- Kannada News Photo gallery Abhishek Ambareesh Reception in Bangalore but Sumalatha Ambareesh fan from Dharwad a Special Invitee
Special Invitee ಇಂದು ಅಭಿ ರಿಸೆಪ್ಷನ್: ಅಭಿಮಾನಿ ದೇವರು, ಧಾರವಾಡದ ಸೌಭಾಗ್ಯ ಸುಮಲತಾಗೆ ಸೀರೆ -ಧಾರವಾಡ ಫೇಡಾ ತರುತ್ತಿದ್ದಾಳೆ! ಏನಿದರ ‘ವಿಶೇಷ’
ಸಿನಿಮಾ ನಟ-ನಟಿಯರಿಗೆ ಅಭಿಮಾನಿಗಳಿರೋದು ಸಾಮಾನ್ಯ. ಅದರಲ್ಲಿಯೂ ಕೆಲ ನಟ-ನಟಿಯರಿಗಂತೂ ಜೀವಕ್ಕೆ ಜೀವ ಕೊಡುವಷ್ಟರ ಮಟ್ಟಿಗೆ ಅಭಿಮಾನಿಗಳು ಹುಟ್ಟುಕೊಂಡು ಬಿಡುತ್ತಾರೆ. ಅದೇ ರೀತಿ ಧಾರವಾಡದಲ್ಲೊಬ್ಬ ಬಾಲಕಿ ಇದ್ದಾಳೆ. ಆಕೆಗೆ ಹಿರಿಯ ನಟಿ, ಸಂಸದೆ ಅಂದರೆ ಪಂಚಪ್ರಾಣ (Dharwad Fan). ಆಕೆ ಉಳಿದ ಮಕ್ಕಳಂತಲ್ಲ. ಏಕೆಂದರೆ ಆಕೆ ವಿಶೇಷ ಚೇತನಳು. ಆದರೂ ಆಕೆಯ ಮನಸ್ಸಿನಲ್ಲಿ ಅಂಬರೀಷ್-ಸುಮಲತಾ (Sumalatha Ambareesh) ಬೇರೂರಿರೋದನ್ನು ನೋಡಿದರೆ ಎಂಥವರೂ ಅಚ್ಚರಿ ಪಡುತ್ತಾರೆ. ಇದೇ ಕಾರಣಕ್ಕೆ ಆಕೆ, ಆಕೆಯ ಕುಟುಂಬಕ್ಕೆ ಇದೀಗ ಅಂಬಿ ಮಗ ಅಭಿಷೇಕನ ಮದುವೆ ರಿಸೆಪ್ಷನ್ (Abhishek Ambareesh Reception) ಗೆ ಇನ್ವಿಟೇಶನ್ ಬಂದಿದೆ. ಇದೀಗ ಅವರು ರಿಸೆಪ್ಷನ್ ಗೆ ಹೋಗುತ್ತಿದ್ದಾರೆ. ಯಾರು ಆಕೆ? ಬನ್ನಿ ನೋಡಿ ಬರೋಣ...
Updated on: Jun 07, 2023 | 5:37 AM

ನಾನು ಸಮಲತಾ ಅಭಿಮಾನಿ... ಸುಮಲತಾ ಅಂದ್ರೆ ನನಗೆ ತುಂಬಾ ಇಷ್ಟ... ನನಗೆ ಅಂಬರೀಶ್ ಅಂದರೆ ತುಂಬಾ ಇಷ್ಟ... ಹೀಗೆ ಪದೇ ಪದೇ ಹೇಳುತ್ತಿರೋ ಈಕೆಯ ಹೆಸರು ಸೌಭಾಗ್ಯ ಯಮನೂರ. ಧಾರವಾಡ ನಗರದ ಮದಿಹಾಳ ಬಡಾವಣೆಯ ನಿಂಗಾಜಿ ಯಮನೂರ-ಸುಜಾತಾ ದಂಪತಿಯ ಪುತ್ರಿಯಾಗಿರೋ ಈಕೆಯ ವಯಸ್ಸು 19 ವರ್ಷ.

ಆದರೆ ಈಕೆಯ ಬುದ್ಧಿಮತ್ತೆ ಇರೋದು ಮಾತ್ರ ಚಿಕ್ಕಮಕ್ಕಳಂತೆ. ಹೌದು; ಈಕೆ ವಿಶೇಷ ಚೇತನಳು. ಸಾಮಾನ್ಯವಾಗಿ ವಿಶೇಷ ಚೇತನ ಮಕ್ಕಳನ್ನು ತುಂಬಾ ಜಾಗರೂಕತೆಯಿಂದಲೇ ಬೆಳೆಸಬೇಕು. ನಿಂಗಾಜಿ ಮತ್ತು ಸುಜಾತಾ ದಂಪತಿ ಸೌಭಾಗ್ಯಳನ್ನು ವಿಶೇಷ ಮಕ್ಕಳ ಶಾಲೆಗೆ ಸೇರಿಸಿ ಚೆನ್ನಾಗಿಯೇ ಬೆಳೆಸುತ್ತಿದ್ದಾರೆ. ಆದರೆ ಕಳೆದ ನಾಲ್ಕು ವರ್ಷದಿಂದ ಈಕೆಗೆ ಸುಮಲತಾ ಅಂಬರೀಶ್ ಅವರು ಅಂದ್ರೆ ಪಂಚಪ್ರಾಣವಾಗಿ ಬಿಟ್ಟಿದ್ದಾರೆ.

ಸುಮಲತಾ ಅಂಬರೀಶ್ ಫೋಟೋ, ಸುದ್ದಿ ಬಂದ್ರೆ ಸಾಕು ಅದನ್ನು ಕತ್ತರಿಸಿ ಬುಕ್ ನಲ್ಲಿ ಅಂಟಿಸಿ ಬಿಡುತ್ತಾಳೆ. ಅದರ ಪಕ್ಕದಲ್ಲಿಯೇ ಸುಮಲತಾ ಅಂದ್ರೆ ನನಗೆ ಇಷ್ಟ. ಯಾಕೆ ಇಷ್ಟ ಅಂತೆಲ್ಲಾ ನಿತ್ಯವೂ ಅರ್ಧ ಪುಟ ಬರೆಯುತ್ತಾಳೆ. ಹೀಗೆ ಅನೇಕ ಪುಸ್ತಕಗಳಲ್ಲಿ ಬರೆದಿಟ್ಟಿದ್ದಾಳೆ.

ಅಂಬರೀಶ್ ಅವರು ಮೃತಪಟ್ಟಾಗ ಟಿವಿಯಲ್ಲಿ ಅದನ್ನು ನೋಡಿದ ಸೌಭಾಗ್ಯ ಅವತ್ತಿನಿಂದ ಅಂಬರೀಷ್, ಸುಮಲತಾರ ಧ್ಯಾನ ಶುರು ಮಾಡಿದ್ದಾಳೆ. ಇಂಥ ಸೌಭಾಗ್ಯ ಬಗ್ಗೆ ಟಿವಿ 9 ಕಳೆದ ವರ್ಷ ಏಪ್ರಿಲ್ ನಲ್ಲಿ ವರದಿ ಪ್ರಸಾರ ಮಾಡಿತ್ತು.

ಈ ಹಿನ್ನೆಲೆಯಲ್ಲಿ ಅಭಿಮಾನಿ ಬಗ್ಗೆ ಎಲ್ಲ ಮಾಹಿತಿಯನ್ನು ಸುಮಲತಾ ತರಿಸಿಕೊಂಡಿದ್ದರು. ಇದೀಗ ಸೌಭಾಗ್ಯ ಹಾಗೂ ಆಕೆಯ ಕುಟುಂಬದವರಿಗೆ ಅಭಿಷೇಕ್ ಆರತಕ್ಷತೆಯ ಇನ್ವಿಟೇಶನ್ ಬಂದಿದೆ.

ಅಷ್ಟೇ ಅಲ್ಲ ಸ್ವತಃ ಸುಮಲತಾ ಅವರೇ ಫೋನ್ ಮಾಡಿ, ಆರತಕ್ಷತೆಗೆ ಬರುವಂತೆ ಮನವಿ ಮಾಡಿಕೊಂಡಿದ್ದಾರೆ. ಇದೇ ಕಾರಣಕ್ಕೆ ಜೂನ್ 7, ಬುಧವಾರ ನಡೆಯಲಿರೋ ರಿಸೆಪ್ಷನ್ ನಲ್ಲಿ ಸೌಭಾಗ್ಯ ತನ್ನ ತಂದೆ-ತಾಯಿಯೊಂದಿಗೆ ಪಾಲ್ಗೊಳ್ಳಲಿದ್ದಾಳೆ.

ನಟ ಅಂಬರೀಶ್ ಅವರು ನಿಧನರಾಗಿದ್ದಾಗ ಸೌಭಾಗ್ಯ ಟಿವಿ ನೋಡುತ್ತಾ ಕೂತಿದ್ದಳು. ಆಗ ಸುಮಲತಾ ಅಳುವುದನ್ನು, ಅವರ ಮುಖದ ಮೇಲಿನ ದುಃಖದ ಛಾಯೆಯನ್ನೇ ನೋಡುತ್ತ ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಆಗಿನಿಂದಲೇ ಸುಮಲತಾ ಅವರ ಅಭಿಮಾನಿಯಾಗಿ ಬಿಟ್ಟಿದ್ದಾಳೆ.


ಮೊದಲೆಲ್ಲಾ ಸುಮಲತಾ ನನಗೆ ಇಷ್ಟ ಅಂತೆಲ್ಲಾ ಗೋಡೆ ಮೇಲೆ ಬರೆಯುತ್ತಿದ್ದಳಂತೆ. ಆದರೆ ಅದನ್ನು ಬುಕ್ ನಲ್ಲಿ ದಿನಾಂಕ ಸಮೇತ ಬರೀ ಅಂತಾ ಮನೆಯವರು ಹೇಳಿದ ಬಳಿಕ ಅದನ್ನು ನಿಲ್ಲಿಸಿದ್ದಾಳೆ. ಇಂಥ ಸೌಭಾಗ್ಯ ಇದೀಗ ಸುಮಲತಾರನ್ನು ಭೇಟಿಯಾಗಲು ಹೋಗುತ್ತಿರೋದಕ್ಕೆ ಸಾಕಷ್ಟು ಖುಷಿಯಾಗಿದ್ದಾಳೆ.

ಸುಮಲತಾರಿಗೆ ಒಂದು ಸೀರೆ ಮತ್ತು ಧಾರವಾಡ ಫೇಡಾ ತೆಗೆದುಕೊಂಡಿದ್ದಾಳಂತೆ. ಇನ್ನು ಅಭಿಷೇಕ ಅಂಬರೀಶ್ ಗೆ ಬೊಕ್ಕೆ ನೀಡಲಿದ್ದಾಳಂತೆ - ಸೌಭಾಗ್ಯ, ಸುಮಲತಾ ಅಭಿಮಾನಿ.

ಕಳೆದ ಹಲವಾರು ದಿನಗಳಿಂದ ಸುಮಲತಾರ ಹೆಸರನ್ನೇ ಕನವರಿಸುತ್ತಿದ್ದ ಸೌಭಾಗ್ಯಗಳಿಗೆ ಇದೀಗ ಅವರನ್ನು ನೋಡೋ ಭಾಗ್ಯ ಸಿಗುತ್ತಿದೆ. ಹೀಗೆ ತನ್ನ ನೆಚ್ಚಿನ ಸುಮಲತಾರನ್ನು ನೋಡಿದ ಬಳಿಕ ಸೌಭಾಗ್ಯಳಿಗೆ ಖುಷಿ ಆಗೋದಲ್ಲದೇ ಆಕೆಯ ಮಾನಸಿಕ ಆರೋಗ್ಯದಲ್ಲಿಯೂ ಬದಲಾವಣೆ ಆಗೋ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.




