- Kannada News Photo gallery A state level dog show has been organized in Shimoga, how was the show of dogs Here is a glimpse of it
ಶಿವಮೊಗ್ಗದಲ್ಲಿ ರಾಜ್ಯ ಮಟ್ಟದ ಶ್ವಾನ ಪ್ರದರ್ಶನ ಏರ್ಪಡಿಸಲಾಗಿದ್ದು, ಹೇಗಿತ್ತು ಶ್ವಾನಗಳ ಖದರ್ ಅಂತೀರಾ?ಅದರ ಝಲಕ್ ಇಲ್ಲಿದೆ ನೋಡಿ
ಸಾಕಿದ ಶ್ವಾನಗಳನ್ನು ನೋಡುವುದೇ ರೋಮಾಂಚನ, ಅಂತಹದರಲ್ಲಿ ದೇಶ ವಿದೇಶದ ವಿವಿಧ ಶ್ವಾನ ತಳಿಗಳು ಒಟ್ಟಿಗೆ ನೋಡುವುದಕ್ಕೆ ಚಾನ್ಸ್ ಸಿಕ್ಕರೆ ಸಾಕು ಅಲ್ಲಿ ಶ್ವಾನ ಪ್ರೀಯರು ಜಮಾಯಿಸಿ ಬಿಡುತ್ತಾರೆ. ಅಂತಹದೊಂದು ಡಾಗ್ ಶೋವನ್ನ ಶಿವಮೊಗ್ಗದಲ್ಲಿ ಆಯೋಜಿಸಲಾಗಿತ್ತು.
Updated on: Feb 20, 2023 | 3:08 PM

ಶ್ವಾನಗಳು ಅಂದ್ರೆ ಬಹುತೇಕರಿಗೆ ಅಚ್ಚು ಮೆಚ್ಚು. ತಮ್ಮ ಮಗುವಿಗಿಂತಲೂ ಹೆಚ್ಚು ಪ್ರೀತಿಯನ್ನು ಅದನ್ನ ಸಾಕಿದವರು ಮಾಡುತ್ತಾರೆ. ಹೀಗಾಗಿ ಶ್ವಾನಗಳ ಆರೈಕೆ ಮತ್ತು ಆರೋಗ್ಯ ಹೇಗೆಲ್ಲ ನಿರ್ವಹಣೆ ಮಾಡಬೇಕೆನ್ನುವ ನೂರೆಂಟು ಪ್ರಶ್ನೆಗಳು ನಾಯಿ ಸಾಕಿದವರಿಗೆ ಮತ್ತು ನಾಯಿ ಸಾಕುವರಿಗೆ ಇರುತ್ತದೆ. ಹೀಗಾಗಿ ಶಿವಮೊಗ್ಗದ ಕೆನೆಲ್ ಕ್ಲಬ್ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ಜಂಟಿಯಾಗಿ ರಾಜ್ಯ ಮಟ್ಟದ ಶ್ವಾನ ಪ್ರದರ್ಶನವನ್ನು ಶಿವಮೊಗ್ಗದ ಗಾಂಧಿ ಪಾರ್ಕ್ನಲ್ಲಿ ಪ್ರದರ್ಶನ ಆಯೋಜಿಸಲಾಗಿತ್ತು.

ಈ ಡಾಗ್ ಪ್ರದರ್ಶನದಲ್ಲಿ ಶಿವಮೊಗ್ಗ, ಹಾವೇರಿ, ದಾವಣಗೆರೆ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಯ ಸಾಕಿದ 200ಕ್ಕೂ ಹೆಚ್ಚು ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಪ್ರದರ್ಶನದಲ್ಲಿ ಬಲಿಷ್ಠ, ಮುದ್ದಾದ, ವಿಭಿನ್ನ, ಎತ್ತರ, ಗಿಡ್ಡ ಸೇರಿದಂತೆ ವಿವಿಧ ತಳಿಯ ಶ್ವಾನಗಳಿದ್ದವು.

ಚೌವ್ ಚೌವ್ ಜಾತಿಯ ರಿಯೋ, ಜರ್ಮನ್ ಶೆಫರ್ಡ್, ಮುಧೋಳ್, ಬೀಗಲ್, ಬಾಕ್ಸರ್, ಫೆಂಚ್ ಬುಲ್ಡಾಗ್, ರಿಟ್ರೀವರ್, ಲ್ಯಾಬರಡಾರ್, ಗೋಲ್ಡನ್ ರಿಟ್ರೀವರ್, ಡಾಬರ್ ಮನ್, ಲ್ಯಾಸಫ್, ಸಿಜ್ಜು, ಅಮೇರಿಕನ್ ಬುಲ್ಲಿ, ಡ್ಯಾಷವನ್, ಟಾಯ್ ಬ್ರೀಡ್ ಮೊದಲಾದ ಜಾತಿಯ ಶ್ವಾನಗಳು ಪ್ರದರ್ಶನದಲ್ಲಿ ಭಾಗಿಯಾಗಿದ್ದವು.

ಈ ಶ್ವಾನಗಳನ್ನು ನೋಡಲು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಭಾನುವಾರ ಹಿನ್ನಲೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಶ್ವಾನ ಪ್ರದರ್ಶನ ನೋಡಿ ಸಖತ್ ಖುಷಿ ಪಡುತ್ತಿದ್ದರು. ಸ್ಪರ್ಧೆಯಲ್ಲಿ ಗೆದ್ದ ಶ್ವಾನಗಳಿಗೆ ಸುಮಾರು 50 ಸಾವಿರ ನಗದು ಮತ್ತು ಟ್ರೋಫಿಗಳನ್ನು ನೀಡಲಾಯಿತು.

ಹೀಗೆ ಸಾಕಿದ ಶ್ವಾನವನ್ನು ಹಿಡಿದುಕೊಂಡು ಸಾರ್ವಜನಿಕವಾಗಿ ಪ್ರದರ್ಶನ ಮಾಡುತ್ತಿದ್ದಂತೆ ಪ್ರೇಕ್ಷಕರು ಚಪ್ಪಾಳೆ ಸೀಳೆ ಹಾಕಿ ಖುಷಿ ಪಡುತ್ತಿದ್ದರು. ಅವರಿಗೆ ಇಷ್ಟವಾಗಿರುವ ಶ್ವಾನ ಸ್ಪರ್ಧೆಗೆ ಬಂದ ತಕ್ಷಣ ಶ್ವಾನ ಪ್ರೀಯರು ಕುಣಿದು ಕುಪ್ಪಳಿಸುತ್ತಿದ್ದರು. ಬೆಳಗ್ಗೆಯಿಂದ ಮದ್ಯಾಹ್ನದವರೆಗೆ ಸುಡು ಬಿಸಿಲಿನಲ್ಲಿ ಶ್ವಾನಗಳು ಅತ್ಯುತ್ತಮವಾಗಿ ಸ್ಪರ್ಧೆಯಲ್ಲಿ ಪ್ರದರ್ಶನ ತೋರಿದವು.

ನಾಯಿಗಳ ಆರೋಗ್ಯ ಮತ್ತು ಯಾವ ರೀತಿಯಲ್ಲಿ ಅದನ್ನು ಸಾಕಿದ್ದಾರೆ ಎನ್ನುವುದನ್ನು ಸಾವಿರಾರು ಜನರ ಮುಂದೆ ತೋರಿಸುವುದೇ ಅದನ್ನು ಸಾಕಿದ ಮಾಲೀಕನಿಗೆ ಹೆಮ್ಮೆಯಾಗಿತ್ತು. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಮಾಲೀಕರು ಶ್ವಾನಗಳನ್ನು ಸಾಕುವ ಹವ್ಯಾಸಗಳನ್ನು ಹೊಂದಿದ್ದಾರೆ. ಅದರಲ್ಲೂ ವಿದೇಶದ ಶ್ವಾನದ ತಳಿಗಳಿಗೆ ಫುಡ್ ಡಿಮ್ಯಾಂಡ್ ಇದೆ.

ಡಾಗ್ ಶೋ ಸ್ಪರ್ಧೆ ನೋಡಲು ಬಂದ ಪ್ರೇಕ್ಷಕರು ವಿವಿಧ ತಳಿ ಶ್ವಾನಗಳ ಫೋಟೋ ಜೊತೆ ಸೆಲ್ಪಿ ತೆಗೆದುಕೊಂಡರು. ಇಂತಹದೇ ತಳಿ ಶ್ವಾನ ಸಾಕಬೇಕೆನ್ನುವ ಹಂಬಲ ಈ ಪ್ರದರ್ಶನ ನೋಡಲು ಬಂದ ಪ್ರೇಕ್ಷಕರು ಲೆಕ್ಕಾಚಾರ ಹಾಕಿಕೊಳ್ಳುತ್ತಿದ್ದರು.

ಇಂದಿನ ದಿನಮಾನದಲ್ಲಿ ದೇಶ ಮತ್ತು ರಾಜ್ಯದಲ್ಲೂ ವಿದೇಶ ಶ್ವಾನ ತಳಿಗಳ ಸಾಕುವ ಹವ್ಯಾಸ ಮತ್ತು ಕ್ರೇಜ್ ಜಾಸ್ತಿ ಆಗುತ್ತಿದೆ. ಇಂದಿನ ಡಾಗ್ ಶೋ ಮತ್ತು ಸ್ಪರ್ಧೆಯಲ್ಲಿ ದೇಶಿ ತಳಿಗಳಗಿಂತ ವಿದೇಶದ ತಳಿಗಳು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದವು.



















