
ಆಲಿಯಾ ಭಟ್ ಬಾಲಿವುಡ್ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಸಿನಿಮಾ ಹಿನ್ನೆಲೆಯಿಂದ ಬಂದರೂ, ತಂದೆ ಹೆಸರನ್ನು ಎಲ್ಲಿಯೂ ಬಳಕೆ ಮಾಡಿಕೊಳ್ಳದೇ, ತಮ್ಮ ನಟನೆ ಮೂಲಕ ಅಭಿಮಾನಿಗಳಿಗೆ ಇಷ್ಟವಾಗಿದ್ದಾರೆ.

ಪ್ರತಿ ಸಿನಿಮಾಗೂ ಭಿನ್ನ ಪಾತ್ರ ಆಯ್ಕೆ ಮಾಡಿಕೊಳ್ಳೋದು ಅವರ ಸ್ಪೆಷಾಲಿಟಿ. ಪಕ್ಕದ ಮನೆ ಹುಡುಗಿ ಪಾತ್ರದಿಂದ ಹಿಡಿದು, ಪಾಕಿಸ್ತಾನದಲ್ಲಿ ಸ್ಪೈ ಮಾಡೋ ದಿಟ್ಟ ಮಹಿಳೆಯ ಪಾತ್ರವನ್ನೂ ಮಾಡಿ ಅವರು ಭೇಷ್ ಎನಿಸಿಕೊಂಡಿದ್ದಾರೆ.

ಈ ಬಾರಿ ಅವರು ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ.

ಕೊವಿಡ್ ಕಾರಣದಿಂದ ಸತತವಾಗಿ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಡುತ್ತಲೇ ಇತ್ತು. ಈ ಸಿನಿಮಾವನ್ನು ಕಣ್ತುಂಬಿಕೊಳ್ಳೋಕೆ ಕೊನೆಗೂ ದಿನಾಂಕ ನಿಗದಿ ಆಗಿದ್ದು, ಫೆಬ್ರವರಿ 25ರಂದು ಚಿತ್ರ ತೆರೆಗೆ ಬರುತ್ತಿದೆ. ಇದಕ್ಕೂ ಮೊದಲು ಚಿತ್ರತಂಡ ಟ್ರೇಲರ್ ರಿಲೀಸ್ ಮಾಡಿದೆ. ಈ ಮೂಲಕ ಸಿನಿಮಾದ ಝಲಕ್ ಬಿಟ್ಟುಕೊಟ್ಟಿದೆ.

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಾಠಿಯಾವಾಡಿ’ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಪ್ರೇಕ್ಷಕರು. ಕಾಮಾಟಿಪುರದ ಡಾನ್ ಆಗಿ ಮೆರೆದಿದ್ದ ಗಂಗೂಬಾಯಿ ಅವರ ಜೀವನದ ಕಥೆ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ

ಸಿನಿಮಾದಲ್ಲಿ ಏನೆಲ್ಲ ಇದೆ ಎಂಬುದರ ಝಲಕ್ ಟ್ರೇಲರ್ನಲ್ಲಿದೆ. ಇಡೀ ಟ್ರೇಲರ್ನಲ್ಲಿ ಆಲಿಯಾ ಭಟ್ ಅವರ ನಟನೆ, ಬನ್ಸಾಲಿ ಸಿನಿಮಾ ಮೇಕಿಂಗ್ ಗಮನ ಸೆಳೆಯುತ್ತಿದೆ.

ಇಡೀ ಚಿತ್ರ ರೆಟ್ರೋ ಶೈಲಿಯಲ್ಲಿ ಮೂಡಿ ಬಂದಿದೆ ಎಂಬುದಕ್ಕೆ ಟ್ರೇಲರ್ನಲ್ಲಿ ಸಾಕ್ಷ್ಯ ಸಿಕ್ಕಿದೆ. ಟ್ರೇಲರ್ ರಿಲೀಸ್ ಆದ ಗಂಟೆಗಳಲ್ಲಿ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.

ಫೆಬ್ರವರಿ 25ರಂದು ‘ಗಂಗೂಬಾಯಿ ಕಾಠಿಯಾವಾಡಿ’ ತೆರೆಗೆ ಬರುತ್ತಿದೆ. ಕೊವಿಡ್ ಮೂರನೇ ಅಲೆ ಕಡಿಮೆ ಆಗದ ಕಾರಣ ಚಿತ್ರಮಂದಿರಗಳಲ್ಲಿ ಶೇ.50 ಭರ್ತಿಗೆ ಮಾತ್ರ ಅವಕಾಶ ಇದೆ. ಈ ಕಾರಣಕ್ಕೆ ಸಿನಿಮಾದ ಕಲೆಕ್ಷನ್ ತಗ್ಗಬಹುದು.

ಆದರೆ, ಇದನ್ನು ಲೆಕ್ಕಿಸದೇ ಚಿತ್ರತಂಡ ಸಿನಿಮಾ ರಿಲೀಸ್ ಮಾಡಲು ಮುಂದೆ ಬಂದಿದೆ. ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ.

ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾದಲ್ಲಿ ಆಲಿಯಾ ಭಟ್ ನಟಿಸಿದ್ದಾರೆ. ಈ ಸಿನಿಮಾ ಜನವರಿ 7ರಂದು ತೆರೆಗೆ ಬರಬೇಕಿತ್ತು. ಆದರೆ, ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿತ್ತು. ಮಾರ್ಚ್ 25ರಂದು ಈ ಸಿನಿಮಾ ತೆರೆಗೆ ಬರುತ್ತಿದೆ.