನ ನಿಗಧಿ ಮಾಡಲಾಗಿತ್ತು.
ಇನ್ನು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಎತ್ತುಗಳಿಗೆ ಹಗ್ಗ ಮತ್ತು ಹಣೆಪಟ್ಟಿಯನ್ನು ಉಚಿತವಾಗಿ ನೀಡಲಾಗಿತ್ತು. ಹಳ್ಳಿಗಳಲ್ಲಿಯೂ ಕೂಡ ಇತ್ತೀಚೆಗೆ ಗ್ರಾಮೀಣ ಕ್ರೀಡೆಗಳ ನಶಿಸಿ ಹೋಗುತ್ತಿದ್ದು, ಇವುಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಸಿದ್ದೇಶ್ವರ ಟ್ರಸ್ಟ್ ವತಿಯಿಂದ ಈ ಸ್ಪರ್ಧೆ ಏರ್ಪಡಿಸಲಾಗಿತ್ತು.
ಒಟ್ಟಾರೆ ರೈತರ ಮನರಂಜನೆ ಕ್ರೀಡೆಯಾದ ಎತ್ತಿನ ಬಂಡಿ ಓಟ ಸ್ಪರ್ಧೆ ಶಿರೂರು ಗ್ರಾಮದಲ್ಲಿನ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿತ್ತು. ಗ್ರಾಮೀಣ ಕ್ರೀಡೆ ಮಾಯವಾಗುತ್ತಿರುವ ಸಂದರ್ಭದಲ್ಲಿ ಶಿರೂರು ಗ್ರಾಮದ ಜನ ಈ ಸ್ಪರ್ಧೆ ಏರ್ಪಡಿಸಿದ್ದು ನಿಜಕ್ಕೂ ಶ್ಲಾಘನೀಯ.
Published On - 1:06 pm, Mon, 12 December 22