ಭಾರತ ಸೇರಿದಂತೆ 20 ರಾಷ್ಟ್ರಗಳ ಪ್ರವಾಸಿಗರಿಗೆ ವೀಸಾ ಮುಕ್ತ ಪ್ರವೇಶವನ್ನು ಪರಿಚಯಿಸಲು ಇಂಡೋನೇಷ್ಯಾ ಯೋಜಿಸುತ್ತಿದೆ. ದೇಶದ ಪ್ರವಾಸೋದ್ಯಮ ಸಚಿವ ಸ್ಯಾಂಡಿಯಾಗ ಯುನೊ ಈ ಬಗ್ಗೆ ಮಾಹಿತಿ ನೀಡಿದ್ದು, ಈ ವರ್ಷದ ಅಕ್ಟೋಬರ್‌ನ ಮೊದಲು ಈ ನೀತಿಯನ್ನು ಅಂತಿಮಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ.
ಈ ಕ್ರಮವು ಇಂಡೋನೇಷ್ಯಾದಲ್ಲಿ ಅಂತಾರಾಷ್ಟ್ರೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಭಾರತ ಸೇರಿದಂತೆ ಆಸ್ಟ್ರೇಲಿಯಾ, ಚೀನಾ, ಜಪಾನ್, ಯುಎಸ್, ದಕ್ಷಿಣ ಕೊರಿಯಾ, ಫ್ರಾನ್ಸ್, ಜರ್ಮನಿ, ಕತಾರ್, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮುಂತಾದ ದೇಶಗಳ ಪ್ರವಾಸಿಗರಿಗೆ ವೀಸಾ ಇಲ್ಲದೆ ತಮ್ಮ ದೇಶಕ್ಕೆ ಬರಲು ಅನುಮತಿಸಲು ಇಂಡೋನೇಷ್ಯಾ ಯೋಜಿಸುತ್ತಿದೆ.
ಇಂಡೋನೇಷ್ಯಾದ ಅಧಿಕೃತ ಅಂಕಿ-ಅಂಶಗಳ ಪೋರ್ಟಲ್ ಪ್ರಕಾರ 2023ರಲ್ಲಿ 6 ಲಕ್ಷಕ್ಕೂ ಹೆಚ್ಚು ಭಾರತೀಯ ಪ್ರವಾಸಿಗರು ಈ ದೇಶಕ್ಕೆ ಭೇಟಿ ನೀಡಿದ್ದಾರೆ.
ಈ ವರ್ಷದ ಜನವರಿ ಮತ್ತು ಮಾರ್ಚ್ ನಡುವೆ ಭಾರತದಿಂದ 30,000ಕ್ಕೂ ಹೆಚ್ಚು ಪ್ರಯಾಣಿಕರು ಇಂಡೋನೇಷ್ಯಾಕ್ಕೆ ತೆರಳಿದ್ದಾರೆ.
ಪ್ರಸ್ತುತ ಇಂಡೋನೇಷ್ಯಾಕ್ಕೆ ಭೇಟಿ ನೀಡಲು ಬಯಸುವ ಭಾರತೀಯ ಪ್ರವಾಸಿಗರು ಆನ್‌ಲೈನ್ ಅಥವಾ ಇಂಡೋನೇಷ್ಯಾದ ವಿಮಾನ ನಿಲ್ದಾಣಗಳಲ್ಲಿ ಆಗಮನದ ವೀಸಾವನ್ನು ಪಡೆಯಬಹುದು.
ಈಗಾಗಲೇ ಥೈಲ್ಯಾಂಡ್, ಶ್ರೀಲಂಕಾ, ಇರಾನ್ ಮತ್ತು ಮಲೇಷ್ಯಾ ಪ್ರವಾಸಕ್ಕೆ ಭಾರತೀಯರಿಗೆ ವೀಸಾ ಅಗತ್ಯವಿಲ್ಲ. ಈ ಸಾಲಿಗೆ ಇಂಡೋನೇಷ್ಯಾ ಕೂಡ ಸೇರುವ ನಿರೀಕ್ಷೆಯಿದೆ.
ಇದಲ್ಲದೆ, ದಕ್ಷಿಣ ಆಫ್ರಿಕಾ, ವಿಯೆಟ್ನಾಂ ಮತ್ತು ರಷ್ಯಾ ಕೂಡ ಭಾರತೀಯ ಪ್ರಯಾಣಿಕರಿಗೆ ವೀಸಾ ಮನ್ನಾವನ್ನು ಅನುಮತಿಸುವ ಬಗ್ಗೆ ಯೋಚಿಸುತ್ತಿವೆ.
ಇಂಡೋನೇಷ್ಯಾದ ಸರ್ಕಾರವು 2024ರಲ್ಲಿ 17 ಮಿಲಿಯನ್ ಪ್ರವಾಸಿಗರನ್ನು ಗುರಿಯಾಗಿರಿಸಿಕೊಂಡಿದೆ.
ಈ ವರ್ಷದ ಮೊದಲ 5 ತಿಂಗಳುಗಳಲ್ಲಿ 5.2 ಮಿಲಿಯನ್ ಪ್ರವಾಸಿಗರನ್ನು ದಾಖಲಿಸಲಾಗಿದೆ.
ಇಲ್ಲಿನ ಗದ್ದೆ ಬಯಲು, ಸಮುದ್ರ ತೀರ, ಪ್ರಾಕೃತಿಕ ಸೌಂದರ್ಯ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ.
Published On - 3:16 pm, Mon, 15 July 24